ETV Bharat / state

ಒಂದೆಡೆ ಅಂತ್ಯಸಂಸ್ಕಾರಕ್ಕೆ ಬರದ ಜನ: ಮತ್ತೊಂದೆಡೆ ಹಿಂದೂ ವೃದ್ಧೆ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಮರು

author img

By

Published : Feb 13, 2023, 4:18 PM IST

Updated : Feb 13, 2023, 5:05 PM IST

Muslims performed funeral of Hindu old woman
ಹಿಂದೂ ವೃದ್ಧೆ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಂರು

ಒಂದೆಡೆ ವೃದ್ಧನೊಬ್ಬನ ಶವಸಂಸ್ಕಾರಕ್ಕೆ ಅವರ ಸಮುದಾಯದವರೇ ಬರದಿದ್ದರೆ, ಇನ್ನೊಂದೆಡೆ ಹಿಂದೂ ಮಹಿಳೆಯ ಅಂತ್ಯಸಂಸ್ಕಾರವನ್ನು ಅನ್ಯಧರ್ಮದವರು ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಒಂದೆಡೆ ಅಂತ್ಯಸಂಸ್ಕಾರಕ್ಕೆ ಬರದ ಜನ: ಮತ್ತೊಂದೆಡೆ ಹಿಂದೂ ವೃದ್ಧೆ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಮರು

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಪ್ರತ್ಯೇಕ ಎರಡು ಘಟನೆಗಳು ನಡೆದಿದ್ದು, ಒಂದೂರಲ್ಲಿ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ಬರದೇ ಕರಿನೆರಳು ಆವರಿಸಿದರೆ ಮತ್ತೊಂದು ಕಡೆ ಹಿಂದೂ ವೃದ್ಧೆಯ ಅಂತ್ಯಸಂಸ್ಕಾರವನ್ನು ಮುಸ್ಲಿಂ ಯುವಕರು ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಅಂತ್ಯಸಂಸ್ಕಾರಕ್ಕೆ ಸಾಮಾಜಿಕ ಬಹಿಷ್ಕಾರದ ಕರಿನೆರಳು: ಚಾಮರಾಜನಗರ ತಾಲೂಕಿನ‌ ನಾಗವಳ್ಳಿ ಗ್ರಾಮದಲ್ಲಿ ಸುಮಾರು 5 ವರ್ಷಗಳಿಂದ ಕುಟುಂಬವೊಂದನ್ನು ಬಹಿಷ್ಕರಿಸಿರುವ ಆರೋಪ ಕೇಳಿ ಬಂದಿದ್ದು, ಶವ ಸಂಸ್ಕಾರಕ್ಕೆ ಗ್ರಾಮಸ್ಥರು ಬರದಿರುವ ಘಟನೆ ನಡೆದಿದೆ. ಚಾಮರಾಜನಗರ ತಾಲ್ಲೂಕಿನ ನಾಗವಳ್ಳಿ ಗ್ರಾಮದ ರಂಗಶೆಟ್ಟಿ ಎಂಬವರು (65) ಭಾನುವಾರ ಬೆಳಗ್ಗೆ ಮೃತಪಟ್ಟಿದ್ದು, ಗ್ರಾಮದಿಂದ ರಂಗಶೆಟ್ಟಿ ಅವರ ಕುಟುಂಬವನ್ನು ಬಹಿಷ್ಕರಿಸಿರುವ ಕಾರಣಕ್ಕಾಗಿ ಶವಸಂಸ್ಕಾರಕ್ಕೆ ಅವರ ಸಮುದಾಯದ ಜನರು ಬಾರದೇ ಪ್ರಯಾಸದಿಂದ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ತನಗೆ ರಂಗಸ್ವಾಮಿ, ಸಿದ್ದರಾಜು, ಗಂಗಮ್ಮ, ಮಹಾಲಕ್ಷ್ಮೀ ಎಂಬ 4 ಜನ ಮಕ್ಕಳಿದ್ದಾರೆ. ತಮ್ಮನ್ನು 5 ವರ್ಷಗಳಿಂದ ಗ್ರಾಮದಲ್ಲಿ ಬಹಿಷ್ಕರಿಸಿರುವ ಕಾರಣ ನಾವು ತೋಟದ ಮನೆಯಲ್ಲಿ ಇದ್ದೆವು. ಈಗ ನನ್ನ ಪತಿ ಸಾವನ್ನಪ್ಪಿದ್ದು, ಊರಿನಿಂದ ಯಾರೊಬ್ಬರೂ ಶವ ಸಂಸ್ಕಾರಕ್ಕೆ ಬಂದಿಲ್ಲ ಎಂದು ಮೃತರ ಪತ್ನಿ ಮಹಾದೇವಮ್ಮ ಅಳಲು ತೋಡಿಕೊಂಡು ಕಣ್ಣೀರಿಟ್ಟಿದ್ದಾರೆ. ನಾಗವಳ್ಳಿ ಗ್ರಾಮದಲ್ಲಿ ಶಾಮಿಯಾನ ಬಾಡಿಗೆಗೆ ಪಡೆಯಲು ಅವಕಾಶ ಮಾಡಿ ಕೊಟ್ಟಿಲ್ಲ, 15 ರಿಂದ 20 ಜನ ಸಂಬಂಧಿಕರನ್ನು ಬಿಟ್ಟರೆ ಗ್ರಾಮಸ್ಥರು ಬಂದಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಠಾಣೆಗೆ ದೂರು: ಈ ಸಂಬಂಧ ಮೃತರ ಕುಟುಂಬ ಚಾಮರಾಜನಗರ ಪೂರ್ವ ಠಾಣೆಗೆ ದೂರು ಕೊಟ್ಟಿದ್ದರು. ದೂರು ಪಡೆದ ಪೊಲೀಸರು ಈ ವಿಷಯವನ್ನು ತಹಶೀಲ್ದಾರ್ ಗಮನಕ್ಕೆ ತಂದಿದ್ದು, ತಹಶೀಲ್ದಾರ್​ ವಿಚಾರಿಸಿದಾಗ ತಾವು ಯಾವುದೇ ಸಾಮಾಜಿಕ ಬಹಿಷ್ಕಾರ ಹಾಕಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಅಂತ್ಯಸಂಸ್ಕಾರಕ್ಕೆ ತೆರಳುವುದು ವ್ಯಕ್ತಿಯ ಸ್ವಯಂ ನಿರ್ಧಾರವಾಗಿರುವುದರಿಂದ ಬಲವಂತದಿಂದ ಹೋಗಿ ಎನ್ನಲಾಗಲ್ಲ, ಈ ಸಂಬಂಧ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಚಾಮರಾಜನಗರ ಪೂರ್ವ ಠಾಣೆ ಪಿಐ ಶ್ರೀಕಾಂತ್ ತಿಳಿಸಿದ್ದಾರೆ.

