ETV Bharat / state

ಮಣ್ಣಲ್ಲಿ-ಮಣ್ಣಾದ ಧ್ರುವನಾರಾಯಣ: ಜನನಾಯಕನಿಗೆ ಅಶೃತರ್ಪಣ, ಸ್ನೇಹಿತನಿಗೆ ಹೆಗಲು ಕೊಟ್ಟ ಡಿಕೆಶಿ

author img

By

Published : Mar 12, 2023, 5:47 PM IST

Updated : Mar 12, 2023, 7:06 PM IST

ಸಜ್ಜನ ರಾಜಕಾರಣಿ ಹಾಗೂ ಜನನಾಯಕನಿಗೆ ಅಂತಿಮ ನಮನ - ಜಿಲ್ಲಾಡಳಿತದ ವತಿಯಿಂದ ಧ್ರುವನಾರಾಯಣ ಅವರಿಗೆ ಸರ್ಕಾರಿ ಗೌರವ - ತಂದೆ-ತಾಯಿ ಪಕ್ಕವೇ ಧ್ರುವ ಅವರ ಅಂತ್ಯಕ್ರಿಯೆ.

former-mp-dhruvanarayana-funeral
ಮಣ್ಣಲ್ಲಿ-ಮಣ್ಣಾದ ಧ್ರುವನಾರಾಯಣ: ಜನನಾಯಕನಿಗೆ ಅಶೃತರ್ಪಣ, ಸ್ನೇಹಿತನಿಗೆ ಹೆಗಲು ಕೊಟ್ಟ ಡಿಕೆಶಿ

ಮಣ್ಣಲ್ಲಿ-ಮಣ್ಣಾದ ಧ್ರುವನಾರಾಯಣ: ಜನನಾಯಕನಿಗೆ ಅಶೃತರ್ಪಣ, ಸ್ನೇಹಿತನಿಗೆ ಹೆಗಲು ಕೊಟ್ಟ ಡಿಕೆಶಿ

ಚಾಮರಾಜನಗರ: ನಾಡಿನ ಧೀಮಂತ ನಾಯಕ, ರಾಜಕಾಣರದಲ್ಲಿದ್ದ ಸಜ್ಜನೀಯ ವ್ಯಕ್ತಿ, ಅಜಾತಶತ್ರು ಆರ್. ಧ್ರುವನಾರಾಯಣ ಇಂದು ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದ ತೋಟದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ನೆಚ್ಚಿನ ನಾಯಕನನ್ನು ಕಳೆದುಕೊಂಡ ಖಾಲಿತನ, ಪಕ್ಷದ ಗೆಳೆಯನನ್ನು ಕಳೆದುಕೊಂಡ ಬೇಸರ ಹೀಗೆ ನೂರಾರು ದುಃಖ ಹೊತ್ತ ಸಾವಿರಾರು ಕಣ್ಣುಗಳು ಕಂಬನಿ ಹಾಕುತ್ತ ರಾಜಕೀಯ ಧ್ರುವತಾರೆಯನ್ನು ಭಾರದ ಮನಸ್ಸಿನಿಂದಲೇ ಕಳುಹಿಸಿಕೊಟ್ಟರು. ಶನಿವಾರ ತಡರಾತ್ರಿ ಚಾಮರಾಜನಗರಕ್ಕೆ ಪಾರ್ಥಿವ ಶರೀರ ಆಗಮಿಸಿತು. ಜಿಲ್ಲಾ ಕೇಂದ್ರದಲ್ಲಿ ಮೆರವಣಿಗೆ ನಡೆಸಿದ ಬಳಿಕ ಹುಟ್ಟೂರಿಗೆ ಪಾರ್ಥಿವ ಶರೀರ ತಂದು ಡಾ‌‌. ಬಿ‌.ಆರ್. ಅಂಬೇಡ್ಕರ್ ಭವನ ಸಮೀಪ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಹಳ್ಳಿ-ಹಳ್ಳಿಗಳಿಂದ ಬಂದ ಜನಸಾಗರ: ಅಜಾತಶತ್ರು, ಸಜ್ಜನ ರಾಜಕಾರಣಿ ಹಾಗೂ ಜನನಾಯಕನಿಗೆ ಅಂತಿಮ ನಮನ ಸಲ್ಲಿಸಲು ಹಳ್ಳಿಗಳಿಂದ ಜನರು ಆಟೋ, ಪಿಕ್​ಅಪ್ ವಾಹನಗಳನ್ನು ಮಾಡಿಕೊಂಡು ತಂಡೊಪತಂಡವಾಗಿ ಬಂದು ಅಂತಿಮ ನಮನ ಸಲ್ಲಿಸಿದರು‌‌.

