ETV Bharat / state

ಉದ್ಯೋಗ ಖಾತ್ರಿ ಯೋಜನೆಯಡಿ ಬಂಗಾರ ಖಾತ್ರಿ ಮಾಡಿಕೊಂಡ ನರೇಗಾ ಕಾರ್ಮಿಕರು

author img

By

Published : May 26, 2023, 11:01 PM IST

ಉದ್ಯೋಗ ಖಾತ್ರಿ ಯೋಜನೆ
ಉದ್ಯೋಗ ಖಾತ್ರಿ ಯೋಜನೆ

ಗದಗದ ಹೊಳೆಮಣ್ಣೂರು ಮತ್ತು ಗಾಡಗೂಳಿ ಗ್ರಾಮಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿ ಕೂಲಿಕಾರ್ಮಿಕರು ಬಂಗಾರ ಖರೀದಿಗೆ ಮುಂದಾಗಿದ್ದಾರೆ.

ರೋಣ (ಗದಗ) : ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರು ಬಂಗಾರ ಖರೀದಿಗೆ ಮುಂದಾಗುವ ಮೂಲಕ ಉದ್ಯೋಗ ಖಾತ್ರಿ ಯೋಜನೆಯನ್ನು ಬಂಗಾರ ಖಾತ್ರಿ ಯೋಜನೆಯನ್ನಾಗಿ ಮಾಡಿಕೊಂಡಿದ್ದಾರೆ.

ಹೊಳೆಮಣ್ಣೂರು ಮತ್ತು ಗಾಡಗೂಳಿ ಗ್ರಾಮಗಳಲ್ಲಿ ಹೊಸ ಆರ್ಥಿಕ ವರ್ಷ ಪ್ರಾರಂಭ ಆದಾಗಿನಿಂದ ಅಂದರೆ ಏಪ್ರಿಲ್ 1 ರಿಂದ ಮೇ 16 ರವರೆಗೆ ಒಟ್ಟು 46 ದಿನಗಳಲ್ಲಿ ಮತದಾನ ದಿನಾಂಕದಂದು ಒಂದು ದಿನ ಮಾತ್ರ ರಜೆ ಮಾಡಿದ್ದಾರೆ. ಉಳಿದ 45 ದಿನಗಳ ಕಾಲ ನಿರಂತರವಾಗಿ ಕೆಲಸ ನಿರ್ವಹಿಸಿ ತಮಗೆ ಬಂದ ಕೂಲಿ ಹಣದಲ್ಲಿ ಬಂಗಾರದ ಖರೀದಿಗೆ ಮುಂದಾಗಿದ್ದಾರೆ.

ನರೇಗಾ ಯೋಜನೆಯಡಿ ಪ್ರತಿ ಜಾಬ್​ಕಾರ್ಡ್​ಗೂ 100 ಮಾನವ ದಿನಗಳ ಸೃಜನೆ ಮಾಡಲು ಅವಕಾಶವಿದೆ. ಒಂದೇ ಕುಟುಂಬದಿಂದ 3 ಜನರು ಕೆಲಸಕ್ಕೆ ಹೋಗಿ 100 ದಿನಗಳನ್ನು ಪೂರೈಸಿದ ಕುಟುಂಬಕ್ಕೆ ಇತ್ತೀಚಿನ ಮೂರು ನಾಲ್ಕು ದಿನದಲ್ಲಿ 30 ಸಾವಿರಕ್ಕೂ ಹೆಚ್ಚು ಹಣ ಕೂಲಿ ಕಾರ್ಮಿಕರ ಖಾತೆಗೆ ಜಮೆ ಆಗಿವೆ. ಅದೇ ಹಣದಿಂದ ಕೆಲವರು ತಮ್ಮ ವೈಯುಕ್ತಿಕ ಅವಶ್ಯಕತೆಗಳನ್ನು ಪೂರೈಸಿಕೊಂಡರೆ, ಕೆಲವರು ಶಾಲೆ ಪ್ರಾರಂಭವಾಗಿದ್ದರಿಂದ ತಮ್ಮ ಮಕ್ಕಳ ಸ್ಕೂಲ್ ಪೀಸ್‌ ತುಂಬಿದ್ದಾರೆ. ಇನ್ನು ಕೆಲವರು ಹೊಳೆ ಆಲೂರು ಗ್ರಾಮದಲ್ಲಿ ಬಂಗಾರ ಖರೀದಿಸಲು ಮುಗಿ ಬಿದ್ದಿದ್ದಾರೆ.