ಮಾನವೀಯತೆ ಮೆರೆದ ಮುಸ್ಲಿಂರು: ಚಾಮರಾಜನಗರದ 5 ನೇ ವಾರ್ಡ್​ನಲ್ಲಿ ಮಾನವೀಯ ಕಾರ್ಯವೊಂದು ನಡೆದಿದ್ದು, ಹಿಂದೂ ಧರ್ಮಕ್ಕೆ ಸೇರಿದ ವೃದ್ಧೆಯ ಅಂತ್ಯಸಂಸ್ಕಾರವನ್ನು ಮುಸ್ಲಿಂ ಯುವಕರು ಹಿಂದೂ ಸಂಪ್ರದಾಯದಂತೆ ನೆರವೇರಿಸಿ ಗಮನ ಸೆಳೆದಿದ್ದಾರೆ.

ನಂಜಮ್ಮ(75) ಎಂಬವರು ಇಂದು ವಯೋಸಹಜದಿಂದ ಮೃತಪಟ್ಟಿದ್ದರು. ಮೃತರು ಅಂತರ್ಜಾತಿ ವಿವಾಹ ಆಗಿದ್ದರಿಂದ ಕುಟುಂಬಸ್ಥರಿಂದ ದೂರವಾಗಿ ವಾಸವಿದ್ದರು. ಕೆಲ ವರ್ಷಗಳ ಹಿಂದೆ ಪತಿಯೂ ತೀರಿಕೊಂಡಿದ್ದರಿಂದ ಮಕ್ಕಳಿಲ್ಲದೇ ಒಂಟಿಯಾಗಿ ನಂಜಮ್ಮ ವಾಸಿಸುತ್ತಿದ್ದರು. ನಂಜಮ್ಮ‌ ಮೃತಪಟ್ಟ ವಿಚಾರ ತಿಳಿದ ನಗರಸಭಾ ಸದಸ್ಯೆ ತೌಸಿಯಾ ಬಾನು ಅವರ ಪತಿ ಇಸ್ತಾರ್ ಪಾಷಾ, ಉಮರ್, ರುಮಾನ್, ಸಮೀವುಲ್ಲಾ ಎಂಬವರು ಸೇರಿಕೊಂಡು ಹಿಂದೂ ಸಂಪ್ರದಾಯದಂತೆ ಅವರ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಒಂದೆಡೆ ಅಂತ್ಯಸಂಸ್ಕಾರಕ್ಕೆ ಬಹಿಷ್ಕಾರ ಆರೋಪ ಕೇಳಿ ಬಂದರೆ ಮತ್ತೊಂದೆಡೆ ಅಂತ್ಯಸಂಸ್ಕಾರಕ್ಕೆ ಅನ್ಯಧರ್ಮದ ಯುವಕರು ಹೆಗಲು ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇದನ್ನೂ ಓದಿ: ಅನಾಥ ಮಹಿಳೆ ಶವದ ಅಂತ್ಯಸಂಸ್ಕಾರ ನಡೆಸಿ, ಮಾನವೀಯತೆ ಮೆರೆದ ಕಾರ್ಯಕರ್ತರು!

Last Updated :Feb 13, 2023, 5:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.