ETV Bharat / state

ಕಾಡಿನಮಕ್ಕಳ ಭಯ ಹೋಗಲಾಡಿಸಿತು ರಾಜ್ಯದ ಮೊದಲ ಸೋಲಿಗರ ಕೋವಿಡ್ ಕೇರ್ ಸೆಂಟರ್!

author img

By

Published : Jun 13, 2021, 9:00 PM IST

Updated : Jun 13, 2021, 10:09 PM IST

ಪಟ್ಟಣಗಳಲ್ಲಿನ ಆಸ್ಪತ್ರೆಗೆ ತೆರಳಿದರೆ ಅನಾರೋಗ್ಯಕ್ಕೆ ತುತ್ತಾಗುತ್ತೇವೆ ಎಂಬ ವದಂತಿ ನಂಬಿದ್ದ ಗಿರಿಜನರು ಜೀರಿಗೆಗದ್ದೆಯಲ್ಲೇ ಕೋವಿಡ್ ಕೇರ್ ಸೆಂಟರ್ ಆದ ಬಳಿಕ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಸೋಂಕು ದೃಢಪಟ್ಟರೇ ಕೇರ್ ಸೆಂಟರ್​​ಗೆ ದಾಖಲಾಗುತ್ತಿದ್ದಾರೆ‌.

Sate's first  Covid Care Center opened for soliga community
ರಾಜ್ಯದ ಮೊದಲ ಸೋಲಿಗರ ಕೋವಿಡ್ ಕೇರ್ ಸೆಂಟರ್ ಆರಂಭ

ಚಾಮರಾಜನಗರ: ನಾವು ಪಟ್ಟಣಕ್ಕೆ ಬರುವುದಿಲ್ಲ, ಅಲ್ಲಿಗೆ ಹೋದರೆ ನಾವು ಬದುಕುವುದಿಲ್ಲ, ಕಣ್ಣು-ಕಿಡ್ನಿಯೂ ಉಳಿಯುವುದಿಲ್ಲ ಎಂದು ಕೋವಿಡ್ ಕೇರ್ ಸೆಂಟರ್​ಗೆ ಬರಲು ಹಿಂದೇಟು ಹಾಕುತ್ತಿದ್ದ ಸೋಲಿಗ ಸಮುದಾಯದ ಜನ ಇದೀಗ ಕೋವಿಡ್ ಮುಕ್ತರಾಗುತ್ತಿದ್ದಾರೆ.

ಕೊರೊನಾ ತಡೆಗಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಹನೂರು ತಾಲೂಕಿನ‌ ಜೀರಿಗೆಗದ್ದೆ ಹಾಡಿಯಲ್ಲಿ ಸೋಲಿಗಾರಿಗಾಗಿಯೇ ರೂಪಿಸಿದ 'ಸಮುದಾಯ ಆಧಾರಿತ ಆದಿವಾಸಿ ಕೋವಿಡ್ ಸೇವಾ ಕೇಂದ್ರ'ವು ಕಾಡಿನಮಕ್ಕಳಿಗೆ ಕೊರೊನಾ‌ ಭಯ ಹೋಗಲಾಡಿಸುತ್ತಿದೆ. ಇಷ್ಟೇ ಅಲ್ಲದೇ ಸೋಂಕಿನಿಂದ ಗುಣಮುಖರಾಗಿ ತೆರಳಿದ ಬಳಿಕ ಕುಟುಂಬಸ್ಥರಿಗೆ, ಹಾಡಿ ಜನರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

ರಾಜ್ಯದ ಮೊದಲ ಸೋಲಿಗರ ಕೋವಿಡ್ ಕೇರ್ ಸೆಂಟರ್ ಆರಂಭ

ಕಳೆದ ತಿಂಗಳು ಹನೂರು ತಾಲೂಕಿನ ಪಿ.ಜಿ ಪಾಳ್ಯ ಗ್ರಾ.ಪಂ ವ್ಯಾಪ್ತಿಯ ಹಾವಿನಮೂಲೆಯಲ್ಲಿ ಯುವಕನೋರ್ವ ಕೋವಿಡ್​​​ಗೆ ಬಲಿಯಾಗಿದ್ದ. ಅದಾದ ಬಳಿಕ ಆತನ 50 ಮಂದಿ ಸಂಪರ್ಕಿತರಿಗೆ ಕೊರೊನಾ ಟೆಸ್ಟ್‌ ಮಾಡಿಸಿದಾಗ 10 ಮಂದಿಗೆ ಕೋವಿಡ್ ದೃಢವಾಗಿ ಇವರನ್ನು ಹನೂರಿನ ಕೋವಿಡ್ ಕೇರ್ ಸೆಂಟರ್​​ಗೆ ರವಾನಿಸಿದ್ದರು. ಇದಾದ ನಂತರ ಜೀರಿಗೆ ಗದ್ದೆಯಲ್ಲಿ ಕೋವಿಡ್ ಟೆಸ್ಟ್ ನಡೆಸಿದ ವೇಳೆ ಮತ್ತೆ 10 ಮಂದಿಗೆ ಕೊರೊನಾ ಸೋಂಕು ತಗುಲಿತ್ತು.

