ಹುಬ್ಬಳ್ಳಿ: ಕಾಂಗ್ರೆಸ್ ನವರಿಗೆ, ರಾಹುಲ್ ಗಾಂಧಿ ಅವರಿಗೆ ಲಿಂಗಾಯತರ ಮೇಲೆ ಪ್ರೀತಿ ಇದ್ದರೇ ಲಿಂಗಾಯತ ಅಭ್ಯರ್ಥಿಯನ್ನ ಮುಖ್ಯಮಂತ್ರಿ ಮಾಡ್ತೀವಿ ಎಂದು ಹೇಳಲಿ ನೋಡೋಣ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸವಾಲು ಹಾಕಿದರು. ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯ ನಂತರ ಲೀಡರ್ ಶಿಪ್ ಡಿಸೈಡ್ ಮಾಡ್ತೀವಿ. ನಾವು ಈಗಾಗಲೇ ಮೂರು ಜನ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಕಾಂಗ್ರೆಸ್ನವರಿಗೆ ಲಿಂಗಾಯತರ ಮೇಲೆ ಪ್ರೀತಿ ಇದ್ದರೆ ಲಿಂಗಾಯತ ಅಭ್ಯರ್ಥಿಯನ್ನ ಸಿಎಂ ಮಾಡುತ್ತೇವೆ ಎಂದು ಹೇಳಲಿ. ಲಿಂಗಾಯತರು ಭ್ರಷ್ಟರು ಎಂಬ ಹೇಳಿಕೆಗೆ ಸಿದ್ದರಾಮಯ್ಯ ಇನ್ನೂ ಕ್ಷಮೆ ಕೇಳಿಲ್ಲ. ಸಿದ್ದರಾಮಯ್ಯ ಕ್ಷಮೆ ಕೇಳಬೇಕು. ಈಗಾಗಲೇ ಚುನಾವಣೆ ಆಯೋಗಕ್ಕೆ ಈ ಬಗ್ಗೆ ದೂರ ಕೊಡಲಾಗಿದೆ. ನಾವು ಬಸವರಾಜ ಬೊಮ್ಮಾಯಿ ಮಾರ್ಗದರ್ಶನದಲ್ಲಿ ಈ ಬಾರಿಯ ಚುನಾವಣೆಗೆ ಹೋಗ್ತಿವಿ ಎಂದರು.
ಮುಂದುವರೆದು ಮಾತನಾಡಿ, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಇಂದು ಸಂಜೆ 6 ಗಂಟೆಗೆ ಜಿಲ್ಲೆಗೆ ಆಗಮಿಸಲಿದ್ದಾರೆ. ಬಳಿಕ ಪದಾಧಿಕಾರಿಗಳ, ಮಂಡಳ ಅಧ್ಯಕ್ಷರ ಜೊತೆ ಸಭೆ ಮಾಡಲಿದ್ದಾರೆ. ಗದಗ, ಧಾರವಾಡ, ಹಾವೇರಿ ಜಿಲ್ಲೆಯ ಬಗ್ಗೆ ಸಮಗ್ರ ಚರ್ಚೆ ಮಾಡಿ, ಸೂಕ್ತ ಮಾರ್ಗದರ್ಶನ ಮಾಡಲಿದ್ದಾರೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹೆಚ್ಚಿನ ಅಂತರದಲ್ಲಿ ಗೆಲ್ಲಲಿದೆ. ಏ.29 ರಂದು ಕುಡಚಿಗೆ ಮೋದಿ ಬರಲಿದ್ದಾರೆ. ಇದಾದ ಬಳಿಕ ಬೆಳಗಾವಿ ಜಿಲ್ಲೆಗೆ ಮೋದಿ ಇನ್ನೊಂದು ಕಾರ್ಯಕ್ರಮ ಕೊಡಲು ವಿನಂತಿ ಮಾಡಿದ್ದೇನೆ. ಯೋಗಿ ಆದಿತ್ಯನಾಥ ಕೂಡ ಬರಲಿದ್ದಾರೆ. ಕಿತ್ತೂರ ಕರ್ನಾಟಕ ಭಾಗದಲ್ಲಿ ನಮ್ಮ ಸ್ಟ್ರೈಕ್ ರೇಟ್ ಚೆನ್ನಾಗಿದೆ. ಉತ್ತರ ಖಾಂಡದಲ್ಲಿ ಇತಿಹಾಸ ಬ್ರೇಕ್ ಮಾಡಿ ನಾವು ಅಧಿಕಾರಕ್ಕೆ ಬಂದಿದ್ದೇವೆ.