ಬಂಗಾರ ಖರೀದಿಸಲು ಕಾರಣಗಳು: ಮೊದಲನೇ ಕಾರಣ ಇತ್ತೀಚೆಗೆ ಬಂಗಾರದ ಬೆಲೆ ಕಡಿಮೆ ಆಗಿರುವುದರಿಂದ ಮುಂದೆ ಬಂಗಾರದ ಬೆಲೆ ಹೆಚ್ಚಳವಾದರೆ ಖರೀದಿಸಲು ಆಗಲ್ಲ ಅನ್ನೊದು ಆಗಿದೆ. ಮತ್ತೊಂದು ನರೇಗಾ ಯೋಜನೆಯಡಿ ತಾವು ದುಡಿದ ಒಟ್ಟು ಹಣ ಒಮ್ಮೆಗೆ ಜಮೆ ಆಗಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಬಂದ ಹಣದಿಂದ ಏನಾದರೂ ಮುಂದೆ ಸಹಾಯ ಆಗುವ ಹಾಗೆ ಬಂಗಾರ ಖರೀದಿಸಲು ಮುಂದಾಗಿದ್ದಾರೆ. ಇನ್ನುಳಿದಂತೆ ಮದುವೆ ಸಿಜನ್ ಚಾಲೂ ಆಗಿದ್ದರಿಂದ ಸಹಜವಾಗಿಯೇ ಬಂಗಾರ ಖರೀದಿಸಲು ತೊಡಗಿದ್ದಾರೆ.

ಹೊಳೆ ಮಣ್ಣೂರ ಗ್ರಾಮದ ಫಕೀರಪ್ಪ ಅಡಿವೆಪ್ಪ ಗಾಣಿಗೇರ ಲಕ್ಷ್ಮಿ ಪಕೀರಪ್ಪ ಗಾಣಿಗೇರ್ ದಂಪತಿ ನರೇಗಾದಿಂದ ಬಂದ ಹಣದಲ್ಲಿ ಅರ್ಧ ತೊಲೆ ಬಂಗಾರವನ್ನು ಖರೀದಿಸಿದ್ದಾರೆ. ಅದೇ ಗ್ರಾಮದ ನೀಲಗಂಗವ್ವ ಯಲ್ಲಪ್ಪ ಬೊಮ್ಮನ್ನವರ್​ ದಂಪತಿ ಸಹ 9 ಗ್ರಾಮ ಬಂಗಾರ ಖರೀದಿಸಿದ್ದಾರೆ. ಇನ್ನುಳಿದಂತೆ ಶೈಲಾ ಹಾಗೂ ಬಸವರಾಜ ಬದಾಮಿ ದಂಪತಿ ಹಾಗೂ ಶಂಕ್ರಮ್ಮ ಹಾಗೂ ಮಲ್ಲಪ್ಪ ಹುಡೇದ ದಂಪತಿ ಸೇರಿದಂತೆ ಇತರರು ಬಂಗಾರ ಖರೀದಿಸಿದ್ದಾರೆ. ಮಳೆ ಇಲ್ಲದೇ ಕೆಲಸ ಇಲ್ಲದ ಸಂದರ್ಭದಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡಿ ಯಾವುದೇ ಸದ್ದಿಲ್ಲದೆ ತಾವು ದುಡಿದ ಹಣದಿಂದ ಕೃಷಿ ಕಾರ್ಮಿಕರು ಬಂಗಾರ ಖರೀದಿಸುತ್ತಿರುವುದು ಯಾರಿಗಾದರೂ ಸಂತೋಷವನ್ನುಂಟು ಮಾಡುವ ಸನ್ನಿವೇಶವೇ ಸರಿ.

