ETV Bharat / state

ಪೊಲೀಸರಿಂದ ವಿದ್ಯಾರ್ಥಿಗಳ ವಿಚಾರಣೆ ಆರೋಪ: ಹೈಕೋರ್ಟ್‌ಗೆ ವರದಿ ಸಲ್ಲಿಸಿದ ಸರ್ಕಾರ

author img

By

Published : Feb 19, 2020, 8:49 PM IST

ಶಾಲೆಯ ವಿದ್ಯಾರ್ಥಿಗಳನ್ನು ಪೊಲೀಸರು ಸಮವಸ್ತ್ರದಲ್ಲೇ ವಿಚಾರಣೆ ನಡೆಸಿದ ಆರೋಪದಡಿ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ ವರದಿ ಸಲ್ಲಿಸಿದೆ. ಪಿಐಎಲ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

government-gives-report-of-police-investigated-students-in-uniform
government-gives-report-of-police-investigated-students-in-uniform

ಬೆಂಗಳೂರು: ಬೀದರ್‌ನ ಶಾಹಿನ್ ಶಾಲೆಯ ವಿದ್ಯಾರ್ಥಿಗಳನ್ನು ಪೊಲೀಸರು ಸಮವಸ್ತ್ರದಲ್ಲೇ ವಿಚಾರಣೆ ನಡೆಸಿದ ಆರೋಪದಡಿ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ ವರದಿ ಸಲ್ಲಿಸಿದೆ.

ಶಾಹಿನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿರುವ ಪಿಐಎಲ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡ್ಗಿ, ಪೀಠಕ್ಕೆ ಘಟನೆಗೆ ಸಂಬಂಧಿಸಿದ ವರದಿ ಸಲ್ಲಿಸಿದರು.

ಬಳಿಕ ವರದಿ ಸಾರಾಂಶ ವಿವರಿಸಿ, ಅರ್ಜಿದಾರರು ಮಾಧ್ಯಮಗಳಲ್ಲಿ ಬಂದ ಸುದ್ದಿ ಆಧರಿಸಿ ಆರೋಪ ಮಾಡಿದ್ದಾರೆ. ಪೊಲೀಸರು ಸಮವಸ್ತ್ರದಲ್ಲಿ ತೆರಳಿ ಶಾಲಾ ವಿದ್ಯಾರ್ಥಿಗಳನ್ನು ತನಿಖೆಗೆ ಒಳಪಡಿಸಿಲ್ಲ. ಸಾಮಾನ್ಯ ಧಿರಿಸಿನಲ್ಲೇ ಶಾಲೆಗೆ ತೆರಳಿ ಕೌನ್ಸೆಲಿಂಗ್ ನಡೆಸಿ, ಮಾಹಿತಿ ಪಡೆದುಕೊಂಡಿದ್ದಾರೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, ಕೌನ್ಸೆಲಿಂಗ್ ಮಾಡಲು ತನಿಖಾಧಿಕಾರಿ ತರಬೇತಿ ಪಡೆದಿದ್ದರಾ ಎಂದು ಅಡ್ವೋಕೆಟ್ ಜನರಲ್​ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿ ಎಜಿ, ತನಿಖಾಧಿಕಾರಿ ಜೊತೆಗೆ ಜಿಲ್ಲಾ ಮಕ್ಕಳ‌ ಸಂರಕ್ಷಣಾಧಿಕಾರಿ, ಶಾಲೆ ಉಪಾಧ್ಯಾಯರು, ಬಾಲ ನ್ಯಾಯದ ಅಧಿಕಾರಿಗಳು ಇದ್ದರು. ಜನವರಿ 30ರಂದು 3 ವಿದ್ಯಾರ್ಥಿಗಳು ಮತ್ತು ಜನವರಿ 31ರಂದು 4 ವಿದ್ಯಾರ್ಥಿಗಳ ಜತೆ ಸಮಾಲೋಚನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಪ್ರಕರಣದಲ್ಲಿ ಮತ್ತಷ್ಟು ಕೌನ್ಸೆಲಿಂಗ್ ಮುಂದುವರೆಸುವ ಅಗತ್ಯವಿದೆಯಾ ಎಂದು ಪೀಠ ಕೇಳಿದ ಪ್ರಶ್ನೆಗೆ ಎಜಿ ಅಗತ್ಯವಿಲ್ಲವೆಂದು ಉತ್ತರಿಸಿದರು. ಇದೇ ವೇಳೆ ಎಜಿ ವರದಿಗೆ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರ ಪರ ವಕೀಲರು ಕಾಲಾವಕಾಶ ಕೋರಿದರು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡಲಾಯಿತು.

ಪ್ರಕರಣ ಹಿನ್ನೆಲೆ: ಬೀದರ್​ನ ಶಾಹಿನ್ ಶಾಲೆಯಲ್ಲಿ ಸಿಎಎ ವಿರೋಧಿಸಿ ನಾಟಕ ಪ್ರದರ್ಶಿಸಲಾಯಿತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ದೇಶದ್ರೋಹದಡಿ ಪ್ರಕರಣ ದಾಖಲಿಸಿದ್ದರು. ನಂತರ ಸ್ಥಳೀಯ ಪೊಲೀಸರು ಸಮವಸ್ತ್ರದಲ್ಲೇ ತೆರಳಿ ಶಾಲಾ ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ ಆರೋಪಕ್ಕೆ ತುತ್ತಾಗಿದ್ದರು. ಈ ಕುರಿತು ಮಾಧ್ಯಮಗಳು ವರದಿ ಮಾಡಿದ್ದವು. ಬಳಿಕ ಪೊಲೀಸರ ಅನುಚಿತ ಕ್ರಮ ಪ್ರಶ್ನಿಸಿ ಹೈಕೋರ್ಟ್​ಗೆ ಪಿಐಎಲ್ ಸಲ್ಲಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.