ETV Bharat / state

ಕೊಟ್ಟ ಹಣ ವಾಪಸ್​ ಕೇಳಿದ್ದಕ್ಕೆ ನಿವೃತ್ತ ಶಿಕ್ಷಕಿ ಹತ್ಯೆ: ಆರೋಪಿ ಅಂದರ್

author img

By ETV Bharat Karnataka Team

Published : Dec 31, 2023, 3:01 PM IST

Updated : Dec 31, 2023, 3:31 PM IST

ನೀಡಿದ್ದ ಹಣ ಹಿಂದಿರುಗಿಸುವಂತೆ ಕೇಳಿದ್ದಕ್ಕೆ ಶಿಕ್ಷಕಿಯನ್ನೇ ಹತ್ಯೆ ಮಾಡಿದ್ದ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ನಿವೃತ್ತ ಶಿಕ್ಷಕಿ ಹತ್ಯೆ
ನಿವೃತ್ತ ಶಿಕ್ಷಕಿ ಹತ್ಯೆ

ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಹೇಳಿಕೆ

ಧಾರವಾಡ: ಕೊಟ್ಟ ಹಣವನ್ನು ವಾಪಸ್​​ ಕೇಳಿದ್ದಕ್ಕೆ ನಿವೃತ್ತ ಶಿಕ್ಷಕಿಯನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇಲ್ಲಿನ ಓಂ ನಗರದ ಗಿರಿಜಾ ನಡೂರಮಠ ಹತ್ಯೆಗೀಡಾದವರು. ಅಮರಗೋಳ ಮಂಜುನಾಥ ದಂಡಿನ ಕೊಲೆ ಮಾಡಿದ ಆರೋಪಿ.

ನಿವೃತ್ತ ಶಿಕ್ಷಕಿ ಗಿರಿಜಾ ನಡೂರಮಠ ಓಂ ನಗರದಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ನಿವೃತ್ತಿಯಾಗಿ ಜೀವನ ಸಾಗಿಸುತ್ತಿದ್ದರು. ಕಳೆದ ಡಿ. 15 ರಂದು ಗಿರಿಜಾ ಅವರು ಮನೆಯಲ್ಲಿದ್ದಾಗ ಮಂಜುನಾಥ ಅವರ ಮನೆಗೆ ಹೋಗಿ ನೀರು ಕೇಳುವ ನೆಪದಲ್ಲಿ ಹಿಂಬದಿಯಿಂದ ವೇಲ್​ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದ.

ಮೃತಪಟ್ಟ 8 ದಿನಗಳ ಬಳಿಕ ಸಿಕ್ಕ ದೇಹ ಸಂಪೂರ್ಣ ಕೊಳೆತು ದುರ್ನಾತ ಬರುತ್ತಿತ್ತು. ಆ ಬಳಿಕ ಸ್ಥಳಕ್ಕೆ ಬಂದು ಪೊಲೀಸರು ಅಸಹಜ ಸಾವು ಎಂದು ದೂರು ದಾಖಲಿಸಿಕೊಂಡಿದ್ದರು. ದೇಹದ ಮರಣೋತ್ತರ ಪರೀಕ್ಷೆ ಮಾಡಿದ ಮೇಲೆ ಇದು ಕೊಲೆ ಎಂದು ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.

ನಿವೃತ್ತ ಶಿಕ್ಷಕಿ ಗಿರಿಜಾ ಅವರು ಅಮರಗೋಳದ ಮಂಜುನಾಥ ದಂಡಿನ ಎನ್ನುವ ವ್ಯಕ್ತಿಗೆ 10 ಲಕ್ಷ ರೂಪಾಯಿ ನೀಡಿದ್ದರು. ಗಿರಿಜಾ ನಿತ್ಯ ಹಣ ವಾಪಸ್ ನೀಡುವಂತೆ ಒತ್ತಾಯಿಸುತ್ತಿದ್ದರು. ಆದರೆ ಅದಕ್ಕೆ ಒಪ್ಪದ ಮಂಜುನಾಥ್​​ ಮನೆಗೆ ಬಂದು ನೀರು ಕೇಳುವ ನೆಪದಲ್ಲಿ ಗಿರಿಜಾ ಅವರನ್ನು ವೇಲ್​ನಿಂದಲೇ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ.