ಈ ಬಾರಿ ಕರ್ನಾಟಕದಲ್ಲಿ ಸ್ವಂತ ಬಲದ ಮೇಲೆ ಪಕ್ಷ ಅಧಿಕಾರಕ್ಕೆ ಬರಲಿದೆ. ಕಳೆದ ಎರಡು ಬಾರಿ ನಾವು ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿಲ್ಲ. ಜಗದೀಶ್ ಶೆಟ್ಟರ್ ಪಕ್ಷ ತೊರೆದಿರುವುದರಿಂದ ಏನೂ ಎಫೆಕ್ಟ್ ಆಗಲ್ಲ. ಹಳೇ ಪ್ಲೇಯರ್ ರಿಟೈರ್ಡ್ ಆಗಿ ಅಂದ್ವಿ, ಆದರೇ ಅವರು ಮತ್ತೊಂದು ಟೀಮ್ ನಲ್ಲಿ ಆಡೋಕೆ ಹೋಗಿದ್ದಾರೆ. ಈ ಸಲ ಕಪ್ ನಮ್ದೆ ಎಂದು ಶೆಟ್ಟರ್ ವಿರುದ್ದ ಜೋಶಿ ಗುಡುಗಿದರು.
ಲಿಂಗಾಯತ ಸಮುದಾಯವೇ ಬಿಜೆಪಿಯ ಅಸ್ತ್ರ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಲಿಂಗಾಯತ ಸಮುದಾಯ ನಮಗೆ ಅಸ್ತ್ರ ಅಲ್ಲ. ಲಿಂಗಾಯತರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್ ಎಂದರು. ಬಿಎಲ್ ಸಂತೋಷ್ ವಿರುದ್ಧ ಶೆಟ್ಟರ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಮಿತ್ ಶಾ, ಮೋದಿ ಮಟ್ಟದಲ್ಲಿ ಈ ನಿರ್ಧಾವಾಗಿದೆ. ಅಮಿತ್ ಶಾ ಅವರೇ ಜಗದೀಶ್ ಶೆಟ್ಟರ್ ಜೊತೆ ಮಾತಾಡಿ, ಹೊಸ ಜನರೇಷನ್ ಬರಬೇಕು, ನಾವು ನಿಮಗೆ ದೊಡ್ಡ ರೋಲ್ ಕೊಡಲು ತೀರ್ಮಾನ ಮಾಡಿದ್ದೇವೆ ಎಂದು ಶೆಟ್ಟರ್ಗೆ ತಿಳಿಸಿದ್ದರು.
ಬಿಎಲ್ ಸಂತೋಷ್ ಸಂಘಟನಾ ಕಾರ್ಯದರ್ಶಿ. ಪ್ರತಿಭಾನ್ವಿತ ಕಾರ್ಯಕರ್ತ, ಅವರಿಗೆ ಸಂಸಾರ ಮನೆ ಇಲ್ಲ. ಶೆಟ್ಟರ್ ತರಹ ಯಾರೂ ಈಗಿನ ರಾಜಕೀಯ ಬೆಳವಣಿಗೆಗೆ ಬಿಎಲ್ ಸಂತೋಷ್ ಕಾರಣ ಎಂದು ಹೇಳಿಲ್ಲ. ಉತ್ತರಾಖಂಡ ಚುನಾವಣೆ ವೇಳೆ ಸಂತೋಷ್ ನನ್ನ ಜೊತೆ ಇದ್ರು, ನಾವು ಅಲ್ಲಿ ಗೆದ್ದಿದ್ದೇವೆ. ಇಂತವರ ವಿರುದ್ಧ ಈ ತರಹ ಆರೋಪ ಮಾಡೋದು ಸರಿ ಅಲ್ಲ ಎಂದರು. ರಾಹುಲ್ ಗಾಂಧಿ ಆಪರೇಷನ್ ಕಮಲ ಮಾಡೋಕೆ ಬಿಡಲ್ಲ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೌದು ರಾಹುಲ್ ಗಾಂಧಿ ಸರಿಯಾಗಿ ಹೇಳಿದ್ದಾರೆ. ನಾವೇ ಬಹುಮತದಿಂದ ಅಧಿಕಾರಕ್ಕೆ ಬರ್ತೀವಿ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ರಾಜ್ಯಕ್ಕೆ ಮತ್ತೆ ಆಗಮಿಸಿದ ಬಿಜೆಪಿ ಚಾಣಕ್ಯ: ಇಲ್ಲಿದೆ ಅಮಿತ್ ಶಾ ಕಾರ್ಯಕ್ರಮಗಳ ಇಂದಿನ ವಿವರ..