ETV Bharat / state

ದೇಶದ ಗಡಿ ಸೇವೆಗೆ ಬೆಳಗಾವಿ ಮೂರು ತಲೆಮಾರಿನ ಕುಟುಂಬ ಅರ್ಪಣೆ: ಒಬ್ಬ ಕಾರ್ಗಿಲ್​​ ಯುದ್ಧದಲ್ಲಿ ಅಮರ!

author img

By

Published : Jul 26, 2022, 5:40 AM IST

ಬೆಳಗಾವಿಯ ಶಾಹೂ ನಗರದ ನಿವಾಸಿ ಆಗಿರುವ ಭಾರತ್ ಮಸ್ಕೆ ಭಾರತೀಯ ಸೇನೆಯಲ್ಲಿ ಹತ್ತು ವರ್ಷಗಳ ಸೇವೆ ಸಲ್ಲಿಸಿ ಕೊನೆಗೆ ಕಾರ್ಗಿಲ್​​ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣವನ್ನ ಅರ್ಪಣೆ ಮಾಡಿಕೊಂಡಿದ್ದಾರೆ. ಭಾರತ್ ಮಸ್ಕೆ ತಂದೆ ಬಬನ್‌ ಮಸ್ಕೆ ಕೂಡ ಮಾಜಿ ಸೈನಿಕರು. ಭಾರತಾಂಬೆ ಮೇಲಿನ ಪ್ರೀತಿಗಾಗಿ ತಮ್ಮ ಮಗನಿಗೂ ಭಾರತ್‌ ಎಂಬ ಹೆಸರಿಟ್ಟ ಅವರು, 1989ರಲ್ಲಿ ಸೇನೆ ಸೇರಲು ಪ್ರೇರಣೆ ತುಂಬಿದರು..

ದೇಶಕ್ಕಾಗಿ ಪ್ರಾಣತೆತ್ತ ಸೈನಿಕನ ಕುಟುಂಬಸ್ಥರು
ದೇಶಕ್ಕಾಗಿ ಪ್ರಾಣತೆತ್ತ ಸೈನಿಕನ ಕುಟುಂಬಸ್ಥರು

ಬೆಳಗಾವಿ: ಕಾರ್ಗಿಲ್‌ ಯುದ್ಧ ಎನ್ನುತ್ತಲೇ ಎಂಥವರ ಮನದಲ್ಲೂ ರೋಮಾಂಚನ ಮೂಡುತ್ತದೆ. ಎದುರಾಳಿಗಳೊಂದಿಗೆ ನಮ್ಮ ಸೈನಿಕರು ಧೈರ್ಯದಿಂದ ಸೆಣಸುವ, ಎದುರಾಳಿಗಳನ್ನು ಸದೆಬಡಿಯುವ ದೃಶ್ಯಗಳು ಕಣ್ಣೆದುರು ಬಂದು ನಿಲ್ಲುತ್ತದೆ. ತಮ್ಮ ಕುಟುಂಬದ ಹಿತ ಬದಿಗೊತ್ತಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡು ದೇಶಕ್ಕಾಗಿ ಪ್ರಾಣವನ್ನೇ ತೆತ್ತ ಸೈನಿಕರು ನಮ್ಮ ನಾಡಿನಲ್ಲಿದ್ದಾರೆ. ಅಂತವರಲ್ಲಿ ಬೆಳಗಾವಿಯ ಭಾರತ್‌ ಮಸ್ಕೆ ಒಬ್ಬರು.

