ETV Bharat / state

ಕನ್ನಡ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಲು ಸರ್ಕಾರ ಬದ್ಧ: ಸಿಎಂ

author img

By

Published : Jan 9, 2023, 9:25 AM IST

Updated : Jan 9, 2023, 10:01 AM IST

ಕನ್ನಡಕ್ಕಾಗಿ ಹೋರಾಡಿದ ಹೋರಾಟಗಾರರ ಮೇಲಿರುವ ಕಾಗ್ನಿಜಬಲ್ ಹೊರತುಪಡಿಸಿದ ಉಳಿದೆಲ್ಲಾ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಬದ್ಧವಾಗಿದೆ. ಗಡಿ ನಾಡಿನ ಶಿಕ್ಷಣ, ಆರೋಗ್ಯ ಮತ್ತು ಸೌಕರ್ಯಗಳ ಅಭಿವೃದ್ಧಿಗೆ 100 ಕೋಟಿ ರೂ. ಒದಗಿಸಲಾಗುವುದು. ನಮ್ಮ ನಾಡಿನಲ್ಲಿ ನೆಲೆಸಲು ಇಚ್ಛಿಸುವರು ಕಡ್ಡಾಯವಾಗಿ ಕನ್ನಡ ಕಲಿಯಲೇಬೇಕೆಂಬ ನೀತಿ ಜಾರಿಗೊಳಿಸಲು ಚಿಂತನೆ ನಡೆದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

CM Basavaraj Bommai
ಬಸವರಾಜ ಬೊಮ್ಮಾಯಿ

ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ

ಹಾವೇರಿ: 'ಕನ್ನಡ ನಾಡು, ನುಡಿ, ಜಲ, ಸ್ವಾತಂತ್ರ್ಯಕ್ಕೆ ಪ್ರಾಣತ್ಯಾಗ ಮಾಡಿದ ವೀರರ ನೆಲ ಹಾವೇರಿ. ಈ ಪುಣ್ಯಭೂಮಿ ಕನ್ನಡ ಭುವನೇಶ್ವರಿ ತಾಯಿಯ ಒಡಲು. ಬಹಳ ದೊಡ್ಡ ಹೃದಯ ಶ್ರೀಮಂತಿಕೆ ಈ ಮಣ್ಣಿನ ಗುಣದಲ್ಲಿದೆ. ಯಾವುದಕ್ಕೂ ಕೊರತೆ ಇಲ್ಲ. ಕನ್ನಡದ ಜ್ಞಾನ, ಸಾಹಿತ್ಯ, ಸಂಸ್ಕೃತಿ, ಬದುಕು, ತಂತ್ರಜ್ಞಾನ ಎಲ್ಲವೂ ಶ್ರೀಮಂತವಾಗಿದೆ' ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಹಾವೇರಿಯಲ್ಲಿ ನಡೆದ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಪುಣ್ಯಭೂಮಿಯಿಂದ ಭುವನೇಶ್ವರಿ‌‌ ಒಡಲಿಗೆ ನಮಸ್ಕರಿಸುವೆ. ಕನ್ನಡದ ಹಬ್ಬ ಅತ್ಯಂತ ಯಶಸ್ವಿಯಾಗಿದೆ. ಇದಕ್ಕಾಗಿ ದುಡಿದ ಎಲ್ಲರಿಗೂ ನನ್ನ ಕೋಟಿ ಕೋಟಿ ನಮನಗಳು. ಮೂರು ದಿನಗಳ ಕಾಲ ಸಮ್ಮೇಳನದಲ್ಲಿ ಪಾಲ್ಗೊಂಡು 32ಕ್ಕೂ ಅಧಿಕ ಗೋಷ್ಠಿಗಳ ನೇತೃತ್ವ ವಹಿಸಿದ್ದ ಸಾಹಿತಿ ದೊಡ್ಡರಂಗೇಗೌಡರಿಗೆ ಮತ್ತು ಕ್ರಿಯಾಶೀಲತೆ ಪ್ರದರ್ಶಿಸಿದ ಕಸಾಪ ರಾಜ್ಯಧ್ಯಕ್ಷರಿಗೆ ಸಿಎಂ ಅಭಿನಂದನೆ ಸಲ್ಲಿಸಿದರು.

