ETV Bharat / state

ಇನ್ಮುಂದೆ ನನ್ನಿಂದ ಹಲವರಿಗೆ ಶಾಕ್ ಕಾದಿದೆ: ಜನಾರ್ದನ ರೆಡ್ಡಿ ಗುಡುಗು

author img

By

Published : Mar 10, 2023, 10:56 AM IST

Updated : Mar 10, 2023, 12:48 PM IST

ನನ್ನ ಮೇಲೆ ಸುಳ್ಳು ಕೇಸ್​ಗಳನ್ನು ಹಾಕಿ ಜನರು ನಂಬುವ ರೀತಿಯಲ್ಲಿ ಮೋಸ ಮಾಡಿದ್ರು ಎಂದು ಕಾಂಗ್ರೆಸ್ ವಿರುದ್ಧ ಜನಾರ್ದನ ರೆಡ್ಡಿ ಕಿಡಿಕಾರಿದ್ದಾರೆ.

janardhana reddy
ಜನಾರ್ದನ ರೆಡ್ಡಿ

ಚುನಾವಣಾ ಪ್ರಚಾರದ ವೇಳೆ ಅಬ್ಬರದ ಭಾಷಣ ಮಾಡಿದ ಜನಾರ್ದನ ರೆಡ್ಡಿ

ಕಲಬುರಗಿ: ಕಲ್ಯಾಣ ನಾಡಿನಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ‌ ರೆಡ್ಡಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿದ ರೆಡ್ಡಿ, ಸೇಡಂ ಪಟ್ಟಣಕ್ಕೆ ಪ್ರಚಾರಕ್ಕೆಂದು ಆಗಮಿಸಿದ ವೇಳೆ ಅಬ್ಬರಿಸಿ ಭಾಷಣ ಮಾಡಿದರು. 'ಹುಲಿ ಬೋನ್‌ನಲ್ಲಿ ಇದ್ರೂ ಹುಲಿನೇ, ಕಾಡಲ್ಲಿ ಇದ್ರೂ ಹುಲಿಯೇ' ಎಂದು ಪ್ರತಿಪಕ್ಷಗಳ ವಿರುದ್ಧ ಗುಡುಗಿದರು.

ಜನಾರ್ದನ ರೆಡ್ಡಿ ಮತ್ತೆ ಬಿಜೆಪಿಗೆ ಸೇರ್ತಾರೆ ಎನ್ನುವ ಮಾಧ್ಯಮ ವರದಿ ಕುರಿತು ಪ್ರತಿಕ್ರಿಯಿಸಿದ ಅವರು, "ಇದೆಲ್ಲಾ ಸುಳ್ಳು, ಇಟ್ಟ ಹೆಜ್ಜೆ ಹಿಂದಿಡುವವನು ನಾನಲ್ಲ. ಹೆಜ್ಜೆ ಹಿಂದಿಡುವವನು ವೀರನೂ ಅಲ್ಲ ಧೀರನೂ ಅಲ್ಲ. ಜನಾರ್ದನ ರೆಡ್ಡಿಗೆ ಸಿಬಿಐ ಶಾಕ್ ಅಂತ ಮಾಧ್ಯಮದಲ್ಲಿ ಬರ್ತಿದೆ. ಆದ್ರೆ, ಸಿಬಿಐ ಶಾಕ್​ಗೆ ನಾನು ಹೆದರೋನು ಅಲ್ಲ, ಬೆದರೋನೂ ಅಲ್ಲ. ನನ್ನಿಂದ ನಿಮಗೆ ಶಾಕ್ ಹೊಡಿಬೇಕೇ ಹೊರತು ಯಾರಿಂದಲೂ ನನಗೆ ಶಾಕ್ ಆಗುವ ಪ್ರಶ್ನೆಯೇ ಬರಲ್ಲ. ಇನ್ಮುಂದೆ, ನನ್ನಿಂದಲೇ ಬಹಳ ಜನ ಶಾಕ್ ಅನುಭವಿಸ್ತಾರೆ" ಎಂದು ನನ್ನ ತಂಟೆಗೆ ಬಂದ್ರೆ ಸುಮ್ಮನಿರಲ್ಲ ಎಂಬ ಸಂದೇಶ ರವಾನಿಸಿದರು.