ಕೆಲಸ ಮಾಡುವ ಪ್ರತಿಯೊಬ್ಬ ಕೂಲಿ ಕಾರ್ಮಿಕರಿಗೂ ಕ್ಯಾಪ್: ಇಲ್ಲಿನ ಗ್ರಾಮ ಪಂಚಾಯತಿಗಳು ಗ್ರಾಮದ ಕೃಷಿ ಕಾರ್ಮಿಕರಿಗೆ ಬಿಸಿಲಿನಿಂದ ರಕ್ಷಣೆ ಪಡೆಯುವ ಕಾರಣಕ್ಕಾಗಿ ಯೋಜನೆಯ ಆಡಳಿತಾತ್ಮಕ ವೆಚ್ಚಕ್ಕೆ ಮೀಸಲಿರಿಸಿದ ಅನುದಾನದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕೂಲಿ ಕಾರ್ಮಿಕರಿಗೂ ಕ್ಯಾಪ್ ವಿತರಿಸಿರುವುದು ಕೂಡ ಶ್ಲಾಘನೀಯ. ಇಂತಹ ಪ್ರೋತ್ಸಾಹದಿಂದಲೇ ಗ್ರಾಮ ಪಂಚಾಯಿತಿ ಒಂದು ವರ್ಷದಲ್ಲಿ ಸಾಧಿಸಬೇಕಾದ ಮಾನವ ದಿನಗಳ ಗುರಿಯನ್ನು ಸಾಧಿಸಿಯಾಗಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಶೇಕಡವಾರು ಮಾನವ ದಿನಗಳ ಸೃಜನೆ ಮಾಡಿದ ಗ್ರಾಮ ಪಂಚಾಯಿತಿಯಾಗಿ ಹೊಳೆ ಮಣ್ಣೂರ ಗ್ರಾಮ ಪಂಚಾಯಿತಿ ಗುರುತಿಸಿಕೊಂಡಿರುವುದು ವಿಶೇಷ.

ಈ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವನಗೌಡ ಮೆಣಸಗಿ ಅವರ ಪ್ರೇರಣೆ ಪ್ರೋತ್ಸಾಹದಿಂದಾಗಿ ಹಾಗೂ ಎರಡು ಗ್ರಾಮ ಪಂಚಾಯತಿಗಳು ಅಧ್ಯಕ್ಷರು ಸರ್ವ ಸದಸ್ಯರ ಇಚ್ಛಾಶಕ್ತಿಯಿಂದಾಗಿ ಈ ಕೆಲಸ ಸಾಧ್ಯವಾಗಿದೆ ಅಂತಾರೆ ಪಂಚಾಯಿತಿ ಸಿಬ್ಬಂದಿ.

'ರಾಜ್ಯದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ಕೊಡುಗೆಗಳ ಕುರಿತು ಜನರು ವ್ಯಾಪಕವಾಗಿ ಮಾತನಾಡುತ್ತಿದ್ದಾರೆ. ಹೀಗಿರುವಾಗಲೇ, ನಮ್ಮ ಗ್ರಾಮದ ಜನ ಉದ್ಯೋಗ ಖಾತ್ರಿ ಕೆಲಸದಲ್ಲಿ ಕೆಲಸ ನಿರ್ವಹಿಸಿ ಸರ್ಕಾರದಿಂದ ನೀಡಿದ ಕೂಲಿ ಹಣದಲ್ಲಿ ಬಂಗಾರ ಖರೀದಿಸುತ್ತಿದ್ದಾರೆ. ಇದನ್ನು ಒಳಗೊಂಡಂತೆ ಇತರ ಉಪಯುಕ್ತ ಉದ್ದೇಶಗಳಿಗಾಗಿ ಬಳಸಿಕೊಂಡಿರುವುದು ನಮಗೆ ಸಂತಸವನ್ನುಂಟು ಮಾಡಿದೆ' ಎನ್ನುತ್ತಾರೆ ಹೊಳೆಮಣ್ಣೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಶಿವಪ್ಪ ಸಾಂತಪ್ಪ ಜಾವೂರು.

