ETV Bharat / state

ಮಲಿನವಾಗುತ್ತಿದೆ ಪವಿತ್ರ ನದಿ ಕುಮಾರಧಾರಾ... ನೀರು ಕುಡಿಯುವವರು, ಸ್ನಾನ ಮಾಡುವವರೇ ಇರಲಿ ಎಚ್ಚರ!

author img

By

Published : Mar 23, 2021, 5:24 PM IST

ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹರಿಯುವ ಕುಮಾರಧಾರಾ ನದಿ ಸಂಪೂರ್ಣವಾಗಿ ಮಲಿನವಾಗುತ್ತಿದೆ. ಇದಕ್ಕೆ ಕಾರಣ ಇಲ್ಲಿನ ಪೇಟೆ, ಲಾಡ್ಜ್ ಹಾಗೂ ಹೋಟೆಲ್​ಗಳಿಂದ ಮಲಿನ ನೀರು ನದಿಗೆ ಹರಿದು ಬರುತ್ತಿರುವುದು. ಈ ನೀರು ಸರಿಯಾದ ರೀತಿಯಲ್ಲಿ ಶುದ್ಧೀಕರಣ ಆಗದೇ ನೇರವಾಗಿ ನದಿಗೆ ಸೇರುತ್ತಿರುದೆ.

river-kumaradhaara-getting-polluted-due-to-drainage-water
river-kumaradhaara-getting-polluted-due-to-drainage-water

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕುಕ್ಕೆಸುಬ್ರಹ್ಮಣ್ಯ ಪುಣ್ಯ ಕ್ಷೇತ್ರ. ಅದರಲ್ಲೂ ಕುಮಾರಧಾರಾ ನದಿ ಸಕಲ ಪಾಪ ಪರಿಹಾರ ಮಾಡುತ್ತದೆ ಎಂಬುದು ಭಕ್ತರ ನಂಬಿಕೆ. ಇದಕ್ಕಾಗಿ ದೇಶದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಇಂತಹ ಪವಿತ್ರ ಕ್ಷೇತ್ರದ ಕುಮಾರಧಾರಾ ನದಿ ಈಗ ಮಲಿನವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹರಿಯುವ ಕುಮಾರಧಾರಾ ನದಿ ಸಂಪೂರ್ಣವಾಗಿ ಮಲಿನವಾಗುತ್ತಿದೆ. ಇದಕ್ಕೆ ಕಾರಣ ಇಲ್ಲಿನ ಪೇಟೆ, ಲಾಡ್ಜ್ ಹಾಗೂ ಹೋಟೆಲ್​ಗಳಿಂದ ಮಲಿನ ನೀರು ನದಿಗೆ ಹರಿದು ಬರುತ್ತಿರುವುದು. ಈ ನೀರು ಸರಿಯಾದ ರೀತಿಯಲ್ಲಿ ಶುದ್ಧೀಕರಣ ಆಗದೇ ನೇರವಾಗಿ ನದಿಗೆ ಸೇರುತ್ತಿದೆ.

ಮಲಿನವಾಗುತ್ತಿದೆ ಕುಮಾರಧಾರಾ ನದಿ

ಹೆಚ್ಚಿನವರು ಸರ್ಪ ಸಂಸ್ಕಾರದಂತಹ ಸೇವೆಗಳನ್ನು ಮಾಡಿ ಕುಮಾರಧಾರಾ ನದಿಯಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಆದ್ರೆ ಇಂತಹ ಕಲುಷಿತ ನೀರಲ್ಲಿ ಪಾಪ ಪರಿಹಾರ ಆಗೋ ಬದಲು ರೋಗ ರುಜಿನಗಳು ಅಂಟಿಕೊಳ್ಳುವ ಭೀತಿ ಎದುರಾಗಿದೆ. ಸುಬ್ರಹ್ಮಣ್ಯದಿಂದ ಹಿಡಿದು ಮಂಗಳೂರುವರೆಗೆ ಸಾವಿರಾರು ಜನರು, ಜಾನುವಾರುಗಳು, ಪಕ್ಷಿಗಳಿಗೆ ಇದೇ ನೀರು ಕುಡಿಯಲು ಉಪಯೋಗ ಆಗುತ್ತದೆ.

ಸುಬ್ರಹ್ಮಣ್ಯ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ 180 ಕೋಟಿ ರೂಪಾಯಿ ವೆಚ್ಚದ ಮಾಸ್ಟರ್ ಪ್ಲಾನ್ ಮಂಜೂರು ಮಾಡಿತ್ತು. ಅದರಂತೆ ವಸತಿ ಗೃಹ, ಬಸ್ ನಿಲ್ದಾಣ, ರಸ್ತೆ ಎಲ್ಲವೂ ಮೇಲ್ದರ್ಜೆಗೇರುತ್ತಿದ್ದರೂ ಇಲ್ಲಿನ ಕಲುಷಿತ ನೀರು ಶುದ್ಧೀಕರಣ ಘಟಕದ ವ್ಯವಸ್ಥೆ ಸರಿಯಾಗಿಲ್ಲ ಎನ್ನಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯವು ರಾಜ್ಯ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತರುತ್ತಿರುವ ದೇವಸ್ಥಾನ. ಆದ್ರೆ ಇಲ್ಲಿನ ಈ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಕ್ಷೇತ್ರದ ಹೆಸರು ಹಾಳಾಗಬಹುದು ಎನ್ನಲಾಗುತ್ತಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ನೀತಿ ತಂಡದ ರಾಜ್ಯ ಅಧ್ಯಕ್ಷ ಜಯನ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿದ ದೇವಸ್ಥಾನ ಕಾರ್ಯನಿರ್ವಾಹಣಾಧಿಕಾರಿ ಡಾ. ನಿಂಗಯ್ಯ, ನೀರಿನ ಶುದ್ಧೀಕರಣ ಘಟಕ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಈ ಬಗ್ಗೆ ಒಳಚರಂಡಿ ಮಂಡಳಿಯವರು ಬಂದು ಪರಿಶೀಲನೆ ಮಾಡಿ ಹೋಗಿದ್ದಾರೆ. ಈ ಘಟಕದ ಮೇಲುಸ್ತುವಾರಿ ನೋಡಿಕೊಳ್ಳಲು ಕೂಡಲೇ ಸಮಿತಿಯೊಂದನ್ನು ರಚನೆ ಮಾಡಿ ಸಮಸ್ಯೆಗಳು ಎದುರಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.