ETV Bharat / state

185 ಕೆಜಿ ತೂಕದ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ.. ಮರುಜೀವ ಕೊಟ್ಟ ಹಾವೇರಿ ಜಿಲ್ಲಾಸ್ಪತ್ರೆ ವೈದ್ಯರಿಗೆ ಕೃತಜ್ಞತೆ

author img

By

Published : Dec 10, 2022, 10:49 PM IST

ಸ್ಥೂಲಕಾಯ, ಉಸಿರಾಟ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದ 185 ಕೆಜಿ ತೂಕದ ಮಹಿಳೆಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಅವರ ಆರೋಗ್ಯದ ಸಮಸ್ಯೆಯನ್ನು ಸರಿಪಡಿಸಿದ್ದಾರೆ.

Kn_hvr
185 ಕೆಜಿ ತೂಕದ ಮಹಿಳೆಯ ಶಸ್ತ್ರಚಿಕಿತ್ಸೆ ಯಶಸ್ವಿ

185 ಕೆಜಿ ತೂಕದ ಮಹಿಳೆಯ ಶಸ್ತ್ರಚಿಕಿತ್ಸೆ ಯಶಸ್ವಿ

ಹಾವೇರಿ: ಜಿಲ್ಲಾಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಪರಮೇಶ್ ಹಾವನೂರು ಮತ್ತು ಅವರ ತಂಡ ಸುಮಾರು 185 ಕೆಜಿ ತೂಕದ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸೋಮಲಾಪುರದ 48 ವರ್ಷದ ಚಂದ್ರಮ್ಮ ಸ್ಥೂಲಕಾಯ, ಉಸಿರಾಟ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ಸಂಬಂಧ ಹುಬ್ಬಳ್ಳಿ ಕಿಮ್ಸ್, ಮಣಿಪಾಲ ಮತ್ತು ಬಾಪೂಜಿ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣಿಗೆ ಒಳಗಾಗಿದ್ದರು.

ಈ ಆಸ್ಪತ್ರೆಯ ವೈದ್ಯರೆಲ್ಲಾ ಚಂದ್ರಮ್ಮಳ ತೂಕ 185 ಕೆಜಿ ಇರುವ ಕಾರಣ ರಿಸ್ಕ್ ತಗೆದುಕೊಳ್ಳಲು ಮುಂದೆ ಬರಲಿಲ್ಲಾ. ಶಸ್ತ್ರಚಿಕಿತ್ಸೆ ಮಾಡಿದರೆ ಚಂದ್ರಮ್ಮ ಉಳಿಯುವ ಸಂಭವನಿಯತೆ ಕಡಿಮೆ ಇದೆ. ಮನೆಗೆ ಕರೆದುಕೊಂಡು ಹೋಗಿ, ಅವರು ಬದುಕಿರುವ ತನಕ ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳಿ ಕಳಿಸಿದ್ದರು. ಇದಾದ ನಂತರ ಚಂದ್ರಮ್ಮಳ ಪುತ್ರಿ ಚೈತ್ರಾ ಹಾವೇರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ತಾಯಿಯನ್ನ ಕರೆದುಕೊಂಡು ಬಂದಿದ್ದರು.

ಈ ಸಂದರ್ಭದಲ್ಲಿ ತಪಾಸಣೆ ನಡೆಸಿದ ಡಾ. ನಿರಂಜನ, ಚಂದ್ರಮ್ಮಳ ಆರೋಗ್ಯ ಪರಿಸ್ಥಿತಿ ನೋಡಿ ಅಚ್ಚರಿಪಟ್ಟಿದ್ದರು. ಮುಖ್ಯವೈದ್ಯಾಧಿಕಾರಿ ಪರಮೇಶ್ ಹಾವನೂರು ಸಂಪರ್ಕಿಸಿದ ನಿರಂಜನ ತಮ್ಮ ಇತರ ಸಿಬ್ಬಂದಿಯ ಜೊತೆ ಚರ್ಚಿಸಿ ಕೊನೆಗೆ ಶಸ್ತ್ರಚಿಕಿತ್ಸೆ ನಡೆಸಲು ಮುಂದಾದರು. ರೋಗಿಯ ಪುತ್ರಿ ಚೈತ್ರಾರಿಂದ ವಿವಿಧ ಕರಾರುಗಳಿಗೆ ಸಹಿ ಮಾಡಿಸಿಕೊಂಡು ಆಸ್ಪತ್ರೆಯ ವೈದ್ಯರು, ಚಂದ್ರಮ್ಮಳ ಶಸ್ತ್ರಚಿಕಿತ್ಸೆಗೆ ಮುಂದಾದರು.

