ETV Bharat / state

ನಗರ ಸ್ವಚ್ಛವಾಗಿಡುವ ಪೌರ ಕಾರ್ಮಿಕರಿಗೆ ಕಳಪೆ ಆಹಾರ ಪೂರೈಕೆ ಆರೋಪ.. ಕಾನೂನು ಕ್ರಮದ ಎಚ್ಚರಿಕೆ ನೀಡಿದ ಹು-ಧಾ ಪಾಲಿಕೆ ಆಯುಕ್ತ

author img

By

Published : Jul 19, 2023, 5:24 PM IST

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರಿಗೆ ಕಳಪೆ ಆಹಾರ ಹಾಗೂ ಅರೆ ಬರೆ ಬೆಂದಿರುವ ಆಹಾರವನ್ನು ವಿತರಣೆ ಮಾಡಲಾಗುತ್ತಿದೆ ಎಂಬ ಆರೋಪ‌ ಕೇಳಿ‌ ಬಂದಿದೆ.

Allegation of poor food supply to civic workers
ಕಳಪೆ ಆಹಾರ ಪೂರೈಕೆ..ಆಕ್ರೋಶ ವ್ಯಕ್ತಪಡಿಸಿದ ಪೌರ ಕಾರ್ಮಿಕರು

ಕಳಪೆ ಆಹಾರ ಪೂರೈಕೆ..ಆಕ್ರೋಶ ವ್ಯಕ್ತಪಡಿಸಿದ ಪೌರ ಕಾರ್ಮಿಕರು

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಒಂದಿಲ್ಲೊಂದು ಸಮಸ್ಯೆ ತಲೆದೂರುತ್ತಲೇ ಇದೆ. ಇಲ್ಲಿ ಶ್ರಮ ಜೀವಿಗಳ ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿಯೇ ಇಲ್ಲವಾಗಿದೆ. ಖಾಸಗಿ ಕಂಪನಿಯ ಬೇಜವಾಬ್ದಾರಿಯೋ ಅಥವಾ ಕಮಿಷನ್ ದಂಧೆಯ ಕೈವಾಡವೋ ಅವ್ಯವಸ್ಥೆ ಮಾತ್ರ ದೊಡ್ಡಮಟ್ಟದಲ್ಲಿ ಬೇರು ಬಿಟ್ಟಿದೆ. ಎಷ್ಟೇ ಹೇಳಿದರೂ ತಮ್ಮ ಹಳೆಯ ಚಾಳಿ ಬಿಡದಂತೆ ಮತ್ತೆ ಅದನ್ನೇ ಮಾಡುತ್ತಿರುವುದು ಪೌರ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದ 2ನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ಒದಗಿಸಲು ಪಾಲಿಕೆ ತಲಾ ಒಬ್ಬ ಪೌರಕಾರ್ಮಿಕರಿಗೆ ಮೊಟ್ಟೆ ಸೇರಿದಂತೆ ಉಪಹಾರ ಒದಗಿಸಲು 35 ರೂಪಾಯಿ ವ್ಯಯಿಸುತ್ತಿದೆ. ಆದರೆ ಕಳಪೆ ಆಹಾರ ಹಾಗೂ ಅರೆ ಬರೆ ಬೆಂದಿರುವ ಆಹಾರವನ್ನು ವಿತರಣೆ ಮಾಡಲಾಗುತ್ತಿದೆ ಎಂಬ ಆರೋಪ‌ ಪೌರಕಾರ್ಮಿಕರಿಂದ ಕೇಳಿ‌ ಬಂದಿದೆ.

ಇದನ್ನೂ ಓದಿ: ಕಳಪೆ ಆಹಾರ ವಿತರಣೆ.. ರಸ್ತೆಯಲ್ಲೇ ತಹಶೀಲ್ದಾರ ಅವರ​ನ್ನು ತರಾಟೆಗೆ ತೆಗೆದುಕೊಂಡ ಕಾರ್ಮಿಕ ಮಹಿಳೆ..

