ETV Bharat / state

ನಾನು ಹಿಂದು, ಹಿಂದುತ್ವ ನನಗೆ ಬೇಕಿಲ್ಲ ಎನ್ನುವವರನ್ನು ಹಿಂದೂ ಎಂದು ಒಪ್ಪಲು ಸಾಧ್ಯವಿಲ್ಲ: ಸಂಸದ ಅನಂತಕುಮಾರ್ ಹೆಗಡೆ

author img

By

Published : Jan 12, 2023, 10:10 PM IST

ನಾನು ಹಿಂದು, ಹಿಂದುತ್ವ ನನಗೆ ಬೇಕಿಲ್ಲ - ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ಅನಂತಕುಮಾರ್ ಹೆಗಡೆ - ಪುತ್ತೂರಿನಲ್ಲಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆಗಡೆ

minister-ananthkumar-hegde-slams-siddaramaih
ನಾನು ಹಿಂದು, ಹಿಂದುತ್ವ ನನಗೆ ಬೇಕಿಲ್ಲ ಎನ್ನುವವರನ್ನು ಹಿಂದೂ ಎಂದು ಒಪ್ಪಲು ಸಾಧ್ಯವಿಲ್ಲ: ಸಂಸದ ಅನಂತಕುಮಾರ್ ಹೆಗಡೆ

ನಾನು ಹಿಂದು, ಹಿಂದುತ್ವ ನನಗೆ ಬೇಕಿಲ್ಲ ಎನ್ನುವವರನ್ನು ಹಿಂದೂ ಎಂದು ಒಪ್ಪಲು ಸಾಧ್ಯವಿಲ್ಲ: ಸಂಸದ ಅನಂತಕುಮಾರ್ ಹೆಗಡೆ

ಪುತ್ತೂರು(ದಕ್ಷಿಣ ಕನ್ನಡ) : ದೇಶದಲ್ಲಿ ಇಂದು ಕೆಲವರು ಹಿಂದುತ್ವದ ಬಗ್ಗೆ ಚರ್ಚೆ ನಡೆಸುತ್ತಾರೆ. ನಾನು ಹಿಂದೂ, ಆದರೆ ನನಗೆ ಹಿಂದುತ್ವ ಬೇಕಿಲ್ಲ ಎನ್ನುವ ಕಮಂಗಿಗಳಿಗೆ ಹಿಂದುತ್ವದ ಭವ್ಯ ಬದುಕಿನ ಮೇಲೆ ನಂಬಿಕೆಯಿಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಹಿಂದುತ್ವ - ರಾಷ್ಟ್ರೀಯತೆ ಎಂಬ ಸಂಕಲ್ಪದೊಂದಿಗೆ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ಧರಾಮಯ್ಯರ ವಿರುದ್ಧ ಪರೋಕ್ಷವಾಗಿ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

’’ಹಿಂದುತ್ವದ ಬಗ್ಗೆ ಮಾತನಾಡುವ ಆ ಮನುಷ್ಯನಿಗೆ ಅವನ ರಕ್ತದ ಬಗ್ಗೆಯೇ ಗೊತ್ತಿಲ್ಲ. ಅಂತವ ಹಿಂದುತ್ವವೇ ಬೇಡ ಎನ್ನುವ ಮಾತನಾಡುತ್ತಾನೆ. ನಿನಗೆ ಬೇಕೋ, ಬೇಡವೋ ಎನ್ನುವುದನ್ನು ಯಾರು ಕೇಳಿದ್ದಾರೆ. ನಿನಗೆ ಹಿಂದುತ್ವ ಇಲ್ಲ ಅನ್ನೋದನ್ನು ನಾವೆಲ್ಲಾ ಪರಿಗಣಿಸಿ ಬಿಟ್ಟಾಗಿದೆ’’ ಎಂದರು.

minister-ananthkumar-hegde-slams-siddaramaih
ಪದವಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ‘ವಿಕಸನ’ ಪತ್ರಿಕೆ ಬಿಡುಗಡೆ

