ETV Bharat / state

ಕೆಕೆಆರ್​ಡಿಬಿ ಅಧ್ಯಕ್ಷರಾಗಿ ಡಾ.ಅಜಯ್ ಸಿಂಗ್ ಅಧಿಕಾರ ಸ್ವೀಕಾರ: ಮಂಡಳಿಗೆ ಅಜಯಸಿಂಗ್ ಸುಪ್ರೀಂ- ಪ್ರಿಯಾಂಕ್ ಖರ್ಗೆ

author img

By

Published : Aug 14, 2023, 10:24 PM IST

dr-ajay-singh-appointed-as-kkrdb-chairman
ಕೆಕೆಆರ್​ಡಿಬಿ ಅಧ್ಯಕ್ಷರಾಗಿ ಡಾ ಅಜಯ್ ಸಿಂಗ್ ಅಧಿಕಾರ ಸ್ವೀಕಾರ : ಮಂಡಳಿಗೆ ಅಜಯಸಿಂಗ್ ಸುಪ್ರೀಂ.. ಪ್ರಿಯಾಂಕ್ ಖರ್ಗೆ

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ನೂತನ ಅಧ್ಯಕ್ಷರಾಗಿ ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಅಧಿಕಾರ ಸ್ವೀಕರಿಸಿದರು. ಇವರಿಗೆ ಸಚಿವ ಪ್ರಿಯಾಂಕ್​ ಖರ್ಗೆ ಮತ್ತಿತರರು ಅಭಿನಂದನೆ ಸಲ್ಲಿಸಿದರು.

ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ನೂತನ ಅಧ್ಯಕ್ಷರಾಗಿ ಜೇವರ್ಗಿ ಶಾಸಕ ಡಾ.ಅಜಯ್‌ ಸಿಂಗ್ ನೇಮಕಗೊಂಡಿದ್ದು, ಸೋಮವಾರ ನಗರದ ಐವಾನ-ಎ-ಶಾಹಿ ಪ್ರದೇಶದಲ್ಲಿರುವ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಹಲವರು ಅಭಿನಂದನೆ ಸಲ್ಲಿಸಿದರು.

ಬಳಿಕ ಮಾತನಾಡಿದ ಶಾಸಕ ಅಜಯ್‌ ಸಿಂಗ್, ಮ್ಯಾಕ್ರೋ ಯೋಜನೆಗಳನ್ನು ಇಲ್ಲಿ ಅನುಷ್ಠಾನಕ್ಕೆ ತರಲಾಗುತ್ತದೆ. ಈ ಮೂಲಕ ಕಲ್ಯಾಣ ಕರ್ನಾಟಕಕ್ಕೆ ಅಂಟಿಕೊಂಡಿರುವ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿಯನ್ನು ಹೋಗಲಾಡಿಸುವುದೇ ನಮ್ಮ ಮೊದಲ ಗುರಿ. ಈ ಪ್ರದೇಶದಲ್ಲಿನ ಸಾಕ್ಷರತೆ ಪ್ರಮಾಣ ಹೆಚ್ಚಿಸುವುದು, ಅಪೌಷ್ಟಿಕತೆ ನಿವಾರಣೆ, ತಾಯಿ-ಮಕ್ಕಳ ಮರಣ ಪ್ರಮಾಣ ತಗ್ಗಿಸುವುದರ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸುವುದು, ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ನಮ್ಮ ಮೊದಲ ಆದ್ಯತೆ ಎಂದು ಹೇಳಿದರು.

ರಾಜ್ಯದ ಈ ಹಿಂದಿನ 175 ತಾಲೂಕುಗಳಲ್ಲಿ 114 ತಾಲೂಕು ಹಿಂದುಳಿದ ತಾಲೂಕುಗಳಾಗಿವೆ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 39 ತಾಲೂಕು ಸೇರಿವೆ ಎಂದು ಡಾ.ಡಿ.ಎಂ.ನಂಜುಂಡಪ್ಪ ಅವರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಈ ಪ್ರತಿ ತಾಲೂಕಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಟ್ರಾಮಾ ಸೆಂಟರ್ ಸ್ಥಾಪನೆ ಮಾಡಲಾಗುವುದು. ರಾಜ್ಯದ ಸಾಕ್ಷರತೆ ಪ್ರಮಾಣ ಶೇ.75.36 ಇದ್ದರೆ, ಕ.ಕ. ಭಾಗದ ಪ್ರಮಾಣ ಸಾಕ್ಷರತೆ ಶೇ.64ರಷ್ಟು ಇದೆ. ಈ ವ್ಯತ್ಯಾಸವನ್ನು ಸರಿದೂಗಿಸಲು ಪ್ರತಿ ಹೋಬಳಿವಾರು ಪದವಿ ಪೂರ್ವ ಕಾಲೇಜುಗಳನ್ನು ಸ್ಥಾಪಿಸಲು ಪ್ರಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಸರ್ಕಾರ ನೀಡುವ ಅನುದಾನವನ್ನು ಖರ್ಚು ಮಾಡಿಲ್ಲ ಎಂಬ ಆಪಾದನೆ ಇದೆ. ಇದನ್ನು ತಮ್ಮ ಅವಧಿಯಲ್ಲಿ ಮುಂದುವರೆಯಲು ಬಿಡುವುದಿಲ್ಲ. ಮಂಡಳಿಗೆ ಅಧಿಕಾರಿ-ಸಿಬ್ಬಂದಿ, ಇಂಜಿನಿಯರ್ ಕೊರತೆ ಇರುವುದು ಗಮನಕ್ಕೆ ಬಂದಿದೆ. ಹಣಕಾಸು ಇಲಾಖೆ ಅನುಮೋದನೆ ಪಡೆದು ಸಿಬ್ಬಂದಿ ಭರ್ತಿ ಮಾಡಲಾಗುವುದು. ಮುಂದೆ ಅನುದಾನವನ್ನು ಸಹ ಕಾಲಮಿತಿಯಲ್ಲಿ ಖರ್ಚು ಮಾಡಲಾಗುವುದು ಎಂದು ಹೇಳಿದರು.