ಅಂತಿಮ ನಮನ ಕಾರ್ಯಕ್ರಮದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಡಿ ಕೆ ಶಿವಕುಮಾರ್​ ಪಾಲ್ಗೊಂಡಿದ್ದಾರೆ. ಪುತ್ರ ದರ್ಶನ ಭುಜ ತಟ್ಟಿ ಸಮಾಧಾನ ಪಡಿಸಿಸ ಸಿದ್ದರಾಮಯ್ಯ ಅಂತಿಮ ವಿಧಿ-ವಿಧಾನದ ಬಗ್ಗೆ ಮಾಹಿತಿ ಪಡೆದರು. ನಂತರ, ಡಿಕೆಶಿ ಕಾಂಗ್ರೆಸ್ ಧ್ವಜವನ್ನು ಪಾರ್ಥಿವ ಶರೀರದ ಮೇಲೆ ಹೊದಿಸಿ ಬಿಕ್ಕಿ-ಬಿಕ್ಕಿ ಅತ್ತರು. ಕಾಂಗ್ರೆಸ್ ನಾಯಕರುಗಳು ಕುಟುಂಬಸ್ಥರಿಗೆ ಸಮಾಧಾನ ಪಡಿಸುತ್ತಿದ್ದುದು ಸಾಮಾನ್ಯವಾಗಿತ್ತು.

ಸರ್ಕಾರಿ ಗೌರವ : ಚಾಮರಾಜನಗರ ಜಿಲ್ಲಾಡಳಿತದ ವತಿಯಿಂದ ಮಾಜಿ ಸಂಸದ ಧ್ರುವನಾರಾಯಣ ಅವರಿಗೆ ಸರ್ಕಾರಿ ಗೌರವವನ್ನು ಸಲ್ಲಿಸಲಾಯಿತು. ಚಾಮರಾಜನಗರ ಪೊಲೀಸ್ ಇಲಾಖೆಯು ಗಾಳಿಗೆ ಗುಂಡು ಹಾರಿಸಿ ಗೌರವ ನಮನ ಸಲ್ಲಿಸಿತು. ಜಿಲ್ಲಾಡಳಿತ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆಶಿ, ಶಾಸಕರುಗಳು ಪುಷ್ಪ ಮಾಲೆ ಅರ್ಪಿಸಿ ಅಂತಿಮ ಗೌರವ ಸಲ್ಲಿಸಿದರು.

ಇದನ್ನೂ ಓದಿ: ಒಂದು ಮತದ ಮೌಲ್ಯ ತೋರಿಸಿದ್ದ ಧ್ರುವನಾರಾಯಣ್.. ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿ ಕಣ್ಮರೆ

ತಂದೆ-ತಾಯಿ ಪಕ್ಕ ಸಮಾಧಿ : ಧ್ರುವನಾರಾಯಣ ಅವರ ತಂದೆ-ತಾಯಿ ಸಮಾಧಿ ಪಕ್ಕವೇ ಧ್ರುವ ಅವರ ಅಂತ್ಯಕ್ರಿಯೆ ನಡೆಯಿತು. ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಕುರ್ಜು ಕಟ್ಟಿ ಧ್ರುವ ಅವರ ಅಂತಿಮ ಮೆರವಣಿಗೆ ನಡೆಸಿ ಬಳಿಕ ಮಣ್ಣು ಮಾಡಲಾಯಿತು. ಪತ್ನಿ ವೀಣಾ ಮಕ್ಕಳಾದ ದರ್ಶನ್, ಧೀರನ್ ಶೋಕ ಸಾಗರದಲ್ಲಿ ಮುಳುಗಿದ್ದರು. ಧ್ರುವನಾರಾಯಣ ಅವರ ಪಾರ್ಥಿವ ಶರೀರಕ್ಕೆ ಡಿ.ಕೆ‌. ಶಿವಕುಮಾರ್ ಹೆಗಲು ಕೊಟ್ಟು ಮೂರು ಸುತ್ತು ಸುತ್ತಿದರು.

ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ನಾಯಕರು: ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೈ ಮುಖಂಡರುಗಳಾದ ಸಲೀಂ ಅಹ್ಮದ್, ಡಿ.ಕೆ. ಸುರೇಶ್, ದಿನೇಶ್ ಗುಂಡೂರಾವ್, ಕೆ.ಎಚ್‌. ಮುನಿಯಪ್ಪ, ಸತೀಶ್ ಜಾರಕಿಹೊಳಿ, ವಿಶ್ವನಾಥ್, ರೋಜಿ ಜಾನ್, ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಸಿ‌.ಪುಟ್ಟರಂಗಶೆಟ್ಟಿ, ಆರ್. ನರೇಂದ್ರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ : ಸಕಲ ಸರ್ಕಾರಿ ಗೌರವದೊಂದಿಗೆ ಮಾಜಿ ಸಂಸದ ಧ್ರುವನಾರಾಯಣ್ ಅಂತ್ಯಕ್ರಿಯೆ: ಸಿಎಂ ಬಸವರಾಜ ಬೊಮ್ಮಾಯಿ

Last Updated : Mar 12, 2023, 7:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.