ದಿವಂಗತ ವಿಠಲ್ ಹೇರೂರ್ ಕಂಚಿನ ಮೂರ್ತಿ ಅನಾವರಣ: ಕೋಲಿ ಸಮಾಜಕ್ಕೆ ಸಿಎಂ ಬೊಮ್ಮಾಯಿ ಭರವಸೆಯ ಮಾತು

ದಿವಂಗತ ವಿಠಲ್ ಹೇರೂರ್ ಕಂಚಿನ ಮೂರ್ತಿ ಅನಾವರಣ: ಕೋಲಿ ಸಮಾಜಕ್ಕೆ ಸಿಎಂ ಬೊಮ್ಮಾಯಿ ಭರವಸೆಯ ಮಾತು
ಪ್ರಧಾನಿ ಮೋದಿ ಬಂದು ಹೋದ ಬೆನ್ನಲ್ಲೇ ಇದೀಗ ಬಸವರಾಜ ಬೊಮ್ಮಾಯಿ ಅವರು ಕಲ್ಯಾಣ ಕರ್ನಾಟಕ ಭಾಗದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಕಲಬುರಗಿ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಆಡಳಿತರೂಢ ಬಿಜೆಪಿ ಕಲ್ಯಾಣ ಕರ್ನಾಟಕ ಭಾಗವನ್ನೇ ಪದೇ ಪದೇ ಟಾರ್ಗೆಟ್ ಮಾಡ್ತಿದೆ. ಅಷ್ಟಕ್ಕೂ ಪ್ರಧಾನಿ ಮೋದಿ ಬಂದು ಹೋದ ಬೆನ್ನಲ್ಲೇ ಇದೀಗ ಸಿಎಂ ಬೊಮ್ಮಾಯಿ ಕಲ್ಯಾಣ ಕರ್ನಾಟಕ ಭಾಗದ ಹೆಬ್ಬಾಗಿಲು ಕಲಬುರಗಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ದಿವಂಗತ ವಿಠಲ್ ಹೇರೂರ್ ಅವರ ಮೂರ್ತಿ ಅನಾವರಣ ಮಾಡುವ ಮೂಲಕ ಕೋಲಿ ಮತ್ತು ಕಬ್ಬಲಿಗ ಸಮಾಜದ ಮತಗಳ ಮತ ಬೇಟೆಗೆ ಇಳಿದಿದ್ದಾರೆ.
ವಿಧಾನಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ಆಡಳಿತರೂಢ ಬಿಜೆಪಿ ಆ್ಯಕ್ಟಿವ್ ಆಗತೊಡಗಿದೆ. ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿ ಕಲ್ಯಾಣ ಕರ್ನಾಟಕ ಪ್ರವಾಸ ಕೈಗೊಂಡ ಬೆನ್ನಲ್ಲೇ ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಕಲಬುರಗಿ ಜಿಲ್ಲೆಗೆ ಆಗಮಿಸಿದ್ದಾರೆ. ಇಂದು ಅಫಜಲಪುರ ತಾಲೂಕಿನ ದೇವಲ ಗಾಣಗಪುರದ ಪವಿತ್ರ ಸಂಗಮಕ್ಕೆ ಭೇಟಿ ನೀಡಿ ದರ್ಶನ ಪಡೆದ ನಂತರ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ, ದತ್ತನ ನಿರ್ಗುಣ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಾನು ಗಂಗಾತಾಯಿ ಮಗ, ನಿಮ್ಮ ಸಹೋದರ: ಸಿಎಂ ಬಸವರಾಜ ಬೊಮ್ಮಾಯಿ ಕೋಲಿ ಸಮಾಜದ ನೇತಾರ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ದಿವಂಗತ ವಿಠಲ್ ಹೇರೂರ್ ಅವರ ಆರು ಅಡಿ ಎತ್ತರದ ಕಂಚಿನ ಮೂರ್ತಿ ಅನಾವರಣ ಮಾಡಿದರು. ಇದೇ ವೇಳೆ ಮಾತನಾಡಿದ ಅವರು, ಕೋಲಿ ಸಮಾಜವನ್ನು ಹೊಗಳಿ ಕೊಂಡಾಡಿದರು. ಕೋಲಿ ಗಂಗಾಮತ ಒಂದು ಬಾರಿ ವಿಶ್ವಾಸ ಕೊಟ್ಟರೆ ದಡ ಮುಟ್ಟಿಸುವರೆಗೆ ಬಿಡದಿರುವ ಸಮಾಜ ಇದು. ನಾನು ನಿಮ್ಮಲ್ಲಿ ಒಬ್ಬವ, ನಾನು ಗಂಗಾತಾಯಿ ಮಗನೇ ನಿಮ್ಮ ಸಹೋದರ ಎಂದು ಹೇಳಿದರು. ದಿ. ವಿಠಲ್ ಹೇರೂರ್ ಜೊತೆ ನಾನು ಪರಿಷತ್ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ನನ್ನನ್ನ ಬಹಳ ಪ್ರೀತಿಯಿಂದ ಕಾಣ್ತಿದ್ದರು. ಅವರ ಆಸೆಯಂತೆ ಕೋಲಿ ಸಮಾಜವನ್ನು ಎಸ್ಟಿ ಮಾಡುವುದರ ಬಗ್ಗೆ ಕುಲಶಾಸ್ತ್ರಿಯ ಅಧ್ಯಯನ ಮಾಡಲಾಗುತ್ತಿದೆ. ಅದರ ವರದಿ ಬಂದ ನಂತರ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡಲಾಗುವುದೆಂದು ಸಿಎಂ ಭರವಸೆ ನೀಡಿದರು.
