ETV Bharat / state

ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಅಪರಾಧಿಗೆ 3 ವರ್ಷ ಶಿಕ್ಷೆ

author img

By

Published : Aug 8, 2023, 10:30 AM IST

Mangaluru
ಮಂಗಳೂರು

Mangaluru crime news: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ, ಆಕೆಯಿಂದ ಚಿನ್ನಾಭರಣ ಪಡೆದ ಪ್ರಕರಣದಲ್ಲಿ ಅಪರಾಧಿಗೆ ಮೂರು ವರ್ಷ ಶಿಕ್ಷೆ ವಿಧಿಸಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಮಂಗಳೂರು: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ, ಆಕೆಯಿಂದ ಚಿನ್ನಾಭರಣ ಪಡೆದ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು, ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌-1) ಅಪರಾಧಿಗೆ ಮೂರು ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಉಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯ ಜಪ್ಪಿನಮೊಗರು ಕಜೆಕಾರ್ ನಿವಾಸಿ ರೋಶನ್ ಡಿಸೋಜ ಆಲಿಯಾಸ್ ರೋಶನ್ ಫರ್ನಾಂಡಿಸ್ (31) ಶಿಕ್ಷೆಗೊಳಗಾದ ಅಪರಾಧಿ.

ಪ್ರಕರಣದ ಸಂಪೂರ್ಣ ವಿವರ: 2015ರ ನ.16ರಂದು ಬೆಳಗ್ಗೆ ನಗರದ ಕಾಲೇಜಿನ ಪಿಯು ವಿದ್ಯಾರ್ಥಿನಿ ಬಸ್‌ನಿಂದ ಇಳಿದು ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಆರೋಪಿ ರೋಶನ್ ಹಿಂಬಾಲಿಸಿಕೊಂಡು ಬಂದು ತನ್ನ ಮಾತಿನ ಮೋಡಿಯಿಂದ ವಿಶ್ವಾಸಗಳಿಸಿದ್ದ. ಅನಂತರ ಬಾಲಕಿಯನ್ನು ಮಂಗಳೂರಿನ ಹೋಟೆಲ್, ಮಾಲ್‌ಗಳಿಗೆ ಕರೆದುಕೊಂಡು ಹೋಗಿದ್ದ.

ಬಾಲಕಿಯ ವಿಶ್ವಾಸಗಳಿಸುತ್ತಿದ್ದಂತೆ ಆರೋಪಿ ರೋಶನ್ ತನಗೆ ತುರ್ತಾಗಿ ಹಣದ ಆವಶ್ಯಕತೆ ಇದೆ ಎಂದು ಆಕೆಯನ್ನು ನಂಬಿಸಿದ್ದ. ಅದರಂತೆ 2015ರ ಡಿ.28 ರಂದು ಆಕೆಯ ಮನೆ ಬಳಿ ಹೋಗಿ ಒಟ್ಟು 86.07 ಗ್ರಾಂ ತೂಕದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದ. ಇದಾದ ಕೆಲ ಸಮಯದ ನಂತರ ಆರೋಪಿ 'ಈ ಹಿಂದೆ ಅಡವಿಟ್ಟಿದ್ದ ಚಿನ್ನದ ವಾಯಿದೆ ಮುಗಿಯುತ್ತಿದೆ. ಬಡ್ಡಿ ಕಟ್ಟದಿದ್ದರೆ ಅದನ್ನು ಮಾರಾಟ ಮಾಡುತ್ತಾರೆ. ಅದಕ್ಕೆ ಮತ್ತೆ ಚಿನ್ನಾಭರಣ ಬೇಕಾಗಿದೆ ಎಂದು ಬಾಲಕಿಯನ್ನು ನಂಬಿಸಿದ್ದ. 2016ರ ಮಾ.12ರಂದು ಆಕೆಯ ಅಜ್ಜಿಯ ಮನೆಯ ಬಳಿಗೆ ತೆರಳಿ ಬಾಲಕಿಯ ಮೂಲಕ 34.01 ಗ್ರಾಂ ಮೌಲ್ಯದ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದ.

ಆರೋಪಿ 2016ರ ಮಾ.30 ರಂದು ಬೆಳಗ್ಗೆ 11.30ಕ್ಕೆ ಕದ್ರಿಪಾರ್ಕ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಅಂದು ಬಾಲಕಿ ಮನೆಗೆ ತಲುಪುವಾಗ ತಡವಾಗಿದ್ದು, ಆ ಬಗ್ಗೆ ಮನೆಯವರು ಪ್ರಶ್ನಿಸಿದ್ದರು. ಆಗ ಬಾಲಕಿ ನಡೆದಿರುವ ವಿಚಾರಗಳನ್ನು ತಿಳಿಸಿದ್ದಾಳೆ. ಮನೆಯವರು ಆರೋಪಿ ಬಗ್ಗೆ ವಿಚಾರಿಸಿ ಬಳಿಕ ಪ್ರಕರಣ ದಾಖಲಿಸಿದ್ದರು.

ಪೋಕ್ಸೋ ಕಾಯ್ದೆಯಡಿ ಆರೋಪಿಗೆ ಶಿಕ್ಷೆ: ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ಪೋಕ್ಸೋ ಕಾಯ್ದೆಯ ಕಲಂ 8ರಂತೆ 3 ವರ್ಷ ಸಾದಾ ಸಜೆ, 5 ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 3 ತಿಂಗಳು ಸಾದಾ ಸಜೆ ವಿಧಿಸಲಾಗಿದೆ. ಇನ್ನು ಪೋಕ್ಸೋ ಕಾಯ್ದೆಯ ಕಲಂ 12ರಂತೆ ಒಂದು ವರ್ಷ ಸಾದಾ ಸಜೆ, 2 ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 1 ತಿಂಗಳ ಸಾದಾ ಸಜೆ, ಭಾರತೀಯ ದಂಡ ಸಂಹಿತೆಯ ಕಲಂ 420ರಂತೆ 3 ವರ್ಷ ಸಾದಾ ಸಜೆ ಒಟ್ಟು 5 ಸಾವಿರ ರೂ. ದಂಡ ಹಾಕಲಾಗಿದೆ. ಈ ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ 1 ತಿಂಗಳು ಸಾದಾ ಸಜೆ ವಿಧಿಸಿದ್ದಾರೆ. ಇದೇ ವೇಳೆ, ಸಂತ್ರಸ್ತ ಬಾಲಕಿಗೆ 50 ಸಾವಿರ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಅವರು ವಾದಿಸಿದ್ದರು.

ಇದನ್ನೂ ಓದಿ: POCSO Case: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ; ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.