ಸೋಲಿಗರಿಗಾಗಿ ಮೊದಲ ಕೋವಿಡ್ ಸೆಂಟರ್​

ಈ 10 ಮಂದಿ ಕೇರ್ ಸೆಂಟರ್​​ಗೆ ಆಗಮಿಸಲು ನಿರಾಕರಿಸಿದ್ದರು. ಬಳಿಕ ಜಿಲ್ಲಾ ಪಂಚಾಯತ್​ ಸಿಇಒ ಹರ್ಷಲ್ ಭೋಯರ್ ಅವರಿಗೆ ಗಿರಿಜನ ಕಲ್ಯಾಣ ಅಧಿಕಾರಿ ಹೊನ್ನೆಗೌಡ ಹಾಗೂ ಗ್ರಾ.ಪಂ. ಅಧ್ಯಕ್ಷ ಕೃಷ್ಣ ನೀಡಿದ ಸಲಹೆಯಂತೆ 20 ದಿನಗಳ ಹಿಂದೆ ಸೋಲಿಗರಿಗಾಗಿಯೇ ಮೀಸಲಿರುವ ರಾಜ್ಯದ ಮೊದಲ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗಿದೆ.

ಪಟ್ಟಣಗಳಲ್ಲಿನ ಆಸ್ಪತ್ರೆಗೆ ತೆರಳಿದರೆ ಅನಾರೋಗ್ಯಕ್ಕೆ ತುತ್ತಾಗುತ್ತೇವೆ ಎಂಬ ವದಂತಿ ನಂಬಿದ್ದ ಗಿರಿಜನರು ಜೀರಿಗೆಗದ್ದೆಯಲ್ಲೇ ಕೋವಿಡ್ ಕೇರ್ ಸೆಂಟರ್ ಆದ ಬಳಿಕ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದು, ಸೋಂಕು ದೃಢಪಟ್ಟರೇ ಕೇರ್ ಸೆಂಟರ್​​ಗೆ ದಾಖಲಾಗುತ್ತಿದ್ದಾರೆ‌. ಸದ್ಯ ಗರ್ಭಿಣಿ, 6 ಮಕ್ಕಳು ಸೇರಿದಂತೆ 18 ಮಂದಿ ಕೇರ್ ಸೆಂಟರ್​ನಲ್ಲಿದ್ದು, ಶನಿವಾರ 10 ಮಂದಿ ಕೊರೊನಾದಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಲಸಿಕೆ ಅಭಿಯಾನಕ್ಕೂ ವೇಗ

ಕೂಗಳತೆ ದೂರದಲ್ಲೇ ಮನೆಗಳಿರುವುದರಿಂದ ಗಿರಿಜನರು ಯಾವುದೇ ಭಯ, ಆತಂಕ ಇಲ್ಲದೇ ಕೋವಿಡ್ ಕೇರ್ ಸೆಂಟರ್​​​ಗೆ ದಾಖಲಾಗುತ್ತಿದ್ದಾರೆ‌‌. ಗ್ರಾಪಂ ವತಿಯಿಂದ ಅಡುಗೆ ಭಟ್ಟರು, ಭದ್ರತಾ ಸಿಬ್ಬಂದಿ, ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ. ಈಗೀಗ ಲಸಿಕೆ ಅಭಿಯಾನಕ್ಕೂ ವೇಗ ಬರುತ್ತಿದ್ದು, ಗಿರಿಜನ ಹಾಡಿಗಳಲ್ಲಿ ಕೊರೊನಾ ತಡೆಗೆ ಜೀರಿಗೆಗದ್ದೆಯಲ್ಲಿ ತೆರೆದಿರುವ ಸಿಸಿ ಕೇಂದ್ರ ವರದಾನವಾಗಿದೆ ಎಂದು ಪಿ.ಜಿ‌.ಪಾಳ್ಯ ಗ್ರಾಪಂ ಅಧ್ಯಕ್ಷ ಕೃಷ್ಣ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದರು.

Last Updated : Jun 13, 2021, 10:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.