ಕೋಲಿ ಯುವ ಸಮೂಹ ಅಭಿವೃದ್ಧಿಗೆ ಬದ್ಧ: ಈಗಾಗಲೇ ಕೇಂದ್ರ ಸರ್ಕಾರಕ್ಕೆ ಎಸ್ಟಿ ಸೇರ್ಪಡೆ ವರದಿ ಕಳಿಸಲಾಗಿದೆ. ಅಲ್ಲದೆ ರಾಜ್ಯ ಸರ್ಕಾರ ಕೋಲಿ ಸಮಾಜದ ಯುವಕ ಯುವತಿಯರ ಬದ್ಧತೆಗೆ ಕೆಲಸ ಮಾಡುತ್ತಿದ್ದು, ಶಿಕ್ಷಣ ಉದ್ಯೋಗ, ಎಂಪವರ್ಮೆಂಟ್ ಕೊಡುವ ಕೆಲಸ ಮಾಡುತ್ತಿದೆ. ತಳವಾರ, ಪರಿವಾರ ಸಮಾಜಕ್ಕೆ ಎಸ್ಟಿ ಸಿಕ್ಕ ಹಾಗೇ, ನಿಮ್ಮ ಉಳಿದ ಸಮುದಾಯವನ್ನೂ ಕೂಡ ಎಸ್ಟಿ ವಿಭಾಗಕ್ಕೆ ಸೇರಿಸಲಾಗುದೆಂದು ಸಿಎಂ ಭರವಸೆ ನೀಡಿದರು.
ಎಸ್‌ಟಿಗೆ ಸೇರಿಸಿ, ಸೂರ್ಯಚಂದ್ರ ಇರುವವರೆಗೆ ನಿಮ್ಮನ್ನು ಮರೆಯಲ್ಲ: ಸಮಾರಂಭದಲ್ಲಿ ಮಾತನಾಡಿದ ಎಮ್‌ಎಲ್‌ಸಿ ಬಾಬುರಾವ್ ಚಿಂಚನಸೂರ್, ನಿಮ್ಮ ಪಾದಕ್ಕೆ ನಮಸ್ಕರಿಸಿ ಕೇಳಿಕೊಳ್ಳುವೆ. ಸೂರ್ಯಚಂದ್ರ ಇರುವವರೆಗೆ ನಿಮ್ಮನ್ನು ನಮ್ಮ ಸಮಾಜ ಮರೆಯಲ್ಲ. ಎಸ್ಟಿ ಘೋಷಣೆ ಮಾಡಿದರೆ ದಿವಂಗತ ವಿಠಲ್ ಹೇರೂರ್‌ರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಸಿಎಂ ಬೊಮ್ಮಾಯಿಯವರಿಗೆ ಮನವಿ ಮಾಡಿದರು. ಎಲ್ಲಾ ಜಾತಿಗಳಿಗೂ ಇಷ್ಟೊಂದು ಪ್ರಮಾಣದಲ್ಲಿ ಮೀಸಲಾತಿ ಕೊಟ್ಟ ಸಿಎಂ ಎಲ್ಲೂ ಇಲ್ಲ, ನಮ್ಮ ಕೋಲಿ ಸಮಾಜಕ್ಕೂ ಎಸ್ಟಿ ಮೀಸಲಾತಿ ನೀಡಿ. ನಮ್ಮ ಸಮಾಜ ನಿಮ್ಮ ಬೆನ್ನಿಗೆ ಇರುತ್ತದೆ ಎಂದು ಬಾಬುರಾವ್ ಚಿಂಚನಸೂರು ಹೇಳಿದರು.
