ETV Bharat / state

ನಾಯಿಯ ವಿಚಾರವಾಗಿ ನಡೆದಿದ್ದ ಜಗಳ ಕೊಲೆಯಲ್ಲಿ ಅಂತ್ಯ: ಐವರು ಆರೋಪಿಗಳ ಬಂಧನ

author img

By

Published : Sep 29, 2021, 6:57 AM IST

Updated : Sep 29, 2021, 10:32 AM IST

kalburgi
ಗುರುರಾಜ ಕುಲಕರ್ಣಿ ಕೊಲೆ ಪ್ರಕರಣ

ಸೆ. 24ರಂದು ಹೈಕೋರ್ಟ್ ಬಳಿ ಗುರುರಾಜ ಕುಲಕರ್ಣಿ ಎಂಬ ಯುವಕನನ್ನು ಕಲ್ಲಿನಿಂದ ಜಜ್ಜಿ ಆರೋಪಿಗಳು ಕೊಲೆ ಮಾಡಿದ್ದರು. ಪ್ರಕರಣ ನಡೆದು 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಲಬುರಗಿ: ನಾಯಿಯ ವಿಚಾರವಾಗಿ ಜಗಳ ತೆಗೆದು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಐವರು ಆರೋಪಿಗಳನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೈಕೋರ್ಟ್ ಬಳಿಯ ಅಕ್ಕಮಹಾದೇವಿ ಕಾಲೋನಿಯ ನಿವಾಸಿಗಳಾದ ಪವನ್ ಅಲಿಯಾಸ್​ ಅವಧೂತ ಜಾಗಿರ್ದಾರ್, ಪ್ರಸನ್ನ ಜಾಗಿರ್ದಾರ್, ಬ್ರಹ್ಮಪುರ ಶಾಸ್ತ್ರಿ ಚೌಕ್ ನಿವಾಸಿ ಸಂತೋಷ್ ಜಾನಿಬ, ಜೇವರ್ಗಿ ತಾಲೂಕಿನ ಬಳಬಟ್ಟಿ ತಾಂಡಾದ ಅಜಯ್ ರಾಥೋಡ್, ಅವಿನಾಶ್ ಚವ್ಹಾಣ್​ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಸೆ. 24ರಂದು ಹೈಕೋರ್ಟ್ ಬಳಿ ಗುರುರಾಜ ಕುಲಕರ್ಣಿ ಎಂಬ ಯುವಕನನ್ನು ಕಲ್ಲಿನಿಂದ ಜಜ್ಜಿ ಆರೋಪಿಗಳು ಕೊಲೆ ಮಾಡಿದ್ದರು. ಪ್ರಕರಣ ನಡೆದು 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಘಟನೆ ವಿವರ: ಕೊಲೆಯಾದ ಗುರುರಾಜ್‌ನ ಸಹೋದರಿ ತಮ್ಮ ಮನೆಯ ಮುಂದೆ ನಾಯಿಗೆ ಬಿಸ್ಕೆಟ್ ಹಾಕುವಾಗ ಪಕ್ಕದ ಮನೆಯ ಪವನ್ ಕಲ್ಲು ಹೊಡೆದಿದ್ದನಂತೆ. ಇದೇ ವಿಚಾರಕ್ಕೆ ಜಗಳ ನಡೆದು ವಿಕೋಪಕ್ಕೆ ತಿರುಗಿ ವಾಗ್ವಾದ ನಡೆದಿತ್ತು. ನಂತರ ಪವನ್​ ಹಾಗೂ ಆತನ ಸ್ನೇಹಿತರು ಸೇರಿ ಗುರುರಾಜ್‌ನ ಸಹೋದರ ಶೇಷಗಿರಿ ಮೇಲೆ ಹಲ್ಲೆ ಮಾಡಿದ್ದರು.

ಈ ವಿಚಾರವಾಗಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಕೇಸ್​ ವಾಪಸ್​ ಪಡೆದುಕೊಂಡು ರಾಜಿಯಾಗುವಂತೆ ಪವನ್​ ಹಾಗೂ ಆತನ ಸ್ನೇಹಿತರು ಶೇಷಗಿರಿ ಮೇಲೆ ಒತ್ತಡ ಹಾಕಿದ್ದರು. ಅಂತೆಯೇ ಶೇಷಗಿರಿ ಪ್ರಕರಣ ಹಿಂಪಡೆಯುವುದಕ್ಕೆ ಮುಂದಾಗಿದ್ದನಂತೆ. ಆದರೆ, ಶೇಷಗಿರಿ ಸಹೋದರ ಗುರುರಾಜ್ ಪ್ರಕರಣ ಹಿಂದಕ್ಕೆ ತೆಗೆದುಕೊಳ್ಳುವದಿಲ್ಲ ಅಂತ ಪಟ್ಟು ಹಿಡಿದು ಜಗಳವಾಡಿದ್ದನಂತೆ.

ಹೀಗಾಗಿ ಗುರುರಾಜ್​ನ ಕೊಲೆಗೆ ಪವನ್​ ಮತ್ತು ಆತನ ಸಹೋದರ ಪ್ರಸನ್ನ ಇಬ್ಬರು ಸೇರಿ ಐದು ಲಕ್ಷ ರೂಪಾಯಿ ಸುಪಾರಿ ನೀಡಿದ್ದರು‌. ಪ್ಲ್ಯಾನ್​‌ನಂತೆ ಗುರುರಾಜ್​ನನ್ನು ಹೈಕೋರ್ಟ್ ಬಳಿ ಕರೆದು ಕೊಲೆ ಮಾಡಿದ್ದಾಗಿ ಆರೋಪಿಗಳು‌ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Last Updated :Sep 29, 2021, 10:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.