ETV Bharat / state

ಹಾಸನದಲ್ಲಿ ನಾನೇ ಸಿಎಂ, ಕೊನೆ ಉಸಿರಿರುವ ತನಕ ಬಿಜೆಪಿಯಲ್ಲೇ ಇರುತ್ತೇನೆ: ಪ್ರೀತಂ ಗೌಡ

author img

By

Published : Jan 27, 2022, 5:28 AM IST

Updated : Jan 27, 2022, 7:03 AM IST

i-will-be-in-bjp-till-the-last-breath-preetam-gowda
ಪ್ರೀತಂ ಗೌಡ ಹೇಳಿಕೆ

ನಾನು ಬಿಜೆಪಿಯಲ್ಲಿ ಸ್ವಯಂ ಸೇವಕನಾಗಿ, ನಂತರ ಕಾರ್ಯಕರ್ತನಾಗಿ ಶಾಸಕನಾಗಿ ಅಧಿಕಾರ ಹಿಡಿದಿದ್ದೇನೆ. ಕೊನೆ ಉಸಿರಿರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ ಹೊರತು, ಯಾವುದೇ ಕಾರಣಕ್ಕೂ ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.

ಹಾಸನ: ಹಾಸನದಲ್ಲಿ ನಾನೇ ಸಿಎಂ, ಕೊನೆ ಉಸಿರಿರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ ಎಂದು ಶಾಸಕ ಪ್ರೀತಂ ಜೆ. ಗೌಡ ಹೇಳಿದ್ದಾರೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಚಿವ ಸಂಪುಟ ಪುನಾರಚನೆ ಚರ್ಚೆ ನಡೆಯುತ್ತಿದ್ದು, ಕೇಂದ್ರದ ಹಾಗೂ ರಾಜ್ಯದ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆ ಇದೆ. ಆದರೆ ನಾನು ಸದ್ಯ ಸಚಿವ ಸ್ಥಾನದ ರೇಸ್​​ನಲ್ಲಿ ಇಲ್ಲ. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಹ ನನಗೆ ನಿಗಮ ಮಂಡಳಿಯ ಸ್ಥಾನವನ್ನು ನೀಡಲಾಗಿತ್ತು. ಅದನ್ನು ನಾನು ತಿರಸ್ಕರಿಸಿ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆಗೆ ಮನವಿ ಮಾಡಿದ್ದು, ಅದರಂತೆ ಸರ್ಕಾರ ನಡೆದುಕೊಂಡಿದೆ. ಯಡಿಯೂರಪ್ಪ ಹಾಗೂ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಸನದ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುತ್ತಿದ್ದಾರೆ ಎಂದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

2022ರ ರಾಜ್ಯ ಬಜೆಟ್‍ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯ ಯೋಜನೆಗಳ ನಿರೀಕ್ಷೆಯಲ್ಲಿದ್ದು, ಮುಖ್ಯಮಂತ್ರಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಈ ಸಂಬಂಧ ಮಾತುಕತೆ ನಡೆಸಿದ್ದೇನೆ. ಸಕಾರಾತ್ಮಕ ಪ್ರತಿಕ್ರಿಯೆ ಅವರಿಂದ ವ್ಯಕ್ತವಾಗಿದೆ ಎಂದು ತಿಳಿಸಿದರು.

ಶಾಸಕ ಪ್ರೀತಂ ಗೌಡ ಹೇಳಿಕೆ

ಹಾಸನದಲ್ಲಿ ನಾನೇ ಸಿಎಂ: ಹಾಸನದಲ್ಲಿ ಸದ್ಯ ನಾನೇ ಸಿಎಂ, ಆದ್ದರಿಂದ ಸಚಿವ ಸ್ಥಾನದ ಬಗ್ಗೆ ಯಾವುದೇ ಆಸೆಯನ್ನು ಇಟ್ಟುಕೊಂಡಿಲ್ಲ. ಮೊದಲನೇ ಬಾರಿ ಶಾಸಕನಾಗಿ ಹಾಸನದಲ್ಲಿ ಅಧಿಕಾರದಲ್ಲಿದ್ದು, ಕ್ಷೇತ್ರದ ಅಭಿವೃದ್ಧಿ ಹಾಗೂ ಮುಂದಿನ ಚುನಾವಣೆ ಬಗ್ಗೆ ಹೆಚ್ಚು ಗಮನ ಹರಿಸುವುದಾಗಿ ಹೇಳಿದರು.