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ : ’’ಇಂಥವರಿಂದ ನಮಗೆ ಹಿಂದುತ್ವದ ಪಾಠ ಬೇಕಾಗಿಲ್ಲ. ಜಾತಿಯ ಗೂಡನ್ನು ಬಿಟ್ಟು ಹೊರಗೆ ಬಾರದವರು ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಸರಿಯಾಗಿ ಎರಡು ಪುಸ್ತಕವಿಟ್ಟರೆ ಅದನ್ನು ಓದುವ ಯೋಗ್ಯತೆ ಇಲ್ಲದವರು ಹಿಂದುತ್ವದ ಮಾತನಾಡುತ್ತಾರೆ ಎಂದು ಟೀಕಿಸಿದರು. ಇನ್ನು ದೇವಸ್ಥಾನಕ್ಕೆ ಹೇಗೆ ಹೋಗಬೇಕು ಎನ್ನುವ ಪರಿಜ್ಞಾನವಿಲ್ಲದವರು ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಯಾರಿಗೆ ಹಿಂದುತ್ವದ ಭವ್ಯ ಬದುಕಿನ ಮೇಲೆ ನಂಬಿಕೆಯಿಲ್ಲವೋ ಅಂತಹವರು ಹಿಂದೂ ಆಗಿರಲು ಸಾಧ್ಯವಿಲ್ಲ. ವಿವೇಕಾನಂದರು ಹಿಂದುತ್ವದ ಇದೇ ಭವ್ಯ ಬದುಕಿನಲ್ಲಿ ನಡೆದವರು’’ ಎಂದು ಅಭಿಪ್ರಾಯಪಟ್ಟರು.

ಹಿಂದುತ್ವ ಭಾಷಣದ ಸಲಕರಣೆಯಲ್ಲ, ಬದುಕಿನ ಅಂತಃಸತ್ವ: ಜಗತ್ತಿನ ಶ್ರೇಷ್ಠ ವಿಚಾರಗಳನ್ನು ಸ್ವಾಗತಿಸುವ ಸಂಪ್ರದಾಯ ಹಿಂದು ಧರ್ಮದ್ದು, ಇಲ್ಲಿ ನಾವು ಸತ್ಯದ ಇತಿಹಾಸಕ್ಕೆ ಬೆಲೆ ಕೊಡುತ್ತೇವೆ. ಅದಕ್ಕಾಗಿ ಬದುಕಿನಲ್ಲಿ ಉದಾತ್ತ ಚಿಂತನೆಗಳನ್ನು ಪಾಲಿಸಿಕೊಂಡು ದೇಶ ಧರ್ಮಕ್ಕಾಗಿ ಜೀವನವನ್ನು ಮುಡಿಪಾಗಿಟ್ಟ ಮಹಾಪುರುಷರ ಹುಟ್ಟನ್ನು ಸ್ಮೃತಿಯಲ್ಲಿ ಇಟ್ಟುಕೊಂಡು ಆ ದಿನವನ್ನು ವಿಶೇಷವಾಗಿ ಆಚರಿಸುತ್ತೇವೆ ಎಂದರು.

ಹಿಂದುತ್ವವನ್ನು ನಮ್ಮ ಬದುಕಲ್ಲಿ ಅಳವಡಿಸಿಕೊಳ್ಳಬೇಕು. ಶರೀರ ಬುದ್ಧಿ ಮತ್ತು ಆತ್ಮದ ಜೀವಂತಿಕೆ ಇರುವುದು ನಮ್ಮ ಸಂಪ್ರದಾಯದ ಪಾಲನೆಯಲ್ಲಿ. ನಾವು ಯೋಗ್ಯತೆಯಲ್ಲಿ ಹಿಂದುಗಳಾಗಬೇಕು. ನಮ್ಮ ಸಾಂಪ್ರದಾಯಿಕ ಪರಂಪರೆಯ ಬಗ್ಗೆ ಸುಂದರ ಪರಿಕಲ್ಪನೆ ಇರಬೇಕು. ಉದಾತ್ತ ಚಿಂತನೆಗಳ ಜೊತೆ ಬದುಕಬೇಕು. ಬದುಕಿನ ಓಘ ಮತ್ತು ಶೈಲಿ ಯೋಗ್ಯವಾಗಿದ್ದಾಗ ಕನಸು ಕಾಣಲು ಅರ್ಹರಾಗಿರುತ್ತೇವೆ ಸಂಸದ ಅನಂತ ಕುಮಾರ್ ಹೆಗಡೆ ಹೇಳಿದರು.

