ETV Bharat / state

ಸದ್ಗುರು ಇನ್ನರ್ ಇಂಜಿನಿಯರಿಂಗ್ ಈಗ ಕನ್ನಡಮಯ... ಗಡಿ ಜಿಲ್ಲೆಯಲ್ಲಿ ಮೊದಲ ಶಿಬಿರ

author img

By

Published : Apr 11, 2021, 5:04 PM IST

ನಗರದ ಶಂಕರಪುರ 2ನೇ ಕ್ರಾಸ್‌ನಲ್ಲಿರುವ ಸೇವಾ ಭಾರತಿ ಕಾಲೇಜು ಆವರಣದಲ್ಲಿ ಪ್ರತಿದಿನ ಎರಡು ಅವಧಿಗಳಲ್ಲಿ ಏಳು ದಿನಗಳು ಕಾರ್ಯಕ್ರಮ ನಡೆಯಲಿದೆ.

Sadguru
Sadguru

ಚಾಮರಾಜನಗರ: ಸದ್ಗುರು ಜಗ್ಗಿ ವಾಸುದೇವ್ ಅವರ ಇಶ ಫೌಂಡೇಶನ್‌ ವತಿಯಿಂದ ನಗರದಲ್ಲಿ ಮೊದಲ ಬಾರಿಗೆ ‘ಇನ್ನರ್ ಇಂಜಿನಿಯರಿಂಗ್’ ಎಂಬ ಏಳು ದಿನಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದೇ ಮೊದಲ ಬಾರಿಗೆ ಈ ತರಬೇತಿಯು ಸಂಪೂರ್ಣ ಕನ್ನಡದಲ್ಲಿರಲಿದೆ ಎಂದು ಇಶ ಸ್ವಯಂಸೇವಕ ಮನು ಚಂದ್ರಹಾಸ ತಿಳಿಸಿದರು.

ನಗರದಲ್ಲಿ ಅವರು ಮಾತನಾಡಿ, ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಪ್ರಭಾವಿಸಿರುವ ಇಶ ಫೌಂಡೇಶನ್​ನ ಪ್ರಮುಖ ಕಾರ್ಯಕ್ರಮವನ್ನು ಪ್ರಥಮ ಬಾರಿಗೆ ಚಾಮರಾಜನಗರದಲ್ಲಿ ಏಪ್ರಿಲ್ 14ರಿಂದ ಏಪ್ರಿಲ್ 20ರವರೆಗೆ ನಡೆಸಲಾಗುತ್ತಿದೆ.

ನಗರದ ಶಂಕರಪುರ 2ನೇ ಕ್ರಾಸ್‌ನಲ್ಲಿರುವ ಸೇವಾ ಭಾರತಿ ಕಾಲೇಜು ಆವರಣದಲ್ಲಿ ಪ್ರತಿದಿನ ಎರಡು ಅವಧಿಗಳಲ್ಲಿ ಏಳು ದಿನಗಳು ಕಾರ್ಯಕ್ರಮ ನಡೆಯಲಿದೆ. 15 ವರ್ಷ ಮೇಲ್ಪಟ್ಟ ವಯಸ್ಸಿನವರು ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಮಾಹಿತಿ ನೀಡಿದರು.

ಶಾಂಭವಿ ಮಹಾಮುದ್ರ ಕ್ರಿಯೆಯನ್ನು ಒಳಗೊಂಡಿರುವ ಈ ಕಾರ್ಯಕ್ರಮವನ್ನು ತರಬೇತಿ ಪಡೆದ ಇಶ ಶಿಕ್ಷಕರು ಸಂಪೂರ್ಣವಾಗಿ ಕನ್ನಡದಲ್ಲಿ ನಡೆಸಲಿದ್ದಾರೆ.

ಶಾಂಭವಿ ಮಹಾಮುದ್ರ ಕ್ರಿಯೆಯು ಪುರಾತನ ಮತ್ತು ಶಕ್ತಿಯುತ ಯೋಗ ವಿಧಾನವಾಗಿದ್ದು, ಇದು ವರ್ಧಿತ ಶಕ್ತಿ ಮಟ್ಟ, ಹೆಚ್ಚಿನ ಭಾವಾನಾತ್ಮಕ ಸಂತುಲನೆ ಮತ್ತು ಆರೋಗ್ಯದ ಸಮಗ್ರ ಸುಧಾರಣೆಯಿಂದ ಅಂತರಂಗದ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು.

ಶರೀರ, ಮನಸ್ಸು ಮತ್ತು ಪ್ರಾಣ ಶಕ್ತಿಯನ್ನು ಸಂತುಲನಗೊಳಿಸಿ, ಅವುಗಳು ಸಾಮರಸ್ಯದಿಂದ ಕಾರ್ಯಗೈಯುವಂತೆ ಮಾಡಲು ಇಶ ಫೌಂಡೇಶನ್​​ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಅವರು ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದ್ದಾರೆ.

ಇದನ್ನು ಜಗತ್ತಿನಾದ್ಯಂತ ಲಕ್ಷಾಂತರ ಇಶ ಸಾಧಕರು ಅಭ್ಯಾಸ ಮಾಡುತ್ತಾರೆ. ದೈನಂದಿನ ಅಭ್ಯಾಸದಿಂದ ದೊರಕುವ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಪ್ರಯೋಜನಗಳಿಗೆ ಅನೇಕ ಸಾಧಕರು ಪುಷ್ಠಿ ನೀಡಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.