ETV Bharat / state

ಪ್ರಶಸ್ತಿ ಹಿಂಬಾಲಿಸಿ ಹೋದವಳಲ್ಲ: 2 ದಶಕದಿಂದ ಹಿರಿಯರ ಸೇವೆಯೇ ಖುಷಿ ನೀಡಿದೆ ಡಾ. ಎ. ನಾಗರತ್ನ

author img

By

Published : Oct 30, 2020, 6:58 PM IST

2020ನೇ ಸಾಲಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ಎ. ನಾಗರತ್ನ ಅವರು ತಮ್ಮ ಬದುಕನ್ನು ಸೇವೆಗಾಗಿ ಹೇಗೆ ಮುಡಿಪಾಗಿಟ್ಟಿದ್ದಾರೆ,ಇದಕ್ಕೆ ಸ್ಫೂರ್ತಿ ಯಾರು?,ಪ್ರಶಸ್ತಿಯ ಬಗೆಗೆ ತಮ್ಮ ನಿಲುವೇನು ಎಂಬುದರ ಕುರಿತಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

A. Nagaratna
ಡಾ. ಎ. ನಾಗರತ್ನ

ಬಳ್ಳಾರಿ: 'ನಾನಂತೂ ಪ್ರಶಸ್ತಿ ಹಿಂಬಾಲಿಸಿ ಹೋದವಳಲ್ಲ. ಹಿರಿಯ ನಾಗರಿಕರ ಲಾಲನೆ - ಪಾಲನೆಯ ಸೇವೆಯಲ್ಲಿ ಸತತ ಎರಡು ದಶಕದಿಂದಲೂ ತೊಡಗಿಸಿಕೊಂಡಿರುವೆ. ಅದರಲ್ಲೇ ನಾನು ಖುಷಿ ಕಂಡುಕೊಂಡಿರುವೆ.' ಇದು 2020 ನೆ ಸಾಲಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ಎ. ನಾಗರತ್ನ ಅವರ ಮನದಾಳದ ಮಾತು.

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿರುವ ಕೃಷ್ಣ ಸನ್ನಿಧಿ ಮುಖ್ಯಸ್ಥೆ ಡಾ. ಎ. ನಾಗರತ್ನ ಸೇವಾಶ್ರಮದ ಕುರಿತು ಮಾಹಿತಿ

ತಾಲೂಕಿನ ಸಂಗನಕಲ್ಲು ಗ್ರಾಮದ ಕೃಷ್ಣ ಸನ್ನಿಧಿಯಲ್ಲಿರುವ ಹಿರಿಯ ನಾಗರಿಕರ ಸೇವಾಶ್ರಮದಲ್ಲಿ ಮಾತನಾಡಿದ ಅವರು, ಸತತ ಎರಡು ದಶಕದಿಂದಲೂ ನಾನು ಹಿರಿಯ ನಾಗರಿಕರ ಲಾಲನೆ - ಪಾಲನೆಯ ಜೊತೆಜೊತೆಗೆ ಆರೋಗ್ಯದ ಸೇವೆಯನ್ನೂ ಮಾಡುತ್ತಿರುವೆ. ಆರೋಗ್ಯಧಾಮ ಎಂಬ ಹೆಸರಿನಡಿ ಹಿರಿಯ ನಾಗರಿಕರ ಆರೋಗ್ಯವನ್ನ ವಿಚಾರಿಸಿಕೊಳ್ಳುತ್ತಾ ಬಂದಿರುವೆ. ನಾನು ಈ ಸೇವಾಶ್ರಮಕ್ಕೆ ಬಂದರೆ ಸಾಕು, ಹಿರಿಯ ನಾಗರಿಕರ ಆರೈಕೆಗೆ ಮೊದಲ ಆದ್ಯತೆ ಕೊಡುವೆ ಎಂದರು.

ಈ ಹಿರಿಯ ನಾಗರಿಕರ ಸೇವಾಶ್ರಮ ತೆರೆಯಲು ನನಗೆ ನನ್ನ ತಂದೆಯೇ ಸ್ಫೂರ್ತಿಯಾಗಿದ್ದಾರೆ. ಅವರನ್ನ ನೋಡಿ ನಾನು‌ ಕಲಿತುಕೊಂಡೆ ಎಂದ ನಾಗರತ್ನ, ನಾನಂತೂ ಯಾವ ಪ್ರಶಸ್ತಿಯ ಹಿಂದೆ ಬಿದ್ದವಳಲ್ಲ.‌ ನನ್ನ ಪ್ರಾಮಾಣಿಕ ಸೇವೆಯನ್ನ ಸಾರ್ವಜನಿಕರು ಹಾಗೂ ಈ ಸರ್ಕಾರ ಗುರುತಿಸಿ ಇಷ್ಟೊಂದು ದೊಡ್ಡ ಪ್ರಶಸ್ತಿಯನ್ನ ನನ್ನ ಮುಡಿಗೇರಿಸಿದೆ.‌ ಪ್ರಶಸ್ತಿ ಹಿಂದೆ ಬಿದ್ದರೆ ಇಷ್ಟೊಂದು ಅಚ್ಚುಕಟ್ಟಾಗಿ ಈ ಹಿರಿಯ ನಾಗರಿಕರ ಸೇವಾಶ್ರಮ ನಡೆಸಲಿಕ್ಕೆ ಆಗೋಲ್ಲ ಎಂದು ಹೇಳಿದರು.

krishna sannidhi
ಕೃಷ್ಣ ಸನ್ನಿಧಿ

ಈ ಕುರಿತು ಮಾತನಾಡಿದ ಕೃಷ್ಣ ಸನ್ನಿಧಿ ಸೇವಾಶ್ರಮದ ಸೇವಕಿ ರತಿ ಕಪಾಡಿಯಾ, ವೈದ್ಯೆ ಡಾ. ನಾಗರತ್ನ ಅವರೊಂದಿಗೆ ನಾನು ಕೂಡ ಸತತ ಎರಡು ದಶಕದಿಂದಲೂ ಕಾರ್ಯನಿರ್ವಹಿಸುತ್ತಿರುವೆ. ನನಗಂತೂ ಈ ಹಿರಿಯ ನಾಗರಿಕರ ಸೇವೆಯಲ್ಲಿ ತೊಡಗಿಸಿಕೊಳ್ಳೋದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಹೀಗಾಗಿ, ಈ ಸೇವಾಶ್ರಮದ ಮುಖ್ಯಸ್ಥೆ ಡಾ.ನಾಗರತ್ನ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರೋದು ಇಡೀ ಸೇವಾಶ್ರಮಕ್ಕೆ ದೊಡ್ಡ ಪ್ರಶಸ್ತಿಯ ಗರಿ ದೊರೆತಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.