ETV Bharat / state

ಊಟಕ್ಕೆ ಅಕ್ಕಿಯಿಲ್ಲ, ಔಷಧಿಗೆ ಹಣವಿಲ್ಲ: ಹಾಸಿಗೆ ಹಿಡಿದ ಪತಿ-ಅತ್ತೆ ಸಲಹುತ್ತಿರುವ ಮಹಿಳೆಗೆ ಬೇಕಿದೆ ದಾನಿಗಳ ನೆರವು

author img

By

Published : Apr 9, 2022, 9:42 AM IST

ಅಕ್ಕಿ ತರಲು ಹಣವಿಲ್ಲದ ಕಾರಣ ಊಟ ಮಾಡದೇ 2,3 ದಿನ ಬರಿ ಹೊಟ್ಟೆಯಲ್ಲಿ ದಿನ ಕಳೆದದ್ದೂ ಉಂಟು. ಕಿಡ್ನಿ ಕಳೆದುಕೊಂಡ ಪತಿಯ ಚಿಕಿತ್ಸೆಗೆ ಹಣ ಹೊಂದಾಣಿಕೆ ಮಾಡುವುದೇ ಜೀವನವಾಗಿಬಿಟ್ಟಿದೆ. 90 ರ ಹರೆಯದ ಅನಾರೋಗ್ಯದಿಂದ ಇರುವ ಅತ್ತೆಯ ಆರೈಕೆಯ ಜೊತೆಗೆ ಮುರುಕಲು ಮನೆಯೊಂದಿಗಿನ ಜವಾಬ್ದಾರಿ ಕುಂಪಲ ಆಶ್ರಯ ಕಾಲನಿ ನಿವಾಸಿ, ಬಿಲ್ಲವ ಕುಟುಂಬಕ್ಕೆ ಸೇರಿದ ಪುಷ್ಪ ಅವರ ಪ್ರತಿನಿತ್ಯದ ಹೋರಾಟವಾಗಿದೆ.

ಉಳ್ಳಾಲ
ಉಳ್ಳಾಲ

ಉಳ್ಳಾಲ: ಒಂದೆಡೆ ಕಿತ್ತು ತಿನ್ನುವ ಬಡತನ, ಮತ್ತೊಂದೆಡೆ ಹಾಸಿಗೆಯಲ್ಲಿ ಮಲಗಿರುವ ಪತಿ. ಇದರ ನಡುವೆ ಇಂದೋ ನಾಳೆಯೋ ಎಂದು ದಿನ ಎಣಿಸುತ್ತಾ ಅನಾರೋಗ್ಯದಿಂದ ಬಳಲುತ್ತಿರುವ 90 ರ ಹರೆಯದ ಅತ್ತೆ. ಇದು ಕುಂಪಲ ಆಶ್ರಯ ಕಾಲನಿ ನಿವಾಸಿ ಬಿಲ್ಲವ ಕುಟುಂಬಕ್ಕೆ ಸೇರಿದ ಪುಷ್ಪ ಎಂಬ ಒಂಟಿ ಮಹಿಳೆಯ ಜೀವನದ ಹೋರಾಟ.

