ETV Bharat / state

86ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ.. ಕನ್ನಡ ಸಾಹಿತ್ಯ ಪರಿಷತ್​ನಿಂದ ಆರು ನಿರ್ಣಯ ಘೋಷಣೆ

author img

By

Published : Jan 8, 2023, 8:58 PM IST

Updated : Jan 8, 2023, 11:01 PM IST

86ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ- ಅಕ್ಷರ ಜಾತ್ರೆಯಲ್ಲಿ ಆರು ನಿರ್ಣಯ ಘೋಷಣೆ- ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸರ್ಕಾರಕ್ಕೆ ಆಗ್ರಹ

Sahitya Parishad Honorary Treasurer BM Patel Pandu
ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು

86ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ.. ಕನ್ನಡ ಸಾಹಿತ್ಯ ಪರಿಷತ್​ನಿಂದ ಆರು ನಿರ್ಣಯ ಘೋಷಣೆ

ಹಾವೇರಿ : ಜನವರಿ 6 ರಿಂದ ಆರಂಭವಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ನಡೆದ ಬಹಿರಂಗ ಅಧಿವೇಶನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸರ್ವಾನುಮತದಿಂದ ಆರು ನಿರ್ಣಯಗಳನ್ನು ಕೈಗೊಂಡಿದೆ. ಹಾವೇರಿಯಲ್ಲಿ 86ನೇ ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷ ಬಿ.ಎಂ. ಪಟೇಲ್ ಪಾಂಡು ಅವರು ಘೋಷಣೆಗಳನ್ನು ಮಾಡಿದರು.

ಮೊದಲ ನಿರ್ಣಯ : ಈ ನಿರ್ಣಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ 86ನೇ ಸಾಹಿತ್ಯ ಸಮ್ಮೇಳನದ ರೂವಾರಿಗಳಿಗೆ ಅಭಿನಂದನೆ ಸಲ್ಲಿಸಿದೆ.

ಎರಡನೇಯ ನಿರ್ಣಯ : ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕಕ್ಕೆ ಕೂಡಲೇ ಸುಗ್ರೀವಾಜ್ಞೆ ಮೂಲಕ ಕಾನೂನಿನ ರೂಪ ಪಡೆದು ಶಿಕ್ಷಣ, ನ್ಯಾಯಾಂಗ, ಆಡಳಿತದಲ್ಲಿ ಕನ್ನಡ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು ಎಂದು ಸಮ್ಮೇಳನವು ರಾಜ್ಯ ಸರ್ಕಾರವನ್ನು ಬಲವಾಗಿ ಆಗ್ರಹಿಸಿದೆ.

ಮೂರನೇಯ ನಿರ್ಣಯ : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಸಂಬಂಧ ಇರುವ ಮಹಾಜನ ವರದಿಯು, ಭಾರತದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿತವಾಗಿ ಪ್ರಕರಣ ವಿಚಾರಣೆಯ ಹಂತದಲ್ಲಿ ಇದೆ. ನ್ಯಾಯಾಲಯದ ಅಂತಿಮ ತೀರ್ಪಿನ ಮಾರ್ಗದರ್ಶನದಂತೆ ಸೂಕ್ತ ಕ್ರಮವನ್ನು ವಿಳಂಬವಿಲ್ಲದೇ ಕೈಗೊಳ್ಳಬೇಕು ಎಂದು ಸಾಹಿತ್ಯ ಸಮ್ಮೇಳನವು ಸರ್ಕಾರವನ್ನು ಆಗ್ರಹಿಸಿದೆ.

ನಾಲ್ಕನೇಯ ನಿರ್ಣಯ : ಕನ್ನಡಕ್ಕಾಗಿ ಹೋರಾಡಿದ ಕನ್ನಡ ಚಳವಳಿಗಾರರ ಮೇಲಿನ ಈ ಸಂಬಂಧಿತ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂಬುದು ಸಾಹಿತ್ಯ ಸಮ್ಮೇಳನಳದ ನಾಲ್ಕನೇ ಘೋಷಣೆಯಾಗಿದೆ.

ಐದನೇಯ ನಿರ್ಣಯ : ಭಾರತ ಸಂವಿಧಾನದ ಎಂಟನೇ ಪರಿಚ್ಛೇದದ ಅನ್ವಯ ಎಲ್ಲಾ ಪ್ರಾಂತೀಯ ಭಾಷೆಗಳನ್ನು ಸಮಾನ ಎಂದು ಗುರುತಿಸಿದ್ದು, ಈ ಪಟ್ಟಿಯಲ್ಲಿರುವ 22 ಭಾಷೆಗಳಲ್ಲಿರುವ ಕನ್ನಡ ಕರ್ನಾಟಕದ ಸಾರ್ವಭೌಮ ಭಾಷೆಯಾಗಿದೆ. ಇದರ ಮೇಲಿನ ಹಿಂದಿ ಅಥವಾ ಇನ್ಯಾವುದೇ ಭಾಷೆಯ ಆಕ್ರಮಣವನ್ನು ಹೇರಿಕೆಯನ್ನು ಈ ಸಮ್ಮೇಳನ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.