ಕನ್ನಡ ಹೋರಾಟಗಾರರ ಕೇಸ್‌ ವಾಪಸ್‌: 'ಕನ್ನಡಿಗರೆಲ್ಲಾ ಸೇರಿ ಕನ್ನಡಕ್ಕಾಗಿ ಕೈ ಎತ್ತಿದಾಗ ಕನ್ನಡ ಶಕ್ತಿಶಾಲಿಯಾಗುತ್ತದೆ. ಬೇರೆ ರಾಜ್ಯಗಳಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳಿಗಿಂತ ಬಹಳ ಭಿನ್ನವಾಗಿ ನಮ್ಮ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯುತ್ತವೆ. ಗಡಿ ನಾಡಿನ ಶಿಕ್ಷಣ, ಆರೋಗ್ಯ ಮತ್ತು ಸೌಕರ್ಯಗಳ ಅಭಿವೃದ್ಧಿಗೆ 100 ಕೋಟಿ ರೂ.ಒದಗಿಸಲಾಗುವುದು. ಕನ್ನಡಕ್ಕಾಗಿ ಹೋರಾಡಿದ ಹೋರಾಟಗಾರರ ಮೇಲಿರುವ ಕಾಗ್ನಿಜಬಲ್ ಹೊರತುಪಡಿಸಿದ ಉಳಿದ ಎಲ್ಲಾ ಪ್ರಕರಣಗಳನ್ನು ಹಿಂದೆ ಪಡೆಯಲು ಸರ್ಕಾರ ಬದ್ಧವಾಗಿದೆ. 2008 ರಿಂದ ಕನ್ನಡ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದಿದೆ‌‌. ಇಲ್ಲಿಯವರೆಗೆ ಕೇಂದ್ರ ಸರ್ಕಾರದಿಂದ 13.30 ಕೋಟಿ ರೂ. ನೆರವು ದೊರೆತಿದೆ' ಎಂದರು.

'ಕಾನೂನು ತೊಡಕು ನಿವಾರಿಸಿಕೊಂಡು ಮಹದಾಯಿ, ಕಳಸಾ ಬಂಡೂರಿ ಯೋಜನೆಯಾಗಿ ಅನುಷ್ಠಾನವಾಗಲಿದೆ. ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್​ಗೆ ಹೆಚ್ಚಿಸಲು ಶೀಘ್ರ ನ್ಯಾಯಮಂಡಳಿಯ ಅನುಮೋದನೆ ಸಿಗುವ ಭರವಸೆ ಇದೆ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಮಧ್ಯ ಕರ್ನಾಟಕದ ಲಕ್ಷಾಂತರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಮೇಕೆದಾಟು ಯೋಜನೆ ಕೂಡ ಜಾರಿಯಾಗಲಿದೆ. ಎಲ್ಲಾ ಮಾತೃ ಭಾಷೆಗಳಿಗೆ ಸಂವಿಧಾನದ ರಕ್ಷಣೆಯ ಅಗತ್ಯವಿದೆ' ಎಂದು ಹೇಳಿದರು.

'ಮುಂಬರುವ ದಿನಗಳಲ್ಲಿ ಸಂವಿಧಾನ ರಕ್ಷಣೆ ಪಡೆಯಲು ಶ್ರಮಿಸಲಾಗುವುದು. ಕರ್ನಾಟಕಕ್ಕೆ ಹೊರ ರಾಜ್ಯಗಳಿಂದ ದೊಡ್ಡ ಪ್ರಮಾಣದಲ್ಲಿ ಜನ ಬರುತ್ತಿದ್ದಾರೆ. ಆದರೆ, ಕನ್ನಡ ಕಲಿಯುತ್ತಿಲ್ಲ. ಈ ನಾಡಿನಲ್ಲಿ ನೆಲೆಸಲು ಇಚ್ಛಿಸುವರು ಕಡ್ಡಾಯವಾಗಿ ಕನ್ನಡ ಕಲಿಯಲೇಬೇಕೆಂಬ ನೀತಿ ಜಾರಿಗೊಳಿಸಲು ಚಿಂತನೆ ನಡೆದಿದೆ. ಕನ್ನಡಕ್ಕಾಗಿ ಗಡಿಯಾಚೆ ಹೋರಾಡಿದ ಕನ್ನಡಿಗರಿಗೆ ಪಿಂಚಣಿ ನೀಡಲಾಗುವುದು' ಎಂದು ಮುಖ್ಯಮಂತ್ರಿಗಳು ಹೇಳಿದರು.

'ಸಾಹಿತ್ಯ ರೋಗಗ್ರಸ್ತ ಮನಸ್ಸಿಗೆ ಮದ್ದು': ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ದೊಡ್ಡರಂಗೇಗೌಡರು, 'ಹಾವೇರಿಯಲ್ಲಿ ನಡೆದ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಖಿಲ ಭಾರತೀಯ ಮಟ್ಟದಲ್ಲಿ ಗೆಲುವು ಸಾಧಿಸಿದೆ. ಇದಕ್ಕೆ ಹಾವೇರಿ ಜನರಿಗೆ ಅಭಿನಂದನೆ ಸಲ್ಲಿಸುವೆ. ಕನ್ನಡ ಜನ‌ ಅಕ್ಕರೆಯಿಂದ ಅಪ್ಪಿಕೊಂಡಿದ್ದಾರೆ. ಸಾಹಿತ್ಯ ಅನ್ನುವುದು ರೋಗಗ್ರಸ್ತ ಮನಸ್ಸಿಗೆ ಮದ್ದು ನೀಡುತ್ತದೆ. ಸಾಹಿತ್ಯ ಬರಿ ಚೈತನ್ಯ ನೀಡುವುದಿಲ್ಲ, ಅಧ್ಯಯನ ನೀಡುವುದಿಲ್ಲ, ವ್ಯಕ್ತಿತ್ವ ರೂಪಿಸುತ್ತದೆ. ಮೃಗಿಯವಾಗಿದ್ದ ಮನುಷ್ಯನನ್ನು ಸಂಸ್ಕಾರಯುತನ್ನಾಗಿ ಮಾಡುತ್ತದೆ. ಮನಸ್ಸುಗಳ‌ ಮಾಲಿನ್ಯ ಕಳೆದು ಹೋಗಬೇಕು' ಎಂದರು.