ಕಾರ್ಗಿಲ್​​ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣವನ್ನ ಸಲ್ಲಿಸಿದ ಯೋಧ ಭಾರತ್ ಮಸ್ಕೆ ಅವರ ತಾಯಿ, ಪತ್ನಿ ಹಾಗೂ ಮಗ ಮಾತನಾಡಿರುವುದು

ಹೌದು, ಬೆಳಗಾವಿಯ ಶಾಹೂ ನಗರದ ನಿವಾಸಿ ಆಗಿರುವ ಭಾರತ್ ಮಸ್ಕೆ ಭಾರತೀಯ ಸೇನೆಯಲ್ಲಿ ಹತ್ತು ವರ್ಷಗಳ ಸೇವೆ ಸಲ್ಲಿಸಿ ಕೊನೆಗೆ ಕಾರ್ಗಿಲ್​​ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣವನ್ನ ಅರ್ಪಣೆ ಮಾಡಿಕೊಂಡಿದ್ದಾರೆ. ಭಾರತ್ ಮಸ್ಕೆ ತಂದೆ ಬಬನ್‌ ಮಸ್ಕೆ ಕೂಡ ಮಾಜಿ ಸೈನಿಕರು. ಭಾರತಾಂಬೆ ಮೇಲಿನ ಪ್ರೀತಿಗಾಗಿ ತಮ್ಮ ಮಗನಿಗೂ ಭಾರತ್‌ ಎಂಬ ಹೆಸರಿಟ್ಟ ಅವರು, 1989ರಲ್ಲಿ ಸೇನೆ ಸೇರಲು ಪ್ರೇರಣೆ ತುಂಬಿದರು.

10 ವರ್ಷ ದೇಶದ ಗಡಿ ಕಾಯ್ದ ಭಾರತ್ 1999ರಲ್ಲಿ ಜಮ್ಮುವಿನಲ್ಲಿ ನಡೆದ ಕಾರ್ಗಿಲ್‌ ಯುದ್ಧದಲ್ಲಿ ಅಮರರಾಗಿದ್ದಾರೆ. ಭಾರತ್ ಮಸ್ಕೆ ಕುಟುಂಬದ ಮೂರು ತಲೆಮಾರು ದೇಶ ಸೇವೆ ಮಾಡಿದೆ. ಭಾರತ್, ಪ್ರವೀಣ ಮಸ್ಕೆ ತಂದೆ ಬಬನ್ ಮಸ್ಕೆ ಮತ್ತು ಅವರ ತಂದೆ ನಾರಾಯಣ ಮಸ್ಕೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಮೂರು ತಲೆಮಾರಿನಿಂದ ಈ ಕುಟುಂಬ ದೇಶ ಸೇವೆಗೆ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡಿದೆ.

ದೇಶಪ್ರೇಮವೇ ಭಾರತ್‌ ಮಸ್ಕೆ ಕುಟುಂಬದ ಉಸಿರು: ದೇಶಪ್ರೇಮವೇ ಭಾರತ್‌ ಮಸ್ಕೆ ಕುಟುಂಬದ ಉಸಿರು. ಭಾರತಾಂಬೆಯೇ ಜೀವಾಳ. ಇದೇ ಕಾರಣಕ್ಕೆ ಈ ಕುಟುಂಬದಲ್ಲಿ ಮೂರು ತಲೆಮಾರಿನವರು ಭಾರತೀಯ ಸೇನೆ ಸೇರಿ ದೇಶದ ಗಡಿ ಕಾಯ್ದಿದ್ದಾರೆ. ಒಬ್ಬ ಪುತ್ರ ಕಾರ್ಗಿಲ್‌ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ.

ಕಿರಿಯ ಸಹೋದರನೂ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ 4 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಇಬ್ಬರೂ ಮಕ್ಕಳನ್ನು ಕಳೆದುಕೊಂಡ ದುಃಖವಿದ್ದರೂ, ದೇಶಕ್ಕಾಗಿ ಇಬ್ಬರೂ ಮಕ್ಕಳು ಸಲ್ಲಿಸಿದ ಸೇವೆ ನೆನೆದು ಬಬನ್‌ ಮಸ್ಕೆ ದಂಪತಿ ಹೆಮ್ಮೆಪಡುತ್ತಾರೆ. ಇಲ್ಲಿನ ಶಾಹೂ ನಗರದಲ್ಲಿ ಸೊಸೆ, ಇಬ್ಬರೂ ಮೊಮ್ಮಕ್ಕಳೊಂದಿಗೆ ಬದುಕು ಸಾಗಿಸುತ್ತಿದ್ದಾರೆ.

