ETV Bharat / state

ಹಾವೇರಿಯಲ್ಲಿ ವರುಣನ ಆರ್ಭಟಕ್ಕೆ ಹಾಳಾದ ಟೊಮೆಟೊ ಬೆಳೆ.. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತ ಕಂಗಾಲು

author img

By

Published : Aug 9, 2023, 7:58 PM IST

tomato-crop-destroyed-due-to-rain-in-haveri
ಹಾವೇರಿಯಲ್ಲಿ ವರುಣನ ಆರ್ಭಟಕ್ಕೆ ಹಾಳಾದ ಟೊಮೆಟೊ ಬೆಳೆ: ಕಂಗಾಲದ ರೈತರು

ಸತತ ಮಳೆ ಮತ್ತು ವರದಾ ನದಿಯ ಪ್ರವಾಹದಿಂದ ರೈತ ನಾಲ್ಕೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಟೊಮೆಟೊ ಬೆಳೆ ಹಾನಿಯಾಗಿದೆ.

ಹಾವೇರಿಯಲ್ಲಿ ವರುಣನ ಆರ್ಭಟಕ್ಕೆ ಹಾಳಾದ ಟೊಮೆಟೊ ಬೆಳೆ: ಕಂಗಾಲದ ರೈತರು

ಹಾವೇರಿ: ಕಳೆದ ಎರಡು ತಿಂಗಳಿಂದ ಎಲ್ಲೆಡೆ ಕಿಚನ್​ ಕ್ವೀನ್​ ಟೊಮೆಟೊದ್ದೇ ಮಾತು. ಟೊಮೆಟೊ ಬೆಳೆ ಈ ಬಾರಿ ರೈತರ ಕೈ ಹಿಡಿದಿದ್ದು, ಅಧಿಕ ಲಾಭ ತಂದುಕೊಟ್ಟಿದೆ. ಇದರ ನಡುವೆ ಕೆಲ ರೈತರು ಟೊಮೆಟೊ ಕಳ್ಳತನವಾಗಬಾರದು ಎಂದು ಜಮೀನಿನಲ್ಲಿ ಕಾವಲು ಕಾಯುತ್ತಿದ್ದಾರೆ. ಆದರೆ ಹಾವೇರಿ ಸಮೀಪದ ದೇವಗಿರಿ ಗ್ರಾಮದ ಟೊಮೆಟೊ ಬೆಳೆಗಾರ ದುರ್ಗಪ್ಪ ಎಂಬುವನ ಕಥೆ ಇದಕ್ಕೆ ಭಿನ್ನವಾಗಿದೆ. ದೇವಗಿರಿಯ ವರದಾ ನದಿ ತಟದಲ್ಲಿ ನಾಲ್ಕೂವರೆ ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದ ರೈತ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಮಾರುಕಟ್ಟೆಯಲ್ಲಿ ಟೊಮೆಟೊಗೆ ಬಂಗಾರದ ಬೆಲೆ ಇದೆ, ರೈತ ದುರ್ಗಪ್ಪನ ಜಮೀನಿನಲ್ಲಿ ಸಹ ಗಿಡದ ತುಂಬಾ ಟೊಮೆಟೊ ಬಿಟ್ಟಿವೆ. ಆದರೆ ಸತತ ಮಳೆ ಮತ್ತು ವರದಾ ನದಿಯ ನೀರಿನಿಂದ ದುರ್ಗಪ್ಪನ ಜಮೀನಿಗೆ ನೀರು ನುಗ್ಗಿತ್ತು. ಮಳೆ ಕಡಿಮೆಯಾಗಿ ವರದಾ ನದಿಯ ಪ್ರವಾಹ ಇಳಿಮುಖವಾದರೂ ಸಹ ರೈತನ ಸಮಸ್ಯೆ ಬಗೆಹರಿದಿಲ್ಲ. ಟೊಮೆಟೊ ಕಾಯಿಗಳು ಅಧಿಕ ನೀರಿನಿಂದ ಕೊಳೆಯುತ್ತಿವೆ. ಪ್ರತಿ ಗಿಡದಲ್ಲಿ 5ಕ್ಕೂ ಅಧಿಕ ಟೊಮೆಟೊ ಹಣ್ಣುಗಳು ಹಾಳಾಗಿವೆ.

ಇನ್ನೂ ಕೆಲವು ಕಡೆ ಟೊಮೆಟೊ ಗಿಡಗಳು ಹಾಳಾಗಿದ್ದು, ರೈತನಿಗೆ ನಷ್ಟ ಉಂಟಾಗುವಂತೆ ಮಾಡಿದೆ. ಪ್ರತಿ ಎಕರೆಗೆ ಒಂದು ವರ್ಷಕ್ಕೆ 15 ಸಾವಿರ ರೂಪಾಯಿಯಂತೆ ದುರ್ಗಪ್ಪ ಜಮೀನು ಲಾವಣಿ(ಲೀಸ್​) ಹಾಕಿಕೊಂಡಿದ್ದಾನೆ. ಟೊಮೆಟೊ ಸಸಿಗಳನ್ನು ತಂದು ನಾಟಿ ಮಾಡಿ ಅವುಗಳನ್ನು ಜೋಪಾನ ಮಾಡಿ, ತಂತಿ ಗೂಟ ನಿಲ್ಲಿಸಿ ಸೋಂಪಾಗಿ ಬೆಳೆಸಲು ಸುಮಾರು ಎರದೂವರೆ ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಗೊಬ್ಬರ, ಕ್ರಿಮಿನಾಶಕ, ಕಾರ್ಮಿಕರಿಗೆ ಕೂಲಿ ಎಂದು ಲಕ್ಷಾಂತರ ರೂಪಾಯಿ ಹಣವನ್ನ ದುರ್ಗಪ್ಪ ವ್ಯಯಿಸಿದ್ದಾನೆ.

