ETV Bharat / state

ಕಾಡಾನೆ ದಾಳಿಗೆ ಇಬ್ಬರು ಬಲಿ: ಸ್ಥಳೀಯರಿಂದ ಆಕ್ರೋಶ, 15 ಲಕ್ಷ ಪರಿಹಾರ ಘೋಷಿಸಿದ ಡಿಸಿ

author img

By

Published : Feb 20, 2023, 12:10 PM IST

Updated : Feb 21, 2023, 7:13 AM IST

ಕಡಬ ಕಾಡಾನೆ ದಾಳಿಗೆ ಇಬ್ಬರು ಬಲಿ - ಸಾರ್ವಜನಿಕರಿಂದ ಆಕ್ರೋಶ, ಪ್ರತಿಭಟನೆ- ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ-ಪರಿಹಾರ, ಉದ್ಯೋಗ ನೀಡುವುದಾಗಿ ಭರವಸೆ

kadaba
ಕಾಡಾನೆ ದಾಳಿಗೆ ಇಬ್ಬರು ಬಲಿ: ಸ್ಥಳೀಯರಿಂದ ಆಕ್ರೋಶ, ಜಿಲ್ಲಾಧಿಕಾರಿ ಆಗಮಿಸುವಂತೆ ಪಟ್ಟು

ಕಾಡಾನೆ ದಾಳಿಗೆ ಇಬ್ಬರು ಬಲಿ: ಸ್ಥಳೀಯರಿಂದ ಆಕ್ರೋಶ, ಜಿಲ್ಲಾಧಿಕಾರಿ ಆಗಮಿಸುವಂತೆ ಪಟ್ಟು

ಕಡಬ (ದಕ್ಷಿಣ ಕನ್ನಡ): ಇಂದು ಮುಂಜಾನೆ ಕಾಡಾನೆ ದಾಳಿಗೆ ಯುವತಿ ಸೇರಿ ಇಬ್ಬರು ಬಲಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪಾಡಿ ಸಮೀಪದ ಮೀನಾಡಿ ಎಂಬಲ್ಲಿ ನಡೆದಿದೆ. ಇಲ್ಲಿನ ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿರುವ ರಂಜಿತಾ ಎಂಬವರು ಮನೆಯಿಂದ ಸೊಸೈಟಿಗೆ ತೆರಳುತ್ತಿದ್ದ ವೇಳೆ ಮೀನಾಡಿ ಎಂಬಲ್ಲಿ ಆನೆ ದಾಳಿ ಮಾಡಿದೆ.

ಇದೇ ವೇಳೆ, ಅಲ್ಲೇ ಇದ್ದ ಸ್ಥಳೀಯ ನಿವಾಸಿ ರಮೇಶ್ ರೈ ಎಂಬವರ ಮೇಲೂ ಆನೆ ತನ್ನ ಅಟ್ಟಹಾಸ ಮೆರೆದಿದೆ. ಗಂಭೀರ ಗಾಯಗೊಂಡಿದ್ದ ರಮೇಶ್ ರೈ ಸ್ಥಳದಲ್ಲಿಯೇ ಮೃತಪಟ್ಟಿದ್ದು, ರಂಜಿತಾ ಅವರು ನೆಲ್ಯಾಡಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಕಾಡಾನೆ ದಾಳಿ ವೇಳೆ ಇಬ್ಬರು ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೂ ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಇಬ್ಬರು ಮೃತಪಟ್ಟಿದ್ದಾರೆ. ಇನ್ನು ರಮೇಶ್​ ಮತ್ತು ರಂಜಿತಾ ದೇಹಗಳು ಆನೆ ದಾಳಿಯಿಂದ ವಿರೂಪಗೊಂಡಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ,ಅದಕ್ಕೂ ಮೊದಲೇ ಸ್ಥಳೀಯರು ಹಠಾತ್​ ಪ್ರತಿಭಟನೆ ಕೈಗೊಂಡಿದ್ದರು.