ಆರನೇಯ ನಿರ್ಣಯ :ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲಿ ಜರುಗಿಸಬೇಕೆನ್ನುವ ನಿರ್ಣಯವನ್ನು ಕರ್ನಾಟಕ ತೆಗೆದುಕೊಂಡಿರುವುದರಿಂದ ಅದರ ಅರ್ಥಪೂರ್ಣ ಮತ್ತು ಯಶಸ್ವಿ ಆಯೋಜನೆಯ ಸಂಬಂಧದಲ್ಲಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಜರುಗಿಸುತ್ತ ಬಂದಿರುವ ಅನುಭವದ ಹಿನ್ನೆಲೆಯನ್ನು ಹೊಂದಿರುವ, ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಜರುಗಿಸಬೇಕು. ಹಾಗೂ ನಿಯೋಜಿತ ಸಮ್ಮೇಳನದ ಸಂಬಂಧವಾಗಿ ಹಾಗೂ ಸರ್ಕಾರ ಜರುಗಿಸುವ ಸಭೆಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಈ ಸಮ್ಮೇಳನವು ಒಕ್ಕೋರಲಿನಿಂದ ಸರ್ಕಾರವನ್ನು ಆಗ್ರಹಿಸುತ್ತದೆ ಎಂದು 86ನೇ ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷ ಪಟೇಲ್ ಪಾಂಡು ಹೇಳಿದರು.

ಈ ವರ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ ಅಯೋಜನೆಗೊಂಡಿದ್ದ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಕ್ಷರ ಹಬ್ಬವು ಅತ್ಯಂತ ಯಶಸ್ವಿಯಾಗಿ ಭಾನುವಾರ ಸಂಪನ್ನಗೊಂಡಿತು. ಇದರ ಬೆನ್ನೆಲೆ ಮುಂಬರುವ 87ನೇ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಬೇಕು ಎಂಬುದರ ಕುರಿತಂತೆ ಶನಿವಾರ ರಾತ್ರಿ ಕನ್ನಡ ಸಾಹಿತ್ಯ ಪರಿಷತ್​ ಕಾರ್ಯಕಾರಿಣಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಬಹುತೇಕ ಸದಸ್ಯರು ತಮ್ಮ ತಮ್ಮ ಜಿಲ್ಲೆಗಳಿಗೆ ಪ್ರಾಶಸ್ತ್ಯ ನೀಡುವಂತೆ ಆರೋಗ್ಯಕರ ಚರ್ಚೆ ನಡೆದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್​ನ ರಾಜ್ಯಾಧ್ಯಕ್ಷ ಮಹೇಶ್​ ಜೋಶಿ ತಿಳಿಸಿದ್ದರು. ಮಂಡ್ಯ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳು ಸಮ್ಮೇಳನದ ಆತಿಥ್ಯಕ್ಕೆ ಪ್ರಬಲ ಪೈಪೋಟಿ ನಡೆಸಿವೆ ಎಂದು ಕಸಾಪ ಅಧ್ಯಕ್ಷರು ಈ ವೇಳೆ ಹೇಳಿದ್ದರು.

ಇನ್ನು, ಏಲಕ್ಕಿ ನಗರಿ ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದು, ಸಮ್ಮೇಳನದ ವೇದಿಕೆಗಳು, ಗೋಷ್ಠಿಗಳು, ಪ್ರದರ್ಶನಗಳು, ಪುಸ್ತಕ ಮಳಿಗೆಗಳಲ್ಲಿ ಎಲ್ಲಿ ನೋಡಿದದಲ್ಲಿ ಜನರು ತುಂಬಿರುವ ಚಿತ್ರಣ ಕಂಡುಬಂತು. ಒಟ್ಟು 300ಕ್ಕೂ ಅಧಿಕ ಪುಸ್ತಕ ಮಳಿಗೆಗಳನ್ನು ತೆರೆಯಲಾಗಿತ್ತು. ಜನರು ತಮ್ಮ ತಮ್ಮ ನೆಚ್ಚಿನ ಕವಿಗಳ, ಸಾಹಿತಿಗಳ ಪುಸ್ತಕಗಳ ಖರೀದಿಗೆ ಮುಗಿಬಿದ್ದಿದ್ದರು.

ಇದನ್ನೂ ಓದಿ :86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ: ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸಿದ ಸಾವಿರಾರು ಜನ

Last Updated : Jan 8, 2023, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.