ETV Bharat / state

ಜಲೀಲ್ ಮೃತದೇಹದ ಅಂತಿಮ ದರ್ಶನಕ್ಕೆ ಜನಸ್ತೋಮ, ಸ್ಥಳಕ್ಕೆ ಡಿಸಿ ಬರಬೇಕೆಂದು ಪಟ್ಟು

author img

By

Published : Dec 25, 2022, 1:28 PM IST

Updated : Dec 25, 2022, 2:26 PM IST

ಸುರತ್ಕಲ್​ನಲ್ಲಿ ದುಷ್ಕರ್ಮಿಗಳಿಬ್ಬರು ಕೃಷ್ಣಾಪುರ ನಿವಾಸಿ ಜಲೀಲ್ ಎಂಬುವವರನ್ನು ಕಳೆದ ರಾತ್ರಿ ಹತ್ಯೆ ಮಾಡಿದ್ದರು. ಇಂದು ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಮನೆಗೆ ರವಾನಿಸಲಾಗಿದ್ದು ಅಂತಿಮ ದರ್ಶನ ನಡೆಯುತ್ತಿದೆ. ಇದೇ ವೇಳೆ, ಸ್ಥಳಕ್ಕೆ ಡಿಸಿ ಆಗಮಿಸಬೇಕೆಂದು ಸ್ಥಳೀಯರ ಪಟ್ಟು ಹಿಡಿದಿದ್ದಾರೆ.

huge crowd attended the Jalil house
ಅಂತಿಮ ದರ್ಶನಕ್ಕೆ ಭಾರೀ ಜನಸ್ತೋಮ

ಜಲೀಲ್ ಮೃತದೇಹದ ಅಂತಿಮ ದರ್ಶನಕ್ಕೆ ಜನಸ್ತೋಮ

ಮಂಗಳೂರು(ದಕ್ಷಿಣ ಕನ್ನಡ): ನಗರದ ಸುರತ್ಕಲ್ ಬಳಿಯ ಕೃಷ್ಣಾಪುರದಲ್ಲಿ ಹತ್ಯೆಯಾದ ಜಲೀಲ್ ಎಂಬವರ ಮೃತದೇಹದ ಅಂತಿಮ ದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಕೃಷ್ಣಾಪುರದ 4ನೇ ಬ್ಲಾಕ್​ನಲ್ಲಿರುವ ದಿನಸಿ ಅಂಗಡಿಯಲ್ಲೇ ಜಲೀಲ್ ಕಳೆದ ರಾತ್ರಿ ಕೊಲೆಯಾಗಿದ್ದರು.

ಚಾಕು ಇರಿತಕ್ಕೊಳಗಾದ ಜಲೀಲ್ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟರು. ಪೋಸ್ಟ್ ಮಾರ್ಟಂ ವ್ಯವಸ್ಥೆಗಾಗಿ ಮೃತದೇಹವನ್ನು ಎ.ಜೆ.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು. ಇಂದು ಬೆಳಿಗ್ಗೆ ಮೃತದೇಹವನ್ನು ಮನೆಗೆ ರವಾನಿಸಲಾಗಿತ್ತು. ಮನೆ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಅಂತಿಮ ದರ್ಶನದ ಬಳಿಕ ಪಂಜಿಮೊಗರಿನ ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಘಟನೆ ನಡೆದ ಕಾಟಿಪಳ್ಳದಲ್ಲಿ ಬಿಗುವಿನ ವಾತಾವರಣವಿದೆ. ಮುಂಜಾಗ್ರತಾ ಕ್ರಮವಾಗಿ ಸುರತ್ಕಲ್ ವ್ಯಾಪ್ತಿಯಲ್ಲಿ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಮುನ್ನೂರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ಕೆಎಸ್ ಆರ್ ಪಿ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರದ ಎಲ್ಲಾ ವ್ಯಾಪಾರ, ವ್ಯವಹಾರ ಸ್ಥಗಿತಗೊಂಡಿದ್ದು, ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ. ಬಸ್ ಸಂಚಾರವೂ ಸ್ಥಗಿತವಾಗಿದೆ.

ಡಿಸಿ ಆಗಮಿಸುವಂತೆ ಪ್ರತಿಭಟನೆ: ಮೃತದೇಹವನ್ನು‌ ಮೆರವಣಿಗೆ ಕೊಂಡೊಯ್ಯುವಾಗ ಸ್ಥಳಕ್ಕೆ ಡಿಸಿ ಆಗಮಿಸಬೇಕೆಂದು ಸ್ಥಳೀಯರು ಪಟ್ಟು ಹಿಡಿದರು. ಜಲೀಲ್ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆಂದು ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್ ತಡೆದ ಆಕ್ರೋಶಿತ ಗುಂಪು ಧರಣಿ ನಡೆಸಿತು. ಈವರೆಗೆ ಕೊಲೆ ಆರೋಪಿಗಳ ಬಂಧನವಾಗಿಲ್ಲ. ತಕ್ಷಣ ಆರೋಪಿಗಳನ್ನು ಬಂಧಿಸಿ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಜಿಲ್ಲಾಧಿಕಾರಿ ಬರುವವರೆಗೆ ಅಂತ್ಯಸಂಸ್ಕಾರ ನಡೆಸಲ್ಲ ಎಂದು ಧರಣಿನಿರತರು ಪಟ್ಟು ಹಿಡಿದರು.