ಇದನ್ನೂ ಓದಿ: ಕಾಡಾನೆ ದಾಳಿಯಿಂದ ಪಾರಾದ ಕಾರ್ಮಿಕ: ಒಂಟಿ ಸಲಗ ಸೆರೆಗೆ ಜನರ ಒತ್ತಾಯ

ಸ್ಥಳೀಯರಿಂದ ಆಕ್ರೋಶ, ಪ್ರತಿಭಟನೆ: ಸ್ಥಳದಲ್ಲಿ ಸಾರ್ವಜನಿಕರು ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಕಳೆದ ಐದು ವರ್ಷದಿಂದ ತಾಲೂಕಿನಲ್ಲಿ ಆನೆಯ ಉಪಟಳ ಹೆಚ್ಚಾಗಿದೆ. ಆನೆಯ ಕಾಟಕ್ಕೆ ಬೇಸತ್ತು ನಾವು ಅನೇಕ ಬಾರಿ ಅರಣ್ಯ ಇಲಾಖೆಗೆ ಮತ್ತು ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ. ಅಷ್ಟೇ ಅಲ್ಲ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಲಿಖಿತ ರೂಪದಲ್ಲಿ ಮನವಿ ಸಹ ಮಾಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ" ಎಂದು ಸ್ಥಳೀಯರೊಬ್ಬರು ಆರೋಪಿಸಿದ್ದಾರೆ.

ಆನೆ ದಾಳಿ ಬಗ್ಗೆ ವಾರದ ಹಿಂದೆ ಮರ್ದಾಳದ ಸ್ಥಳೀಯ ಯುವಕನೊಬ್ಬ ಫೇಸ್ಬುಕ್​ನಲ್ಲಿ ಕಾಡಾನೆ ದಾಳಿ ಬಗ್ಗೆ ಮುನ್ಸೂಚನೆ ನೀಡಿದ್ದರು. ಜೊತೆಗೆ ಗ್ರಾಮ ಪಂಚಾಯಿತಿಗೂ ಮಾಹಿತಿ ನೀಡಿದ್ದರು. ಆದರೆ, ಇದನ್ನು ಪರಿಗಣಿಸದ ಅಧಿಕಾರಿಗಳ ವಿರುದ್ಧ ಜನರು ಧ್ವನಿ ಎತ್ತಿದ್ದಾರೆ. ಇಲ್ಲಿಗೆ ಜಿಲ್ಲಾಧಿಕಾರಿ ಮತ್ತು ಸಚಿವರು ಬರುವವರೆಗೆ ಮೃತ ದೇಹಗಳನ್ನು ತೆಗೆಯುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ.

ಪ್ರತಿಭಟನೆ ಸುದ್ದಿ ತಿಳಿದ ಡಿಎಫ್ಒ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿದರು. ಸಂಜೆಯೊಳಗಡೆ ಆನೆಗಳನ್ನು ಹಿಡಿಯುವ ವ್ಯವಸ್ಥೆ ಮಾಡುತ್ತೇವೆ. ನಾಗರಹೊಳೆ, ದುಬಾರೆ ಆನೆ ಕ್ಯಾಂಪಿನಿಂದ ಪಳಗಿದ ಆನೆಗಳನ್ನು ತಂದು ಕಾಡಾನೆ ಹಿಡಿಯುತ್ತೇವೆ ಎಂದು ಭರವಸೆ ನೀಡಿದರು. ಈ ವೇಳೆ, ಸ್ಥಳೀಯರು ಭರವಸೆ ಬೇಡ ಲಿಖಿತವಾಗಿ ಬರೆದುಕೊಡಿ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಅಷ್ಟರಲ್ಲಿ ಡಿಎಫ್​ಒ, ನಾವು ಇಲ್ಲೇ ಉಳಿದು ಇಂದೇ ಕಾರ್ಯಾಚರಣೆ ನಡೆಸುತ್ತೇವೆ ಎಂದು ಹೇಳಿದರು. ಆದರೂ ಸಹಿತ ಸ್ಥಳೀಯರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಜಿಲ್ಲಾಧಿಕಾರಿ ಭೇಟಿ : ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಈ ವೇಳೆ ಮೃತರ ಕುಟುಂಬಗಳಿಗೆ ತಲಾ 15 ಲಕ್ಷ ರೂ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದರು. ಮೃತ ರಂಜಿತಾರ ಸಹೋದರಿಗೆ ಉದ್ಯೋಗದ ಭರವಸೆ ನೀಡಿದರು. ಇಂದು ಸಂಜೆಯಿಂದಲೇ ಆನೆ ಹಿಡಿಯುವ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದರು.

ಇದನ್ನೂ ಓದಿ: ಆಹಾರ ಅರಸಿ ನಾಡಿಗೆ ಬಂದ ಕಾಡಾನೆ, ಸಿಮೆಂಟ್ ಟ್ಯಾಂಕ್‌ಗೆ ಬಿದ್ದು ಸಾವು

Last Updated :Feb 21, 2023, 7:13 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.