ETV Bharat / state

ಕಾಡಾನೆ ದಾಳಿಯಿಂದ ಮೃತಪಟ್ಟ ವೆಂಕಟೇಶ್ ಮನೆಗೆ ಅರಣ್ಯ ಸಚಿವರ ಭೇಟಿ: ವಿಶೇಷ ಪರಿಹಾರ ಸೇರಿ 25 ಲಕ್ಷ ರೂ. ಘೋಷಣೆ

author img

By ETV Bharat Karnataka Team

Published : Sep 6, 2023, 2:36 PM IST

ಇತ್ತೀಚೆಗೆ ಆನೆ ದಾಳಿಯಿಂದ ಮೃತಪಟ್ಟ ಅರಣ್ಯ ಇಲಾಖೆ ಸಿಬ್ಬಂದಿ ವೆಂಕಟೇಶ್ ಮನೆಗೆ ಅರಣ್ಯ ಸಚಿವರು ಭೇಟಿ ನೀಡಿದರು.

Forest Minister visits
Forest Minister visits

ಹಾಸನ: ಆಲೂರು ತಾಲೂಕಿನ ಹಳ್ಳಿಯೂರಿನಲ್ಲಿ ಭೀಮ ಎಂಬ ಕಾಡಾನೆ ದಾಳಿಯಿಂದ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಶಾರ್ಪ್ ಶೂಟರ್ ಹೆಚ್​. ವೆಂಕಟೇಶ್ ಅವರ ಕುಟುಂಬಕ್ಕೆ ಪ್ರತಿಷ್ಠಾನದಿಂದ 10 ಲಕ್ಷ ರೂ. ವಿಶೇಷ ಪರಿಹಾರ ಸೇರಿ ಒಟ್ಟು 25 ಲಕ್ಷ ರೂ. ಪರಿಹಾರ ನೀಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಘೋಷಿಸಿದ್ದಾರೆ. ಹೊನ್ನವಳ್ಳಿಯಲ್ಲಿರುವ ವೆಂಕಟೇಶ್ ಅವರ ಮನೆಗೆ ಗುರುವಾರ ಭೇಟಿ ನೀಡಿದ ಸಚಿವರು, ಮೃತ ವೆಂಕಟೇಶ್ ಅವರ ಪತ್ನಿ ಜಿ.ಎಸ್. ಮಂಜುಳಾ ಮತ್ತು ಪುತ್ರರಾದ ಮೋಹಿತ್ ಮತ್ತು ಮಿಥುನ್ ಮತ್ತು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ವೆಂಕಟೇಶ್ ಅವರು ತಮ್ಮ ಅದ್ಭುತ ಕಾರ್ಯದಿಂದ ಆನೆ ವೆಂಕಟೇಶ್ ಎಂದೇ ಖ್ಯಾತರಾಗಿದ್ದರು. ಶಾರ್ಪ್ ಶೂಟರ್ ವೆಂಕಟೇಶ್ ಅವರ ನಿಧನದಿಂದ ಅರಣ್ಯ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ನಿಮ್ಮ ಈ ನೋವಿನಲ್ಲಿ ನಾವೂ ಭಾಗಿಯಾಗುತ್ತೇವೆ ಎಂದು ಸಾಂತ್ವನ ಹೇಳಿದರು.

ಆಗಸ್ಟ್ 31ರಂದು ಮಧ್ಯಾಹ್ನ ಘಟನೆಯ ಬಗ್ಗೆ ತಮಗೆ ತಿಳಿದ ಕೂಡಲೇ ಸಂಬಂಧಿತ ಅರಣ್ಯಾಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ವೆಂಕಟೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ಮತ್ತು ಆಸ್ಪತ್ರೆಯ ವೈದ್ಯರಿಗೆ ಅವರ ಜೀವ ಉಳಿಸಲು ಸಕಲ ಪ್ರಯತ್ನ ಮಾಡುವಂತೆ ತಿಳಿಸಲು ಸೂಚಿಸಿದ್ದಾಗಿ ತಿಳಿಸಿದರು. ಪ್ರತಿಯೊಬ್ಬರ ಜೀವವೂ ಅಮೂಲ್ಯ, ವನ್ಯಜೀವಿ ಮತ್ತು ಮಾನವ ಸಂಘರ್ಷದಿಂದ ಸಾವು ನೋವು ಸಂಭವಿಸುತ್ತಿರುವುದು ಅತ್ಯಂತ ದುಃಖದ ಸಂಗತಿ ಎಂದು ಅವರು ಇದೇ ಹೇಳಿದರು.