20 ವರ್ಷಗಳ ಹಿಂದೆ ಕುಂಪಲ ಆಶ್ರಯಕಾಲನಿ ನಿವಾಸಿ ವಿಶ್ವನಾಥ್‌ ಎಂಬುವರನ್ನು ಪುಷ್ಪಾ ವಿವಾಹವಾಗಿದ್ದರು. ಆರಂಭದಲ್ಲಿ ಕಷ್ಟದ ಜೀವನವಾದರೂ ವಿಶ್ವನಾಥ್‌ ಅವರು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ವಾಚ್‌ಮ್ಯಾನ್​ ವೃತ್ತಿಗೆ ಸೇರಿಕೊಂಡ ನಂತರ ಸಂಸಾರದ ನೌಕೆ ಏರಿಳಿತಗಳಿಲ್ಲದೇ ಹಾಗೇ ಹೋಗುತಿತ್ತು. ಆದರೆ ಎರಡು ವರ್ಷದ ಹಿಂದೆ ವಿಶ್ವನಾಥ್‌ ಅವರಿಗೆ ಅನಾರೋಗ್ಯ ಉಂಟಾಗಿ, ತಾವೇ ಕಾರ್ಯ ನಿರ್ವಹಿಸುತ್ತಿದ್ದ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದಾಗ ಕಿಡ್ನಿಯಲ್ಲಿ ಗೆಡ್ಡೆ ಬೆಳೆದಿರುವುದು ಕುಟುಂಬಕ್ಕೆ ದಿಗ್ಭ್ರಮೆ ಉಂಟು ಮಾಡಿತ್ತು.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ 2 ಲಕ್ಷ ರೂ. ಬೇಕಿರುವುದರಿಂದ ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕೊಡಿಸಲು ಕುಟುಂಬ ಮುಂದಾಯಿತು. ಗೆಡ್ಡೆ ತೀವ್ರವಾಗಿ ಬೆಳೆದಿರುವುದರಿಂದ ಒಂದು ಕಿಡ್ನಿಯನ್ನು ವೈದ್ಯರ ಸೂಚನೆಯಂತೆ ತೆಗೆಯಲಾಯಿತು. ಚಿಕಿತ್ಸಾ ನಂತರವೂ ವಿಶ್ವನಾಥ್‌ ಹಾಸಿಗೆ ಹಿಡಿದಿದ್ದಾರೆ. ದುರಾದೃಷ್ಟವೆಂದ್ರೆ, ವೆನ್ಲಾಕ್‌ ಆಸ್ಪತ್ರೆಯಲ್ಲಿ ಪತಿ ಇರುವ ಸಂದರ್ಭ ಮೆಡಿಕಲ್‌ ನಿಂದ ಔಷಧ ತರಲೆಂದು ರಸ್ತೆ ದಾಟಲು ನಿಂತಿದ್ದಾಗ, ಅಪರಿಚಿತ ವಾಹನ ಡಿಕ್ಕಿ ಹೊಡೆದು ಕಾಲು ಮೂಳೆ ಮುರಿತಕ್ಕೊಳಗಾಯಿತು. ಇದೀಗ ರಾಡ್‌ ಹಾಕಿದ ನಂತರ ಪುಷ್ಪಾ ಅವರು ದುಡಿಯಲು ಅಸಮರ್ಥರಾಗಿದ್ದಾರೆ. ಈ ನಡುವೆ ಪುಷ್ಪಾ ಅವರ ಅತ್ತೆ 90ರ ಹರೆಯದ ಕಮಲ ಅವರು ನಡೆದುಕೊಂಡು, ತಮ್ಮ ಕೆಲಸಗಳನ್ನು ಮಾಡುವ ಸ್ಥಿತಿಯಲ್ಲಿಲ್ಲ. ಅವರ ಎಲ್ಲಾ ಕೆಲಸಗಳನ್ನು ಪುಷ್ಪಾ ಅವರೇ ಮಾಡಬೇಕಿದೆ. ಕಾಲು ತೀವ್ರ ನೋಯುತ್ತಿದ್ದರೂ ತನ್ನಿಂದ ಹೆಚ್ಚು ತೂಕದ ಪತಿಯನ್ನು ಒಂದು ಕಡೆ ಎತ್ತಿಕೊಂಡೆ ಮನೆಯೊಳಗೆ, ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಇನ್ನೊಂದೆಡೆ ಅತ್ತೆಯದ್ದೂ ಅದೇ ಕಥೆ.

