ETV Bharat / state

ಚಾರಣಿಗರಿಗೂ, ಭಕ್ತರಿಗೂ ಪ್ರಿಯವಾದ ತಾಣ.. ಬೃಹತ್ ಕಾರಿಂಜ ಬೆಟ್ಟದಲ್ಲಿದೆ ಶಿವ-ಪಾರ್ವತಿ ಸನ್ನಿಧಿ

author img

By

Published : Aug 7, 2022, 5:19 PM IST

ಕೊಡ್ಯಮಲೆ ರಕ್ಷಿತಾರಣ್ಯದ ಮಧ್ಯೆ ಇರುವ ಸುಂದರ ಪ್ರದೇಶ ಕಾರಿಂಜ ಬೆಟ್ಟದಲ್ಲಿ ಶಿವನಿಗೂ-ಪಾರ್ವತಿಗೂ ಪ್ರತ್ಯೇಕವಾದ ದೇವಸ್ಥಾನವಿರುವುದು ವೈಶಿಷ್ಠ್ಯ..

ಪಾರ್ವತಿ ಪರಶಿವನ ಸನ್ನಿಧಿ
ಪಾರ್ವತಿ ಪರಶಿವನ ಸನ್ನಿಧಿ

ಬಂಟ್ವಾಳ: ಮಂಗಳೂರಿನಿಂದ ಧರ್ಮಸ್ಥಳಕ್ಕೆ ಸಾಗುವ ರಸ್ತೆಯಲ್ಲಿ ಬಂಟ್ವಾಳದಿಂದ ಸುಮಾರು 9 ಕಿ. ಮೀ ಸಾಗಿದರೆ, ಕಾರಿಂಜ ಕ್ರಾಸ್ ಎಂಬ ಪ್ರದೇಶ ಸಿಗುತ್ತದೆ. ಅಲ್ಲಿ ಬಲಬದಿಗೆ 2. 4 ಕಿ.ಮೀ ದೂರ ಪ್ರಯಾಣಿಸಿದರೆ ಕಾರಿಂಜ ಬೆಟ್ಟ ಕಾಣಸಿಗುತ್ತದೆ. ಕೊಡ್ಯಮಲೆ ರಕ್ಷಿತಾರಣ್ಯದ ಮಧ್ಯೆ ಇರುವ ಸುಂದರ ಪ್ರದೇಶ ಕಾರಿಂಜ ಬೆಟ್ಟ. ಸಮುದ್ರ ಮಟ್ಟದಿಂದ 1500 ಅಡಿ ಎತ್ತರದಲ್ಲಿರುವ ಈ ಬೆಟ್ಟ ಬೃಹತ್ ಬಂಡೆಗಳಿಂದ ಆವರಸಲ್ಪಟ್ಟಿದೆ. ಈ ಹಿನ್ನೆಲೆ ಇಲ್ಲಿ ಸುತ್ತಮುತ್ತಲು ಕಲ್ಲುಗಣಿಗಾರಿಕೆ ನಿಷೇಧಿಸಲಾಗಿದೆ.

ಶಿವನಿಗೂ, ಪಾರ್ವತಿಗೂ ಪ್ರತ್ಯೇಕ ದೇವಸ್ಥಾನವಿರುವುದು ಇಲ್ಲಿನ ವೈಶಿಷ್ಟ್ಯ. ಗುಡ್ಡದ ನಡುವೆ ಪಾರ್ವತಿ ಹಾಗೂ ಗುಡ್ಡದ ತುತ್ತ ತುದಿಯಲ್ಲಿ ಶಿವನಿಗೆ ಶಿಲಾಮಯ ಗರ್ಭಗುಡಿಯಿದೆ. ಗುಡ್ಡದ ಕೆಳಗಿನಿಂದ ಮೇಲಿನ ಶಿವ ದೇವಸ್ಥಾನದವರೆಗೆ ಸುಮಾರು 500ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ದರ್ಶನ ಪಡೆಯುವುದು ಸಾಹಸದಾಯಕವೂ ಹೌದು.

