ಮಂಗಳೂರು : ರಾಜ್ಯದಲ್ಲಿಯೇ ಮೊದಲ ಬಾರಿಗೆ ಮೀನುಗಾರಿಕಾ ತೇಲುವ ಜಟ್ಟಿ ; 6 ಕೋಟಿ‌ ರೂ. ವೆಚ್ಚದಲ್ಲಿ ನಿರ್ಮಾಣ

author img

By

Published : Sep 17, 2021, 3:31 PM IST

fishing-floating-jetty-construction-in-mangalore

ನಿಲುಗಡೆಗೆ ಸ್ಥಳಾವಕಾಶವಿಲ್ಲದೆ ಪರದಾಡುತ್ತಿರುವ ನಾಡದೋಣಿ ಹಾಗೂ ಸಾಂಪ್ರದಾಯಿಕ ದೋಣಿಗಳಿಗೆ ಉಪಯೋಗವಾಗಲಿದೆ. ಈಗ ಇರುವ ಜಟ್ಟಿಯಲ್ಲಿ ನೀರಿನ ಮಟ್ಟದಲ್ಲಿ ಏರಿಳಿತವಾಗುವಂತೆ ಬೋಟ್​ಗಳಲ್ಲಿ ಅನ್‌ಲೋಡಿಂಗ್ ಸಮಸ್ಯೆಯಾಗುತ್ತದೆ..

ಮಂಗಳೂರು : ಮೀನುಗಾರಿಕಾ ಕ್ಷೇತ್ರದಲ್ಲಿ ನೂತನ ಪ್ರಯೋಗಗಳು ನಡೆಯುತ್ತಿವೆ. ಇದೀಗ ರಾಜ್ಯದಲ್ಲಿಯೇ ಮೊದಲ ಬಾರಿಗೆ ನಗರದ ಹೊಯಿಗೆ ಬಜಾರ್‌ ಸಮೀಪ ತೇಲುವ ಜಟ್ಟಿ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ (ಕೆಎಫ್​ಡಿಸಿ) ವತಿಯಿಂದ ನಿರ್ಮಾಣವಾಗುವ ಈ ತೇಲುವ ಜಟ್ಟಿಗೆ 6 ಕೋಟಿ ರೂ. ಬಿಡುಗಡೆಯಾಗಿದೆ. ಈ ಯೋಜನೆಗೆ ಟೆಂಡರ್​ ಆಹ್ವಾನ ಮಾಡಲಾಗಿದೆ. ಸೆ.27ಕ್ಕೆ ಈ ಪ್ರಕ್ರಿಯೆ ಕೊನೆಗೊಳ್ಳಲಿದೆ. ಪೈಲಟ್ ಯೋಜನೆಯಾಗಿ ತೆಗೆದುಕೊಂಡ ಹಿನ್ನೆಲೆ ಮುಂದೆ ಉಡುಪಿಯ ಮಲ್ಪೆಯಲ್ಲೂ ತೇಲುವ ಜಟ್ಟಿ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಇದಕ್ಕಾಗಿ ಹಣ ಬಿಡುಗಡೆಯ ನಿರೀಕ್ಷೆ ಇದೆ.

ಕೆಎಫ್​ಡಿಸಿ ಅಧ್ಯಕ್ಷ ನಿತಿನ್ ಕುಮಾರ್ ಮಾತನಾಡಿರುವುದು..

ತೇಲುವ ಜಟ್ಟಿಯಲ್ಲಿ ನಾಡದೋಣಿ, ಸಾಂಪ್ರಾದಾಯಿಕ ದೋಣಿಗಳಿಗೆ ಆದ್ಯತೆ ನೀಡಲಾಗುತ್ತದೆ. ಸದ್ಯದ ಮಟ್ಟಿಗೆ 200 ನಾಡದೋಣಿಗಳು ಹಾಗೂ ಇನ್ನಿತರ ಮರದ ಬೋಟ್​ಗಳಿಗೆ ಇಲ್ಲಿ ನಿಲುಗಡೆ ಮತ್ತು ಮೀನುಗಳ ಅನ್ಲೋಡ್ ಮಾಡಲು ಈ ತೇಲುವ ಜಟ್ಟಿ ಸಹಕಾರಿಯಾಗಲಿದೆ.