ಮುಂದಿನ ವಾರ ಮಂಡಳಿ ಸಭೆ : ಮಂಡಳಿಗೆ ಈಗಾಗಲೇ ನನ್ನನ್ನು ಹೊರತುಪಡಿಸಿ 10 ಜನ ಸದಸ್ಯರನ್ನು ಸರ್ಕಾರ ನೇಮಕ ಮಾಡಿದೆ. ಮುಂದಿನ ವಾರವೇ ಮಂಡಳಿ ಸಭೆ ಕರೆದು, ಪ್ರಸಕ್ತ ವರ್ಷದ ಕ್ರಿಯಾ ಯೋಜನೆ ಸಿದ್ದಪಡಿಸುವ ಕುರಿತಂತೆ ಚರ್ಚಿಸಲಾಗುವುದು. ಇದಕ್ಕೂ ಪೂರ್ವ ಪ್ರದೇಶದ ಸಚಿವರೊಂದಿಗೆ ಚರ್ಚಿಸಿ ಸಲಹೆ ಪಡೆಯಲಾಗುವುದು. ತದನಂತರ 15 ದಿನದಲ್ಲಿ ಪ್ರದೇಶದ ಶಾಸಕರಿಂದ ಮಾಹಿತಿ ಪಡೆದು ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮೋದನೆಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು. ಪ್ರತಿ ಮೂರು ತಿಂಗಳಿಗೊಮ್ಮೆ ಮಂಡಳಿ ಸಭೆ ಕರೆಯಲಾಗುವುದೆಂದು ತಿಳಿಸಿದರು.

5,000 ಕೋಟಿ ಅನುದಾನ ತರಲು ಸಿದ್ಧ : ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರ ಘೋಷಿಸುವ 5,000 ಕೋಟಿ ಅನುದಾನವನ್ನು ಮಂಡಳಿಗೆ ತರಲು ನಾವು ಶತಸಿದ್ಧ. ಪಂಚ ಗ್ಯಾರಂಟಿಗಳ ಅನುಷ್ಠಾನ ಮತ್ತು ಮಂಡಳಿ ಅನುದಾನ ಬಿಡುಗಡೆಗೆ ಯಾವುದೇ ಸಂಬಂಧವಿಲ್ಲ. ನಮ್ಮ ಸರ್ಕಾರದ ನುಡಿದಂತೆ ನಡೆಯಲಿದೆ. ಅದರಂತೆ‌ ಅನುದಾನ ಬರಲಿದೆ‌. ಇದರಲ್ಲಿ ಯಾವುದೇ ಆತಂಕ ಬೇಡ ಎಂದರು.

ವಿವೇಚನಾ ಅನುದಾನ ಹೆಚ್ಚಳ : ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಹಿಂದಿನ ಸರಕಾರದ ಅವಧಿಯಲ್ಲಿ ಮಂಡಳಿಯ ಅಧ್ಯಕ್ಷರಿಗೆ ಇದ್ದ ಶೇ.96 ರಷ್ಟು ಅನುದಾನ ಹಂಚಿಕೆ ಅಧಿಕಾರವನ್ನು ಶೇ.26ಕ್ಕೆ ಇಳಿಸಿತ್ತು. ನಮ್ಮ ಸರ್ಕಾರವು ಅಧ್ಯಕ್ಷರ ವಿವೇಚನಾ ನಿಧಿ ಬಳಕೆ ಶೇ.96ಕ್ಕೆ ಮತ್ತೆ ಹೆಚ್ಚಿಸುವ ಮೂಲಕ ಮಂಡಳಿಗೆ ಬಲ ನೀಡಿದೆ. ಹೀಗಾಗಿ ಡಾ. ಅಜಯ್ ಸಿಂಗ್ ಅವರೇ ಮಂಡಳಿಗೆ ಸುಪ್ರೀಂ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರು ಮತ್ತು ಮಂಡಳಿಯ ನೂತನ ಸದಸ್ಯರಾದ ಬಿ.ಅರ್.ಪಾಟೀಲ, ತಿಪ್ಪಣಪ್ಪ ಕಮಕನೂರ, ಅರವಿಂದ ಅರಳಿ ಮತ್ತು ವಿಧಾನಸಭೆ ಶಾಸಕರಾದ ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ಚಂದ್ರಶೇಖರ ಪಾಟೀಲ ಹುಮನಾಬಾದ, ಮಂಡಳಿ ಕಾರ್ಯದರ್ಶಿ ಅನಿರುದ್ಧ ಪಿ‌. ಶ್ರವಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : Priyank Kharge: ಮುಂದಿನ 6 ತಿಂಗಳಲ್ಲಿ ಬಿಜೆಪಿಯೇ ಉಳಿಯಲ್ಲ- ಯತ್ನಾಳ್‌ಗೆ ಪ್ರಿಯಾಂಕ್​ ಖರ್ಗೆ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.