ETV Bharat / state

ಹುಲಿ ನರಹಂತಕ ಆಗುವುದೇಕೆ?: ಘರ್ಜಿಸುವ ವ್ಯಾಘ್ರನಿಗೂ ಇದೇ ಸವಾಲು-ಸರಹದ್ದು!

author img

By

Published : Jul 29, 2022, 12:30 PM IST

Updated : Jul 29, 2022, 1:23 PM IST

International Tiger Day 2022
ಸಾಂದರ್ಭಿಕ ಚಿತ್ರ

ಬಹಿರ್ದೆಸೆ ವೇಳೆ, ಜಮೀನಿನಲ್ಲಿ ಕುಳಿತು ಕೆಲಸ ಮಾಡುವಾಗ ಮನುಷ್ಯಾಕೃತಿ ಚಿಕ್ಕದಾಗಿ ಕಾಣುವುದರಿಂದ ಪ್ರಾಣಿಯೆಂದು ಭಾವಿಸಿ ಹುಲಿ ಬೇಟೆಯಾಡುತ್ತದೆ. ಒಂದು ವೇಳೆ ಇದೇ ಮುಂದುವರಿದರೆ ನರಹಂತಕನಾಗಲಿದೆ ಎನ್ನುತ್ತಾರೆ ತಜ್ಞರು.

ಚಾಮರಾಜನಗರ: ತನ್ನ ಗಾಂಭೀರ್ಯ, ಶಕ್ತಿ, ಆಹಾರ ಸರಪಳಿಯ ಪ್ರಮುಖ ಕೊಂಡಿ, ನಾಡಿನ ಸುಭಿಕ್ಷ ಲಕ್ಷಣವಾಗಿರುವ ಹುಲಿಗೂ ಸವಾಲು, ಸರಹದ್ದು ಇದೆ. ಕಾಡಿನಲ್ಲಿ ತನ್ನದೇ ಆದ ಸರಹದ್ದನ್ನು ಹೊಂದಿರುವ ಹುಲಿರಾಯ ಮನುಷ್ಯನನ್ನು ತಿಂದು ಜೀವಿಸುವ ನಿರ್ಣಯಕ್ಕೆ ಬರುವುದೇಕೆ?, ವ್ಯಾಘ್ರನಿಗೆ ಮಾನವನೇ ಯಾವಾಗ ಟಾರ್ಗೆಟ್ ಆಗ್ತಾನೆ ಎಂಬ ಪ್ರಶ್ನೆಗಳಿಗೆ ಉತ್ತರ ಹೀಗಿವೆ.

International Tiger Day 2022
ಫೋಟೋ ಕೃಪೆ ಅಬ್ದುಲ್ ಶೀಜ್ - ವನ್ಯಜೀವಿ ಛಾಯಾಗ್ರಹಕ

ಹುಲಿ ಬಲಿಷ್ಠ ಪ್ರಾಣಿಯಾದರೂ ಮನುಷ್ಯರನ್ನು ಕಂಡರೆ ದಾಳಿ ಮಾಡುವ ಗೋಜಿಗೆ ಹೋಗುವುದಿಲ್ಲ. ಒಂದು ವೇಳೆ ದಾಳಿ ಮಾಡಲು ಬಂದಿದ್ದಾರೆ ಎಂದುಕೊಂಡು ಪ್ರತಿದಾಳಿ ನಡೆಸಿದಾಗಲೂ ತಿನ್ನದೇ ಕೇವಲ ಸಾಯಿಸಿ ಪರಾರಿಯಾಗುತ್ತದೆ. ದಾಳಿ ಮಾಡಿದ ಬಳಿಕ ತಿಂದರೆ ಮನುಷ್ಯರನ್ನು ತನ್ನದೇ ಬೇಟೆ ಎಂದು ಭಾವಿಸಲಿದೆಯಂತೆ. ದಾಳಿಗೆ ಕಾರಣಗಳು ಹೀಗಿವೆ..

ಹುಲಿ ನರಹಂತಕ ಆಗುವುದೇಕೆ?: ಘರ್ಜಿಸುವ ವ್ಯಾಘ್ರನಿಗೂ ಇದೇ ಸವಾಲು-ಸರಹದ್ದು!
  • ಗಾಯವಾಗಿರಬೇಕು, ವಯಸ್ಸಾಗಿರಬೇಕು: ಸಾಮಾನ್ಯವಾಗಿ ಹುಲಿ ಶಕ್ತಿ ಕಳೆದುಕೊಂಡಾಗ, ಗಾಯಗೊಂಡಾಗ, ವಯಸ್ಸಾಗಿ ಪ್ರಾಣಿಗಳನ್ನು ಹಿಡಿಯಲು ವಿಫಲವಾದಾಗ ಸರಹದ್ದಿನ ಕದನದಲ್ಲಿ ಬೇರೊಂದು ಹುಲಿಯಿಂದ ಬೇರ್ಪಟ್ಟು ಆಹಾರ ಸಿಗದೇ ಇರುವ ಪರಿಸ್ಥಿತಿ ಎದುರಾದಾಗ ಮನುಷ್ಯ, ಕುರಿಯಂತಹ ಪ್ರಾಣಿಗಳನ್ನು ಬೇಟೆಯಾಡಲಿದೆ.

