ETV Bharat / state

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ- ಡಿಕೆಶಿ ಫೈಟ್​ ಮುಗಿದಿಲ್ಲ: ಉಮೇಶ್​ ಕತ್ತಿ

author img

By

Published : Aug 31, 2021, 5:53 PM IST

umesh-katti
ಆಹಾರ ಸಚಿವ ಉಮೇಶ್​ ಕತ್ತಿ

ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ,‌ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಎಂಇಎಸ್ ವಶದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆ ಮೊದಲ ಬಾರಿಗೆ ಬಿಜೆಪಿ ವಶವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್​ ಕತ್ತಿ ಭವಿಷ್ಯ ನುಡಿದಿದ್ದಾರೆ.

ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ನೋಡಿ ಬೆಳಗಾವಿ ಮಹಾನಗರ ಜನರು ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. ಆಗ ನಾವು ಪೂರ್ಣ ಪ್ರಮಾಣದಲ್ಲಿ ಅಧಿಕಾರ ಹಿಡಿಯುತ್ತೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್​ ಕತ್ತಿ ಹೇಳಿದ್ದಾರೆ.

ಆಹಾರ ಸಚಿವ ಉಮೇಶ್​ ಕತ್ತಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ,‌ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಎಂಇಎಸ್ ವಶದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆ ಮೊದಲ ಬಾರಿಗೆ ಬಿಜೆಪಿ ವಶವಾಗಲಿದೆ. ಜನರಿಗೆ ಅಭಿವೃದ್ಧಿ ಪರ ಮತ ಚಲಾವಣೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ‌ ಎಂದರು.

ಕೈಮುಗಿದು ಮನವಿ ಮಾಡಿಕೊಳ್ಳುತ್ತಿದ್ದೇವೆ: 50ರಷ್ಟು ಟ್ಯಾಕ್ಸ್ ಮನ್ನಾ ಭರವಸೆ ಹಿನ್ನೆಲೆ 70 ವರ್ಷಗಳಿಂದ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು. ಈ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ. ನಾನು ಶ್ರಾವಣ ಮಾಸ ಇರುವ ಕಾರಣಕ್ಕೆ ಮನೆ ದೇವರು ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೋಗಿ ದೇವರ ಆಶೀರ್ವಾದ ಪಡೆದುಕೊಂಡು ಬಂದಿದ್ದೇನೆ. ಹೀಗಾಗಿ, ಪ್ರಚಾರಕ್ಕೆ ಬಂದಿಲ್ಲ. ಇಂದು ಮತ್ತು ನಾಳೆ ಪಾಲಿಕೆ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತೇನೆ. ಅಭಿವೃದ್ಧಿ ಪರ ಇರುವ ಬಿಜೆಪಿಗೆ ಮತ ನೀಡುವಂತೆ ಕೈಮುಗಿದು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಬೆಳಗಾವಿ ಜನ ಬುದ್ಧಿವಂತರಿದ್ದಾರೆ: ಕೇಂದ್ರ ಸರ್ಕಾರ ಸುರೇಶ್ ಅಂಗಡಿ ಅಂತ್ಯಸಂಸ್ಕಾರ ಅಮಾನವೀಯ ರೀತಿಯಲ್ಲಿ ಮಾಡಿತು ಎಂಬ ಡಿಕೆಶಿ ಹೇಳಿಕೆ ಕುರಿತು ಅವರು ಪ್ರತಿಕ್ರಿಯಿಸಿದರು. ಡಿಕೆಶಿಗೆ ಮಾಡಲಿಕ್ಕೆ ಬೇರೆ ಕೆಲಸ ಇಲ್ಲ. ಇದನ್ನ ಬಿಟ್ಟು ಪ್ರಚಾರ ಮಾಡಲು ಅವರಿಗೆ ಬರೋದಿಲ್ಲ. ಬೆಳಗಾವಿ ಜನ ತಿಳುವಳಿಕೆಯುಳ್ಳವರಿದ್ದಾರೆ. ಬಿಜೆಪಿಗೆ ಮತ ಹಾಕ್ತಾರೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಭ್ರಷ್ಟಾಚಾರ ಮಾಡಲು ಆಗೋದಿಲ್ಲ. ಬೆಳಗಾವಿ ಜನ ಬುದ್ಧಿವಂತರಿದ್ದಾರೆ. ಎಲ್ಲಿ ಭ್ರಷ್ಟಾಚಾರ ಆಗಿದೆ ಅಂತಾ ಅರಿತುಕೊಳ್ಳುತ್ತಾರೆ ಎಂದರು.

