ETV Bharat / state

ಅಪರೂಪದ ಮೆದುಳಿನ ಕಾಯಿಲೆಗೆ ತುತ್ತಾಗಿದ್ದ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ : ವಿಮ್ಸ್​ ವೈದ್ಯರ ಸಾಧನೆ

author img

By

Published : Jun 7, 2023, 8:27 PM IST

ಅಪರೂಪದ ಮೆದುಳಿನ ಕಾಯಿಲೆಗೆ ತುತ್ತಾಗಿದ್ದ ಐದು ವರ್ಷದ ಬಾಲಕನಿಗೆ ಬಳ್ಳಾರಿ ವಿಮ್ಸ್​​ನ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.

successful-surgery-on-a-boy-suffering-from-a-rare-brain-disease-in-bellary
ಅಪರೂಪದ ಮೆದುಳಿನ ಕಾಯಿಲೆಗೆ ತುತ್ತಾಗಿದ್ದ ಬಾಲಕನ ಯಶಸ್ವಿ ಶಸ್ತ್ರಚಿಕಿತ್ಸೆ : ವಿಮ್ಸ್​ ವೈದ್ಯರ ಸಾಧನೆ

ಬಳ್ಳಾರಿ : ಉಸಿರಾಟ ಮತ್ತು ಹೃದಯ ಬಡಿತ ಕ್ರಿಯೆ ನಿಯಂತ್ರಿಸುವ ಬ್ರೈನ್ ಸ್ಟೆಮ್ ಬಳಿ ಮೆದುಳಿನ ದ್ರವದಿಂದ ಉಂಟಾದ ನೀರಿನ ಗುಳ್ಳೆ ರೂಪದ ಚೀಲ (cyst)ದಂತಹ ಅತಿ ವಿರಳ ಕಾಯಿಲೆಯಿಂದ ಬಳಲುತ್ತಿದ್ದ 5 ವರ್ಷದ ಬಾಲಕನಿಗೆ ಬಳ್ಳಾರಿ ವಿಮ್ಸ್​ನ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದರು. ಮೆದುಳಿನ ಅರ್ಧ ಭಾಗದ ತಲೆ ಬುರುಡೆಯನ್ನು ತೆರೆದು ಮೈಕ್ರೋಸ್ಕೋಪ್ ಮೂಲಕ ಸತತ ಮೂರು ಗಂಟೆಗಳ ಕಾಲ ಅತಿ ಕ್ಲಿಷ್ಟಕರ ಹಾಗೂ ಅತೀ ಸೂಕ್ಷ್ಮ ರೀತಿಯ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ವಿಮ್ಸ್​ನ ವೈದ್ಯರು ಯಶಸ್ವಿಯಾಗಿದ್ದಾರೆ. ವಿಮ್ಸ್​ನ ಮೆದುಳು ಮತ್ತು ನರರೋಗ ಶಸ್ತ್ರ ಚಿಕಿತ್ಸೆ ತಜ್ಞ (ನ್ಯೂರೋ ಸರ್ಜನ್) ಹಾಗೂ ವಿಮ್ಸ್​ನ ನ್ಯೂರೋ ಸರ್ಜರಿ ವಿಭಾಗದ ಡಾ.ವಿಶ್ವನಾಥ ಈ ಸಾಧನೆ ಮಾಡಿದ್ದಾರೆ. ವೈದ್ಯಕೀಯ ದಾಖಲಾತಿಗಳ ಸಂಗ್ರಹಕನಾದ ಪಬ್ ಮೆಡ್ (Pub Med) ಪ್ರಕಾರ ಜಗತ್ತಿನಲ್ಲಿ ನಡೆದ ಅತ್ಯಂತ ವಿರಳ ಚಿಕಿತ್ಸೆಯಲ್ಲಿ ಇದು ಎರಡನೇ ಶಸ್ತ್ರಚಿಕಿತ್ಸೆ ಎಂದು ತಿಳಿಸಲಾಗಿದೆ.

ಜಿಲ್ಲೆಯ ಸಂಡೂರು ತಾಲ್ಲೂಕಿನ ತಾರನಗರದ 5 ವರ್ಷದ ಬಾಲಕ ಹುಟ್ಟಿನಿಂದಲೇ ಈ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ನಿಯಂತ್ರಣ ತಪ್ಪಿ ಬೀಳುತ್ತಿದ್ದ. ಇದನ್ನು ಗಮನಿಸಿದ ಬಾಲಕನ ಪೋಷಕರು ಸ್ಥಳೀಯ ವೈದ್ಯರ ಬಳಿ ತಪಾಸಣೆಗೊಳಪಡಿಸಿದ್ದಾರೆ. ಈ ವೇಳೆ ವೈದ್ಯರು ಮಗುವಿಗೆ ಅಪರೂಪದ ಕಾಯಿಲೆ ಇದ್ದು, ನರರೋಗ ತಜ್ಞರ ಬಳಿ ಶಸ್ತ್ರಚಿಕಿತ್ಸೆ ಮಾಡಿಸುವಂತೆ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನಿಮ್ಹಾನ್ಸ್, ಇಂದಿರಾ ಗಾಂಧಿ ಆಸ್ಪತ್ರೆಗೆ ಬಾಲಕನನ್ನು ಕರೆ ತಂದು ತಪಾಸಣೆಗೊಳಪಡಿಸಲಾಗಿತ್ತು. ಇಲ್ಲಿ ಚಿಕಿತ್ಸೆಗೆ ದಿನಾಂಕ ನಿಗದಿಯಾಗದ ಹಿನ್ನಲೆ ವಿಮ್ಸ್​ನಲ್ಲಿ ತಪಾಸಣೆಗೊಳಗಾಗಿದ್ದರು.