''63 ವರ್ಷ ವಯಸ್ಸಿನ ನಿವೃತ್ತ ಶಿಕ್ಷಕಿ ಗಿರಿಜಾ ಮೃತದೇಹವನ್ನು ಪರಿಶೀಲನೆ ನಡೆಸಿದಾಗ ನಮಗೆ ಇದು ಕೊಲೆ ಎಂಬ ಅನುಮಾನ ಬಂದಿತ್ತು. ಹಾಗಾಗಿ ಮೊದಲು ಅಸಹಜ ಸಾವು ಅಂತಾ ಪ್ರಕರಣ ದಾಖಲಿಸಿಕೊಂಡಿದ್ದೆವು. ಗಿರಿಜಾ ಅವರು ಹಲವು ಜನರಿಗೆ ಬಡ್ಡಿಗೆ ದುಡ್ಡನ್ನು ಸಾಲವಾಗಿ ನೀಡುತ್ತಿದ್ದರು. ಅದೇ ರೀತಿ ಮಂಜುನಾಥ್​ ದಂಡಿನ್​ ಅಲಿಯಾಸ್​ ದುಬೆ ಎಂಬಾತನಿಗೆ 10 ಲಕ್ಷ ರೂಪಾಯಿ ಕೊಟ್ಟಿದ್ದರು. ಸುಮಾರು ಮೂರು ವರ್ಷಗಳಿಂದ ಇವರಿಬ್ಬರಿಗೆ ಪರಿಚಯ ಇತ್ತು. ಗಿರಿಜಾ ಅವರಿಗೆ ಸಂಬಂಧಿಕರು ಅಂತಾ ಯಾರೂ ಇಲ್ಲ. ನೆರೆಹೊರೆಯವರೊಂದಿಗೆ ಯಾವುದೇ ರೀತಿಯ ಒಡನಾಟ ಇರಲಿಲ್ಲ. ಅಂದು ಮಂಜುನಾಥ್​ ಪರಿಚಯ ಇದ್ದುದರಿಂದ ಗಿರಿಜಾ ಮನೆಯ ಬಾಗಿಲು ತೆರೆಯುತ್ತಾರೆ. ಆಗ ಕುಡಿಯಲು ನೀರು ತರಲು ಹೋಗುತ್ತಿರುವಾಗ ಅವರ ವೇಲ್​ನಿಂದಲೇ ಮಂಜುನಾಥ್​ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ'' ಎಂದು ಮಹಾನಗರ ಪೊಲೀಸ್​ ಅಯುಕ್ತೆ ರೇಣುಕಾ ಸುಕುಮಾರ್​ ವಿವರಿಸಿದ್ದಾರೆ.

ಸ್ಥಳೀಯರಾದ ಸಲೀಂ ಎಂಬುವರು ಮಾತನಾಡಿ, '' ಗಿರಿಜಾ ಅವರಿಗೆ ಮಕ್ಕಳು ಅಂತಾ ಯಾರೂ ಇರಲಿಲ್ಲ. ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಮೂರ್ನಾಲ್ಕು ದಿನಗಳಿಂದ ಮನೆಯಿಂದ ದುರ್ನಾತ ಬರುತ್ತಿತ್ತು. ಆಗ ಗಿರಿಜಾ ಅವರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಬಂತು. ಪೊಲೀಸನವರು ಬಂದು ಪರಿಶೀಲನೆ ಮಾಡಿದ್ರು'' ಅಂತಾ ಹೇಳಿದ್ರು.

ಇದನ್ನೂ ಓದಿ: ಮೈಸೂರಲ್ಲಿ ವೃದ್ಧೆಯ ಸರ ಕದ್ದು ಹೋಂ ನರ್ಸ್ ಪರಾರಿ; 48 ಗಂಟೆಯಲ್ಲಿ ಆರೋಪಿ ಸೆರೆ

Last Updated : Dec 31, 2023, 3:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.