ವಿವೇಕಾನಂದರ ಬದುಕು ಯುವ ಸಮುದಾಯಕ್ಕೆ ದಾರಿ ದೀಪ : ವಿವೇಕಾನಂದರು ಭವ್ಯತೆಯನ್ನು ಬದುಕಿನಲ್ಲಿ ನಿರ್ಮಾಣ ಮಾಡಿಕೊಂಡವರು. ಓಜಸ್ವಿಯಾದಂತಹ ಶಬ್ದಗಳಿಗೆ ಅನುಸಾರವಾಗಿ ಬದುಕಿದವರು. ಆದ್ದರಿಂದಲೇ ಜಗತ್ತು ಅವರನ್ನು ಸ್ವೀಕರಿಸಿತು. ಅವರ ವೈಚಾರಿಕತೆ, ಬುದ್ಧಿಮತ್ತೆಯನ್ನು ಜಗತ್ತು ಪಾಲನೆ ಮಾಡಲು ತೊಡಗಿತು. ಇಂದು ವಿವೇಕಾನಂದರ ಬದುಕು ಯುವ ಸಮುದಾಯಕ್ಕೆ ದಾರಿ ದೀಪ.

ಭಾರತೀಯರಾದ ನಾವು ಜಗತ್ತಿನ ನಿರೀಕ್ಷಣೆಗೆ ತಕ್ಕಂತೆ ತ್ರಿವಿಕ್ರಮನಂತೆ ಬೆಳೆದು ನಿಲ್ಲಬೇಕು. ಪೂರಕವಾದ ಸುಶಿಕ್ಷಿತ ಸಮಾಜದ ನಿರ್ಮಾಣ ಮಾಡುವ ಅದ್ಭುತ ಹೊಣೆಗಾರಿಕೆ ನಮ್ಮೆಲ್ಲರದ್ದು, ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಶ್ರಮಿಸಬೇಕು. ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸ್ವಉದ್ಯೋಗಿಗಳಾಗುವಂತೆ ಮತ್ತು ಶಿಷ್ಯ ವೃಂದವನ್ನು ಆಕಾಶದೆತ್ತರಕ್ಕೆ ಬೆಳೆದು ನಿಲ್ಲುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.

ನಮ್ಮಲ್ಲಿ ಅನೇಕ ಮಹಾಪುರುಷರ ಜಯಂತಿಯನ್ನು ಆಚರಿಸಲಾಗುತ್ತಿದೆ. ಸಾವಿರಾರು ವರ್ಷಗಳ ಹಿಂದೆ ಬಾಳಿ ಬದುಕಿದ ಸಾಧಕರನ್ನು ನಾವು ಇಂದಿಗೂ ನೆನಪಿಸಿಕೊಳ್ಳುತ್ತೇವೆ. ತಮ್ಮ ಬದುಕನ್ನು ದೇಶಕ್ಕೆ ಸಮರ್ಪಿಸಿದವರನ್ನು ಮಾತ್ರ ನಾವು ಸದಾ ಸ್ಮರಿಸುತ್ತೇವೆ. ನಾವು ಬದುಕಿರುವ ರೀತಿ, ಶೈಲಿಯನ್ನು ನೋಡಿ ನಮ್ಮನ್ನು ಸ್ಪೂರ್ತಿಯಾಗಿ ಸ್ವೀಕರಿಸುವಂತಹ ವ್ಯಕ್ತಿತ್ವ ನಮ್ಮದಾದರೆ ಕಾಲದ ತಡೆಯಿಲ್ಲದೇ ಅನಂತ ವ್ಯಕ್ತಿತ್ವಗಳಾಗಿ ರೂಪುಗೊಳ್ಳಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ವಿವೇಕಾನಂದ ಸ್ವಾಯತ್ತ ಕಾಲೇಜಿನ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ‘ವಿಕಸನ’ ಪತ್ರಿಕೆ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ಪ್ರಾಯೋಗಿಕ ಪಾಕ್ಷಿಕ ‘ವಿನೂತನ’ ವಿವೇಕಾನಂದ ಜಯಂತಿ ವಿಶೇಷ ಸಂಚಿಕೆಗಳನ್ನು ಅನಾವರಣಗೊಳಿಸಲಾಯಿತು. ವಿವೇಕಾನಂದರ ವೇಷ ಧರಿಸಿದ ನಿವೇದಿತ ಶಿಶು ಮಂದಿರದ ಮಕ್ಕಳಿಂದ ವಿವೇಕ ವಾಣಿ ವಾಚನ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ .ಕೆ. ಎಂ ಕೃಷ್ಣ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಗಳ ಆರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟನೆ: ಯುವ ಶಕ್ತಿ ಬಗ್ಗೆ ಪ್ರಧಾನಿ ಮೋದಿ ಗುಣಗಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.