ಪುಷ್ಪ ಮನೆ
ಪುಷ್ಪ ಮನೆ

ಪತಿ ವಿಶ್ವನಾಥ್‌ ಅವರಿಗೆ ಎರಡು ದಿನಕ್ಕೊಮ್ಮೆ 600 ರೂ. ಬೆಲೆಯ ಪ್ಯಾಡ್‌ ಬದಲಾಯಿಸಬೇಕಿದೆ. 15 ದಿನಕ್ಕೊಮ್ಮೆ ದೇಹದೊಳಗೆ ಹಾಕಿರುವ ಪೈಪ್‌ ಬದಲಾವಣೆಗೆ ವೆನ್ಲಾಕ್‌ ಆಸ್ಪತ್ರೆಗೆ ರಿಕ್ಷಾ ಮೂಲಕ ಹೋಗಿ ಬರುವುದಕ್ಕೆ 350 ರೂ. ಬಾಡಿಗೆ ನೀಡುತ್ತಿದ್ದಾರೆ. ಜೊತೆಗೆ ವೃದ್ಧೆ ಅತ್ತೆಯ ಔಷಧಿಗೆ, ಜೀವನ ನಿರ್ವಹಣೆಗೂ ಹಣ ಬೇಕಿದೆ. ಆದರೆ, ಅಪಘಾತದ ಮುಂಚೆ ಪುಷ್ಪಾ ಅವರು ಯೆನೆಪೋಯ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಅಪಘಾತದ ನಂತರ ಇದೀಗ ಕೆಲಸ ನಿರ್ವಹಿಸಲು ಅಸಾಧ್ಯವಾಗಿದೆ. ಪತಿಗೆ ಬರುವ ಅಂಗವಿಕಲರ ವೇತನ ಹಾಗೂ ಅತ್ತೆಯ ವೃದ್ಧಾಪ್ಯ ವೇತನದ ಜೊತೆಗೆ ಪುಷ್ಪಾ ಅವರು ಬೀಡಿ ಕಟ್ಟುತ್ತಾ ಜೀವನ ನಿರ್ವಹಿಸಲು ಪ್ರಯತ್ನಿಸುತ್ತಿದ್ದಾರೆ. ಆದರೂ, ಅದರಿಂದ ಬರುವ ಹಣ ಸಾಕಾಗದೆ ಅಕ್ಕಿಗೆ ಹಣವಿಲ್ಲದೆ ಊಟ, ಚಹಾ-ತಿಂಡಿ ಇಲ್ಲದೇ ಜೀವನ ಕಳೆದು ದಿನಗಳೂ ಇವೆ. ಇವೆಲ್ಲಾ ಕಷ್ಟಗಳನ್ನು ಕಂಡು ವಾರದ ಹಿಂದೆ ಪತಿಯ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ನೋವಿನಿಂದ ಹೇಳಿಕೊಂಡೆ ಎಂತಾ ಪುಷ್ಪಾ ಕಣ್ಣೀರು ಹಾಕಿದರು.

ವೆನ್ಲಾಕ್‌ ವೈದ್ಯರಿಂದ ಸಹಾಯ: ಕುಟುಂಬ ಕಂಗೆಟ್ಟು ವೆನ್ಲಾಕ್‌ ಆಸ್ಪತ್ರೆಯಲ್ಲಿ ಇರುವ ಸಂದರ್ಭ ಇವರ ದಯನೀಯ ಸ್ಥಿತಿಯನ್ನು ಮನಗಂಡು ವೆನ್ಲಾಕ್‌ ಆಸ್ಪತ್ರೆಯ ವೈದ್ಯರೊಬ್ಬರು ನಡೆದುಕೊಂಡು ಹೋಗಲು ಸಾಧ್ಯವಿಲ್ಲದ ವಿಶ್ವನಾಥ್‌ ಅವರಿಗೆ ವಿಕಲಚೇತನ ವೇತನ ದೊರಕಿಸಿಕೊಡಲು ಸಹಕರಿಸಿದರು. ಅಲ್ಲದೇ ಚಿಕಿತ್ಸೆಗೆ ಬೇಕಿರುವ ಹೊರಗಿನ ಸಾಮಗ್ರಿಗಳನ್ನು ಒದಗಿಸಿ ಹೆಸರು ಹೇಳದೆ ಮಾನವೀಯತೆ ಮೆರೆದಿದ್ದಾರೆ.