ಅಧಿಕ ತೂಕದಿಂದ ಚಂದ್ರಮ್ಮಳ ಉದರದಲ್ಲಿನ ಚಿಕ್ಕಕರಳು, ದೊಡ್ಡಕರಳು ಒಂದುಕೊಂದು ತಳುಕು ಹಾಕಿಕೊಂಡಿದ್ದವು. ಕೆಲ ಅಂಗಗಳಲ್ಲಿ ಚರ್ಮ ನಿರ್ಜೀವತೆ ಹೊಂದಿತ್ತು. ಸುಮಾರು ಐವರು ವೈದ್ಯರು ಸೇರಿದಂತೆ 10 ಕ್ಕೂ ಅಧಿಕ ಸಿಬ್ಬಂದಿ ಸುಮಾರು 4 ಗಂಟೆಗಳ ಕಾಲ ಚಂದ್ರಮ್ಮಳ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಚಿಕಿತ್ಸೆಯ ನಂತರ ಚಂದ್ರಮ್ಮ ಇದೀಗ ಗುಣಮುಖರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪರಮೇಶ್​ ಹಾವನೂರು ತಿಳಿಸಿದರು.

ಚಂದ್ರಮ್ಮಳ ಹೃದಯಬಡಿತ, ರಕ್ತದೊತ್ತಡ ಆಮ್ಲಜನಕ ಪ್ರಮಾಣ ಸೇರಿದಂತೆ ಎಲ್ಲವೂ ಸಾಮಾನ್ಯ ಸ್ಥಿತಿಯಲ್ಲಿವೆ. ಈ ಹಿನ್ನೆಲೆಯಲ್ಲಿ ಶನಿವಾರ ಚಂದ್ರಮ್ಮಳನ್ನು ಜಿಲ್ಲಾಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು. ಹಲವು ಆಸ್ಪತ್ರೆಗಳಿಗೆ ತೋರಿಸಿದರೂ ಪ್ರಯೋಜನವಾಗದೆ ಇದ್ದದ್ದು ಇಲ್ಲಿ ಸರಿಯಾಗಿದೆ ಎಂದು ಚಂದ್ರಮ್ಮ ಹಾವೇರಿ ಜಿಲ್ಲಾಸ್ಪತ್ರೆ ವೈದ್ಯರ ಈ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ಜಿಲ್ಲಾಸ್ಪತ್ರೆಯ ವೈದ್ಯರು ತನಗೆ ಮರುಜನ್ಮ ನೀಡಿದ್ದು, ಅವರ ಸಲಹೆಯನ್ನು ಪಾಲಿಸುವ ಮೂಲಕ ಆರೋಗ್ಯ ಸ್ಥಿತಿಯನ್ನು ಕಾಪಾಡಿಕೊಂಡು ಹೋಗುವುದಾಗಿ ಚಂದ್ರಮ್ಮ ತಿಳಿಸಿದರು.

ಇದನ್ನೂ ಓದಿ: ಮಗುವಿನ ಗಂಟಲಿನಲ್ಲಿ ಸಿಲುಕಿದ್ದ ಬಾಟಲ್‌ ಮುಚ್ಚಳ ಯಶಸ್ವಿಯಾಗಿ ಹೊರತೆಗೆದ ವೈದ್ಯರು.. ಪೋಷಕರು ದಿಲ್​ ಖುಷ್..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.