ಕಲ್ಯಾಣ ಕರ್ನಾಟಕದಲ್ಲಿ ಮೋದಿ: ಐತಿಹಾಸಿಕ ಕ್ಷಣ‌ ಸೃಷ್ಟಿಸಿದ ಹಕ್ಕುಪತ್ರ ವಿತರಣೆ ಕಾರ್ಯಕ್ರಮ

author img

By

Published : Jan 20, 2023, 2:28 PM IST

Rights Deed Distribution Program

ತಾಂಡಾ ಹಟ್ಟಿ ಗ್ರಾಮಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಸೇರಿದೆ.

ಕಲಬುರಗಿ : ಕಲ್ಯಾಣ ನಾಡಿನ ಹೆಬ್ಬಾಗಿಲು‌‌‌ ಕಲಬುರಗಿ ಜಿಲ್ಲೆಯಲ್ಲಿ ಗುರುವಾರ ನಮೋ ಹವಾ ಜೋರಾಗಿತ್ತು. ರಾಷ್ಟ್ರಕೂಟರ ರಾಜಧಾನಿಯಾದ ಮಳಖೇಡದಲ್ಲಿ ಹಮ್ಮಿಕೊಂಡಿದ್ದ ತಾಂಡಾ ಹಟ್ಟಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ‌ ಅವರಿಗೆ ಹಕ್ಕು ಪತ್ರ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಮೋದಿ ಆಗಮಿಸಿದ್ದರು. ಒಂದು‌ ಗಂಟೆಗಳ ಕಾಲ ತೊಗರಿ ನಾಡಿನ ಜನರೊಂದಿಗೆ ಮೋದಿ ಕಾಲ ಕಳೆದಿದ್ದರು.

ನಮೋ‌ಗಾಗಿ ರಾಷ್ಟ್ರಕೂಟರ ಕೋಟೆ ಮಾದರಿಯಲ್ಲಿ ಸೃಷ್ಟಿಸಿದ್ದ ವೇದಿಕೆ ಗಮನ ಸೆಳೆಯುತಿತ್ತು. ಭವ್ಯವಾದ ಕಾರ್ಯಕ್ರಮ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ದಾಖಲೆ ಪುಟ ಸೇರಿದೆ. ಮೂರು ಲಕ್ಷದಷ್ಟು ಜನ ಸೇರಿದರೂ ಕಿಂಚಿತ್ತೂ ತೊಂದರೆ ಇಲ್ಲದೆ ನಿರಾಳವಾಗಿ ಕಾರ್ಯಕ್ರಮ‌ ನಡೆಯಿತು. ಸರ್ಕಾರಿ‌ ಕಾರ್ಯಕ್ರಮ ಆದರೂ ಕೇಸರಿ ಬಾವುಟ ರಾರಾಜಿಸಿದ್ದು, ವೇದಿಕೆಯಲ್ಲಿ ಪರೋಕ್ಷವಾಗಿ ರಾಜಕೀಯ‌ ಮಾತುಗಳು ಕೇಳಿ ಬಂದವು.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆಗೆ ಪ್ರಧಾನಿ ಮೋದಿ ಭೇಟಿ ನೀಡಿ ಸಂಚಲನ ಮೂಡಿಸಿದರು. ಮೋದಿ ಬಂದು ಹೋಗಿದ್ದು ಕಲ್ಯಾಣ ಕರ್ನಾಟಕ ಜಿಲ್ಲೆಗಳ ಕೇಸರಿ ಪಾಳಯಕ್ಕೆ ಬೂಸ್ಟರ್ ಡೋಸ್ ಕೊಟ್ಟಂತಾಗಿದೆ. ಒಂದೇ ದಿನ ಕಲಬುರಗಿ ಯಾದಗಿರಿ ಅವಳಿ ಜಿಲ್ಲೆ ಸಂಚರಿಸಿದ ಮೋದಿ ಮತಬೇಟೆಯಾಡಿದರು. ರಾಜ್ಯದ ತಾಂಡಾ ಹಟ್ಟಿ ಸೇರಿ ಇತ್ಯಾದಿ ದಾಖಲೆ ರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮವಾಗಿ ಪರಿವರ್ತಿಸಿ ಕರ್ನಾಟಕ ಕಂದಾಯ ಇಲಾಖೆ‌ ಹಮ್ಮಿಕೊಂಡ ಹಕ್ಕು ಪತ್ರ ವಿತರಣೆ ಹಾಗೂ 10800 ಕೋಟಿಯ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆಯನ್ನು ಪ್ರಧಾನಿ ನೆರವೇರಿಸಿದರು.