ಸರ್ಕಾರಿ ನೌಕರಿ ಕೊಡಿ: ಹಿರಿಯ ಪುತ್ರ ಭಾರತ್‌ 1989ರಲ್ಲಿ ಸೇನೆ ಸೇರಿ ಸುಮಾರು ಹತ್ತು ವರ್ಷಗಳ ಕಾಲ ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ, ಪಾಕಿಸ್ತಾನದ ಮೋಸದಿಂದ 1999ರಲ್ಲಿ ಜಮ್ಮುವಿನ ಪುಂಜದಲ್ಲಿ ನಡೆದ ಕಾರ್ಗಿಲ್‌ ಯುದ್ಧದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಗುರಿಯಿಟ್ಟು ಹೊಡೆದು ಇಬ್ಬರೂ ಎದುರಾಳಿಗಳನ್ನು ಹತರನ್ನಾಗಿಸಿ, ಕಲ್ಲಿಗೆ ಅಡಗಿಕೊಂಡು ಕುಳಿತಿದ್ದರು. ಆದರೆ, ಎತ್ತರದ ಪ್ರದೇಶದಲ್ಲಿದ್ದ ಎದುರಾಳಿಗಳನ್ನು ಸದೆಬಡಿಯಲು ಮೇಲೆ ಏಳುತ್ತಿದ್ದಾಗ ಪಾಕಿಸ್ತಾನದ ಯೋಧರು ಹೊಡೆದ 5 ಗುಂಡುಗಳು ತಲೆಹೊಕ್ಕು ಸ್ಥಳದಲ್ಲೇ ಪ್ರಾಣಬಿಟ್ಟು ಅಮರರಾಗಿದ್ದರು.

ಇದಾದ ಬಳಿಕ ಭಾರತ್ ಮಸ್ಕೆ ಕುಟುಂಬಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 15 ಲಕ್ಷ ರೂ. ಪರಿಹಾರ ನೀಡಿವೆ. ಅವರ ಮಕ್ಕಳಿಗೆ ಸರ್ಕಾರಿ ನೌಕರಿ ನೀಡುವುದಾಗಿಯೂ ಭರವಸೆ ಸಿಕ್ಕಿತ್ತು. ಆದರೆ, ಮಕ್ಕಳು ಚಿಕ್ಕವರಿದ್ದರು. ಈಗ ಭಾರತ್‌ ಅವರ ಇಬ್ಬರೂ ಮಕ್ಕಳು ಓದಿ ದೊಡ್ಡವರಾಗಿದ್ದಾರೆ. ಪೂಜಾ ಬಿಕಾಂ ವ್ಯಾಸಂಗ ಮಾಡಿದ್ದರೆ, ದೀಪಕ ಎಂಬಿಎ ಓದು ಪೂರ್ಣಗೊಳಿಸಿದ್ದಾರೆ‌. ಈಗ ಅವರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂಬ ಬೇಡಿಕೆ ಅಜ್ಜ–ಅಜ್ಜಿಯದ್ದಾಗಿದೆ.

ಗಂಡನ ಕಳೆದುಕೊಂಡ ಲಕ್ಷ್ಮಿ ಭಾರತ್ ಮಸ್ಕೆ: ಭಾರತ್‌‌ ಮಸ್ಕೆ ಅವರ ಪತ್ನಿ ಲಕ್ಷ್ಮಿ, ‘27ನೇ ವಯಸ್ಸಿನವರಿದ್ದಾಗ ಗಂಡ ಕಾರ್ಗಿಲ್​​ ಯುದ್ಧದಲ್ಲಿ ತೀರಿಹೋಗಿದ್ದರು. ಆಗ ಸಾಕಷ್ಟು ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದ್ದಾರೆ. ಪುತ್ರಿ ಬಿಕಾಂ ಪದವಿ ಮುಗಿಸಿದ್ದರೆ, ಪುತ್ರ ಎಂಬಿಎ ಪದವಿ ವ್ಯಾಸಂಗ ಮಾಡಿದ್ದಾರೆ. ಹೀಗೆ ಗಂಡನಿಲ್ಲದಿದ್ದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ತಂದೆಯಂತೆ ಮಗ ಕೂಡ ದೇಶ ಸೇವೆಗೆ ಹೋಗಬೇಕು ಅಂತಾ ಮಗನನ್ನು ಸೇನೆಗೆ ಸೇರಲು ಕಳುಹಿಸುತ್ತಾರೆ‌. ಆದ್ರೆ, ಸೇನೆಗೆ ಪುತ್ರ ಆಯ್ಕೆ ಆಗಿಲ್ಲ.