ಸಾಮಾನ್ಯವಾಗಿ ಹುಲಿ ತನ್ನ ಕಣ್ಣ ‌ನೇರಕ್ಕಿರುವ ಪ್ರಾಣಿಗಳನ್ನೇ ಬಲಿ ಪಡೆಯಲಿದೆ. ತನಗಿಂತ ದೊಡ್ಡದಾದ, ಎತ್ತರವಾದ ಆಕಾರ ಹೊಂದಿರುವ ಮನುಷ್ಯನನ್ನು ತನಗಿಂತ ಬಲಿಷ್ಠ ಎಂದುಕೊಂಡಿರಲಿದೆ. ಒಂದು ವೇಳೆ ಮನುಷ್ಯನನ್ನು ಒಮ್ಮೆ ತಿಂದರೆ ಮಾನವ ತನಗಿಂತ ಬಲಿಷ್ಠನಲ್ಲ, ಆತನೂ ಕೂಡ ತನ್ನ ಬಲಿ ಎಂದು ಭಾವಿಸಿ ಬೇಟೆಯಾಡಲು ಪ್ರಾರಂಭಿಸುತ್ತದೆ. ಬಹಿರ್ದೆಸೆ ವೇಳೆ, ಜಮೀನಿನಲ್ಲಿ ಕುಳಿತು ಕೆಲಸ ಮಾಡುವ ವೇಳೆ ಮನುಷ್ಯಾಕೃತಿ ಚಿಕ್ಕದಾಗಿ ಕಾಣುವುದರಿಂದ ಪ್ರಾಣಿಯೆಂದು ಭಾವಿಸಿ ಬೇಟೆಯಾಡುತ್ತದೆ. ಒಂದು ವೇಳೆ ಇದೇ ಮುಂದುವರಿದರೆ ನರಹಂತಕನಾಗಲಿದೆ ಎನ್ನುತ್ತಾರೆ ತಜ್ಞರು.

  • ಹೊಂಚು ಹಾಕದ ಹುಲಿರಾಯ: ಚಿರತೆಯಂತೆ ಹೊಂಚು ಹಾಕಿ ಹುಲಿ ಎಂದಿಗೂ ಬೇಟೆಯಾಡುವುದಿಲ್ಲ. ತನ್ನ ಮೈ ತೂಕ ಹೆಚ್ಚಿರುವುದರಿಂದ ಚಿರತೆಯಂತೆ ಹುಲಿಯು ಹೆಚ್ಚು ದೂರ ಓಡಲೂ ಸಾಧ್ಯವಾಗಲ್ಲ. ಒಂದು ಕಾಡೆಮ್ಮೆಯನ್ನು ಬೇಟೆಯಾಡಿದರೆ ಹುಲಿ ಒಂದು ವಾರ ಇಟ್ಟುಕೊಂಡು ತಿನ್ನಲಿದೆ. ಆದರೆ, ಚಿರತೆಯಂತೆ ಒಂದು ಬೇಟೆ ಮುಗಿಸಿ ಮತ್ತೊಂದರ ಮೇಲೆ ಕಣ್ಣಾಕುವುದಿಲ್ಲ. ಹೊಟ್ಟೆ ಹಸಿಯದಿದ್ದರೆ ಸುಖಾಸುಮ್ಮನೆ ಪ್ರಾಣಿಯನ್ನು ಸಾಯಿಸದಿರುವುದರಿಂದ ಕಾಡಿನ ಮೆಜೆಸ್ಟಿಯಾಗಿದೆ.
  • ಹುಂಡಿಪುರ ಕೇಸ್ ಬಳಿಕ ನರಭಕ್ಷಕ ಪದಕ್ಕೆ ಕತ್ತರಿ: ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಅರಣ್ಯ ವಲಯದಲ್ಲಿ ಹುಲಿಯೊಂದು ರೈತನೊಬ್ಬನನ್ನು ಕೊಂದು ತಿಂದು ಹಾಕಿತ್ತು. ಆವರೆಗೂ ಮಾಧ್ಯಮಗಳು ನರಭಕ್ಷಕ ಹುಲಿ ಎಂದೇ ಉಲ್ಲೇಖಿಸುತ್ತಿದ್ದವು.‌ ಆ ಪ್ರಕರಣದ ವೇಳೆ ಅರಣ್ಯ ಇಲಾಖೆ ತಗಾದೆ ತೆಗೆದು ನರಭಕ್ಷಕ ಎನ್ನುವುದು ಸರಿಯಲ್ಲ. ನರಹಂತಕ ಪದ ಬಳಕೆ ಸೂಕ್ತ ಎಂದು ತಿಳಿಸಿದ್ದರಿಂದ ಹುಂಡಿಪುರದ ಪ್ರಕರಣದ ಬಳಿಕ ನರಭಕ್ಷಕ ಹುಲಿ ಪದಕ್ಕೆ ಕತ್ತರಿ ಬಿದ್ದು ನರಹಂತಕ ಪದ ಚಾಲ್ತಿಗೆ ಬಂದಿದೆ.
  • ಸುಸ್ಥಿರ ಪರಿಸರದ ಸಂಕೇತ: ಹುಲಿ ಇರಬೇಕೆಂದರೆ ಅದಕ್ಕೆ ಬೇಕಾದ ಬೇಟೆ ಪ್ರಾಣಿಗಳು ಅಂದರೆ ಜಿಂಕೆ, ಕಡವೆ, ಕಾಡೆಮ್ಮೆ ಇರಬೇಕು. ಕಾಡಿನಲ್ಲಿ ಸಸ್ಯಹಾರಿ ಪ್ರಾಣಿಗಳು ಇರಬೇಕೆಂದರೆ ಹಸಿರು, ನೀರು ಇರಲೇಬೇಕು. ಹಸಿರು- ನೀರು ಇದ್ದರೇ ಕಾಡು ಸಮೃದ್ಧ ಎನ್ನಬಹುದಾಗಿದೆ. ಈ ಆಹಾರ ಸರಪಳಿಯಲ್ಲಿ ಹುಲಿ ಸುಸ್ಥಿರ ಪರಿಸರದ ಸಂಕೇತವಾಗಿದೆ.

