ETV Bharat / state

ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿಗೆ ವಿಶೇಷ ಗಿಫ್ಟ್: ಏನಿದರ ವಿಶೇಷತೆ?

author img

By

Published : Jan 13, 2023, 8:34 AM IST

Updated : Jan 13, 2023, 8:50 AM IST

ಹುಬ್ಬಳ್ಳಿಯಲ್ಲಿ ಯುವಜನೋತ್ಸವ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಗಿಫ್ಟ್ ನೀಡಲಾಗಿದೆ. ನಮ್ಮ ಖಾದಿ ನಮ್ಮ ಹೆಮ್ಮೆ ಬರಹದ ಜೊತೆ ರಾಷ್ಟ್ರಧ್ವಜ ಇರುವ ಕಲಾಕೃತಿಯನ್ನು ಉಡುಗೊರೆಯಾಗಿ ಕೊಟ್ಟು ರಾಜ್ಯ ಸರ್ಕಾರ ಗೌರವಿಸಿತು.

ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿಗೆ ವಿಶೇಷ ಗಿಫ್ಟ್
ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿಗೆ ವಿಶೇಷ ಗಿಫ್ಟ್

ಹುಬ್ಬಳ್ಳಿ/ಕಾರವಾರ: ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟನೆಗೆ ಗುರುವಾರ ಹುಬ್ಬಳ್ಳಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಗಿಫ್ಟ್ ನೀಡಲಾಯಿತು. ಯುವಜನೋತ್ಸವಕ್ಕೆ ಮೆರುಗು ತಂದ ಪ್ರಧಾನಮಂತ್ರಿಗಳಿಗೆ ರಾಷ್ಟ್ರಧ್ವಜ ಒಳಗೊಂಡ ಮರದ ಅದ್ಭುತ ಕಲಾಕೃತಿಯನ್ನು ನೆನಪಿನ ಕಾಣಿಕೆಯಾಗಿ ನೀಡಿದ್ದು ವಿಶೇಷ. ಹಾಗಾದ್ರೆ, ಈ ಕಲಾಕೃತಿ ತಯಾರಿಸಿದ್ದು ಯಾರು ಮತ್ತು ಎಲ್ಲಿ ಎಂಬ ಕುತೂಹಲ ಇದ್ರೆ ಈ ಸ್ಟೋರಿ ಓದಿ.

ಯಲ್ಲಾಪುರದಿಂದ ಬಂತು ಪ್ರಧಾನಿಗೆ ಕಾಣಿಕೆ: ಪ್ರಧಾನಿಗೆ ಕಾಣಿಕೆಯಾಗಿ ನೀಡಿದ ಕಲಾಕೃತಿ ಉತ್ತರ ಕನ್ನಡದ ಯಲ್ಲಾಪುರದಲ್ಲಿ ನಿರ್ಮಿಸಿದ್ದು ಎಂಬುದು ವಿಶೇಷವಾಗಿದೆ. ಯಲ್ಲಾಪುರದ ಬಿಕ್ಕು ಗುಡಿಗಾರ್‌, ಕಲಾ ಕೇಂದ್ರದ ಸಂತೋಷ ಗುಡಿಗಾರ ಮತ್ತು ಅರುಣ ಗುಡಿಗಾರ್‌ ನೇತೃತ್ವದಲ್ಲಿ ಸಾಗುವಾನಿ ಮರದಲ್ಲಿ ರಚಿಸಲ್ಪಟ್ಟಿದೆ. ಈ ಕಲಾಕೃತಿಯಲ್ಲಿ ರಾಷ್ಟ್ರೀಯ ಲಾಂಛನ, ಗಂಡಭೇರುಂಡದ ಕೆತ್ತನೆಗಳನ್ನು ಕಾಣಬಹುದು. ಮಧ್ಯದಲ್ಲಿ 'ನಮ್ಮ ಖಾದಿ ನಮ್ಮ ಹೆಮ್ಮೆ' ಬರಹದೊಂದಿಗೆ ರಾಷ್ಟ್ರ ಧ್ವಜವಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಯುವ ಹಾಗೂ ಕ್ರೀಡಾ ಸಚಿವ ಅನುರಾಗ್ ಸಿಂಗ್‌ ಠಾಕೂರ್‌ ಜೊತೆಗೂಡಿ ಮೋದಿಯವರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಬಿಕ್ಕು ಗುಡಿಗಾರ್‌ ಕಲಾ ಕೇಂದ್ರದಲ್ಲಿ ಈ ಮೊದಲು ಅದ್ಭುತ ಕಲಾಕೃತಿಗಳು ಅರಳಿದ್ದು, ದೇಶ ವಿದೇಶಗಳಲ್ಲಿ ಪ್ರಸಿದ್ಧವಾಗಿವೆ. ಹಾಗೆಯೇ ಇಲ್ಲಿನ ಗಿಫ್ಟ್​ಗಳಿಗೆ ಭಾರಿ ಬೇಡಿಕೆ ಇದ್ದು, ಹಲವು ಗಣ್ಯರು ಈ ಕಲಾಕೃತಿಗಳನ್ನು ಮೆಚ್ಚಿಕೊಂಡಿದ್ದಾರೆ. ಇದೀಗ ಮೋದಿ ಅವರಿಗೂ ಇಲ್ಲಿಂದಲೇ ಗಿಫ್ಟ್ ತಯಾರಿಸಿದ್ದಕ್ಕೆ ಗುಡಿಗಾರ್ ಸಂತಸಪಟ್ಟಿದ್ದಾರೆ.

