ETV Bharat / state

ಕಾವೇರಿ ಉಗಮಸ್ಥಾನ ಕೊಡಗು ಜಿಲ್ಲೆಯಲ್ಲೇ ಕುಡಿಯುವ ನೀರಿಗೆ ಹಾಹಾಕಾರ

author img

By

Published : Apr 13, 2023, 1:37 PM IST

Updated : Apr 13, 2023, 4:43 PM IST

ಬೇಸಿಗೆ ಕಾಲ ಇನ್ನೇನು ಪ್ರಾರಂಭಿಕ ಹಂತದಲ್ಲಿರುವಾಗಲೇ ಕೊಡಗು ಜಿಲ್ಲೆಯಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರಿದೆ.

Drinking water problem in Kodagu District
ಕಾವೇರಿ ಉಗಮಸ್ಥಾನ ಕೊಡಗು ಜಿಲ್ಲೆಯಲ್ಲೇ ಕುಡಿಯುವ ನೀರಿಗೆ ಹಾಹಾಕಾರ

ಕಾವೇರಿ ಉಗಮಸ್ಥಾನ ಕೊಡಗು ಜಿಲ್ಲೆಯಲ್ಲೇ ಕುಡಿಯುವ ನೀರಿಗೆ ಹಾಹಾಕಾರ

ಕೊಡಗು: ರಾಜ್ಯ ಹಾಗೂ ಹೊರ ರಾಜ್ಯಕ್ಕೆ ನೀರು ಕೊಡುವ ಕಾವೇರಿ ಉಗಮಸ್ಥಾನ ಕೊಡಗು ಜಿಲ್ಲೆಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಮಡಿಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಎರಡು ದಿನಕೊಮ್ಮೆ ನೀರು ಬಿಡುತ್ತಿದ್ದು ಜನ ಕುಡಿಯಲು ನೀರಿಲ್ಲದೇ ಪರದಾಡುವ ಸ್ಥಿತಿ ಎದುರಾಗಿದೆ.

ಕೊಡಗು ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಮಾತ್ರ ನೀರಿನಿಂದ ಜಲಪ್ರಳಯವಾಗಿ ಬಾರಿ ಅವಾಂತರಗಳು ಸೃಷ್ಟಿಯಾಗುತ್ತವೆ. ನೀರಿನಿಂದ ಜನರ ಬದುಕು ಬೀದಿಪಾಲಾಗಿ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ದುರಂತ ಅಂದ್ರೆ ಮಳೆಗಾಲ ಹೋಯ್ತು ಅಂದ್ರೆ ಸಾಕು ಜಲ ಪ್ರಳಯದಿಂದ ತತ್ತರಗೊಳ್ಳುವ ಮಡಿಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಎದುರಾಗುತ್ತದೆ. ಈಗ ಬೇಸಿಗೆ ಆರಂಭವಾಗಿದ್ದು, ಮಡಿಕೇರಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಎರಡು ದಿನಗಳಿಗೆ ಒಂದು ಬಾರಿ ಮಾತ್ರ ನೀರು ಬಿಡುತ್ತಿದ್ದು, ಜನರು ನೀರಿಗಾಗಿ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ.

ಎರಡು ದಿನಗಳಿಗೊಮ್ಮೆ ನೀರು ಪೂರೈಕೆ: ಮಡಿಕೇರಿ ನಗರಕ್ಕೆ ಸಮೀಪದ ಕೂಟು ಹೊಳೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಬೇಸಿಗೆ ಆರಂಭವಾಗಿದ್ದು, ಕೂಟು ಹೊಳೆಯಲ್ಲಿ ನೀರು ತಳಮಟ್ಟ ಸೇರಿದೆ, ಹೊಳೆಯಲ್ಲಿ ನೀರು ಖಾಲಿಯಾಗಿರುವ ಪರಿಣಾಮ ನಗರದ ಜನರಿಗೆ ಕುಡಿಯಲು ನೀರು ಪೂರೈಕೆ ಮಾಡಲು ಕಷ್ಟವಾಗಿದೆ. ಇದರಿಂದ ನಗರಕ್ಕೆ ಹಾಗೂ ಸುತ್ತಮುತ್ತಲಿನ ಗ್ರಾಮಕ್ಕೆ ಎರಡು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಮಡಿಕೇರಿ ನಗರಕ್ಕೆ ನೀರು ಪೂರೈಕೆ ಮಾಡುವ ನಗರ ಸಭೆ ಅಧಿಕಾರಿಗಳು ಜನರಿಗೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಕೈಚೆಲ್ಲಿ ಕೂತಿದ್ದಾರೆ.