ನಾವು ಅಧಿಕಾರಕ್ಕೆ ಬರುತ್ತೇವೆ: ಸಿದ್ದರಾಮಯ್ಯ ಪಾಲಿಕೆ ಚುನಾವಣೆ ಪ್ರಚಾರಕ್ಕೆ ಆಗಮಿಸದೇ ಇರುವುದಕ್ಕೆ ಪ್ರತಿಕ್ರಿಯೆ ನೀಡಿದ ಕತ್ತಿ, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಫೈಟ್​ ಮುಗಿದಿಲ್ಲ. ಮುಗಿದ ಮೇಲೆ ನೋಡೋಣ. ಆ ಸಮಯಕ್ಕೆ ಚುನಾವಣೆ ಮುಗಿದು ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ತಿಳಿಸಿದರು.

ಸಾವಿನ ವಿಚಾರದಲ್ಲಿ ಕೀಳುಮಟ್ಟದ ರಾಜಕಾರಣ ಮಾಡೋದು ಶೋಭೆ ತರುವುದಿಲ್ಲ

ದಿ. ಸುರೇಶ್ ಅಂಗಡಿಯವರ ಸಾವಿನ ವಿಚಾರದಲ್ಲಿ ಕೀಳುಮಟ್ಟದ ರಾಜಕಾರಣ ಮಾಡೋದು ಡಿ ಕೆ ಶಿವಕುಮಾರ್ ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಜನ ಉತ್ಸಾಹದಿಂದ ಬೆಂಬಲ ನೀಡುತ್ತಿದ್ದಾರೆ. ನಮ್ಮ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ, ಸುವರ್ಣ ಸೌಧ ಸೇರಿದಂತೆ ಬಿಜೆಪಿ ಮಾಡಿರುವ ವಿವಿಧ ಅಭಿವೃದ್ಧಿಗಳನ್ನು ಕಂಡು ಡಿ. ಕೆ ಶಿವಕುಮಾರ್ ಹೌಹಾರಿದ್ದಾರೆ. ಇದಲ್ಲದೇ ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಯೋಜನೆ ಹಾಗೂ ರಸ್ತೆ ಸುಧಾರಣೆ ಕೈಗೊಂಡಿದ್ದೇವೆ. ಹೀಗಾಗಿ, ಕಾಂಗ್ರೆಸ್​ಗೆ ಮಾತನಾಡಲು ಯಾವುದೇ ವಿಷಯಗಳು ಸಿಗುತ್ತಿಲ್ಲ. ಹೀಗಾಗಿ, ಹೊಟ್ಟೆಕಿಚ್ಚಿಗಾಗಿ ಸುರೇಶ್ ಅಂಗಡಿಯವರ ಸಾವಿನಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಶಾಸಕರ ಭ್ರಷ್ಟಾಚಾರ ಆರೋಪ ವಿಚಾರ ಕುರಿತು ಅವರು ಮಾತನಾಡಿದರು. ಸ್ಮಾರ್ಟ್ ಸಿಟಿ ಯೋಜನೆಯ ಹಿನ್ನೆಡೆಗೆ ಮಹಾನಗರ ಪಾಲಿಕೆ ಕಾರಣ ಆಗುತ್ತದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಜನರು ಬಿಜೆಪಿ ಕೈಹಿಡಿಯಲಿದ್ದಾರೆ. ಹೀಗಾಗಿ ಪಾಲಿಕೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಓದಿ: ಓದುವ ವಯಸ್ಸಿನಲ್ಲಿ ಪ್ರೀತಿ ಬೇಡ ಅಂದ ಪೋಷಕರು.. ನೆಲಮಂಗಲದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.