ETV Bharat / state

ಕಾಂಗ್ರೆಸ್‌ ಉಚಿತ ವಿದ್ಯುತ್​ ಘೋಷಣೆ: ಹಳೆ ಬಿಲ್‌ ಕೂಡಾ ಕಟ್ಟಲ್ಲ ಅಂತಿದ್ದಾರೆ ಬಳ್ಳಾರಿ ಮಂದಿ!

author img

By

Published : May 19, 2023, 1:39 PM IST

Updated : May 19, 2023, 2:05 PM IST

Ballari
ಬಳ್ಳಾರಿ

ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷ ಉಚಿತ ವಿದ್ಯುತ್ ಸೌಕರ್ಯ ಘೋಷಿಸಿದ್ದು, ಕೆಲವೆಡೆ ಜನರು ಹಳೆಯ ಬಿಲ್‌ಗಳನ್ನೂ ಕಟ್ಟಲೂ ಹಿಂದೇಟು ಹಾಕುತ್ತಿದ್ದಾರೆ.

ವಿದ್ಯುತ್​​ ಪಾವತಿ ಕುರಿತು ಜೆಸ್ಕಾಂ ಅಧೀಕ್ಷಕರು ಹಾಗು ಗ್ರಾಹಕರ ಹೇಳಿಕೆಗಳು

ಬಳ್ಳಾರಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ ಬಳಿಕ ಗ್ರಾಹಕರು ವಿದ್ಯುತ್ ಬಿಲ್ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ. ಬಿಲ್ ನೀಡಲು ಮತ್ತು ವಸೂಲಿಗೆ ಹೋದ ಸಿಬ್ಬಂದಿಯನ್ನು ವಾಪಸ್ ಕಳುಹಿಸುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದರೆ ಪ್ರತಿ ತಿಂಗಳು ಪ್ರತಿ ಮನೆಗೆ 200 ಯುನಿಟ್‌ ವಿದ್ಯುತ್‌ ಉಚಿತ ಎಂದು ಕಾಂಗ್ರೆಸ್ ಭರವಸೆ ಕೊಟ್ಟಿದೆ. ಹಾಗಾಗಿ, ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿರುವುದರಿಂದ ನಾವು ವಿದ್ಯುತ್‌ ಬಿಲ್‌ ಕಟ್ಟುವುದಿಲ್ಲ ಎಂದು ಗ್ರಾಹಕರು ಹೇಳುತ್ತಿದ್ದಾರೆ.

ಮೇ 10 ರಂದು ವಿಧಾನಸಭೆ ಚುನಾವಣೆ ನಡೆದು ಮೇ 13ರಂದು ಫಲಿತಾಂಶ ಪ್ರಕಟವಾಗಿದೆ. ಐದು ದಿನಗಳಿಂದ ಹಳ್ಳಿಗಳಿಗೆ ಹೋಗುತ್ತಿರುವ ಜೆಸ್ಕಾಂ ಸಿಬ್ಬಂದಿ, ಮೀಟರ್‌ ರೀಡರ್‌ಗಳು ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಚಾಲ್ತಿ ವಿದ್ಯುತ್‌ ಬಿಲ್‌ಗಳು ಹೋಗಲಿ, ಹಳೇ ಬಾಕಿಯನ್ನೂ ಪಾವತಿಸುತ್ತಿಲ್ಲ ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಒಟ್ಟು 7.76 ಲಕ್ಷ ಗ್ರಾಹಕರಿದ್ದು, ಮಾರ್ಚ್‌ ಅಂತ್ಯದವರೆಗೆ ಬರಬೇಕಾದ ಬಾಕಿ ₹845 ಕೋಟಿ ಇದೆ.