ಅರ್ದ ತೊಲ ಬಂಗಾರ ತಂದಿನಿ : 'ದಿನಾಲೂ ನರೇಗಾ ಕೆಲಸಕ್ಕೆ ಹೊಕ್ಕಿದ್ದಿವಿ ರಿ. 43 ದಿನ ಕೆಲಸ ಮಾಡಿವಿ. ಮೊನ್ನೆ ನಮಗೆ 30 ಸಾವಿರಕ್ಕಿಂತ ಹೆಚ್ಚು ಹಣ ಜಮೆ ಆಯ್ತು. ನಮ್ಮದು ಹೊಲ ಮನೆ ಅದಾವು ರಿ, ನಮ್ಮ ಮನೆ ಅವರಿಗೆ ಬಂಗಾರ ಕೊಡಸು ಅಂತಾ ಬಾಳ ದಿನ ಆಯ್ತು ಗಂಟು ಬಿದ್ದು, ಬಂಗಾರ ತುಟ್ಟಿ ಐತಿ. ಇವಾಗ ಬೇಡ ಅವಾಗ ಬೇಡ ಅಂತಿದ್ದರು. ಮೊನ್ನೆ ಉದ್ಯೋಗ ಖಾತ್ರಿ ಹಣ ಜಮೆ ಆಗಿಂದ ನಮ್ಮ ಮನೆಯವರನ್ನು ಕರಕೊಂಡು ಹೋಗಿ ಅರ್ದ ತೊಲ ಬಂಗಾರ ತಂದಿನಿ ರಿ. ಬಾಳ ಖುಷಿ ಆಯ್ತು' ಅಂತಾರೇ ಲಕ್ಷ್ಮಿ ಪಕ್ಕಿರಪ್ಪ ಗಾಣಗೇರ .

ಬದುಕು ಬಂಗಾರ ಆಗದ ಹೊರತು ಅಭಿವೃದ್ಧಿ ಅಸಾಧ್ಯ: 'ಎಲ್ಲರ ಜೀವನ ಕೂಡ ಉತ್ಕೃಷ್ಟ ಗುಣಮಟ್ಟದ ಜೀವನ ಆಗಲಾರದೆ ಇದ್ದರೂ, ಮನಸ್ಸಿಗೆ ನೆಮ್ಮದಿ ಮತ್ತು ತೃಪ್ತಿ ಆಗುವಂತಹ ಜೀವನವನ್ನು ಆದರೂ ನಡೆಸುವಂತಹ ಸಂದರ್ಭ ಸೃಷ್ಟಿ ಆಗಬೇಕು. ಒಂದೊಂದೇ ಜೀವನಾವಶ್ಯಕ ವಸ್ತುಗಳನ್ನು ಹೊಂದುತ್ತಾ ಬದುಕನ್ನು ಕಟ್ಟಿಕೊಳ್ಳುತ್ತಾ ಹೋಗಬೇಕು. ನರೇಗಾ ಯೋಜನೆಯ ಉದ್ದೇಶವೇ ಇದು. ಆರ್ಥಿಕ ಸಬಲತೆ ಆ ಮೂಲಕ ಬದುಕಿನ ಉತ್ಕೃಷ್ಟತೆ. ಸಾಮಾನ್ಯರ ಬದುಕು ಬಂಗಾರ ಆಗದ ಹೊರತು ಸಮಗ್ರ ಹಾಗೂ ಸುಸ್ಥಿರ ಅಭಿವೃದ್ಧಿ ಅಸಾಧ್ಯ. ಈ ಯೋಜನೆ ಇಲಾಖೆಯ ಎಲ್ಲ ಹಂತದ ಅಧಿಕಾರಿ ಸಿಬ್ಬಂದಿ ವರ್ಗದವರ ಶ್ರಮದಿಂದ ಗ್ರಾಮೀಣರ ಬದುಕನ್ನು ಬಂಗಾರ ಆಗಿರುವುದು ಒಂದು ಅಮೃತ ಘಳಿಗೆ ಎಂದು ಭಾವಿಸುತ್ತೇನೆ' ಎಂದು ಕಾರ್ಯ ನಿರ್ವಾಹಕ ಅಧಿಕಾರಿಗಳು ಎ ಎನ್ ರವಿ.

ಇದನ್ನೂ ಓದಿ: ಲಂಚ ಕೊಡಲು ಹಣವಿಲ್ಲವೆಂದು ಎತ್ತುಗಳನ್ನೇ ತಾ. ಪಂ ಕಚೇರಿಗೆ ತಂದ ರೈತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.