"ನಾನು ಬೇರೆ ದೇಶದಲ್ಲಿ ಲಕ್ಷ ಲಕ್ಷ ಕೋಟಿ ಹಣ ಇಟ್ಟಿದ್ರೆ ಈ ದೇಶ ಆಳುವವರಿಗೆ ತರಲು ಎಷ್ಟೊತ್ತು ಬೇಕು?, ಆ ಹಣ ತಂದ್ರೆ ನಾನೇ ಜನರಿಗೆ ಹಂಚಿ ಬಿಡುವೆ. ಬೇರೆ ಪಾರ್ಟಿಯ ಜನ ನನ್ನ ಜೊತೆ ಬರೋದು ತಡೆಯಲು ಈ ರೀತಿ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಯಾವುದಕ್ಕೂ ನಾನು ತಲೆಕೆಡಿಸಿಕೊಳ್ಳಲ್ಲ. ಈ ರಾಜ್ಯವನ್ನು ಕಲ್ಯಾಣ ರಾಜ್ಯ ಮಾಡುವವರೆಗೆ ನಾನು ಜೀವ ಬಿಡಲ್ಲ. ಹುಲಿ ಬೋನ್​‌ನಲ್ಲಿ ಇದ್ರೂ ಕಾಡಲ್ಲಿದ್ರೂ ಹುಲಿಯೇ. ಅದೇ ರೀತಿ ಜನಾರ್ದನ ರೆಡ್ಡಿ ಜೈಲಲ್ಲಿ ಇದ್ರೂ ಜನರ ಬಳಿ ಇದ್ರೂ ಒಂದೇ. ಈ ಹುಲಿ ಬಂದಿದ್ದಕ್ಕೆ ನಿಮ್ಮೂರಿನ ಎರಡು ಜಿಂಕೆಗಳು ಸೇರಿ ರಾಜ್ಯದ ಬಹಳಷ್ಟು ಜಿಂಕೆಗಳು ಮನೆ ಸೇರಿಕೊಳ್ಳುತ್ತಿವೆ" ಎಂದು ಅಬ್ಬರಿಸಿ ಭಾಷಣ ಮಾಡಿದ್ರು.

ಇದನ್ನೂ ಓದಿ: ನಾನು ಕಿಂಗೋ, ಕಿಂಗ್ ಮೇಕರೋ ಸ್ವಲ್ಪ ಕಾದು ನೋಡಿ : ಜನಾರ್ದನ ರೆಡ್ಡಿ

"ನಾನು ಅಧಿಕಾರದಲ್ಲಿ ಇರುವಾಗ ಮಾಡಿರುವ ಅಭಿವೃದ್ಧಿ ಕಾರ್ಯಗಳ ಸ್ಪೀಡ್ ನೋಡಿದ ಎಲ್ಲರಿಗೂ ಗಾಬರಿ ಆಗಿದ್ದರು. ಯಡಿಯೂರಪ್ಪ ನಂತರ ಯಾರು ಯಾರು ಮುಖ್ಯಮಂತ್ರಿ ಆಗಬೇಕು ಅಂತ ಆಸೆ ಇಟ್ಕೊಂಡಿದ್ರೋ ಅವರೆಲ್ಲರೂ ಸೇರಿ ನನ್ನ ರಾಜಕೀಯ ಶತ್ರುಗಳ ಜತೆ ಕೈ ಜೋಡಿಸಿ, ಮೀನಿಗೆ ಬಲೆ ಹಾಕಿದ ರೀತಿಯಲ್ಲಿ ನನಗೆ ಬಲೆ ಹಾಕಿದರು. ಎಲ್ಲವೂ ಕೂಡ ಹಾಲಿನ ಹಾಗೆ ಬೆಳ್ಳಗಿದೆ ಎಂದು ನಾನು ನಂಬಿದೆ. ಆದರೆ, ರಾಜಕೀಯ ಅಂದ್ರೆನೆ ತಂತ್ರ, ಕುತಂತ್ರ, ಮೋಸ, ದ್ವೇಷ, ಸುಳ್ಳು. ರಾಜಕೀಯ ಅಂದ್ರೆ ಒಬ್ಬರ ತಲೆಯ ಮೇಲೆ ಕಾಲು ಇಟ್ಟು ತುಳಿದು ಮುಂದಕ್ಕೆ ಹೋಗುವುದು ಅನ್ನೊದು ನನಗೆ ತಿಳಿದಿರಲಿಲ್ಲ. ಜನಾರ್ದನ ರೆಡ್ಡಿಗೆ ಆ ತರಹದ ನೀಚ ರಾಜಕೀಯ ಗೊತ್ತಿರಲಿಲ್ಲ, ಸುಷ್ಮಾ ಸ್ವರಾಜ್ ಅವರನ್ನು ನೋಡಿದ ನಾನು ಅವರ ರೀತಿಯಲ್ಲಿ ಎಲ್ಲಾ ರಾಜಕಾರಣಿಗಳು ಪ್ರಾಮಾಣಿಕರಾಗಿರ್ತಾರೆ ಎಂದು ನಂಬಿ ಮೋಸ ಹೋದೆ" ಎಂದರು.

"ಕೆಲವರು ತಾವು ಅಧಿಕಾರಕ್ಕೆ ಬಂದರೆ ಜನಾರ್ದನ ರೆಡ್ಡಿಯನ್ನು ಜೈಲಿಗೆ ಹಾಕಿ ಒಂದು ಲಕ್ಷ ಕೋಟಿ ವಸೂಲಿ ಮಾಡಿ, ರಾಜ್ಯದ ಬಡ ಜನರಿಗೆ ಮನೆಗಳನ್ನು ಕಟ್ಟಿ ಕೊಡುವ ಭರವಸೆ ನೀಡಿದ್ದರು. ನಾನು ಜೈಲಿನಲ್ಲಿ ಇದ್ದ ನಾಲ್ಕು ವರ್ಷಗಳ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಅವರೇ ಅಧಿಕಾರದಲ್ಲಿದ್ದರು. ಆದರೆ, ಅವರ ಯೋಗ್ಯತೆಗೆ ನನ್ನಿಂದ ಒಂದು ರೂಪಾಯಿ ಕೂಡ ವಸೂಲಿ ಮಾಡಲು ಆಗಲಿಲ್ಲ" ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

Last Updated :Mar 10, 2023, 12:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.