ETV Bharat / state

ನಾನು ಒಂದು ಕೆಜಿ ರಾಗಿಯನ್ನೂ ಕದ್ದಿಲ್ಲ.. ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ ಶಾಸಕ ಶಿವಲಿಂಗೇಗೌಡ

author img

By

Published : Aug 29, 2022, 10:39 PM IST

"ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು. ಹಾಗಾಗಿ ಮಂಜುನಾಥ ಸ್ವಾಮಿಯ ಮುಂದೆ ಪ್ರಮಾಣ ಮಾಡಿದ್ದೇನೆ" ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.

Mla shivalingegowda visits dharmasthala
ಶಾಸಕ ಶಿವಲಿಂಗೇಗೌಡ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ

ಬೆಳ್ತಂಗಡಿ: ಬಿಜೆಪಿ ಮುಖಂಡರು ನನ್ನ ಮೇಲೆ ಮಾಡಿರುವ ರಾಗಿ ಕಳ್ಳತನ ಆರೋಪದ ಬಗ್ಗೆ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ, ಆಣೆ ಪ್ರಮಾಣ ಮಾಡಿದ್ದೇನೆ. ಆರೋಪ ಮಾಡಿದವರು ಶ್ರೀಸ್ವಾಮಿಯ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಅರಸೀಕೆರೆಯ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿದರು.

ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಶಾಸಕರು ಮಂಜುನಾಥ ಸ್ವಾಮಿ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಬಿಜೆಪಿ ಮುಖಂಡರು ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು. ಹಾಗಾಗಿ ಮಂಜುನಾಥ ಸ್ವಾಮಿಯ ಮುಂದೆ ಪ್ರಮಾಣ ಮಾಡಿದ್ದೇನೆ. ಆರೋಪ ಮಾಡಿದವರೂ ಸ್ವಾಮಿಯವರ ಮುಂದೆ ಬಂದು ಪ್ರಮಾಣ ಮಾಡಲಿ ಅಥವಾ ದಾಖಲೆಗಳನ್ನು ಬಿಡುಗಡೆ ಮಾಡಲಿ. ದಾಖಲೆಗಳನ್ನು ನೀಡಿದರೆ ಕಾನೂನು ರೀತಿಯ ಹೋರಾಟಕ್ಕೂ ನಾನು ಸಿದ್ಧ ಎಂದರು.

ಧರ್ಮಸ್ಥಳದಲ್ಲಿ ಶಾಸಕ ಶಿವಲಿಂಗೇಗೌಡ

ಬಿಜೆಪಿ ಮುಖಂಡ ರವಿಕುಮಾರ್ ಅವರು ಸಾರ್ವಜನಿಕವಾಗಿ ನನ್ನ ಮೇಲೆ ರಾಗಿ ಕಳ್ಳ ಎಂದು ಆರೋಪ ಮಾಡಿದ್ದಾರೆ. ಆಗಲೇ ಅವರಿಗೆ ದಾಖಲೆಗಳನ್ನು ನೀಡಿ ಅಥವಾ ಧರ್ಮಸ್ಥಳಕ್ಕೆ ಪ್ರಮಾಣಕ್ಕೆ ಬನ್ನಿ ಎಂದು ಹೇಳಿದ್ದೆ. ಆದರೆ ಆರೋಪ ಮಾಡಿದವರು ಯಾವುದಕ್ಕೂ ಬರಲಿಲ್ಲ. ಆದ್ದರಿಂದ ನಾನೇ ಕ್ಷೇತ್ರಕ್ಕೆ ಬಂದು, ನಾನು ಒಂದು ಕೆಜಿ ರಾಗಿಯನ್ನೂ ಕದ್ದಿಲ್ಲ. ನಾನು ರಾಗಿ ಕಳ್ಳ ಅಲ್ಲ ಎಂದು ಪ್ರಮಾಣ ಮಾಡಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: 'ರಾಗಿ ಕಳ್ಳ' ಆರೋಪ ಸಾಬೀತು ಪಡಿಸಲಿ: ಬಿಜೆಪಿ ನಾಯಕರಿಗೆ ಶಾಸಕ ಶಿವಲಿಂಗೇಗೌಡ ಸವಾಲು

ಜನಪ್ರತಿನಿಧಿಗಳ ಬಗ್ಗೆ ಇಷ್ಷೊಂದು ಹಗುರವಾಗಿ ಮಾತನಾಡುವುದು ಸರಿಯಲ್ಲ. ಇಂತಹ ಮಾತುಗಳಿಗೆ ಕಡಿವಾಣ ಹಾಕಬೇಕಾದ ಅಗತ್ಯವಿದೆ. ರಾಜಕೀಯ ಮಾಡುವವರು ಗೌರವಯುತವಾಗಿ ರಾಜಕೀಯ ಮಾಡಬೇಕು. ಕೊಳಕು ರಾಜಕೀಯಕ್ಕೆ ಇಳಿಯಬಾರದು. ಅದಕ್ಕಾಗಿ ಇಲ್ಲಿಗೆ ಬಂದು ಪ್ರಮಾಣ ಮಾಡಿದ್ದೇನೆ. ನನ್ನ ಕ್ಷೇತ್ರದಲ್ಲಿ ಅಶಾಂತಿ ನಿರ್ಮಾಣವಾಗಿದ್ದು, ಈ ಆಶಾಂತಿ ಶಮನವಾಗಿ ನೆಮ್ಮದಿ ನೆಲೆಸಲಿ ಎಂದು ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.

ಶಿವಲಿಂಗೇಗೌಡರು ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಹೆಗ್ಗಡೆಯವರಿಗೆ ಅಭಿನಂದನೆ ಸಲ್ಲಿಸಿದರು. ಶಾಸಕರೊಂದಿಗೆ ಅರಸೀಕೆರೆಯಿಂದ ಅವರ ನೂರಾರು ಅಭಿಮಾನಿಗಳು ಆಗಮಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.