ETV Bharat / state

ಉರುಳಿಗೆ ಸಿಲುಕಿ ಒಂದೂವರೆ ವರ್ಷದ ಗಂಡು ಚಿರತೆ ಸಾವು

author img

By ETV Bharat Karnataka Team

Published : Jan 15, 2024, 8:05 PM IST

ಉರುಳಿಗೆ ಸಿಲುಕಿ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಉರುಳಿಗೆ ಸಿಲುಕಿ ಚಿರತೆ ಸಾವು
ಉರುಳಿಗೆ ಸಿಲುಕಿ ಚಿರತೆ ಸಾವು

ಚಿಕ್ಕಮಗಳೂರು: ಇಲ್ಲಿಯ ಹುಳಿಯಾರದ ಹಳ್ಳಿಯಲ್ಲಿ ಬಲೆಗೆ ಸಿಲುಕಿ ಒಂದೂವರೆ ವರ್ಷದ ಗಂಡು ಚಿರತೆ ಮೃತ ಪಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಹುಳಿಯಾರದ ಹಳ್ಳಿ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಕಳೆದ ಒಂದು ತಿಂಗಳಿನಿಂದ ರಾತ್ರಿ ವೇಳೆಯಲ್ಲಿ ಗ್ರಾಮಗಳಲ್ಲಿ ಪದೇ ಪದೆ ಚಿರತೆ ಕಾಣಿಸಿಕೊಳ್ಳುತ್ತಿದೆ ಎಂದು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಬೋನು ಇರಿಸಿದ್ದರು. ಆದರೆ, ನಿನ್ನೆ ರಾತ್ರಿ ಚಿರತೆ ಉರುಳಿಗೆ ಸಿಲುಕಿ ಗಾಯಗೊಂಡು ಸಾವನ್ನಪ್ಪಿದೆ.

ಪ್ರೇಮಾ ವಿಶ್ವನಾಥ್ ಎಂಬುವವರಿಗೆ ಸೇರಿದ ಖಾಸಗಿ ಕಾಫಿ ಎಸ್ಟೇಟ್‌ನಲ್ಲಿ ಚಿರತೆ ಕಳೇಬರ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಚಿಕ್ಕಮಗಳೂರು ವಲಯ ಅರಣ್ಯಾಧಿಕಾರಿ ಮೋಹನ್, ತಂತಿಯ ಬಲೆಗೆ ಚಿರತೆ ಸಿಕ್ಕಿ ಹಾಕಿ ಕೊಂಡಿರುವುದಾಗಿ ಬೆಳಗ್ಗೆ 5 ಗಂಟೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಭತ್ತ ಮತ್ತು ಇತರ ಬೆಳೆಗಳನ್ನು ನಾಶ ಪಡಿಸುತ್ತಿರುವ ಕಾಡು ಹಂದಿಗಳನ್ನು ಹಿಡಿಯಲು ಕೆಲ ಜನರು ಉರುಳು ಹಾಕಿರುವುದು ಪ್ರಾಥಮಿಕವಾಗಿ ಕಂಡು ಬಂದಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತೋಟದ ಮಾಲೀಕರಿಗೂ ನೋಟಿಸ್ ಜಾರಿ ಮಾಡಲಾಗಿದೆ.

ಕಾಡು ಹಂದಿಗಳನ್ನು ಕೊಲ್ಲಲು ಸರ್ಕಾರ ಅನುಮತಿ ನೀಡಿದ್ದರೂ, ರೈತರು ಅರಣ್ಯ ಇಲಾಖೆಗೆ ಮುಂಚಿತವಾಗಿ ತಿಳಿಸಬೇಕು ಮತ್ತು ಕಳೆಬರಗಳನ್ನು ಇಲಾಖೆಗೆ ಹಸ್ತಾಂತರಿಸಬೇಕು ಎಂದು ಡಿಸಿಎಫ್ ಹೇಳಿದ್ದು, ಇಲಾಖೆಗೆ ಮಾಹಿತಿ ನೀಡದೇ ಪ್ರಾಣಿಗಳನ್ನು ಕೊಲ್ಲುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಹೇಳಿದರು. ಚಿರತೆ ಕಳೇಬರ ಪರೀಕ್ಷೆಯನ್ನು ಪಶು ವೈದ್ಯ ವಿಶಾಖ್ ನಡೆಸಿದ್ದು ಅರಣ್ಯ ಇಲಾಖೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆಯನ್ನು ಮುಂದು ವರಿಸಲಾಗುತ್ತಿದೆ.

ಮೂಡಿಗೆರೆಯಲ್ಲೂ ನಡೆದಿದ್ದ ಘಟನೆ: ಬೇಟೆಗಾಗಿ ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿದ್ದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಳಗುಳ ಕೊಲ್ಲಿಬ್ಯೆಲ್​ನಲ್ಲಿ ಇತ್ತೀಚೆಗೆ ನಡೆದಿತ್ತು. ಲಕ್ಷ್ಮಣಗೌಡ ಎಂಬುವವರಿಗೆ ಸೇರಿದ ಪಾಳು ಬಿದ್ದ ಕಾಫಿ ತೋಟದಲ್ಲಿ ದುಷ್ಕರ್ಮಿಗಳು ಕಾಡು ಹಂದಿ ಬೇಟೆಗಾಗಿ ಹಾಕಿದ್ದ ಉರುಳಿಗೆ ಸಿಲುಕಿ ಮೂರು ವರ್ಷದ ಚಿರತೆ ಮೃತಪಟ್ಟಿತ್ತು.

ಮತ್ತೊಂದೆಡೆ ಕೆಲ ದಿನಗಳ ಹಿಂದೆ ಜಿಲ್ಲೆಯ ನೆರಡಿ ಗ್ರಾಮದಲ್ಲೂ ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿತ್ತು. ಬೇಟೆಗಾರರು ಹಾಕಿದ ಉರುಳಿಗೆ ಸಿಲುಕಿದ ಚಿರತೆ ಇಡೀ ರಾತ್ರಿ ಸಾವು - ಬದುಕಿನ ಮಧ್ಯೆ ಹೋರಾಡಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿತ್ತು. ಐದು ವರ್ಷದ ಗಂಡು ಚಿರತೆ ಇದಾಗಿತ್ತು.

ಇದನ್ನೂ ಓದಿ: ಮೈಸೂರು: ಕಾಡುಪ್ರಾಣಿಗಳ ಬೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.