ದೆಹಲಿಯಿಂದ ವಿಶೇಷ ವಿಮಾನದ ಮೂಲಕ ನಿಗದಿತ ಸಮಯಕ್ಕಿಂತ ಹತ್ತು ನಿಮಿಷ ಮುಂಚಿತವಾಗಿ ಬೆಳಗ್ಗೆ 10-50ಕ್ಕೆ ಕಲಬುರಗಿ ಏರ್‌ಪೋರ್ಟ್‌ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ ಬರಮಾಡಿಕೊಂಡರು. ಬಳಿಕ IAF MI-17 ವಿಶೇಷ ಹೆಲಿಕ್ಯಾಪ್ಟರ್‌ನಲ್ಲಿ ಮೋದಿ ಯಾದಗಿರಿ ಜಿಲ್ಲೆ ಕೊಡೆಕಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ 2-10ಕ್ಕೆ ಮಳಖೇಡ ತಲುಪಿ 3-10ರವರೆಗೆ ಒಂದು ಗಂಟೆಗಳ ಕಾಲ ಕಾರ್ಯಕ್ರಮದಲ್ಲಿ ಭಾಗಿಯಾದರು.

ಗಮನ‌ ಸೆಳೆದ ವೇದಿಕೆ : ಮಾನ್ಯಖೇಟ್ ಈಗಿನ ಮಳಖೇಡವು ರಾಷ್ಟ್ರಕೂಟರ ರಾಜಧಾನಿ. ಇದನ್ನು ನೆನಪಿಸುವ ಕಾರ್ಯ ಗುರುವಾರ ಮಳಖೇಡದಲ್ಲಿ ನಡೆಯಿತು. ವೇದಿಕೆಯ ಬ್ಯಾಕ್‍ಡ್ರಾಪ್ ರಾಷ್ಟ್ರಕೂಟರ ವಾಸ್ತುಶಿಲ್ಪದ ಪರಂಪರೆ ಬಿಂಬಿಸುವಂತೆ ವಿನ್ಯಾಸಗೊಳಿಸಲಾಗಿತ್ತು. ಜೊತೆಗೆ ಕಲ್ಯಾಣ ಕರ್ನಾಟಕದ ದಾರ್ಶನಿಕರ ಚಿತ್ರಗಳನ್ನು ಮೂಡಿಸಲಾಗಿತ್ತು. ವೇದಿಕೆ, ಊಟದ ಸ್ಥಳ ಪಾರ್ಕಿಂಗ್ ಹೀಗೆ 150 ಎಕರೆ ಪ್ರದೇಶದಲ್ಲಿ‌ ಕಾರ್ಯಕ್ರಮ‌ ಜರುಗಿತು. ವೇದಿಕೆಯಲ್ಲಿ ಮೋದಿ ಅವರೊಂದಿಗೆ ರಾಜ್ಯಪಾಲರು, ಸಿಎಂ, ಸಚಿವರು ಕಾಣಿಸಿಕೊಂಡರು.‌

ವೇದಿಕೆ ಮೇಲೆ ಮೋದಿ ಜನರತ್ತ ಕೈ ಬೀಸಿದರು. ಈ ವೇಳೆ ನೆರೆದ ಜನಸಾಗರ "ಮೋದಿ ಮೋದಿ" ಎಂದು‌ ಘೋಷಣೆ ಕೂಗುತ್ತಾ ತಮ್ಮ‌ ನೆಚ್ಚಿನ ನಾಯಕನನ್ನು ಕಂಡು ಸಂಭ್ರಮಿಸಿದರು. ಮುಖ್ಯಮಂತ್ರಿ ಬೊಮ್ಮಾಯಿ ಲಂಬಾಣಿ ಸಮುದಾಯದ ಗೋರ ಬಂಜಾರಾ ಶಾಲು ಹಾಕಿ ಸ್ವಾಗತ ಕೋರಿದರು. ಅನುಭವ ಮಂಟಪದಲ್ಲಿನ ಬಸವಾದಿ ಶರಣರಾದ ಅಲ್ಲಮಪ್ರಭು, ಮಾತೆ ಅಕ್ಕಮಹಾದೇವಿ ಅವರಿದ್ದ ಪೋಟ್ರೇಟ್ ನೀಡಿ ಪ್ರಧಾನಮಂತ್ರಿಗಳನ್ನು ಸತ್ಕರಿಸಲಾಯಿತು. ನಂತರ ಮೋದಿಯವರು ನಗಾರಿ ಬಾರಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದ್ದು‌ ಗಮನ‌ ಸೆಳೆಯಿತು.