ನಿತ್ಯ ಅನ್ನ ನೈವೇದ್ಯ: ಶಿವ ದೇವಸ್ಥಾನದಿಂದ ನಾಲ್ಕೂ ದಿಕ್ಕಿನಲ್ಲಿ ಹಚ್ಚಹಸಿರು ದೃಶ್ಯ ವೈಭವ. ಇಲ್ಲಿಂದ ಕೆಳಗಿನ ಬೃಹತ್ ಶಿಲಾಬೆಟ್ಟದತ್ತ ಕೂಗಿಕೊಂಡರೆ ಸ್ಪಷ್ಟ ಪ್ರತಿಧ್ವನಿ ನೀಡುವ ಪ್ರತಿಧ್ವನಿ ಕಲ್ಲು ಇದೆ. ಸತ್ಯ ಪ್ರಮಾಣ ಮಾಡುತ್ತಿದ್ದ ಸೀತಾದೇವಿ ಪ್ರಮಾಣ ಕಲ್ಲು ಇದೆ. ವಾನರ ಸೇನೆಗೆ ನಿತ್ಯ ಅನ್ನ ನೈವೇದ್ಯ ನೀಡುವುದು ಇನ್ನೊಂದು ವಿಶೇಷ. ಇಲ್ಲಿ ಒಂದು ಭಾರೀ ಗಾತ್ರದ ಮಂಗ (ಕಾರಿಂಜ ದಡ್ಡ) ಇತ್ತು ಎನ್ನಲಾಗುತ್ತಿದೆ.

ದೇವರ ಪೂಜೆ ಆದ ಮೇಲೆ ದೇವರ ಪ್ರಸಾದವನ್ನು ಒಂದು ದೊಡ್ಡ ಪಾದೆ ಕಲ್ಲಿನ ಮೇಲೆ ಈ ಮಂಗ ಹಾಗೂ ಉಳಿದ ಮಂಗಗಳಿಗಾಗಿ ಹಾಕುತ್ತಿದ್ದರು. (ಈಗಲೂ ಕಾರಿಂಜ ದಡ್ಡ ಇಲ್ಲದಿದ್ದರೂ ಮಂಗಗಳಿಗೆ ಪ್ರಸಾದ ಹಾಕುವುದನ್ನು ಮುಂದುವರೆಸಿದ್ದಾರೆ) ಅನ್ನ ಬಿಸಿ ಇದ್ದರೆ ಈ ಕಾರಿಂಜದಡ್ಡ ಸಮೀಪ ಇದ್ದ ಮಂಗವೇ ಅನ್ನವನ್ನು ಕಲಸುತ್ತಿತ್ತಂತೆ.

ಪಾರ್ವತಿ ಪರಶಿವನ ಸನ್ನಿಧಿಗೆ ಭಕ್ತರ ಭೇಟಿ

ಶಿಲಾಮಯ ಶಿವ ದೇವಸ್ಥಾನ: ಶಿವರಾತ್ರಿ ಇಲ್ಲಿನ ಪ್ರಧಾನ ಉತ್ಸವ. ನಾಲ್ಕು ದಿನ ಈ ಉತ್ಸವ ಜರುಗುತ್ತದೆ. ಜಾತ್ರೆ ವೇಳೆ ಗುಡ್ಡದ ಮೇಲಿನಿಂದ ಶಿವನ ವಿಗ್ರಹವನ್ನು ಪಾರ್ವತಿ ದೇವಸ್ಥಾನಕ್ಕೆ ತರುವ ಮೂಲಕ ಶಿವ-ಪಾರ್ವತಿಯರ ಭೇಟಿ ನಡೆಯುತ್ತದೆ. ಪಾರ್ವತಿ ದರ್ಶನದ ನಂತರ ತೀರಾ ಕಡಿದಾದ ಸುಸಜ್ಜಿತ 142 ಮೆಟ್ಟಿಲುಗಳನ್ನು ಹತ್ತಿ ಹೋದರೆ ಅಲ್ಲಿ ’ಉಕ್ಕಡದ ಬಾಗಿಲು’ ಕಾಣಸಿಗುತ್ತದೆ. ಇದು ಕಲ್ಲಿನಿಂದ ಮಾಡಿದ ದ್ವಾರ. ಅಲ್ಲಿಂದ ಮುಂದಕ್ಕೆ ಬಂಡೆ ಹಾಗೂ ಕುರುಚಲು ಮರ-ಗಿಡಗಳ ನಡುವೆ 118 ಮೆಟ್ಟಿಲುಗಳನ್ನು ಹತ್ತುತ್ತ ಸಾಗಿದರೆ ಬೆಟ್ಟದ ತುದಿಯಲ್ಲಿದೆ ಶಿಲಾಮಯ ಶಿವ ದೇವಸ್ಥಾನ.