ಪ್ರತಿ ತಿಂಗಳು ಜೆಸ್ಕಾಂ ತನ್ನ ಗ್ರಾಹಕರಿಗೆ ₹20.66 ಕೋಟಿ ಮೊತ್ತದ ವಿದ್ಯುತ್‌ ಪೂರೈಸುತ್ತಿದೆ. ವಸೂಲಾಗುತ್ತಿರುವ ಬಿಲ್‌ ₹18. 80 ಕೋಟಿ ಇದ್ದು ತಿಂಗಳಿಗೆ ಸುಮಾರು ₹2 ಕೋಟಿ ನಷ್ಟವಾಗುತ್ತಿದೆ. ಪೂರೈಕೆ ಮತ್ತಿತರ ಸೋರಿಕೆಯಿಂದ ಶೇ 12ರಷ್ಟು ವಿದ್ಯುತ್‌ ನಷ್ಟವಾಗುತ್ತಿದೆ. ಮೊದಲು ನಷ್ಟದ ಪ್ರಮಾಣ ಶೇ 15 ರಷ್ಟಿತ್ತು. ಈ ಪ್ರಮಾಣವನ್ನು ತಗ್ಗಿಸಲಾಗಿದೆ. ಭಾಗ್ಯ ಜ್ಯೋತಿ ಫಲಾನುಭವಿಗಳಿಗೆ 40 ಯುನಿಟ್ ಉಚಿತವಾಗಿ ಪೂರೈಕೆ ಮಾಡಲಾಗುತ್ತಿದೆ. ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆ ಉಚಿತ ವಿದ್ಯುತ್‌ ಕೊಡಲಾಗುತ್ತಿದೆ. ಇದಲ್ಲದೆ, ಇನ್ನೂ ಶೇ 30ರಷ್ಟು ಗ್ರಾಹಕರಿಗೆ ಮೀಟರ್‌ಗಳನ್ನೇ ಅಳವಡಿಸಿಲ್ಲ.

ಕಾಂಗ್ರೆಸ್‌ ಗ್ಯಾರಂಟಿಯಂತೆ ಪ್ರತಿ ತಿಂಗಳು ಪ್ರತಿ ಮೀಟರ್‌ಗೆ 200 ಯುನಿಟ್‌ ವಿದ್ಯುತ್‌ ಉಚಿತವಾಗಿರುವುದರಿಂದ ತಿಂಗಳಿಗೆ ಒಂದು ಮೀಟರ್‌ಗೆ ₹ 450 ರಿಂದ ₹ 500 ರವರೆಗೆ ಸರ್ಕಾರಕ್ಕೆ ಹೊರೆಯಾಗಲಿದೆ. ಈಗಾಗಲೇ ಉಚಿತವಾಗಿರುವ ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆಗಳನ್ನು 200 ಯುನಿಟ್‌ನಲ್ಲಿ ವಿಲೀನ ಮಾಡಲಾಗುವುದೇ ಎಂದು ಇನ್ನೂ ಸ್ಪಷ್ಟವಾಗಿಲ್ಲ.

ಸರ್ಕಾರದಿಂದ ಆದೇಶ ಬರುವವರೆಗೆ ಏಪ್ರಿಲ್ ತಿಂಗಳಲ್ಲಿ ಬಳಸಿದ್ದ ವಿದ್ಯುತ್ ಬಿಲ್ ಪಾವತಿಸಿ ಎಂದು ಸಿಬ್ಬಂದಿ ಹೇಳಿದರೂ ಜನ ಕೇಳುತ್ತಿಲ್ಲ. ನಾವು ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಬಿಲ್ ಪ್ರತಿ ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ. ಪ್ರತಿ ಮೀಟರ್‌ಗೆ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿದೆ.

ರಾಜ್ಯ ಸರ್ಕಾರ ರಚನೆಯಾದ ಬಳಿಕ ಈ ಸಂಬಂಧ ತೀರ್ಮಾನ ಕೈಗೊಳ್ಳಲಿದೆ. ಸರ್ಕಾರದ ತೀರ್ಮಾನದ ನಿರೀಕ್ಷೆಯಲ್ಲಿ ನಾವೂ ಇದ್ದೇವೆ ಎಂದು ಜೆಸ್ಕಾಂ ಬಳ್ಳಾರಿ ವಿಭಾಗದ ಅಧೀಕ್ಷಕ ಎಂಜಿನಿಯರ್‌ ಬಿ. ವೆಂಕಟೇಶಲು ಹೇಳಿದ್ದಾರೆ. ರಾಜ್ಯ ಸರ್ಕಾರದ ತೀರ್ಮಾನ ಆಗುವವರೆಗೆ ಗ್ರಾಹಕರು ಜೆಸ್ಕಾಂ ಜತೆ ಸಹಕರಿಸಬೇಕು. ಬಿಲ್‌ ಮತ್ತು ಹಳೇ ಬಾಕಿ ಪಾವತಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ: ಡಿಕೆಶಿ

Last Updated :May 19, 2023, 2:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.