ETV Bharat / state

ಒಂದೇ ಗರ್ಭಗುಡಿಯಲ್ಲಿ ನವದುರ್ಗೆಯರು: ಹಾವೇರಿಯಲ್ಲಿ ಮನೆ ಮಾಡಿದ ನವರಾತ್ರಿ ಸಂಭ್ರಮ

author img

By ETV Bharat Karnataka Team

Published : Oct 16, 2023, 7:04 AM IST

Updated : Oct 16, 2023, 2:23 PM IST

navaratri
ಒಂದೇ ಗರ್ಭಗುಡಿಯಲ್ಲಿ ನವದುರ್ಗೆಯರು

ಹಾವೇರಿಯ ನವದುರ್ಗೆಯರ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಹಾವೇರಿಯಲ್ಲಿ ಮನೆ ಮಾಡಿದ ನವರಾತ್ರಿ ಸಂಭ್ರಮ

ಹಾವೇರಿ : ದೇಶಾದ್ಯಂತ ಶರನ್ನಾವರಾತ್ರಿಯ ಸಂಭ್ರಮ ನಿನ್ನೆಯಿಂದ ಆರಂಭವಾಗಿದೆ. ಹಾವೇರಿಯ ನವದುರ್ಗೆಯರ ದೇವಸ್ಥಾನದಲ್ಲಿ ಸಹ ನವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಇಡೀ ದೇಗುಲವೇ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದೆ.

ಹೌದು, ಈ ದೇವಸ್ಥಾನದ ಒಂದೇ ಗರ್ಭಗುಡಿಯಲ್ಲಿ 9 ದುರ್ಗೆಯರನ್ನು ಸ್ಥಾಪನೆ ಮಾಡಿರುವುದು ವಿಶೇಷ. ನವರಾತ್ರಿಯ ದಿನಗಳಲ್ಲಿ ಪ್ರತಿನಿತ್ಯ ಒಂದೊಂದು ದುರ್ಗಾ ಮಾತೆಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ಮೊದಲ ದಿನ ಶೈಲಪುತ್ರಿ, ಎರಡನೇಯ ದಿನ ಬ್ರಹ್ಮಚಾರಿಣಿ, ಮೂರನೇ ದಿನ ಚಂದ್ರಘಂಟಾ, ನಾಲ್ಕನೇ ದಿನ ಕೂಷ್ಮಾಂಡಾ, ಐದನೇ ದಿನ ಸ್ಕಂದಮಾತಾ, ಆರನೇ ದಿನ ಕಾತ್ಯಾಯಿನಿ, ಏಳನೇ ದಿನ ಕಾಲರಾತ್ರಿ, ಎಂಟನೇಯ ದಿನ ಮಹಾಗೌರಿಗೆ ಪೂಜೆ ಸಲ್ಲಿಸಿದರೆ 9ನೇ ದಿನ ಸಿದ್ಧಿದಾತ್ರಿಗೆ ಪೂಜೆ ಸಲ್ಲಿಸಲಾಗುತ್ತದೆ.

ಮೊದಲ ದಿನವಾದ ಭಾನುವಾರ ಶೈಲಪುತ್ರಿಗೆ ಪೂಜೆ ಸಲ್ಲಿಸಲಾಯಿತು. ಕುಂಕುಮಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮೂಲ ದೇವಸ್ಥಾನವನ್ನು ಹಕ್ಕಲಮರಿಯಮ್ಮ ದೇವಸ್ಥಾನವೆಂದು ಕರೆಯಲಾಗುತ್ತದೆ. ಅಲ್ಲದೇ, ದೇವಸ್ಥಾನದಲ್ಲಿ ಸುಮಾರು 37 ದೇವರ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಇದಕ್ಕೆ ದೇವಿ ಪಂಚಾಯತ್ ಎಂದು ಕರೆಯಲಾಗುತ್ತಿದ್ದು, ಪ್ರತಿನಿತ್ಯ ಎಲ್ಲ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಇನ್ನು ದೇವಸ್ಥಾನದಲ್ಲಿ ನವಗ್ರಹಗಳನ್ನು ಸ್ಥಾಪಿಸಲಾಗಿದ್ದು, ನವ ವೃಕ್ಷಗಳನ್ನು ನೆಡಲಾಗಿದೆ. ನವರಾತ್ರಿಯ ಈ ದಿನಗಳಂದು ಭಕ್ತ ಸಾಗರವೇ ಇಲ್ಲಿಗೆ ಹರಿದು ಬರುತ್ತದೆ. ಪ್ರತಿನಿತ್ಯ ಒಂದೊಂದು ದುರ್ಗೆಯರಿಗೆ ಪೂಜೆ ಸಲ್ಲಿಸಿ, ಇಷ್ಟಾರ್ಥ ಈಡೇರುವಂತೆ ದುರ್ಗೆಯರಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ರಾಜ್ಯದಲ್ಲಿ ಒಂದೇ ಗರ್ಭಗುಡಿಯಲ್ಲಿ ನವದುರ್ಗೆಯರು ಮೂರ್ತಿಗಳಿರುವ ದೇವಸ್ಥಾನಗಳು ತುಂಬಾ ವಿರಳ. ಒಂದು ಮಂಗಳೂರಿನಲ್ಲಿ ಇದ್ದರೆ ಇನ್ನೊಂದು ಹಾವೇರಿಯಲ್ಲಿದೆ. ಈ ವಿಶೇಷ ದೇವಾಲಯ ಹಾವೇರಿಯಲ್ಲಿ ಸ್ಥಾಪನೆಯಾಗಿರುವುದು ನಮ್ಮ ಪುಣ್ಯ ಎನ್ನುತ್ತಾರೆ ಸ್ಥಳೀಯ ಭಕ್ತರು.

