ETV Bharat / state

ಮಲೆಮಹದೇಶ್ವರ ಬೆಟ್ಟದಲ್ಲಿ ಸಿಎಂ ಸಿದ್ದರಾಮಯ್ಯ: ವಿಶೇಷ ಪೂಜೆ, ಬೆಳ್ಳಿ ರಥ ಸೇವೆ

author img

By ETV Bharat Karnataka Team

Published : Sep 27, 2023, 9:30 AM IST

Updated : Sep 27, 2023, 12:00 PM IST

Siddaramaiah Offered Prayers at Male Mahadeshwara
ಮಲೆಮಹದೇಶ್ವರ ಬೆಟ್ಟದಲ್ಲಿ ಸಿಎಂ ಸಿದ್ದರಾಮಯ್ಯ

ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗ್ಗೆ ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ 2ನೇ ಬಾರಿಗೆ ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಚಾಮರಾಜನಗರಕ್ಕೆ ಭೇಟಿ ನೀಡಿದ್ದಾರೆ. ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಇಂದು ಬೆಳಗ್ಗೆ ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಸಚಿವರಾದ ಕೆ.ವೆಂಕಟೇಶ್, ಹೆಚ್.ಸಿ.ಮಹದೇವಪ್ಪ ಜೊತೆಗೂಡಿ ಬಂದ ಸಿದ್ದರಾಮಯ್ಯ ಮಾದಪ್ಪನ ಬೆಟ್ಟದಲ್ಲಿ ಬೆಳ್ಳಿ ದಂಡ ಹಿಡಿದು ಬೆಳ್ಳಿ ರಥ ಸೇವೆ ಸಲ್ಲಿಸಿದರು. ನಂತರ ಸುತ್ತೂರು ಶ್ರೀಗಳನ್ನು ಭೇಟಿ ಮಾಡಲಿದ್ದಾರೆ. ಬಳಿಕ ಸಾಮೂಹಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಗರಿಗೆದರಿದ ಅಭಿವೃದ್ಧಿ ಕನಸು: ಪವಾಡ ಪ್ರಸಿದ್ಧ ಮಲೆಮಹದೇಶ್ವರ ದೇವಸ್ಥಾನಕ್ಕೆ ನಿನ್ನೆ (ಮಂಗಳವಾರ) ರಾತ್ರಿ 10 ಗಂಟೆ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಸಿಎಂ ಭೇಟಿ ನೀಡಿರುವುದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿಯ ಕನಸು ಗರಿಗೆದರಿದೆ. ಈ ಹಿಂದೆ ಸಿಎಂ ಆಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಮಾದಪ್ಪನ ಕ್ಷೇತ್ರದ ಅಭಿವೃದ್ಧಿಗೆ ಗಮನ ಹರಿಸಿದ್ದರು.

ಇಂದು ಸಿದ್ದರಾಮಯ್ಯ ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಸಭೆ ನಡೆಸಲಿದ್ದಾರೆ. ಮುಖ್ಯವಾಗಿ ಬೆಟ್ಟದಲ್ಲಿ ನಿರ್ಮಿಸುತ್ತಿರುವ 108 ಅಡಿ ಎತ್ತರದ ಪ್ರತಿಮೆ ಕಾಮಗಾರಿ ಕುಂಟುತ್ತಾ ಸಾಗಿದ್ದು, ಅದಕ್ಕೆ ಚುರುಕು ಮುಟ್ಟಿಸಬೇಕಿದೆ. ಕಾವೇರಿ ನದಿಯಲ್ಲಿ ನೀರಿನ ಹರಿವು ಕಡಿಮೆ ಆಗಿರುವುದರಿಂದ ಬೆಟ್ಟಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಒದಗಿಸಲು ಆಗುತ್ತಿಲ್ಲ‌. ಇದರಿಂದ ಭಕ್ತರು ತೊಂದರೆ ಅನುಭವಿಸುವಂತಾಗಿದೆ. ಬೆಟ್ಟದಲ್ಲಿ ಮೂಲಸೌಕರ್ಯ ಕಲ್ಪಿಸಬೇಕಿದ್ದು ಮುಖ್ಯಮಂತ್ರಿಗಳು ಹೆಚ್ಚಿನ ಅನುದಾನ ಘೋಷಿಸುತ್ತಾರಾ? ಎಂಬ ಆಶಾ ಭಾವನೆ ಜಿಲ್ಲೆಯ ಜನರಲ್ಲಿ ಮೂಡಿದೆ.

ಇದನ್ನೂ ಓದಿ: ಚಾಮರಾಜನಗರಕ್ಕೆ ಭೇಟಿ ನೀಡಲಿರುವ ಸಿಎಂ : ಮೌಢ್ಯಕ್ಕೆ ಸೆಡ್ಡು ಹೊಡೆದ ಸಿದ್ದರಾಮಯ್ಯ

ಮೌಢ್ಯಕ್ಕೆ ಸೆಡ್ಡು: ಸಿಎಂ ಆದವರು ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂಬ ಮೌಢ್ಯವನ್ನು ಮುರಿಯಲು ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ. ಮೊದಲ ಅವಧಿಯಲ್ಲಿ ಸಿಎಂ ಆಗಿದ್ದ ಸಂದರ್ಭ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಭೇಟಿ ನೀಡಿ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದರು. ಬಳಿಕ ಐದು ವರ್ಷಗಳ ಕಾಲ ಆಡಳಿತ ನಡೆಸಿದ್ದರು.

ಸಾಮೂಹಿಕ ವಿವಾಹದಲ್ಲಿ ಭಾಗಿ: ಮಲೆಮಹದೇಶ್ವರ ಬೆಟ್ಟದಲ್ಲಿ ಇಂದು ನಡೆಯಲಿರುವ ಸಾಮೂಹಿಕ ವಿವಾಹದಲ್ಲಿ ಸಿಎಂ ಭಾಗವಹಿಸಲಿದ್ದಾರೆ. ಬಳಿಕ ಅಲ್ಲಿಂದ ಹೊರಟು ಪ್ರಾಧಿಕಾರದ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಚಾಮರಾಜನಗರಕ್ಕೆ ಭೇಟಿ ನೀಡಲಿದ್ದು, ಕುರುಬ ಸಮುದಾಯದ ಕನಕ ಭವನ ವಾಣಿಜ್ಯ ಸಂಕೀರ್ಣದ ಗುದ್ದಲಿ ಪೂಜೆ ನಡೆಸುವರು. ನಂತರ ಚಾಮರಾಜನಗರ ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ನಡೆಯಲಿರುವ ಕೆಡಿಪಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಮಾದಪ್ಪನ ಬೆಟ್ಟದಲ್ಲಿ ಕೊನೆಗೂ ಸಾಮೂಹಿಕ ವಿವಾಹಕ್ಕೆ ಕೂಡಿ ಬಂತು ಕಾಲ!

Last Updated :Sep 27, 2023, 12:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.