ವೆಂಕಟೇಶ್ ಅವರು ಆನೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ವೇಳೆ ನಿರ್ಲಕ್ಷ್ಯ ಆಗಿದೆ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಈ ಬಗ್ಗೆ ಅರಣ್ಯ ಇಲಾಖೆ ಕೂಡ ತನಿಖೆ ನಡೆಸುತ್ತಿದೆ. ನಿರ್ಲಕ್ಷ್ಯ ಸಾಬೀತಾದರೆ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ತಮಗೆ ಇಲ್ಲಿನ ನಿವಾಸಿಗಳು ಅರಣ್ಯ ಪ್ರದೇಶ ಕಡಿಮೆ ಆಗಿದೆ. ಅಕ್ರಮ ಮಂಜೂರಾತಿಗಳೂ ಆಗಿವೆ. ಅರಣ್ಯದ ಅಂಚಿನಲ್ಲಿ ಕಲ್ಲು ಗಣಿ ಚಟುವಟಿಕೆ ನಡೆಯುತ್ತಿದೆ. ಬಂಡೆ ಸಿಡಿಸಲು ಬಳಸುವ ಸ್ಫೋಟಕಗಳ ಶಬ್ದದಿಂದ ವಿಚಲಿತವಾಗಿ ಆನೆಗಳು ನಾಡಿಗೆ ಬರುತ್ತಿವೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆನೆಗಳ ದಾಳಿಯಿಂದ ಬೆಳೆ ಹಾನಿ ಆಗದಂತೆ ಮತ್ತು ಜೀವ ಹಾನಿ ಆಗದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೊಡಗು, ಹಾಸನ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಆನೆ ಸಮಸ್ಯೆ ಇರುವ ಜಿಲ್ಲೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲು ಸಭೆ ಕರೆಯುವುದಾಗಿ ತಿಳಿಸಿದರು.

ಆನೆಗಳು ನಾಡಿಗೆ ಬಾರದಂತೆ ತಡೆಯಲು ಆನೆ ಬ್ಯಾರಿಕೇಡ್ ನಿರ್ಮಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಆದರೆ, ರೈಲ್ವೆ ಹಳಿಗಳ ಲಭ್ಯತೆಯೂ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ 312 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಸಾಧ್ಯವಾಗಿದೆ ಇನ್ನೂ 300 ಕಿ.ಮೀ.ನಷ್ಟು ರೈಲ್ವೆ ಬ್ಯಾರಿಕೇಡ್ ನಿರ್ಮಿಸುವ ಅಗತ್ಯವಿದೆ ಎಂದು ತಿಳಿಸಿದರು. ಅದೇ ರೀತಿ ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುತ್ತಿದೆ. ಆನೆ ಕಂದಕ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ ಸೌರ ವಿದ್ಯುತ್ ತಂತಿ ಬೇಲಿ ಹಾಕಲಾಗುತ್ತಿದೆ ಎಂದರು.

ಕಸ್ತೂರಿ ರಂಗನ್ ವರದಿ ಪರಿಶೀಲಿಸಿ ಕ್ರಮ: ಕಸ್ತೂರಿ ರಂಗನ್ ವರದಿ ಜಾರಿ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕೇಂದ್ರ ಸರ್ಕಾರ ಸಂಜಯ್ ಕುಮಾರ್ ಸಮಿತಿ ರಚಿಸಿ ವರದಿಯ ಪರಾಮರ್ಶೆ ನಡೆಸುತ್ತಿದೆ. ಕಸ್ತೂರಿ ರಂಗನ್ ವರದಿ 11 ವರ್ಷದಷ್ಟು ಹಳೆಯದಾಗಿದೆ. ತಮ್ಮನ್ನು ಸಂಜಯ್ ಕುಮಾರ್ ಸಮಿತಿ ಭೇಟಿ ಮಾಡಿದಾಗ, ಪಶ್ಚಿಮ ಘಟ್ಟ ಪ್ರದೇಶದ ಎಲ್ಲ ಬಾಧ್ಯಸ್ಥರೊಂದಿಗೆ ಮಾತನಾಡಿ, ಪರಿಸರವಾದಿಗಳೊಂದಿಗೆ ಸಮಾಲೋಚಿಸಿ ಸಮಗ್ರ ತಿದ್ದುಪಡಿ ಮಾಡಿ ವರದಿ ಸಲ್ಲಿಸುವಂತೆ ತಿಳಿಸಿದ್ದು, ಅವರು ವರದಿ ನೀಡಿದ ತರುವಾಯ ಸಚಿವ ಸಂಪುಟ ಸಮಿತಿಯಲ್ಲಿ ಚರ್ಚಿಸಿ ಅದರ ಜಾರಿ ಕುರಿತಂತೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: ಅರಿವಳಿಕೆ ಮದ್ದು ನೀಡಲೆಂದು ತೆರಳಿದಾಗ ದಾಳಿ ಮಾಡಿದ ಕಾಡಾನೆ: ಅರಣ್ಯ ಸಿಬ್ಬಂದಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.