ETV Bharat / state

ಎರಡು ಸಮುದಾಯಗಳ ನಡುವೆ ಕಲ್ಲು ತೂರಾಟ: ಕಾನ್ಸ್​​ಟೇಬಲ್ ಸೇರಿ 15 ಜನರಿಗೆ ಗಾಯ

author img

By

Published : Jun 10, 2021, 10:06 PM IST

ಎರಡು ಕಡೆಯಿಂದ ಕಲ್ಲು ತೂರಾಟ ನಡೆದಿದ್ದು, ಪೊಲೀಸ್ ಕಾನ್ಟ್​ಟೇಬಲ್ ಸೇರಿದಂತೆ ಎರಡು ಕಡೆಯ ಸುಮಾರು 15 ಜನರು ಗಾಯಗೊಂಡಿದ್ದಾರೆ. ಗದಗ ಜಿಲ್ಲೆಯಲ್ಲಿ ಈ ಪ್ರಕರಣ ಜರುಗಿದೆ.

gadag
gadag

ಗದಗ: ಕ್ಷುಲ್ಲಕ ಕಾರಣಕ್ಕೆ ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ಕಲ್ಲು ತೂರಾಟ ನಡೆದಿದೆ. ಈ ಹಿಂದೆ ಗ್ರಾಮ ಪಂಚಾಯತ್​ ಚುನಾವಣೆಯಲ್ಲಿ ಎರಡು ಸಮುದಾಯಗಳ ಮಧ್ಯೆ ಹುಟ್ಟಿಕೊಂಡಿದ್ದ ರಾಜಕೀಯ ವೈಷಮ್ಯ, ಈಗಲೂ ಮುಂದುವರೆದಿದೆ ಎನ್ನಲಾಗ್ತಿದೆ.

ಗುರುವಾರ ಬೆಳಗ್ಗೆ ಗೋವಿಂದಪ್ಪ ಎಂಬ ವ್ಯಕ್ತಿ ಬಯಲು ಶೌಚಕ್ಕೆ ಹೋದಾಗ ಒಂದು ಸಮುದಾಯದ ಜನ ಆತನನ್ನ ಬೆನ್ನಟ್ಟಿ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಲು ಬಂದ ಆತನ ಮಗನ ಮೇಲೆಯೂ ಹಲ್ಲೆ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಇನ್ನೊಂದು ಸಮುದಾಯದ ಜನ ಒಗ್ಗಟ್ಟಾಗಿ ಪ್ರಶ್ನಿಸಲು ಹೋಗಿದ್ದರು.

ಘಟನೆಯ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಆದ್ರೆ ಎರಡು ಕಡೆಯಿಂದ ಕಲ್ಲು ತೂರಾಟ ನಡೆದಿದ್ದು, ಪೊಲೀಸ್ ಕಾನ್ಟ್​ಟೇಬಲ್ ಸೇರಿದಂತೆ ಎರಡು ಕಡೆಯ ಸುಮಾರು 15 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ರವಿಕುಮಾರ್ ಕಪ್ಪತನ್ನವರ್, ಸುಬ್ಬಾಪೂರಮಠ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.

ಸತೀಶ ದೊಡ್ಡಮನಿ ಹಾಗೂ ಈರಪ್ಪ ಬೇಲೇರಿ ಕಳೆದ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮತ ಎಣಿಕೆಯ ವೇಳೆ ಎರಡು ಮತಗಳ ಅಂತರದಿಂದ ಈರಪ್ಪ ಬೇಲೇರಿ ಎಂಬುವರು ಗೆದ್ದಿದ್ದಾರೆ. ಅದರಿಂದ ಅಸಮಾಧಾನಗೊಂಡ ಪರಾಜಿತ ಅಭ್ಯರ್ಥಿ ಸತೀಶ್​ ಹಗೆ ಸಾಧಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಾಲ್ಕು ಜನ ಪಿಎಸ್​​ಐ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮೂರು ತುಕಡಿಗಳನ್ನು ನಿಯೋಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕಡೆಯ 17 ಜನರನ್ನು ಬಂಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.