ETV Bharat / state

ವರುಣಾದಲ್ಲಿ ಸಿದ್ದರಾಮಯ್ಯಗೆ ಸೋಲು, ಕನಕಪುರದಲ್ಲಿ ಡಿಕೆಶಿಗೆ ಟೆನ್ಷನ್: ನಳಿನ್ ಕುಮಾರ್ ಕಟೀಲ್

author img

By

Published : May 8, 2023, 2:24 PM IST

ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕರು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ.

Nalin Kumar Kateel
ನಳಿನ್ ಕುಮಾರ್ ಕಟೀಲ್

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಮಂಗಳೂರು(ದಕ್ಷಿಣ ಕನ್ನಡ): ವರುಣಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲು ಅನುಭವಿಸಲಿದ್ದಾರೆ. ಡಿ ಕೆ ಶಿವಕುಮಾರ್ ‌ಕ್ಷೇತ್ರ ಗೆಲ್ಲುವ ಟೆನ್ಷನ್​ನಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ. ನಗರದ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಹಿಂದೆ ಪರಮೇಶ್ವರ್, ಖರ್ಗೆ ಅವರನ್ನು ಸೋಲಿಸಿದವರು ಇದೀಗ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್​ನ್ನು ಸೋಲಿಸಲು ತಯಾರಾಗಿದ್ದಾರೆ ಎಂದರು.

ಚುನಾವಣಾ ಕಾವು ರಾಜ್ಯದಲ್ಲಿ ಏರುತ್ತಿದೆ. ಕಳೆದ ಒಂದೂವರೆ ತಿಂಗಳಲ್ಲಿ 224 ಕ್ಷೇತ್ರ ದರ್ಶನ ಮಾಡಿದ್ದೇನೆ. ಪಕ್ಷ ಒಂದೂವರೆ ವರ್ಷದಿಂದ ತಯಾರಿ ಮಾಡಲಾಗಿತ್ತು. ಪೇಜ್ ಪ್ರಮುಖರ ತಯಾರಿ, ಯಾತ್ರೆಯ ಮೂಲಕ ಚುನಾವಣಾ ಕಾರ್ಯಮಾಡಲಾಗಿತ್ತು. ಚುನಾವಣೆ ಘೋಷಣೆ ಮುಂಚೆಯೇ ಪ್ರಧಾನ ಮಂತ್ರಿಗಳು 16 ಬಾರಿ ಕರ್ನಾಟಕಕ್ಕೆ ಭೇಟಿ ನೀಡಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಚುನಾವಣಾ ಘೋಷಣೆ ಬಳಿಕ 20 ಸಲ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಈ ಬಾರಿ ಬಹುಮತದ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯ ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜನರ ಅಭೂತಪೂರ್ವ ಬೆಂಬಲ ಪಕ್ಷಕ್ಕೆ ಸಿಕ್ಕಿದೆ. ಡಬಲ್ ಇಂಜಿನ್ ಸಾಧನೆ ಜನಸಾಮಾನ್ಯರಿಗೆ ತಲುಪಿದೆ. ಸಮಾಜಕಲ್ಯಾಣ ಯೋಜನೆ ಮನೆ ಮನೆಗೆ ‌ತಲುಪಿದೆ. ಮೂಲ ಸೌಕರ್ಯ ಮನೆಮನೆ ತಲುಪಿದೆ. ಮೈಸೂರು ಭಾಗದಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿದೆ. ನಮ್ಮ ನಿರೀಕ್ಷೆಗೂ ಮೀರಿ ಸ್ಥಾನ ಪಡೆಯುತ್ತೇವೆ. ರಾಜ್ಯದಲ್ಲಿ ಬಿಜೆಪಿಯ ಪೂರ್ಣ ಬಹುಮತ ಸರಕಾರ ಬರಲಿದೆ ಎಂದರು.

ಪ್ರಧಾನಮಂತ್ರಿ ಮಾಡಿದ ರೋಡ್ ಶೋಗೆ ಜನರು ಬೆಂಬಲ ದೊರಕಿದ್ದು, ರಾಜ್ಯದಲ್ಲಿ ಬಿಜೆಪಿ ಪರ ಅಲೆ, ಕಾಂಗ್ರೆಸ್ ವಿರೋಧಿ ಅಲೆ ಇದೆ. ಜನ ಬಿಜೆಪಿ ಮೇಲೆ ನಂಬಿಕೆ ಇಟ್ಟಿದ್ದಾರೆ. ಎಲ್ಲ ಸಮುದಾಯಗಳು ನಮ್ಮ ಪಾರ್ಟಿ ಮೇಲೆ ನಂಬಿಕೆ ಇಟ್ಟಿದ್ದಾರೆ. ಕಳೆದ 15 ದಿನದಲ್ಲಿ ಪ್ರಚಾರಕ್ಕೆ ವೇಗ ಸಿಕ್ಕಿದೆ. ಮೋದಿ, ನಡ್ಡಾ, ಅಮಿತ್ ಶಾ ಬಂದಾಗ ಜನಸಾಗರವೆ ಹರಿದುಬಂದಿದೆ. ಪ್ರಧಾನಮಂತ್ರಿ ರೋಡ್ ಶೋವಿನಿಂದ 15 ಸ್ಥಾನ ಹೆಚ್ಚಳವಾಗಲಿದೆ ಎಂದರು.