ಇದನ್ನೂ ಓದಿ : ಮಂಗಳಾದೇವಿ ನವರಾತ್ರಿ ಉತ್ಸವ : ಅನ್ಯಧರ್ಮೀಯ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ ಆರೋಪ - ಪ್ರತಿಭಟನೆ

ದೇವಾಲಯದ ಮಾಹಿತಿ : ಈ ದೇವಸ್ಥಾನವನ್ನು 1905 ರಲ್ಲಿ ಸ್ಥಾಪಿಸಲಾಗಿದೆ. 1905 ರಲ್ಲಿ ಕಲ್ಲಿನ ಮೂರ್ತಿಗಳನ್ನಿಟ್ಟು ಪೂಜೆ ಸಲ್ಲಿಸಲಾಗುತ್ತಿತ್ತು. ಹಕ್ಕಲು ಮರಿಯಮ್ಮ ವಿಗ್ರಹಗಳನ್ನು ಜೈಪುರದಲ್ಲಿ ತಂದು ಸ್ಥಾಪಿಸಲಾಗಿದೆ. ಬಳಿಕ, 2006 ರಲ್ಲಿ ದೇವಸ್ಥಾನ ಮರುನಿರ್ಮಾಣಗೊಂಡಿದೆ. 2009ರಲ್ಲಿ ನವದುರ್ಗೆಯರ ದೇವಸ್ಥಾನ ಸೇರಿದಂತೆ ಸುಮಾರು 38 ದೇವರ ಮೂರ್ತಿಗಳನ್ನು ಇಲ್ಲಿ ಸ್ಥಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ. ದೇವಸ್ಥಾನವನ್ನು ದಕ್ಷಿಣ ಕನ್ನಡ ಭಾಗಗಳಲ್ಲಿ ನಿರ್ಮಿಸಿರುವಂತೆಯೇ ಕಟ್ಟಲಾಗಿದೆ. ಈ ರೀತಿಯ ಮೂರ್ತಿಗಳು ಬಿರ್ಲಾ ಮಂದಿರದಲ್ಲಿ ಮಾತ್ರ ಕಾಣಲು ಸಾಧ್ಯ ಎನ್ನುತ್ತಾರೆ ದೇವಸ್ಥಾನದ ಸಮಿತಿ ಅಧ್ಯಕ್ಷ ವಿ. ಕೆ. ಕೇಳ್ಕರ್.

ಇದನ್ನೂ ಓದಿ : ನವರಾತ್ರಿ ಗೊಂಬೆಗಳಿಂದ ಸಹಬಾಳ್ವೆ ಸಂದೇಶ.. ಗುಂಡ್ಲುಪೇಟೆಯ ಈ ಮನೆ 10 ಸಾವಿರ ಬೊಂಬೆ ಅರಮನೆ

ಸನಾತನ ಧರ್ಮದ ಪ್ರಕಾರ, ಅಷ್ಟ ದೇವತೆಗಳನ್ನು ದೇವಾಲಯದಲ್ಲಿ ಸ್ಥಾಪಿಸಲಾಗಿದೆ. ದೇವಸ್ಥಾನಕ್ಕೆ ವರ್ಷದಿಂದ ವರ್ಷಕ್ಕೆ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ನವದುರ್ಗೆಯರು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಎಂಬ ನಂಬಿಕೆ ಮನೆ ಮಾಡಿದೆ.

ಇದನ್ನೂ ಓದಿ : ರಾಜಧಾನಿಯಲ್ಲಿ ನವರಾತ್ರಿ ಸಂಭ್ರಮ.. ರಾಮಾಯಣದ ಥೀಮ್ ದಸರಾ ಗೊಂಬೆಗಳ ಪ್ರದರ್ಶನ

Last Updated :Oct 16, 2023, 2:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.