ETV Bharat / state

ದಾವಣಗೆರೆ: ಬಾಲಕಿ ಮೇಲೆ ಅತ್ಯಾಚಾರ; ಅಪರಾಧಿಗೆ 20 ವರ್ಷ ದಂಡಸಹಿತ ಜೈಲು ಶಿಕ್ಷೆ

author img

By ETV Bharat Karnataka Team

Published : Dec 17, 2023, 3:08 PM IST

ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ದಾವಣಗೆರೆ ಮಕ್ಕಳಸ್ನೇಹಿ ಮತ್ತು ಎಫ್.ಟಿ.ಎಸ್.ಸಿ-1 ನ್ಯಾಯಾಲಯವು ದಂಡಸಹಿತ ಜೈಲು ಶಿಕ್ಷೆ ವಿಧಿಸಿದೆ.

prison
ಶಿಕ್ಷೆ

ದಾವಣಗೆರೆ: ವಿವಾಹಿತ ಮಹಿಳೆಯನ್ನು ಮದುವೆಯಾಗಿ ಆಕೆಯ ಮಗಳ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಗೆ ಜಿಲ್ಲೆಯ ಮಕ್ಕಳಸ್ನೇಹಿ ಮತ್ತು ಎಫ್.ಟಿ.ಎಸ್.ಸಿ-1 ನ್ಯಾಯಾಲಯವು 20 ವರ್ಷ ಜೈಲು ಸಜೆಯೊಂದಿಗೆ 22,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ವಿವರ: ಆರೋಪಿ ಸಂತ್ರಸ್ತೆಯ ತಾಯಿಯನ್ನು ಫೋನ್ ಕರೆ ಮೂಲಕ ಪರಿಚಯ ಮಾಡಿಕೊಂಡಿದ್ದ. ಬಳಿಕ ಇಬ್ಬರು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಮದುವೆಯಾದ ಒಂದೂವರೆ ವರ್ಷದ ನಂತರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಅಲ್ಲದೆ ಆಕೆಯನ್ನು ಪ್ರೀತಿಸುವುದಾಗಿ ಹೇಳಿ ಅತ್ಯಾಚಾರ ಮಾಡಿದ್ದನು. ಈ ವಿಚಾರ ತಾಯಿಗೆ ತಿಳಿದಿದ್ದು, ತನ್ನ ಅಣ್ಣನ ಮಗನೊಂದಿಗೆ ಮಗಳ ಮದುವೆ ಮಾಡಲು ನಿಶ್ಚಯಿಸಿದ್ದರು. ಆದರೆ ಇದು ಅಪರಾಧಿಗೆ ಇಷ್ಟವಿಲ್ಲದೇ ಇದ್ದುದರಿಂದ ಬಾಲಕಿಯ ತಾಯಿಯೊಂದಿಗೆ ಗಲಾಟೆ ಮಾಡಿಕೊಂಡು ಬೆಂಗಳೂರಿಗೆ ಹೋಗಿ ಸ್ವಲ್ಪ ದಿನ ಇದ್ದು ಮತ್ತೆ ದಾವಣಗೆರೆಗೆ ವಾಪಸ್ ಬಂದಿದ್ದ. ಹೀಗೆ ಬಂದವನು ಮೊದಲಿನಂತೆ ಬಾಲಕಿ ಮತ್ತು ಆಕೆಯ ತಾಯಿಯೊಂದಿಗೆ ವಾಸವಾಗಿದ್ದನು. ಹೀಗಿರಲು ಒಂದು ದಿನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿಗೆ "ನಿನ್ನನ್ನು ಇಷ್ಟಪಡುತ್ತಿದ್ದೇನೆ. ನೀನು ನನ್ನನ್ನು ಪ್ರೀತಿಸು. ನಿನ್ನ ತಾಯಿಯ ಅಣ್ಣನ ಮಗನನ್ನು ಮದುವೆಯಾಗಬೇಡ, ನಾವಿಬ್ಬರೂ ಎಲ್ಲಿಯಾದರೂ ದೂರ ಹೋಗೋಣ ಬಾ" ಎಂದು ಹೇಳಿದ್ದನು. ಅದಕ್ಕೆ ಬಾಲಕಿ ನೀನು ನನ್ನ ತಾಯಿಯನ್ನು ಆಗಲೇ ಮದುವೆಯಾಗಿದ್ದೀಯಾ ಎಂದು ಹೇಳಿದ್ದರೂ ಸಹ ಆರೋಪಿ ಪುಸಲಾಯಿಸಿ 11/3/2020ರ ರಾತ್ರಿಯಂದು ಆಕೆಯನ್ನು ಗ್ರಾಮವೊಂದಕ್ಕೆ ಕರೆದುಕೊಂಡು ಹೋಗಿ ಬಾಡಿಗೆ ಮನೆಯಲ್ಲಿ ತಾಳಿ ಕಟ್ಟಿ ಮದುವೆಯಾಗಿದ್ದಾನೆ. ಬಳಿಕ ಹಲವು ಬಾರಿ ಅತ್ಯಾಚಾರವೆಸಗಿದ್ದನು. ಪರಿಣಾಮ ಆಕೆ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. 2021ರಲ್ಲಿ ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ತನಿಖಾಧಿಕಾರಿ ಡಿವೈಎಸ್‌ಪಿ ನಾಗೇಶ್ ಐತಾಳ್​ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಇದೀಗ ನ್ಯಾಯಾಧೀಶ ಶ್ರೀಪಾದ.ಎನ್ ವ್ಯಕ್ತಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 20 ವರ್ಷ ಶಿಕ್ಷೆ ಹಾಗೂ 22,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೇ ಅಪರಾಧಿ ಮತ್ತು ಸಂತ್ರಸ್ತೆಗೆ ಜನಿಸಿದ ಮಗುವಿಗೆ ಸರ್ಕಾರದಿಂದ 5,00,000 ರೂಪಾಯಿ ಪರಿಹಾರ ನೀಡಲು ಆದೇಶಿಸಿದ್ದಾರೆ.‌ ಸರ್ಕಾರಿ ಅಭಿಯೋಜಕರಾಗಿ ಜಯಪ್ಪ ಕೆ.ಜಿ. ವಾದ ಮಂಡಿಸಿದ್ದರು.

ಇದನ್ನೂ ಓದಿ: ಲೋಕಾಯುಕ್ತ ಹೆಸರಿನಲ್ಲಿ ತಹಶೀಲ್ದಾರ್​ಗೆ ಬೆದರಿಕೆ ಕರೆ: ಆರೋಪಿ ಬಂಧಿಸಿದ ನ್ಯಾಮತಿ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.