ETV Bharat / state

ಲಂಚ: ಹರಿಹರ ನಗರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ ಅಮಾನತು

author img

By ETV Bharat Karnataka Team

Published : Dec 8, 2023, 10:25 PM IST

ಆರೋಪಿಯಿಂದ ಲಂಚ ಪಡೆದ ಹಿನ್ನೆಲೆಯಲ್ಲಿ ಹರಿಹರ ನಗರ ಪೊಲೀಸ್ ಠಾಣೆಯ ಕಾನ್​ಸ್ಟೆಬಲ್ ಅಮಾನತಾಗಿದ್ದಾರೆ.

ದಾವಣಗೆರೆ
ದಾವಣಗೆರೆ

ದಾವಣಗೆರೆ: ಬಂಧಿತ ಆರೋಪಿಯಿಂದ ಲಂಚ ಪಡೆದ ಹಿನ್ನೆಲೆಯಲ್ಲಿ ಹರಿಹರ ನಗರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌​ ಮಂಜುನಾಥ್ ಬಿ.ವಿ. ಎಂಬವರನ್ನು ಅಮಾನತು ಮಾಡಲಾಗಿದೆ. ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ ಠಾಣೆಗೆ ಕರೆತಂದಿದ್ದ ಆರೋಪಿಯೊಬ್ಬರಿಂದ ಕಾನ್‌ಸ್ಟೆಬಲ್‌ ಲಂಚ ಪಡೆದಿದ್ದರು. ಎಸ್ಪಿ ಉಮಾ ಪ್ರಶಾಂತ್‌ ಹತ್ತು ದಿನಗಳ ಹಿಂದೆಯೇ ಅಮಾನತು ಆದೇಶ ಹೊರಡಿಸಿದ್ದರು.

ಠಾಣೆಗೆ ಕರೆತಂದಿದ್ದ ಆರೋಪಿಗೆ ಕಾನ್‌ಸ್ಟೆಬಲ್‌ ಮಂಜುನಾಥ್ ಅವರು, ನಿನ್ನ ಮೇಲೆ ಫೋಕ್ಸೊ ಪ್ರಕರಣ ದಾಖಲು ಮಾಡ್ತೀನಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪವೂ ಕೇಳಿಬಂದಿದೆ. ನಂತರ ಠಾಣೆಯಲ್ಲೇ ಆರೋಪಿಯನ್ನು ಹೆದರಿಸಿ 12 ಸಾವಿರ ರೂ ಲಂಚ ಪಡೆದಿದ್ದರು. ಇದಲ್ಲದೇ ಅದೇ ಆರೋಪಿ ಬಳಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ. ಆರೋಪಿ ಹಣ ಇಲ್ಲ ಎಂದು ಹೇಳಿದ ತಕ್ಷಣ, ಆತನ ಬಳಿ ಇದ್ದ ಮೊಬೈಲ್ ಕಸಿದುಕೊಂಡ ಫೋನ್ ಪೇಯಲ್ಲಿ ಎಷ್ಟು ಹಣ ಬ್ಯಾಲೆನ್ಸ್​ ಇದೆ ತೋರಿಸು ಎಂದೂ ಒತ್ತಾಯಿಸಿದ್ದಾರೆ. ಬ್ಯಾಲೆನ್ಸ್ ಚೆಕ್ ಮಾಡಿದಾಗ ಆರೋಪಿಯ ಖಾತೆಯಲ್ಲಿ 25 ಸಾವಿರ ರೂ ಇರುವುದು ತಿಳಿದಿದೆ. ಆಗ ಆರೋಪಿಯ ಬಳಿಯಿದ್ದ ಹಣವನ್ನು ಮಂಜುನಾಥ್ ವರ್ಗಾವಣೆ ಮಾಡಿಕೊಂಡಿದ್ದಾರೆ. ಆರೋಪಿಯ ಸಹೋದರ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಹರಿಹರ ನಗರ ಠಾಣೆಯ ಇನ್ಸ್​ಪೆಕ್ಟರ್ ದೇವಾನಂದ್ ವರದಿಯನ್ನೂ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಮಾನತು ಮಾಡಿದ್ದೇವೆ ಎಂದು ಎಸ್ಪಿ ಖಚಿತಪಡಿಸಿದ್ದಾರೆ.

ಈ ಬಗ್ಗೆ ಎಸ್‌ಪಿ ಉಮಾ ಪ್ರಶಾಂತ್ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಕಳೆದ ಹತ್ತು ದಿನಗಳ ಹಿಂದೆ ಕಾನ್​ಸ್ಟೆಬಲ್​ ಮಂಜುನಾಥ್ ಬಿ.ವಿ. ಅವರನ್ನು ಅಮಾನತು ಮಾಡಿದ್ದೇವೆ. ಲಂಚ ಪಡೆದಿರುವುದು ಸಾಬೀತಾಗಿರುವ ಬೆನ್ನಲ್ಲೇ ಅಮಾನತು ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರೋಗಿಗಳಿಗೆ ಆಹಾರ ಪೂರೈಸಿದವರಿಂದ ಲಂಚಕ್ಕೆ ಬೇಡಿಕೆ ಆರೋಪ; ಬೆಂಗಳೂರಲ್ಲಿ ಯುನಾನಿ ಅಧಿಕಾರಿ ಸಿಬಿಐ ಬಲೆಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.