successful-surgery-on-a-boy-suffering-from-a-rare-brain-disease-in-bellary
ಶಸ್ತ್ರ ಚಿಕಿತ್ಸೆಗೆ ಒಳಗಾದ ಬಾಲಕ

ಎಂಆರ್​​ಐ ಸ್ಕ್ಯಾನಿಂಗ್​ ಮೂಲಕ ಅತೀ ವಿರಳ ಕಾಯಿಲೆ ಇರುವುದನ್ನು ಖಚಿತಪಡಿಸಿಕೊಂಡ ಡಾ. ವಿಶ್ವನಾಥ್ ಅವರು ಬಾಲಕನನ್ನು ಮೇ 08 ರಂದು ದಾಖಲು ಮಾಡಿಕೊಂಡು ಪಾಲಕರೊಂದಿಗೆ ಆಪ್ತ ಸಮಾಲೋಚನೆ ನಡೆಸಿದ್ದರು. ಬಳಿಕ ಪೋಷಕರ ಸಮ್ಮತಿಯ ಮೇರೆಗೆ ಮೇ 12ರಂದು ಡಾ.ವಿಶ್ವನಾಥ ಅವರು ಸತತ ಮೂರು ಗಂಟೆಗಳ ಅವಧಿಯ ಶಸ್ತ್ರ ಚಿಕಿತ್ಸೆಯನ್ನು ವಿಮ್ಸ್​​ ಅಧೀನದಲ್ಲಿರುವ ಟ್ರಾಮಾ ಕೇರ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೈಗೊಂಡಿದ್ದರು.

ಈ ಮಗುವಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿ ನಂತರ ನಿರಂತರ ತಪಾಸಣೆಯ ಜೊತೆಗೆ ಔಷಧೋಪಚಾರ ನೀಡಲಾಗಿದೆ. ಮಗು ಗುಣಮುಖವಾಗಿ ಚಟುವಟಿಕೆಯಿಂದ ಇದ್ದು, ಯಾವುದೇ ನ್ಯೂನತೆಗಳು ಇಲ್ಲ. ಬಾಲಕನು ಸ್ವತಂತ್ರವಾಗಿ ಆಹಾರ ಸೇವನೆ, ನಡೆದುಕೊಂಡು ಹೋಗುವುದು ಇತ್ಯಾದಿ ಮಾಡುತ್ತಿದ್ದಾನೆ. ಇಂತಹ ಅಪರೂಪದ ಶಸ್ತ್ರ ಚಿಕಿತ್ಸೆ ನಡೆಸಿ ಮಗು ಗುಣಮುಖವಾಗುವಂತೆ ಮಾಡಿದ ಡಾ. ವಿಶ್ವನಾಥ ಮತ್ತು ಅವರ ತಂಡಕ್ಕೆ ಹಾಗೂ ವಿಮ್ಸ್​ಗೆ ಬಾಲಕನ ಪೋಷಕರಾದ ನಾಗೇಶ್ ಮತ್ತು ಪಾರ್ವತಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಶಸ್ತ್ರಚಿಕಿತ್ಸೆಯಲ್ಲಿ ಡಾ.ವಿಶ್ವನಾಥ್ ಅವರೊಂದಿಗೆ ಡಾ.ಬಸವರಾಜ್ ಪಾಟೀಲ್, ಡಾ.ಚಂದ್ರಕುಮಾರ್, ಅರವಳಿಕೆ ತಜ್ಞ ಡಾ.ಶ್ರೀನಿವಾಸುಲು, ಶುಶ್ರೂಷಕಿರಾದ ಸಿಜ್ಜು, ನ್ಯಾನ್ಸಿ ಅವರು ಪಾಲ್ಗೊಂಡಿದ್ದರು.

ವಿಮ್ಸ್​​ನ ಮೆದುಳು ಮತ್ತು ನರರೋಗ ಶಸ್ತ್ರ ಚಿಕಿತ್ಸಾ ತಜ್ಞ (ನ್ಯೂರೋ ಸರ್ಜನ್) ಹಾಗೂ ವಿಮ್ಸ್​​ ನ್ಯೂರೋ ಸರ್ಜರಿ ವಿಭಾಗದ ಡಾ.ಎಸ್ ವಿಶ್ವನಾಥ ಅವರು ಮೆದುಳು ಹಾಗೂ ನರರೋಗಗಳಿಗೆ ಸಂಬಂಧಿಸಿದ ಅನೇಕ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಗಳನ್ನು ಕೈಗೊಂಡು ವಿಮ್ಸ್​ಗೆ ಕೀರ್ತಿ ತಂದಿದ್ದಾರೆ. ಇಂತಹ ಅಪರೂಪದ ಶಸ್ತ್ರಚಿಕಿತ್ಸೆ ಕೈಗೊಂಡು ಸಾಧನೆಗೈದ ಡಾ.ವಿಶ್ವನಾಥ್ ಮತ್ತು ತಂಡಕ್ಕೆ ವಿಮ್ಸ್​​ ನಿರ್ದೇಶಕರಾದ ಡಾ.ಗಂಗಾಧರ ಗೌಡ, ಟ್ರಾಮಾ ಕೇರ್​​ನ ಅಧೀಕ್ಷಕ ಡಾ.ಶಿವನಾಯ್ಕ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ವಿಮ್ಸ್​ನಲ್ಲಿ ವಿಕಿರಣ ಚಿಕಿತ್ಸಾ ವಿಭಾಗ ಪುನಾರಂಭ: ತಪ್ಪಿತು ಕ್ಯಾನ್ಸರ್ ರೋಗಿಗಳ ಅಲೆದಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.