ಅದಕ್ಕೂ ಮೊದಲು ಮೆಟ್ಟಿಲುಗಳ ಪಕ್ಕ ಉಂಗುಷ್ಟ ತೀರ್ಥ, ಜಾನು ತೀರ್ಥ ಸಿಗುತ್ತದೆ. ಈ ಪುಟ್ಟ ಕೆರೆಗಳನ್ನು ಹಾಗೂ ಕೆಳಗಿನ ಗದಾತೀರ್ಥವನ್ನು ಮಹಾಭಾರತ ಕಾಲದಲ್ಲಿ ಭೀಮಸೇನ ನಿರ್ಮಿಸಿದ ಎಂಬ ನಂಬಿಕೆ ಇದೆ. ವರ್ಷದ ಎಲ್ಲಾ ದಿನ ಬೆಟ್ಟದ ತುದಿಯಲ್ಲಿರುವ ಈ ಕೆರೆಗಳಲ್ಲಿ ನೀರು ಬತ್ತದಿರುವುದು ವಿಶೇಷ. ದೇವಳ ಪಕ್ಕದಲ್ಲಿರುವ ’ಹಂದಿಕೆರೆ’ಯೂ ಅರ್ಜುನನಿಂದಾಗಿ ಉಂಟಾಯಿತು ಎಂಬ ಕಥೆಯಿದೆ.

ಮೊದಲು ಬೆಟ್ಟದ ಬುಡದಲ್ಲಿರುವ ಗದೆಯ ಆಕಾರದ ವಿಶಾಲ ’ಗದಾತೀರ್ಥ’ ಕಾಣಸಿಗುತ್ತದೆ. ಶುದ್ಧ ನೀರಿನ ಕೊಳವು ಸುಮಾರು 237 ಮೀ. ಉದ್ದ 55 ಮೀ. ಅಗಲವಿದೆ. ಇಲ್ಲಿ ಜಲಪ್ರೋಕ್ಷಣೆ ಮಾಡಿಕೊಂಡು ಬೆಟ್ಟ ಹತ್ತಲು ಶುರು ಮಾಡಬಹುದು. ಇದು ದೊಡ್ಡಗಾತ್ರದ ಮೀನುಗಳಿಗೆ ಆಶ್ರಯವನ್ನು ಕೊಟ್ಟಿದೆ. ಕೆರೆಯಪಕ್ಕದಲ್ಲಿ ವಿಶಾಲವಾದ ಅಶ್ವತ್ಥವೃಕ್ಷ; ಅಲ್ಲೇ ಬಲಕ್ಕೆ ಹುಲ್ಲುಹಾಸಿದ ಹರ ಮತ್ತು ಕಾಡು ಮುಚ್ಚಿಹೋದ ಪುರಾತನ ಗುಹೆಯೊಂದಿದೆ.

ಪ್ರಾಕೃತಿಕ ವಿಸ್ಮಯ: ಇಲ್ಲಿಂದ ಬೃಹತ್ ಬಂಡೆಯ ಮೆಟ್ಟಿಲು ಏರುತ್ತಾ (ಇನ್ನೊಂದು ಬದಿಯಲ್ಲಿ ಡಾಂಬರು ರಸ್ತೆ ಕೂಡಾ ಇದೆ.) ಸಾಗಿದರೆ ಪಾರ್ವತಿ ಗುಡಿ ಸಿಗುತ್ತದೆ. ಕೊಡ್ಯಮಲೆ ಅರಣ್ಯ ತಪ್ಪಲಿನಲ್ಲಿರುವ ಈ ಪ್ರದೇಶದಲ್ಲಿರುವ ಗದಾತೀರ್ಥ, ಪಾರ್ವತಿ ಕ್ಷೇತ್ರದ ಸನಿಹ ಏಕಶಿಲಾ ಗಣಪತಿ ಕ್ಷೇತ್ರದ ಎದುರಿಗಿರುವ ಉಗ್ರಾಣಿ ಗುಹೆಗಳು, ಉಕ್ಕುಡದ ಬಾಗಿಲು, ಉಂಗುಷ್ಟ ಮತ್ತು ಮೊಣಕಾಲು ತೀರ್ಥ, ಮಹಾಭಾರತದ ಅರ್ಜುನ ಹಂದಿಗೆ ಬಾಣಬಿಟ್ಟು ಹೋದ ಲಂಬರೇಖೆ ನೋಡಲೇಬೇಕಾದ ಪ್ರಾಕೃತಿಕ ವಿಸ್ಮಯಗಳು. ನಡುವೆ ವಿನಾಯಕ ಗುಡಿಯನ್ನೂ ಹಾಗೂ ಸಣ್ಣಪುಟ್ಟ ತೀರ್ಥಗಳನ್ನು ಕಾಣಬಹುದು. ನಡು-ನಡುವೆ, ಕಾಡಿನಿಂದ ಬರುವ ವಾನರ ಸೇನೆಯೂ ಸ್ವಾಗತಿಸುತ್ತದೆ.

ಓದಿ: ದೇವರಾದ ಅಧಿಕಾರಿ! ದುಡ್ಡು ಬೇಡ ಅಧಿಕಾರಿ ಪುತ್ಥಳಿ ಬೇಕೆಂದ ಜನರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.