ಲಂಬಾಣಿ ಭಾಷೆಯಲ್ಲಿ ಭಾಷಣ ಪ್ರಾರಂಭ : ಲಂಬಾಣಿ ಭಾಷೆಯಲ್ಲಿಯೇ ತಮ್ಮ ಭಾಷಣ ಪ್ರಾರಂಭಿಸಿದ ನರೇಂದ್ರ ಮೋದಿ, “ಕರ್ನಾಟಕ ತಾಂಡೇರ್ ಮಾರ್ ಗೋರ್ ಬಂಜಾರ ಭಾಯಿ-ಬಿಯಾ, ನಾಯ್ಕ, ಕಾರಬಾರಿ, ಹಾತ್ ಜೋಡೇನ್ ರಾಮ್ ರಾಮ್, ಜೈ ಸೇವಾ ಲಾಲ್ ಮಹಾರಾಜ್” ಎನ್ನುತ್ತಿದ್ದಂತೆಯೇ ಸಮಾರಂಭದಲ್ಲಿ ನೆರೆದಿದ್ದ ಲಂಬಾಣಿ ಸಮುದಾಯ ಚಪ್ಪಾಳೆ ತಟ್ಟಿ ಸಂಭ್ರಮಿಸಿದಲ್ಲದೆ ಮೋದಿ ಮೋದಿ ಎಂದು ಕೂಗಿದರು.

ಬಳಿಕ ಕನ್ನಡದಲ್ಲಿ ಮಾತನಾಡಿದ ಪ್ರಧಾನಿ, ಕಲಬುರಗಿಯ ಶ್ರೀ ಶರಣ ಬಸವೇಶ್ವರ ಮತ್ತು ಗಾಣಗಾಪೂರದ ಗುರು ದತ್ತಾತ್ರೇಯ ಅವರಿಗೆ ವಂದನೆ, ಪ್ರಖ್ಯಾತ ರಾಷ್ಟ್ರಕೂಟ ಸಾಮ್ರಾಜ್ಯದ ರಾಜಧಾನಿಗೆ ಮತ್ತು ಕನ್ನಡ ನಾಡಿನ ಸಮಸ್ತ ಜನರಿಗೆ ನಮಸ್ಕಾರಗಳು ಎಂಬುದಾಗಿ ಹೇಳುತ್ತಿದ್ದಂತೆಯೇ ಜನರ ಚಪ್ಪಾಳೆ, ಹರ್ಷೋದ್ಗಾರ ಮುಗಿಲು ಮುಟ್ಟಿತು. ಇದೆ ವೇಳೆ ತಾಂಡಾ ಜನರ ಸಂಪೂರ್ಣ ಶ್ರೇಯೋಭಿವೃದ್ಧಿಯ ಭರವಸೆ ನೀಡಿದರು.

ಬಳಿಕ ವೇದಿಕೆಯಲ್ಲಿ‌ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಲವರು ಮಾತನಾಡುತ್ತಾರೆ ಯಾವ ಜನಾಂಗದ ಕಲ್ಯಾಣ ಮಾಡಿದ್ದೀರಿ ಅಂತ ಕೇಳ್ತಾರೆ ಅಂತವರು ಇಲ್ಲಿ ಬಂದು ನೋಡಲಿ, ನಾವು ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡಲ್ಲ. ಸಾಮಾಜಿಕ ಭದ್ರತೆ ಪರಿವರ್ತನೆ‌ ಮಾಡಿ ತೋರಿಸುತ್ತೇವೆ. ಅದಕ್ಕೆ‌ ಸಾಕ್ಷಿ ಇಂದಿನ ಕಾರ್ಯಕ್ರಮ ಎಂದು ಪರೋಕ್ಷವಾಗಿ ವಿರೋಧ ಪಕ್ಷಗಳಿಗೆ ತಿವಿದರು. ನಮ್ಮ ಡಬಲ್ ಇಂಜಿನ್ ಸರ್ಕಾರ ಸಾಮಾಜಿಕ ಭದ್ರತೆ ಕೊಡುವ ಮೂಲಕ ಇಂತಹ ಶೋಷಿತ ಸಮುದಾಯಕ್ಕೆ ಸಾಮಾಜಿಕ ಪರಿವರ್ತನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ :ಕಲಬುರಗಿ: ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಗೆ ಪ್ರಧಾನಿ ಮೋದಿ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.