'ಸಾಹಿತ್ಯ ಸಮ್ಮೇಳನವನ್ನು ವಿರೋಧಿಸುವರು ಬನ್ನಿ ಸಾಹಿತ್ಯ ಪರಿಷತ್ತಿಗೆ, ಬನ್ನಿ ಸಾಹಿತ್ಯ ಸಮ್ಮೇಳನಕ್ಕೆ. ಬಳಿಕ ನಿಮ್ಮ ಅಭಿಪ್ರಾಯ ಬೇರೆಯಾಗಿರುತ್ತದೆ. ಕನ್ನಡ ಸ್ಥಾನ ಉನ್ನತ ಮಟ್ಟದಲ್ಲಿದೆ. ಆದ್ದರಿಂದ ಎಲ್ಲರೂ ಒಗ್ಗೂಡಿ ಅಭಿಪ್ರಾಯ ಹೇಳಿ, ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬರೋಣ. ಟೀಕೆ‌ ಮಾಡಿದ್ರೆ ಪ್ರಯೋಜನವಿಲ್ಲ. ಸಿಎಂ ಅವರು ನಲ್ಮೆಯ ಮಾತುಗಳನ್ನಾಡಿದ್ದಾರೆ. ನಾವು ಪ್ರಸ್ತಾಪ ಮಾಡಿದ್ದ ಎಲ್ಲಾ ವಿಚಾರಗಳ ಕುರಿತು ಚರ್ಚೆ ನಡೆಸಿ, ಕನ್ನಡ ಹೋರಾಟಗಾರರ ಮೇಲಿನ‌ ದೂರು ವಾಪಸ್ ಪಡೆದುಕೊಂಡಿದ್ದಾರೆ. ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕೆ ತೊಂದರೆ ಆಗದಂತೆ ದೊಡ್ಡ ಮಟ್ಟದ ಸಮಿತಿ ರಚಿಸುವ ಮಾತು ನೀಡಿದ್ದಾರೆ. ಇದು ಅವರ ಹೃದಯವಂತಿಕೆಯನ್ನು ತೋರಿಸುತ್ತದೆ' ಎಂದರು.

ಇದನ್ನೂ ಓದಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ.. ಕನ್ನಡ ಸಾಹಿತ್ಯ ಪರಿಷತ್​ನಿಂದ ಆರು ನಿರ್ಣಯ ಘೋಷಣೆ

'ಈ ಸಮ್ಮೇಳನದಿಂದ ಕನ್ನಡ, ಭಾರತವಷ್ಟೇ ಅಲ್ಲದೇ, ವಿದೇಶದಲ್ಲಿ ಕನ್ನಡ ಮೆರೆಯಬೇಕು. ಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು. 5 ಲಕ್ಷ ಜನರು ಬಂದು ಸಮ್ಮೇಳನ ಯಶಸ್ವಿ ಮಾಡಿದ್ದಾರೆ. ಇಲ್ಲಿನ ವ್ಯವಸ್ಥೆ, ರೀತಿ ನೀತಿಗಳು ಇಷ್ಟವಾಗಿವೆ. ಕನ್ನಡ ಹೃದಯವಂತಿಕೆಯನ್ನು ಪಲ್ಲವಿಸಬೇಕು. ತಾಯಿ ಭುವನೇಶ್ವರಿ ಪೂಜೆ ಅಂದ್ರೆ ನಿತ್ಯೋತ್ಸವ' ಎಂದು ದೊಡ್ಡರಂಗೇಗೌಡ ಅಭಿಪ್ರಾಯಪಟ್ಟರು.

ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವರಾದ ಶಿವರಾಮ ಹೆಬ್ಬಾರ್, ನಾಗೇಶ ಮತ್ತು ಬಿ.ಸಿ.ಪಾಟೀಲ್​, ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು. ಈ ಮೂಲಕ ಅಖಿಲ ಭಾರತ 86ನೇ ಸಾಹಿತ್ಯ ಸಮ್ಮೇಳನಕ್ಕೆ ವಿದ್ಯುಕ್ತ ತೆರೆ ಬಿತ್ತು.

Last Updated : Jan 9, 2023, 10:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.