ಕಲಾಕೃತಿ ತಯಾರಕರು
ಕಲಾಕೃತಿ ತಯಾರಕರು

ಹುಬ್ಬಳ್ಳಿ-ಧಾರವಾಡದಲ್ಲಿ ಯುವಜನೋತ್ಸವ: ಸ್ವಾಮಿ ವಿವೇಕಾನಂದರ ಜನ್ಮದಿನದ ನಿಮಿತ್ತ ರಾಷ್ಟ್ರೀಯ ಯುವಜನೋತ್ಸವ ಪ್ರಪ್ರಥಮ ಬಾರಿಗೆ ಉತ್ತರ ಕರ್ನಾಟಕದ ಭಾಗದಲ್ಲಿ ನಡೆಯುತ್ತಿದೆ. ಹುಬ್ಬಳ್ಳಿ ರೈಲ್ವೆ ಮೈದಾನಕ್ಕೆ ಪ್ರಧಾನಿ ಮೋದಿ ಗುರುವಾರ ರೋಡ್​ ಶೋ ಮೂಲಕ ತೆರಳಿ, ಯುವಜನೋತ್ಸವ ಉದ್ಘಾಟಿಸಿದ್ದರು. ಪ್ರಧಾನಿಯನ್ನು ಕಂಡು ಜನರ ಉತ್ಸಾಹ ಇಮ್ಮಡಿಯಾಗಿತ್ತು. ರಾಷ್ಟ್ರೀಯ ಉವಜನೋತ್ಸವ ಕಾರ್ಯಕ್ರಮವು ಅವಳಿನಗರದಲ್ಲಿ ಗುರುವಾರ ಉದ್ಘಾಟನೆಯಾಗಿದ್ದು, 16ರವರೆಗೆ ಅದ್ಧೂರಿಯಾಗಿ ನಡೆಯಲಿದೆ.

ಯುವತಿಯಿಂದ ಮೋದಿಗೆ ವಿಶೇಷ ಉಡುಗೊರೆ: ಪ್ರಧಾನಿ ಮೋದಿ ಅವರಿಗೆ ರಾಜ್ಯಸರ್ಕಾರ ವಿಶೇಷ ಗಿಫ್ಟ್ ನೀಡಿತು. ಆದ್ರೆ ಯುವತಿಯೊಬ್ಬಳು ಕೂಡ ವಿಶಿಷ್ಟ ರೀತಿಯ ನೆನಪಿನ ಕಾಣಿಕೆ ನೀಡಲು ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದ್ದರು. ಹುಬ್ಬಳ್ಳಿಯ ಶ್ರೇಯಾ ಎಂಬವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿ ಹೀರಾಬೆನ್ ಅವರ ಚಿತ್ರ​ ಬಿಡಿಸಿ ಫೋಟೋ ಗಿಫ್ಟ್ ಅರ್ಪಿಸಲು ಬಂದಿದ್ದರು. ಕೆಲವು ತಿಂಗಳ ಹಿಂದೆಯಷ್ಟೇ ಹುಬ್ಬಳ್ಳಿಗೆ ಆಗಮಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅವರ ಭಾವಚಿತ್ರ ಬಿಡಿಸಿದ ಫೋಟೋ ನೀಡುವ ಮೂಲಕ ಶ್ರೇಯಾ ಮೆಚ್ಚುಗೆ ಗಳಿಸಿದ್ದರು.

ರಂಗೋಲಿಯಲ್ಲಿ ಮೋದಿ ಚಿತ್ರ: ಹುಬ್ಬಳ್ಳಿಯ ದಿನೇಶ್ ಚಿಲ್ಲಾಳ ಎಂಬ ಕಲಾವಿದ ವಿನೂತನ ರೀತಿಯಲ್ಲಿ ಕಲಾಕೃತಿಯನ್ನು ರಂಗೋಲಿಯಲ್ಲಿ ಬಿಡಿಸಿ ಮೋದಿ ಅವರನ್ನು ವಾಣಿಜ್ಯ ನಗರಿಗೆ ಸ್ವಾಗತಿಸಿದ್ದರು. ಯುವಜನೋತ್ಸವ ಉದ್ಘಾಟನೆಯ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಮೋದಿಯವರ ಭಾವಚಿತ್ರವನ್ನು ರಂಗೋಲಿಯಲ್ಲಿ ಕಲಾವಿದರು ಅನಾವರಣಗೊಳಿಸಿದ್ದರು. 75ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮೋದಿ ಧರಿಸಿದ್ದ ಪೋಷಾಕಿನ ಚಿತ್ರ ಗಮನ ಸೆಳೆಯಿತು.

ಇದನ್ನೂ ಓದಿ: ಪ್ರಧಾನಿ ರೋಡ್​ ಶೋ ವೇಳೆ ಭದ್ರತಾ ಲೋಪ: ಮೋದಿಗೆ ಹಾರ ಹಾಕಲು ಬಂದ ಬಾಲಕ! ವಿಡಿಯೋ..

Last Updated : Jan 13, 2023, 8:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.