ETV Bharat / state

ಬಳ್ಳಾರಿ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಾಯಗೊಂಡ ನವಿಲಿಗೆ ಚಿಕಿತ್ಸೆ ನೀಡಿದ ವೈದ್ಯರು

author img

By ETV Bharat Karnataka Team

Published : Jan 12, 2024, 8:56 AM IST

ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಗಾಯಗೊಂಡು ನಡೆಯಲಾಗದ ಪರಿಸ್ಥಿತಿಯಲ್ಲಿದ್ದ ನವಿಲನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಂದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

A wounded peacock
ಗಾಯಗೊಂಡ ನವಿಲು

ಬಳ್ಳಾರಿ: ಸಾಮಾನ್ಯವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮನುಷ್ಯರಿಗೆ ಮಾತ್ರ ಚಿಕಿತ್ಸೆ ನೀಡುವುದನ್ನು ಕಾಣುತ್ತೇವೆ. ಆದರೆ ನವಿಲಿಗೂ ಚಿಕಿತ್ಸೆ ನೀಡಿ ಆರೈಕೆ ಮಾಡಿರುವ ಘಟನೆ ಸಂಡೂರು ತಾಲ್ಲೂಕಿನ ತಾರಾನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ತೋರಣಗಲ್ಲು ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಗಾಯಗೊಂಡು ನಡೆಯಲಾಗದ ಸ್ಥಿತಿಯಲ್ಲಿದ್ದ ನವಿಲನ್ನು ಅರಣ್ಯ ಇಲಾಖೆಯ ಸಿಬ್ಬಂದಿ ರಾಘು ಗುರುತಿಸಿದ್ದಾರೆ. ತಕ್ಷಣ ನವಿಲಿನ ಆರೋಗ್ಯ ಸ್ಥಿತಿಗತಿಯ ಗಂಭೀರತೆ ಅರಿತು ಹತ್ತಿರದ ತಾರಾನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಂದಿದ್ದಾರೆ. ತಾರಾನಗರದ ವೈದ್ಯಾಧಿಕಾರಿ ಡಾ.ಸುನೀತಾ, ಡಾ.ಹರೀಶ್ ಹಾಗೂ ಸಿಬ್ಬಂದಿಯಾದ ಶಿವಗಂಗಾ, ಶಂಕರ ಅವರ ಉಪಸ್ಥಿತಿಯಲ್ಲಿ ಚಿಕಿತ್ಸೆ ನೀಡಲಾಗಿದೆ.

"ಸಂಡೂರು ತಾಲೂಕಿನಲ್ಲಿ ಅರಣ್ಯ ಪ್ರದೇಶದಲ್ಲಿ ಹೆಚ್ಚು ಪ್ರಾಣಿ, ಪಕ್ಷಿಗಳು ಕಂಡುಬರುತ್ತವೆ. ಅವುಗಳು ರಸ್ತೆ ದಾಟುವಾಗ ವಾಹನಗಳನ್ನು ನಿಧಾನವಾಗಿ ಚಲಿಸುವ ಮೂಲಕ ಪ್ರಾಣಿಗಳ ಸಂತತಿ ಕಾಪಾಡುವ ಅಗತ್ಯವಿದೆ" ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್‍ ಬಾಬು ಮನವಿ ಮಾಡಿದ್ದಾರೆ.

"ಸಾಮಾನ್ಯವಾಗಿ ಆರೋಗ್ಯ ಕೇಂದ್ರಗಳಲ್ಲಿ ಪ್ರಾಣಿ, ಪಕ್ಷಿಗಳ ಚಿಕಿತ್ಸೆಗೆ ನೇರವಾಗಿ ಔಷಧಿಗಳು ಇರುವುದಿಲ್ಲ. ಹೀಗಿದ್ದರೂ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ನವಿಲಿಗೆ ಬೇಕಾಗುವ ಔಷಧಿಯನ್ನು ತರಿಸಿಕೊಂಡು ಚಿಕಿತ್ಸೆ ನೀಡಿ ಆರೈಕೆ ಮಾಡಿ, ಕಳುಹಿಸಿಕೊಟ್ಟಿದ್ದಾರೆ. ಪ್ರಸ್ತುತ ನವಿಲು ಆರೋಗ್ಯವಾಗಿದೆ" ಎಂದು ಅರಣ್ಯ ಇಲಾಖೆಯ ಅಧಿಕಾರಿ ರಾಮು ತಿಳಿಸಿದರು.

ಇದನ್ನೂ ಓದಿ: ಶಿವಮೊಗ್ಗ - ಅಪರೂಪದ ಚಿರತೆ ಬೆಕ್ಕು ಅಸ್ವಸ್ಥ: ಅರಣ್ಯಾಧಿಕಾರಿಗಳಿಂದ ರಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.