ETV Bharat / state

ಮುಂಗಾರು ವಿಳಂಬ, ಬಳ್ಳಾರಿಯಲ್ಲಿ ಬಿತ್ತನೆ ಕಾರ್ಯ ಕುಂಠಿತ: ಬರದ ಆತಂಕದಲ್ಲಿ ರೈತರು

author img

By

Published : Jun 29, 2023, 9:00 AM IST

Updated : Jun 29, 2023, 1:28 PM IST

monsoon
ಬಳ್ಳಾರಿಯಲ್ಲಿ ಬಿತ್ತನೆ ಕಾರ್ಯ ಕುಂಠಿತ

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ 1.73 ಲಕ್ಷ ಹೆಕ್ಟೇರ್​ ಬಿತ್ತನೆ ಗುರಿ ಹೊಂದಲಾಗಿದ್ದು, ಮಳೆಯಾಗದ ಹಿನ್ನೆಲೆ ಬಿತ್ತನೆ ಕಾರ್ಯ ವಿಳಂಬವಾಗಿದೆ.

ಬಳ್ಳಾರಿಯಲ್ಲಿ ಮಳೆಯಾಗದ ಹಿನ್ನೆಲೆ ಬಿತ್ತನೆ ಕಾರ್ಯ ವಿಳಂಬ

ಬಳ್ಳಾರಿ : ಈ ಬಾರಿ ಮುಂಗಾರು ಮಳೆ ವಿಳಂಬವಾಗಿರುವುದರಿಂದ ಬಳ್ಳಾರಿ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿಲ್ಲ. ಕಳೆದ ಸಾಲಿನ ಮುಂಗಾರು ಹಂಗಾಮಿನಲ್ಲಿ ಜೂನ್ ಮೊದಲ ವಾರದಲ್ಲೇ ಕೃಷಿ ಚಟುವಟಿಕೆಗಳು ಗರಿಗೆದರಿತ್ತು. ಆದರೆ, ಈ ಬಾರಿ ಜಿಲ್ಲೆಯ ರೈತರು ವರುಣನ ಕೃಪೆಗಾಗಿ ಆಗಸದತ್ತ ಮುಖ ಮಾಡಿದ್ದಾರೆ.

ಹೌದು, ಜಿಲ್ಲೆಯ ರೈತರ ಜೀವನಾಧಾರವಾಗಿರುವ ತುಂಗಭದ್ರಾ ಅಣೆಕಟ್ಟೆಯಲ್ಲಿ ಜಲ ಸಂಗ್ರಹ ಬರಿದಾಗಿದೆ. ಕೃಷಿ ಚಟುವಟಿಕೆಯ ಚಾಲನಶಕ್ತಿಯಾಗಿರುವ ಕಾಲುವೆಗಳಿಗೆ ನೀರು ಹರಿಯುವುದನ್ನು ನೋಡಲು ಇನ್ನಷ್ಟು ದಿನ ಕಾಯುವಂತಾಗಿದೆ. ಟಿಬಿ ಡ್ಯಾಂ ತುಂಬಿದಾಗ, ಕಾಲುವೆಯಲ್ಲಿ ನೀರು ಹರಿದಾಗ ಮಾತ್ರ ಜಿಲ್ಲೆಯ ವ್ಯವಸಾಯ ಚಟುವಟಿಕೆಗಳು ಚುರುಕುಗೊಂಡು ಭತ್ತ ಸೇರಿದಂತೆ ವಿವಿಧ ಬೆಳೆ ಬೆಳೆಯಬಹುದಾಗಿದೆ. ಮುಂಗಾರು ಹಂಗಾಮಿನಲ್ಲಿ ಜುಲೈ ಅಂತ್ಯದವರೆಗೂ ಬಿತ್ತನೆ ಮಾಡಬಹುದಾದರೂ, ಮಳೆ ಬರದೇ ಇರುವುದರಿಂದ ರೈತರು ಆತಂಕದಲ್ಲಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ಜಿಲ್ಲೆಯ ರೈತರ ಪರಿಸ್ಥಿತಿ ಊಹಿಸಲು ಅಸಾಧ್ಯ.

ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟಾರೆ 1.74 ಲಕ್ಷ ಹೆಕ್ಟೇರ್ ಕೃಷಿ ಜಮೀನಿದ್ದು, ಅದರಲ್ಲಿ 1.09 ಲಕ್ಷ ಹೆಕ್ಟೇರ್ ನೀರಾವರಿ ಹಾಗೂ 85 ಸಾವಿರ ಹೆಕ್ಟೇರ್ ಮಳೆಯಾಶ್ರಿತ ಜಮೀನಿದೆ. ಪ್ರಸಕ್ತ ಸಾಲಿನಲ್ಲಿ 1.73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ, ಇದುವರೆಗೆ ಶೇ 1.17 ರಷ್ಟು ಮಾತ್ರ ಬಿತ್ತನೆಯಾಗಿದೆ. ಉಳಿದ ಶೇ 98.83 ಪ್ರದೇಶದಲ್ಲಿ ಬಿತ್ತನೆ ಆಗಿಲ್ಲ. ಮುಂಗಾರು ಮಳೆಯ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿಲ್ಲ.