ಪರಿಣಾಮ, ಸ್ಥಳದಲ್ಲಿ ಕೆಲಹೊತ್ತು ಉದ್ವಿಗ್ನ ಪರಿಸ್ಥಿತಿ ಕಂಡುಬಂತು. ತಕ್ಷಣ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್ ಮಧ್ಯಪ್ರವೇಶಿಸಿ ಆಕ್ರೋಶಿತರನ್ನು ಸಮಾಧಾನಪಡಿಸಿದರು. ಬಳಿಕ ಆಕ್ರೋಶಿತ ಗುಂಪು ಧರಣಿಯಿಂದ ಹಿಂದೆ ಸರಿಯಿತು.

ಇದನ್ನೂ ಓದಿ: ಸುರತ್ಕಲ್​ನಲ್ಲಿ ಚೂರಿ ಇರಿತಕ್ಕೊಳಗಾದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು

ನಿಷೇಧಾಜ್ಞೆ ಜಾರಿ: ಜಲೀಲ್ ಹತ್ಯೆಯ ಮುನ್ನೆಚ್ಚರಿಕೆ ಕ್ರಮವಾಗಿ ಸುರತ್ಕಲ್ ಸುತ್ತಮುತ್ತಲಿನ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ. ಮಂಗಳೂರು ನಗರ ಪೊಲೀಸ್ ‌ಕಮೀಷನರೇಟ್ ವ್ಯಾಪ್ತಿಯ ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಮಂಗಳೂರು ‌ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಆದೇಶಿಸಿದ್ದಾರೆ.

27ರ ವರೆಗೆ ನಿಷೇಧಾಜ್ಞೆ: ಇಂದು ಬೆಳಿಗ್ಗೆ 6 ಗಂಟೆಯಿಂದ ಡಿಸೆಂಬರ್ 27 ಮುಂಜಾನೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಸರ್ಕಾರದಿಂದ ಮತ್ತು ಸರ್ಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ ಸಮಾರಂಭಗಳಿಗಿದು ಅನ್ವಯಿಸುವುದಿಲ್ಲ. ಕ್ರಿಸ್ಮಸ್ ಆಚರಣೆ, ಧಾರ್ಮಿಕ ಕಾರ್ಯಕ್ರಮ ಮತ್ತು ಅಗತ್ಯ ತುರ್ತು ಸೇವೆಗಳಿಗೂ ನಿಯಮ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.

ಮದ್ಯದಂಗಡಿಗಳು ಬಂದ್: ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ‌ ಮಾರಾಟಕ್ಕೆ ನಿಷೇಧವಿದೆ.

ಕೈಗಾರಿಕೆಗಳಲ್ಲಿ ಪಾಳಿ ಬದಲಾವಣೆಗೆ ಸೂಚನೆ: ಸುರತ್ಕಲ್, ಬಜಪೆ, ಕಾವೂರು, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕಾ ಸಂಸ್ಥೆಗಳು ಕೆಲಸದ ಪಾಳಿಯನ್ನು ಇಂದು ಮತ್ತು ನಾಳೆ ಸಂಜೆ 6 ಗಂಟೆವರೆಗೆ ಬದಲಿಸುವಂತೆ ಸೂಚಿಸಲಾಗಿದೆ. ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಸಿಬ್ಬಂದಿ ಹೊರಗಡೆ ಓಡಾಡುವಂತಿಲ್ಲ.

ನಿನ್ನೆ ರಾತ್ರಿ ನಡೆದಿದ್ದೇನು?: ಶನಿವಾರ ರಾತ್ರಿ ಸುರತ್ಕಲ್​ನಲ್ಲಿ ದುಷ್ಕರ್ಮಿಗಳಿಬ್ಬರು ಕೃಷ್ಣಾಪುರ ನಿವಾಸಿ ಜಲೀಲ್ ಎಂಬುವವರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು. ನೈತಂಗಡಿಯಲ್ಲಿ ಜಲೀಲ್ ದಿನಸಿ ಅಂಗಡಿ ಹೊಂದಿದ್ದಾರೆ. ಅಂಗಡಿಯಲ್ಲಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಆರೋಪಿಗಳು ಎದೆಯ ಭಾಗಕ್ಕೆ ಚೂರಿಯಿಂದ ಬಲವಾಗಿ ಇರಿದು ಪರಾರಿಯಾಗಿದ್ದರು.

ಇದನ್ನೂ ಓದಿ:

ಸುರತ್ಕಲ್ ಹತ್ಯೆ ಪ್ರಕರಣ: ನಾಲ್ಕು‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ಸುರತ್ಕಕಲ್​ನಲ್ಲಿ ದುಷ್ಕರ್ಮಿಗಳಿಂದ ಚಾಕು ಇರಿತ.. ವ್ಯಕ್ತಿ ಸ್ಥಿತಿ ಗಂಭೀರ

Last Updated : Dec 25, 2022, 2:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.