ವಿದ್ಯಾರ್ಥಿಗಳಿಂದ ಪುರಸಭೆಗೆ ಪತ್ರ : ಪುಷ್ಪಾ ಅವರ ಕುಟುಂಬದ ಸ್ಥಿತಿಯನ್ನು ಕಂಡ ಮೇಘನಾ ಅನ್ನುವ ಮಹಿಳೆ ತಮ್ಮಿಂದ ಆಗುವಷ್ಟು ಇಲಾಖೆಯಿಂದ ಸಿಗಬೇಕಾದ ಸವಲತ್ತುಗಳು ಸಿಗಲು ಪ್ರಯತ್ನಿಸಿದರು. ಪುಷ್ಪಾ ಅವರಿಗೆ ಸದಾ ಧೈರ್ಯವನ್ನು ತುಂಬುವ ಕೆಲಸವನ್ನು ಮಾಡಿಕೊಂಡೇ ಬಂದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮಂಗಳೂರಿನ ಡಾ. ದಯಾನಂದ ಪೈ ಸತೀಶ್‌ ಪೈ ಕಾಲೇಜಿನ ಎಂ ಎಸ್‌ ಡಬ್ಲ್ಯು ವಿಭಾಗದ ವಿದ್ಯಾರ್ಥಿಗಳನ್ನು ಸಮೀಕ್ಷೆಗೆಂದು ಇದೇ ಮನೆಗೆ ಕಳುಹಿಸಿದ್ದರು. ವಿದ್ಯಾರ್ಥಿಗಳು ಕುಟುಂಬದ ದಯನೀಯ ಸ್ಥಿತಿಯನ್ನು ಕಂಡು ತಾವು ಖುದ್ದಾಗಿ ಸೋಮೇಶ್ವರ ಪುರಸಭೆಗೆ ಪತ್ರ ಬರೆದು, ಒಂಟಿಯಾಗಿ ಕುಟುಂಬಕ್ಕಾಗಿ ಹೋರಾಡುತ್ತಿರುವ ಪುಷ್ಪಾ ಅವರಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಪತ್ರಕ್ಕೆ ಸ್ಪಂದಿಸಿದ ಸೋಮೇಶ್ವರ ಪುರಸಭೆ ಆಡಳಿತ: ಪತ್ರವನ್ನು ಗಮನಿಸಿದ ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ ಅವರು ತುರ್ತಾಗಿ ಮನೆಗೆ ಸಿಬ್ಬಂದಿ ಕಳುಹಿಸಿದ್ದಾರೆ. ಅಲ್ಲದೆ ಪುಷ್ಪಾ ಅವರ ಸ್ಥಿತಿಯ ವರದಿಯನ್ನು ಪಡೆದುಕೊಂಡು ಪುರಸಭೆ ವ್ಯಾಪ್ತಿಯಿಂದ ಆಗುವಂತಹ ಸಹಕಾರವನ್ನು ನೀಡುವ ಭರವಸೆಯನ್ನಿತ್ತಿದ್ದಾರೆ. ತಕ್ಷಣಕ್ಕೆ ಯಾವುದೇ ಯೋಜನೆಗಳು ಇಲ್ಲದಿರುವುದರಿಂದ ದಾನಿಗಳ ಮೂಲಕವಾದರೂ ಕಷ್ಟಕ್ಕೆ ಸ್ಪಂದಿಸುವ ಕುರಿತು ತಿಳಿಸಿದ್ದಾರೆ.

ಸಹಾಯ ಮಾಡಲು ಇಚ್ಛಿಸುವವರು ಈ ಕೆಳಕಂಡ ವಿಳಾಸಕ್ಕೆ ಹಣ ವರ್ಗಾವಣೆ ಮಾಡಬಹುದು:

Account Name: Pushpa

Account No: 3634101005539

IFSC Code : CNRB0003634

MICR Code : 575015050 Canara Bank, Gramachawadi Branch

Mercy Complex, Ground floor

Opp New Pajeer church Road

ಪುಷ್ಪಾ W/O ವಿಶ್ವನಾಥ್‌

ಆಶ್ರಯ ಕಾಲನಿ, ಸೋಮೇಶ್ವರ ಪುರಸಭೆ

ಕುಂಪಲ ,ಮಂಗಳೂರು - 575022 .

ಇದನ್ನೂ ಓದಿ: ಉಕ್ರೇನ್ ನಿರಾಶ್ರಿತರಿಗೆ ನೆರವು ನೀಡಲು ಪ್ರಿಯಾಂಕಾ ಚೋಪ್ರಾ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.