ಈಗಾಗಲೇ ಖಾಸಗಿ ಕಂಪನಿಗೆ ಟೆಂಡರ್ ನೀಡಿದ್ದು, ಪೌರಕಾರ್ಮಿಕರಿಗೆ ಗುಣಮಟ್ಟದ ಆಹಾರ ವಿತರಿಸಬೇಕಿತ್ತು‌. ಆದರೆ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿಲ್ಲ.‌ ಇದರಿಂದ ಅಕ್ರೋಶಗೊಂಡ ಪೌರಕಾರ್ಮಿಕರು ಆಹಾರವನ್ನು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವಳಿ ನಗರದಲ್ಲಿ ಎರಡು ಸಾವಿರ ಪೌರ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಪೌರ ಕಾರ್ಮಿಕರಿಗೆ ನೀಡುವ ಆಹಾರದಲ್ಲಿಯೂ ಅಧಿಕಾರಿಗಳ ಕಮಿಷನ್ ದಂಧೆಯಿಂದ ಇಂತಹದೊಂದು ದೊಡ್ಡಮಟ್ಟದ ಅವ್ಯವಸ್ಥೆ ತಲೆದೂರಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೂಡ ಆರೋಪ ಕೇಳಿ ಬಂದಿದೆ.

ಕಾನೂನು ಕ್ರಮದ ಎಚ್ಚರಿಕೆ ನೀಡಿದ ಪಾಲಿಕೆ ಆಯುಕ್ತ: ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಪ್ರತಿಕ್ರಿಯಿಸಿದ್ದಾರೆ. " ಕಳಪೆ ಆಹಾರ ವಿತರಣೆ ಬಗ್ಗೆ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು, ಆಹಾರ ತಪಾಸಣೆಗಾಗಿ ಓರ್ವ ಅಧಿಕಾರಿಯನ್ನು ನಿಯೋಜನೆ ಮಾಡಲಾಗಿದೆ. ಅವರು ಆಹಾರ ವಿತರಿಸಲು ಅರ್ಹವಾಗಿದೆ ಎಂಬುದನ್ನು ಖಚಿತಪಡಿಸಿದ ಮೇಲೆ ವಿತರಿಸಲಾಗುತ್ತದೆ. ಆದರೆ ಈಗಾಗಲೇ ಕಳಪೆ ಆಹಾರ ವಿತರಿಸಿದ ಗುತ್ತಿಗೆದಾರನಿಗೆ 50 ಸಾವಿರ ರೂ. ದಂಡವನ್ನು ವಿಧಿಸಲಾಗಿದೆ. ಅಲ್ಲದೇ ‌ಇದು ಹೀಗೆ ಮುಂದುವರೆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ.

ಖಾತೆಗೆ ಹಣ ಹಾಕುವಂತೆ ಮನವಿ: "ಮಹಾ ನಗರ ಪಾಲಿಕೆ ಬೆಳಗಿನ ಉಪಹಾರ ನೀಡುವುದು ಬೇಡ. ಇದರ ಬದಲಾಗಿ ಉಪಹಾರಕ್ಕೆ ವ್ಯಹಿಸುವ ಹಣವನ್ನು ‌ನೇರವಾಗಿ ತಮ್ಮ ಖಾತೆಗೆ ಹಾಕುವಂತೆ ಪೌರ ಕಾರ್ಮಿಕರು ಮನವಿ ಮಾಡಿದ್ದಾರೆ. ಆದರೆ ಆ ರೀತಿ ಹಣ ಸಂದಾಯ ಮಾಡಲು ಪಾಲಿಕೆಗೆ ಅವಕಾಶವಿಲ್ಲ. ಹೀಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗುವದು" ಎಂದು ಆಯುಕ್ತರು 'ಈಟಿವಿ ಭಾರತ'ಕ್ಕೆ ಮಾಹಿತಿ‌ ನೀಡಿದ್ದಾರೆ.

ಇದನ್ನೂ ಓದಿ: ಕಳಪೆ ಆಹಾರ ಸೇವನೆಯಿಂದ ವಿದ್ಯಾರ್ಥಿಗಳು ಅಸ್ವಸ್ಥ ಪ್ರಕರಣ : ಮೊರಾರ್ಜಿ ಶಾಲೆಗೆ ಶಾಸಕ ಬಯ್ಯಾಪೂರ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.