ಕಾಡನ್ನು ರಕ್ಷಣೆ ಮಾಡಿದರೆ ಹುಲಿ ರಕ್ಷಣೆಯಾಗಲಿದೆ. ಹುಲಿ ಇದ್ದರೇ ಪರಿಸರ ಚೆನ್ನಾಗಿರುವ ಸಂಕೇತ. ಕಾಡಿನ ರಕ್ಷಣೆ ಕೇವಲ ಅರಣ್ಯಾಧಿಕಾರಿಗಳದ್ದಲ್ಲ, ಜನರು ಇದರಲ್ಲಿ ಭಾಗಿದಾರರು ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿವೃತ್ತ ನಿರ್ದೇಶಕ ಬಾಲಚಂದ್ರ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.

ವಿಶ್ವ ಹುಲಿ ದಿನಾಚರಣೆ: ಪ್ರಪಂಚದಾದ್ಯಂತ ಹುಲಿಗಳು ಎದುರಿಸುತ್ತಿರುವ ಅಪಾಯ ಮತ್ತು ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು 'ಅಂತಾರಾಷ್ಟ್ರೀಯ ಹುಲಿ ದಿನ ಅಥವಾ ವಿಶ್ವ ಹುಲಿ ದಿನ'ವನ್ನು ಪ್ರತಿ ವರ್ಷ ಜು.29 ರಂದು ಆಚರಿಸಲಾಗುತ್ತದೆ.

International Tiger Day 2022
ಫೋಟೋ ಕೃಪೆ ಅಬ್ದುಲ್ ಶೀಜ್ - ವನ್ಯಜೀವಿ ಛಾಯಾಗ್ರಹಕ

'ಗ್ಲೋಬಲ್ ಟೈಗರ್ ಡೇ' ಎಂದು ಕರೆಯುವ ಈ ವಿಶೇಷ ದಿನದ ಆಚರಣೆಯನ್ನು 2010ರಲ್ಲಿ ಪ್ರಾರಂಭ ಮಾಡಲಾಯಿತು. ಹುಲಿಗಳ ಸಂಖ್ಯೆಯಲ್ಲಿ ಆಗುತ್ತಿರುವ ಕುಸಿತವನ್ನು ತಡೆಯುವ ನಿಟ್ಟಿನಲ್ಲಿ ಪ್ರತಿ ವರ್ಷ ಜು.29 ರಂದು ಅಂತರಾಷ್ಟ್ರೀಯ ಹುಲಿ ದಿನ ಆಚರಣೆ ಮಾಡಬೇಕೆಂದು 2010ರಲ್ಲಿ, ರಷ್ಯಾದ ಸೇಂಟ್ ಪೀಟರ್ಸ್ಬರ್ಗ್​ನಲ್ಲಿ ನಡೆದ ಹುಲಿ ಸಮ್ಮೇಳನದಲ್ಲಿ ನಿರ್ಧರಿಸಲಾಯಿತು.

ಇದನ್ನೂ ಓದಿ: ಇಂದು ವಿಶ್ವ ಹುಲಿ ದಿನಾಚರಣೆ: ನಾಡಿನ ರಾಜನಿಂದ 'ಕಾಡಿನ ರಾಜ'ನಿಗೆ ಬೇಕಿದೆ ರಕ್ಷಣೆ

Last Updated :Jul 29, 2022, 1:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.