ನೀರಿಗಾಗಿ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ: ಮಡಿಕೇರಿ ನಗರದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದರೆ, ಮನೆಗಳು, ಹೋಟೆಲ್, ಅಂಗಡಿಗಳು ಎಲ್ಲವೂ ಕೂಡ ಇದೆ. ಎಲ್ಲದಕ್ಕೂ ಪ್ರತಿನಿತ್ಯ ನೀರು ಅವಶ್ಯಕವಾಗಿದೆ. ಆದರೆ ನೀರು ಇಲ್ಲದಿರುವ ಕಾರಣ ಸಮಸ್ಯೆ ಹೆಚ್ಚಾಗಿದೆ. ಎರಡು ದಿನಕೊಮ್ಮೆ ನೀರು ಬಿಡುತ್ತಾರೆ. ಅದನ್ನು ಯಾವಾಗ ಬಿಡುತ್ತಾರೆ ಎಂದು ಕಾದು ಕುಳಿತುಕೊಳ್ಳಬೇಕು. ಕೆಲಸಗಳನ್ನು ಬಿಟ್ಟು ನೀರಿಗೆ ಕಾಯಬೇಕಾಗಿದೆ. ಬೇಸಿಗೆ ಕಾಲಕ್ಕೆ ಈಗಷ್ಟೇ ಕಾಲಿಡುತ್ತಿದ್ದೇವೆ. ಪೂರ್ತಿಯಾಗಿ ಬೇಸಿಗೆ ಇನ್ನೂ ಪ್ರಾರಂಭವಾಗಿಲ್ಲ, ಈಗಲೇ ಈ ರೀತಿ ಕುಡಿಯುವ ನೀರಿಗೆ ಹಾಹಾಕಾರ ಆದರೆ, ಇನ್ನೂ ನೆತ್ತಿ ಸುಡುವ ಬೇಸಿಗೆಗೆ ಜನರ ಪರಿಸ್ಥಿತಿ ಏನು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲದಂತಾಗಿದೆ.

ನಗರಸಭೆ ಅಧಿಕಾರಿಗಳಿಗೆ ಜನರ ಹಿಡಿಶಾಪ: ನೀರು ಸಿಕ್ಕಿಲ್ಲ ಅಂದ್ರೆ ಮನೆ ಜನರು ಏನು ಮಾಡಬೇಕು ತಿಳಿಯುತ್ತಿಲ್ಲ. ಮನೆಯಲ್ಲಿ ಮಕ್ಕಳು, ವಯಸ್ಕರು ಇರುತ್ತಾರೆ. ಇದರಿಂದ ಎಲ್ಲರಿಗೂ ಸಮಸ್ಯೆಯಾಗಿದೆ. ನೀರಿಗೆ ಬರ ಬರುವ ಮೊದಲೇ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಆದರೆ ಈಗ ನೀರಿಲ್ಲ ಎಂದರೆ ಜನರು ಏನು ಮಾಡಬೇಕು ಎಂದು ನಗರಸಭೆ ಆಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ನಗರಕ್ಕೆ ಕುಡಿಯುವ ನೀರಿನ ಪೂರೈಕೆ‌ ಮಾಡಲು ಬೇರೆ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಧಾರವಾಡ ಪಾಲಿಕೆ ಸಾಮಾನ್ಯ ಸಭೆ: ಖಾಲಿ ಕೊಡ ಹಿಡಿದು ಕಾಂಗ್ರೆಸ್‌ ಸದಸ್ಯರ ಪ್ರತಿಭಟನೆ

Last Updated : Apr 13, 2023, 4:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.