ಬಾಬುರಾವ್ ಚಿಂಚನಸೂರ್ ವಿರುದ್ಧ ಸಿಎಂ ಗರಂ: ಸಮಾರಂಭದ ವೇದಿಕೆ ಮೇಲೆಯೇ ಎಮ್‌ಎಲ್‌ಸಿ ಬಾಬುರಾವ್ ಚಿಂಚನಸೂರ್ ವಿರುದ್ಧ ಸಿಎಂ ಗರಂ ಆದ ಘಟನೆ ನಡೆಯಿತು. ಬಾಬುರಾವ್ ಚಿಂಚನಸೂರ ಸೇರಿ ಎಲ್ಲಾ ನಾಯಕರ ಮಾತು ಮುಗಿದ ಬಳಿಕ ಸಿಎಂ ಸಮಾರಂಭ ಉದ್ದೇಶಿಸಿ ಮಾತನಾಡಲು ಪ್ರಾರಂಭಿಸಿದರು. ಈ ವೇಳೆ ಎಸ್.ಟಿ ಸಮುದಾಯಕ್ಕೆ ಸೇರ್ಪಡೆ ವಿಚಾರವಾಗಿ ಕುಲಶಾಸ್ತ್ರಿಯ ಅಧ್ಯಯನ ವಿಚಾರವಾಗಿ, ಒಳಪಂಗಡಗಳ ಅಂಕಿಸಂಖ್ಯೆ ಸಿಎಂ ಮಾತನಾಡುವಾಗ ಚಿಂಚನಸೂರ ಮಧ್ಯಪ್ರವೇಶಿಸಿ ಅಂಕಿಸಂಖ್ಯೆ ವಿವರಿಸಲು ಪ್ರಯತ್ನಿಸಿದರು. ಈ ವೇಳೆ ಗರಂ ಆದ ಸಿಎಂ, ನಾನು ಮುಖ್ಯಮಂತ್ರಿ ಇದ್ದೇನೆ, ನನಗೆ ಎಲ್ಲಾ ಗೊತ್ತಿದೆ ಸುಮ್ಮನಿರಪ್ಪಾ, ಇಲ್ಲಾ ನೀನಾದರೂ ಹೇಳು, ನೀನು ಹೋಗಿ ಸುಮ್ಮನೆ ಕೂರು ಎಂದು ಬಹಿರಂಗವಾಗಿ ಹೇಳಿದರು. ಆಗ ಮುಜುಗರಕ್ಕೆ ಒಳಗಾದ ಬಾಬುರಾವ್ ಚಿಂಚನಸೂರ ನಿಧಾನವಾಗಿ ತಮ್ಮ ಆಸನದತ್ತ ತೆರಳಿದರು.
ಒಟ್ಟಿನಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿಯಿರುವಾಗಲೇ ಬಿಜೆಪಿ ಪಕ್ಷ ಕಲ್ಯಾಣ ಕರ್ನಾಟಕದಲ್ಲಿ ಬಂಜಾರ ಸಮಾಜದವರಿಗೆ ಹಕ್ಕುಪತ್ರ ವಿತರಣೆ ಮಾಡುವುದರ ಮೂಲಕ ಮತಬೇಟೆ ನಡೆಸಿತ್ತು. ಇದೀಗ ಕೋಲಿ ಸಮಾಜಕ್ಕೆ ಗಾಳ ಹಾಕುತ್ತಿರುವ ಬಿಜೆಪಿ ಶೀಘ್ರ ಎಸ್ಟಿ ಬೇಡಿಕೆ ಈಡೇರುವ ಭರವಸೆ ಕೊಡುವುದರ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ನೇರವಾಗಿ ಚುನಾವಣೆ ರಣಕಹಳೆ ಮೊಳಗಿಸಿದ್ದಾರೆ.
ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಮೋದಿ: ಐತಿಹಾಸಿಕ ಕ್ಷಣ ಸೃಷ್ಟಿಸಿದ ಹಕ್ಕುಪತ್ರ ವಿತರಣೆ ಕಾರ್ಯಕ್ರಮ