ಭಜರಂಗದಳ ನಿಷೇಧ ಮಾಡ್ತೀವಿ ಅನ್ನೋ ವಿರೋಧಿ ಹೇಳಿಕೆಗಳು ಅವರಿಗೆ ಮುಳುವಾಗಿದೆ. ದ.ಕ. ಜಿಲ್ಲೆಯಲ್ಲಿ ಎಂಟಕ್ಕೆ ಎಂಟು ಕ್ಷೇತ್ರವನ್ನೂ ಗೆಲ್ಲಲಿದೆ ಎಂಬ ಗೆಲುವಿನ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಬಂದರೆ ಕೇಂದ್ರದ ಯೋಜನೆ ಬಂದ್ ಆಗುತ್ತದೆ ಎಂಬ ನಡ್ಡಾ ಹೇಳಿಕೆಯನ್ನು ಸಮರ್ಥಿಸಿದ ಅವರು, ಸಿದ್ದರಾಮಯ್ಯ ಸರ್ಕಾರ ಕೇಂದ್ರದ ಮೂರು ಯೋಜನೆಗಳನ್ನು ನಿಲ್ಲಿಸಿತ್ತು. ಆಯುಷ್ಮಾನ್, ಜನೌಷಧ ಕೇಂದ್ರಗಳು ಪೂರ್ಣವಾಗಿ ಜಾರಿಯಾಗಲಿಲ್ಲ. ಹೀಗಾಗಿ ರಾಷ್ಟ್ರಾಧ್ಯಕ್ಷ ನಡ್ಡಾ ಅವರು ಹೇಳಿದ್ದು ಸರಿಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯೋಜನೆಗಳನ್ನು ‌ಜಾರಿ‌ ಮಾಡಲ್ಲ ಎಂದು ಕಟೀಲು ಅವರು ಆರೋಪಿಸಿದರು.

ಕಾಂಗ್ರೆಸ್​ ನವರು ಅಧಿಕಾರಕ್ಕೆ ಬಂದರೆ, ಏನೆಲ್ಲ ಮಾಡ್ತಾರೆ ಎಂಬ ವಿಚಾರಗಳ ಬಗ್ಗೆ ಹೇಳಿದ್ದಾರೆ. ಹತ್ತು ದಿನಗಳ ಹಿಂದೆ ರಾಜ್ಯದಲ್ಲಿ ಅತಂತ್ರ ಸರ್ಕಾರದ ಸಮೀಕ್ಷೆ ಇತ್ತು. ಆದರೆ ಈಗಿನ ಎಲ್ಲ ಸಮೀಕ್ಷೆಗಳಲ್ಲಿ ಬಿಜೆಪಿ ಮುಂದಿದೆ. ಪುತ್ತೂರಿನಲ್ಲಿ ಬಿಜೆಪಿ ಗೆಲ್ಲಲಿದೆ, ರಾಜ್ಯದಲ್ಲೂ ಗೆಲ್ಲಲಿದೆ. ನೂರಕ್ಕೆ ನೂರರಷ್ಟು ಬಹುಮತದ ಬಿಜೆಪಿ ಸರ್ಕಾರ ‌ಬರಲಿದೆ ಎಂದರು.

ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ, ಅಪೇಕ್ಷಿತನೂ ಅಲ್ಲ, ರೇಸ್​ನಲ್ಲೂ ಇಲ್ಲ. ರಾಜ್ಯಾಧ್ಯಕ್ಷನ ಜವಾಬ್ದಾರಿಯನ್ನು ಒಳ್ಳೆಯ ರೀತಿಯಲ್ಲಿ ಮುಗಿಸ್ತೇನೆ ಅಷ್ಟೇ. ನಾನು ರಾಜ್ಯ ರಾಜಕಾರಣಕ್ಕೆ ಬರೋ ಯಾವುದೇ ಇಚ್ಚೇಯಿಲ್ಲ. ನಾನು ಸಂಘದ ಸ್ವಯಂ ಸೇವಕ, ಪಕ್ಷದ ಹಿರಿಯರು ಕೊಟ್ಟ ಜವಾಬ್ದಾರಿ ಮಾಡುತ್ತೇನೆ. ತತ್ವ ಸಿದ್ದಾಂತದ ಅಡಿಯಲ್ಲಿ ಕೆಲಸ ಮಾಡುತ್ತೇನೆ. ಜವಾಬ್ದಾರಿ ನಿಭಾಯಿಸ್ತೇನೆ. ಪಕ್ಷ ಪೂರ್ಣಾವಧಿ ಪಕ್ಷದಲ್ಲೇ ಇರಲು ಸೂಚಿಸಿದರೆ ಇರುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಹೇಳಿದರು.

ಇದನ್ನೂ ಓದಿ: ಮೇ 15ರಂದು ಯಾರ ನೇತೃತ್ವದ ಕ್ಯಾಬಿನೆಟ್ ಅನ್ನೋದನ್ನು ಖರ್ಗೆ ಘೋಷಣೆ ಮಾಡ್ತಾರೆ: ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.