ಈ ತೇಲುವ ಜಟ್ಟಿಯು ನೀರಿನ ತಳಭಾಗದಲ್ಲಿ ನೂತನ ತಂತ್ರಜ್ಞಾನದ ಮೂಲಕ ರಬ್ಬರ್ ಅಳವಡಿಕೆ ಮಾಡಿ ಮೇಲ್ಮೈಗೆ ಕಾಂಕ್ರೀಟ್ ತುಂಬುವ ಮೂಲಕ ಜಟ್ಟಿ ನಿರ್ಮಾಣವಾಗಲಿದೆ. ಈ ಜಟ್ಟಿ 60 ಮೀ. ಉದ್ದವಿದ್ದು, 6 ಮೀ. ಅಗಲವಿರಲಿದೆ. 1ಮೀಟರ್‌ನಷ್ಟು ದಪ್ಪವಿದ್ದು, 180 ಟನ್ ತೂಕವಿರಲಿದೆ. 360 ಟನ್ ಧಾರಣ ಸಾಮರ್ಥ್ಯ ಹೊಂದಿದೆ.

ಈ ತೇಲುವ ಜಟ್ಟಿಯು ನೂತನ ಪರಿಕಲ್ಪನೆಯಲ್ಲಿ ನಿರ್ಮಾಣವಾಗುತ್ತಿದೆ. ತಾಂತ್ರಿಕ ಕೆಲಸಗಳನ್ನು ಐಐಟಿ ಚೆನ್ನೈನ ತಂತ್ರಜ್ಞರು ಸಂಪೂರ್ಣಗೊಳಿಸಲಿದ್ದಾರೆ. ಇದು ನೀರಿನ‌ ಮಧ್ಯಭಾಗದಲ್ಲಿದೆ. ದಡಕ್ಕೆ ರೋಪ್ ಮೂಲಕ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ‌

ಇದರ ಮೂಲಕ‌ ಜಟ್ಟಿಗೆ ಸಣ್ಣ ಪ್ರಮಾಣದ ವಾಹನಗಳ ಸಂಚಾರ ಮಾಡಬಹುದು. ದೋಣಿಗಳಲ್ಲಿ ತಂದಿರುವ ಮೀನುಗಳನ್ನು ತೇಲುವ ಜಟ್ಟಿಗಳಲ್ಲಿ ಅನ್​ಲೋಡ್​ ಮಾಡಿ ವಾಹನಗಳ ಮೂಲಕ ದಡಕ್ಕೆ ತರಬಹುದು.

ಉಪಯೋಗವೇನು?: ನಿಲುಗಡೆಗೆ ಸ್ಥಳಾವಕಾಶವಿಲ್ಲದೆ ಪರದಾಡುತ್ತಿರುವ ನಾಡದೋಣಿ ಹಾಗೂ ಸಾಂಪ್ರದಾಯಿಕ ದೋಣಿಗಳಿಗೆ ಉಪಯೋಗವಾಗಲಿದೆ. ಈಗ ಇರುವ ಜಟ್ಟಿಯಲ್ಲಿ ನೀರಿನ ಮಟ್ಟದಲ್ಲಿ ಏರಿಳಿತವಾಗುವಂತೆ ಬೋಟ್​ಗಳಲ್ಲಿ ಅನ್‌ಲೋಡಿಂಗ್ ಸಮಸ್ಯೆಯಾಗುತ್ತದೆ.

ಆದರೆ, ತೇಲುವ ಜಟ್ಟಿಯಲ್ಲಿ ಈ ಸಮಸ್ಯೆಯಿಲ್ಲ. ನೀರಿನ ಏರಿಳಿತಕ್ಕೆ ತಕ್ಕಂತೆ ಜಟ್ಟಿಯೂ ಮೇಲೆ ಕೆಳಗೆ ಹೋಗುತ್ತದೆ. ಅಲ್ಲದೆ ಅನ್​ಲೋಡ್​ಗೆ ಬರುವ ಸಣ್ಣ ಬೋಟ್​ಗಳಲ್ಲಿ ಮಂಜುಗಡ್ಡೆ ಇರುವುದಿಲ್ಲ. ಅಂತಹ ದೋಣಿಗಳಿಗೆ ಜಟ್ಟಿ ಸಹಾಯವಾಗಲಿದೆ. ಅಲ್ಲದೆ, ಈ ತೇಲುವ ಜಟ್ಟಿಯನ್ನು ಇನ್ನೊಂದು ಕಡೆಗೆ ಸ್ಥಳಾಂತರಿಸಲು ಸಾಧ್ಯವಿದೆ.

ಓದಿ: ಕೆಕೆಆರ್​​ಡಿಬಿ, ನಂಜುಂಡಪ್ಪ ವರದಿ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನೆ ಕೈಗೊಳ್ಳುತ್ತೇನೆ : ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.