ಹೀಗಾಗಿ, ಮಗ ಪೆಟ್ರೋಲ್‌ ಬಂಕ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅದೂ ಈಡೇರಲಿಲ್ಲ. ಸೇನಾ ಭರ್ತಿಗೆ ಹೋದರೂ ಆಯ್ಕೆಯಾಗಲಿಲ್ಲ. ಈಗ ಯಾವುದಾದರೂ ಉದ್ಯೋಗ ಮಾಡುವ ತವಕದಲ್ಲಿದ್ದಾನೆ. ಮಗಳದ್ದೂ ಇದೇ ಪರಿಸ್ಥಿತಿ ಇದೆ. ಹಾಗಾಗಿ, ಬದುಕು ಸಾಗಿಸಲು ಅನುಕೂಲವಾಗಲೆಂದು ಸರ್ಕಾರಿ ನೌಕರಿ ನೀಡಬೇಕು ಅಥವಾ ಪೆಟ್ರೋಲ್‌ ಬ್ಯಾಂಕ್‌ ಆರಂಭಿಸಲು ಪರವಾನಗಿಯನ್ನಾದರೂ ಕೊಡಬೇಕು ಎನ್ನುತ್ತಾರೆ.

ಪತಿ ಕಾರ್ಗಿಲ್‌ ಯುದ್ಧದಲ್ಲಿ ಪ್ರಾಣ ತೆತ್ತಿದ್ದಕ್ಕೆ ಹೆಮ್ಮೆಯಿದೆ. ಧಾರವಾಡದಲ್ಲಿ ಕಾರ್ಗಿಲ್‌ ಹುತಾತ್ಮ ಯೋಧರ ಸ್ಮಾರಕ ನಿರ್ಮಿಸಿದ್ದಾರೆ‌. ಪತಿಯ ಸ್ಮಾರಕ ಕೂಡ ಅಲ್ಲಿಯೇ ಇದೆ. ಹೀಗಾಗಿ, ನಾವು ಪ್ರತಿವರ್ಷವೂ ಕಾರ್ಗಿಲ್​ ವಿಜಯ ದಿವಸದಂದು (ಜು.26) ರಂದು ಧಾರವಾಡಕ್ಕೆ ಹೋಗಿ ಗೌರವ ಸಲ್ಲಿಸುತ್ತೇವೆ. ಸರ್ಕಾರದಿಂದಲೂ ಗೌರವ ಸಲ್ಲಿಸಲಾಗುತ್ತದೆ. ಇಂದು ಇಡೀ ದೇಶ ಸುರಕ್ಷಿತವಾಗಿದೆ ಎಂದರೆ, ಅದಕ್ಕೆ ದೇಶದ ಗಡಿ ಕಾಯುವ ಸೈನಿಕರೇ ಕಾರಣ. ಸೇನೆ ಸೇರಲು ಯುವಕರು ಮುಂದಾಗಬೇಕು ಎಂದಿದ್ದಾರೆ.

ಓದಿ: ಆಸ್ತಿ ನೋಂದಣಿ ಪ್ರಕ್ರಿಯೆ.. ರಾಜ್ಯದ ಜನತೆಗೆ ಮತ್ತೆ ಸಿಹಿ ಸುದ್ದಿ ನೀಡಿದ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.