ಬಿಜೆಪಿ ಶಾಸಕರ ಪಕ್ಷಾಂತರ ವಿಚಾರ: ಈ ವಿಷಯದಲ್ಲಿ ನಾನಿನ್ನೂ ಪ್ರಬುದ್ಧನಾಗಿಲ್ಲ. ಮೊದಲ ಬಾರಿ ಶಾಸಕನಾಗಿ ನಾನು ಅಧಿಕಾರ ನಡೆಸುತ್ತಿದ್ದು, ಕಾಂಗ್ರೆಸ್‍ನಿಂದ ಬಂದವರು ಈಗಾಗಲೇ ನಮ್ಮ ಪಕ್ಷದಲ್ಲಿ ಮಂತ್ರಿಗಳಾಗಿದ್ದಾರೆ. ಬಿಜೆಪಿ ಶಾಸಕರು ಪಕ್ಷಾಂತರ ಮಾಡುತ್ತಾರೆ ಎಂಬುದು ಕೇವಲ ಊಹಾಪೋಹ ಎಂದರು.

ಕೊನೆ ಉಸಿರಿನವರೆಗೂ ಬಿಜೆಪಿಯಲ್ಲೆ: ನಾನು ಬಿಜೆಪಿಯಲ್ಲಿ ಸ್ವಯಂ ಸೇವಕನಾಗಿ, ನಂತರ ಕಾರ್ಯಕರ್ತನಾಗಿ ಶಾಸಕನಾಗಿ ಅಧಿಕಾರ ಹಿಡಿದಿದ್ದೇನೆ. ಕೊನೆ ಉಸಿರಿರುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ ಹೊರತು, ಯಾವುದೇ ಕಾರಣಕ್ಕೂ ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಮಾತನಾಡುವವರು ಕೇವಲ ಬಾಯಿ ಚಪಲ ತೀರಿಸಿಕೊಳ್ಳಬೇಕು ಅಷ್ಟೇ. ಇದೆಲ್ಲ ಊಹಾಪೋಹ ಹಾಗೂ ಭ್ರಮೆಯ ಮಾತುಗಳಾಗಿವೆ. ನನ್ನ ಮಾತೃಪಕ್ಷ ಬಿಜೆಪಿಯನ್ನು ಬಿಟ್ಟು ಬೇರೆ ಪಕ್ಷ ಸೇರುವ ಯಾವುದೇ ಆಸಕ್ತಿ ನನಗಿಲ್ಲ ಎಂದು ಸ್ಪಷ್ಟಪಡಿಸಿದರು.

ಡಿ.ಕೆ. ಶಿವಕುಮಾರ್ ಅವರೊಂದಿಗೆ ಪ್ರೀತಂ ಗೌಡ ರಾಜಕೀಯವಾಗಿ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂಬುದಾಗಿ ಯಾವುದೇ ಅಪಪ್ರಚಾರ ಬೇಡ. ಇವೆಲ್ಲಾ ಕೇವಲ ಊಹಾಪೋಹವಾಗಿದ್ದು ನಾನು ಒಂದಲ್ಲ, ಡಿಕೆಶಿ ಅವರೊಂದಿಗೆ ನೂರು ಸುತ್ತಿನ ಮಾತುಕತೆ ನಡೆದರೂ ಸಹ ಪ್ರೀತಂ ಗೌಡ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: ಪ್ರತಿಪಕ್ಷ ನಾಯಕರಾಗಿ ಯೋಗಿ ನೋಡಲು ಬಯಸುತ್ತೇನೆ: ರಾಕೇಶ್​ ಟಿಕಾಯತ್​

Last Updated :Jan 27, 2022, 7:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.