ದುರ್ಗಪ್ಪನ ಶ್ರಮಕ್ಕೆ ತಕ್ಕಂತೆ ಭೂತಾಯಿ ಸಹ ಸಾಕಷ್ಟು ಫಸಲು ನೀಡಿದ್ದಳು. ಆದರೆ ವರುಣನ ಆರ್ಭಟಕ್ಕೆ ದುರ್ಗಪ್ಪನ ಟೊಮೆಟೊ ಬೆಳೆ ನೆಲಕಚ್ಚಿದೆ. ಸುಮಾರು 22 ಲಕ್ಷ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದ ದುರ್ಗಪ್ಪ ಇದೀಗ ಮಾಡಿದ ಖರ್ಚು ವಾಪಸ್​ ಬರುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿದ್ದಾನೆ. ಈ ಮಧ್ಯೆ ಜಮೀನಿನಲ್ಲಿ ಹಾಳಾದ ಟೊಮೆಟೊ ಬೆಳೆಯನ್ನು ತಿಪ್ಪೆಗೆ ಹಾಕಿದ್ದಾನೆ. ಉಳಿದ ಟೊಮೆಟೊ ಗಿಡಗಳ ಸಂರಕ್ಷಣೆಯಲ್ಲಿರುವ ದುರ್ಗಪ್ಪ, ಇವುಗಳಾದರೂ ಚೆನ್ನಾಗಿ ಫಸಲು ನೀಡಲಿ ಎಂದು ಆರೈಕೆ ಮಾಡುತ್ತಿದ್ದಾನೆ. ಮಳೆ ಕಡಿಮೆಯಾಗಿ ವರದಾ ನದಿಯ ನೀರಿನ ಮಟ್ಟ ಇಳಿಮುಖವಾಗಿದೆ. ಸದ್ಯ ಅಳಿದುಳಿದ ಗಿಡಗಳು ಉತ್ತಮ ಫಸಲು ನೀಡುವ ಆಶಾಭಾವ ಮೂಡಿದೆ. ಈ ಫಸಲಾದರೂ ನಾನು ಮಾಡಿದ ಖರ್ಚು ನೀಗಿಸಲಿ ಎಂದು ದುರ್ಗಪ್ಪ ದೇವರಲ್ಲಿ ಪ್ರಾರ್ಥಿಸುತ್ತಿದ್ದಾನೆ.

ಈ ಬಗ್ಗೆ ರೈತ ದುರ್ಗಪ್ಪ ಮಾತನಾಡಿ, ನಾಲ್ಕೂವರೆ ಎಕರೆಯಲ್ಲಿ ಟೊಮೆಟೊ ಬೆಳೆದಿದ್ದೆವು. ಟೊಮೆಟೊ ಸಸಿಗಳನ್ನು ತಂದು ನಾಟಿ ಮಾಡಿ ಅವುಗಳಿಗೆ ತಂತಿ ಗೂಟ ನಿಲ್ಲಿಸಿ, ಗೊಬ್ಬರ ಹಾಕಿ ಚೆನ್ನಾಗಿ ನೋಡಿಕೊಂಡಿದ್ದೆವು, ಇನ್ನೇನು ಫಸಲು ಬರಬೇಕು ಎನ್ನುವಷ್ಟರಲ್ಲಿ ಸತತ ಮಳೆ ಮತ್ತು ವರದಾ ನದಿಯ ಪ್ರವಾಹದಿಂದ ಎಲ್ಲ ಕೊಚ್ಚಿಕೊಂಡು ಹೋಗಿದೆ. ಟೊಮೆಟೊ ಹಣ್ಣುಗಳಿಗೆ ಹಾನಿಯಾಗಿದೆ ಎಂದು ಆಳಲು ತೋಡಿಕೊಂಡಿದ್ದಾನೆ.

ಮತ್ತೊಬ್ಬ ರೈತ ಕುಮಾರ್​ ಮಾತನಾಡಿ, ಟೊಮೆಟೊ ಹಣ್ಣು ಕೀಳುವ ಸಮಯಕ್ಕೆ ಮಳೆ ಬಂದು ಹಾನಿಯಾಗಿದೆ. ಟೊಮೆಟೊ ಗಿಡಗಳು ನಾಶವಾಗಿದ್ದರೆ, ಹಣ್ಣುಗಳು ಕೊಳೆತುಹೋಗಿವೆ. ನಾವು ಎರದೂವರೆಯಿಂದ ಮೂರು ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ, ನಮಗೆ ತುಂಬಾ ನಷ್ಟವಾಗಿದೆ. ಫಸಲು ಬಂದಿದ್ದರೆ ಸುಮಾರು ₹ 22 ಲಕ್ಷ ಆದಾಯ ಬರುವ ನಿರೀಕ್ಷೆ ಇತ್ತು. ಆದ್ರೆ ಈವರೆಗೆ ಒಂದು ರೂಪಾಯಿಯ ಟೊಮೆಟೊ ಕೂಡ ಮಾರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕೋಲಾರ: ಗ್ರಾಹಕರಿಗೆ ಗುಡ್​ ನ್ಯೂಸ್, ಟೊಮೆಟೊ ಬೆಲೆ ಕುಸಿತ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.