ಒಟ್ಟು ಕೃಷಿ ಭೂಮಿಯಲ್ಲಿ 1572 ಹೆಕ್ಟೇರ್ ನೀರಾವರಿ ಮತ್ತು 459 ಹೆಕ್ಟೇರ್ ಮಳೆಯಾಶ್ರಿತ ಜಮೀನಿನಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬೆಳೆಯುವ ವಿವಿಧ ಬೆಳೆಗಳಲ್ಲಿ ಮೆಕ್ಕೆಜೋಳ 134 ಹೆಕ್ಟೇರ್, ಸಜ್ಜೆ 298 ಹೆಕ್ಟೇರ್, ಜೋಳ 71 ಹೆಕ್ಟೇರ್, ಸೂರ್ಯಕಾಂತಿ 310 ಹೆಕ್ಟೇರ್, ಹತ್ತಿ 1109 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಅಂಕಿ - ಅಂಶಗಳು ತಿಳಿಸಿವೆ.

ಬರದ ಛಾಯೆಯ ಆತಂಕದಲ್ಲಿ ರೈತರು : ಜಿಲ್ಲೆಯಲ್ಲಿ ಉತ್ತಮ ಮಳೆ ಬೀಳದ ಕಾರಣ ಬರದ ಛಾಯೆ ಆವರಿಸಿದೆ. ಜಿಲ್ಲೆಯಲ್ಲಿ ಬಿದ್ದ ಮಳೆಯ ಅಂಕಿ ಅಂಶದ ಪ್ರಕಾರ, ಒಟ್ಟಾರೆ ಸರಾಸರಿ ಶೇ.42ರಷ್ಟು ಮಳೆ ಕೊರತೆ ಕಾಡುತ್ತಿದೆ. ತಾಲೂಕುವಾರು ಅನ್ವಯ, ಬಳ್ಳಾರಿ ತಾಲೂಕಿನಲ್ಲಿ ಶೇ.49, ಸಂಡೂರು ಶೇ.59, ಸಿರಗುಪ್ಪ ಶೇ.55, ಕುರುಗೋಡು ಶೇ. 28, ಕಂಪ್ಲಿ ಶೇ.25 ರಷ್ಟು ಮಳೆ ಕೊರತೆ ಕಂಡುಬಂದಿದೆ. ಜಿಲ್ಲೆಯಲ್ಲಿ ಜನವರಿಯಿಂದ ಜೂನ್ ಅಂತ್ಯದ ವರೆಗೆ 124 ಮಿ.ಮೀ. ಮಳೆ ಆಗಬೇಕಿತ್ತು. ಆದರೆ 73 ಮಿ.ಮೀ. ಮಾತ್ರ ಮಳೆ ಆಗಿದೆ. ಕಳೆದ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿತ್ತು. 599 ಮಿ.ಮೀ ಆಗಬೇಕಿದ್ದ ಮಳೆ 795 ಮಿ.ಮೀ. ಆಗಿತ್ತು. ಆದರೆ, ಈ ಬಾರಿ ಮಳೆ ಕೊರತೆ ಕಂಡುಬಂದಿದೆ.

ರಸಗೊಬ್ಬರಕ್ಕಿಲ್ಲ ಕೊರತೆ : ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೇಕಿರುವಷ್ಟು ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಅಗತ್ಯಕ್ಕೂ ಹೆಚ್ಚು ರಸಗೊಬ್ಬರದ ಲಭ್ಯತೆ ಇದೆ. ಡಿಎಪಿ, ಯೂರಿಯಾ ಸೇರಿದಂತೆ ಒಟ್ಟು 42 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರದ ದಾಸ್ತಾನಿದೆ. ಇನ್ನು ಬಿತ್ತನೆ ಬೀಜಕ್ಕೂ ಕೊರತೆ ಇಲ್ಲ. ಜಿಲ್ಲೆಗೆ 7,500 ಕ್ವಿಂಟಾಲ್ ಬಿತ್ತನೆ ಬೀಜ ಬೇಕಿದ್ದು, 15 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜದ ಲಭ್ಯತೆ ಇದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ನೌಕಾನೆಲೆ ಕಾಮಗಾರಿಯಿಂದ ಇಡೂರು ಗ್ರಾಮಸ್ಥರಿಗೆ ಸಂಕಷ್ಟ: ಹತ್ತಾರು ಮನೆ, ನೂರಾರು ಎಕರೆ ಭೂಮಿ ಜಲಾವೃತ

Last Updated :Jun 29, 2023, 1:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.