ETV Bharat / state

ಮಲ್ಲಪ್ರಭಾ ನದಿ ನೀರಿನ ಒಳಹರಿವು ಹೆಚ್ಚಳ: ಬೆಳೆಗಳೆಲ್ಲವೂ ಜಲಾವೃತ

author img

By

Published : Oct 15, 2020, 12:24 PM IST

ಈ ವರ್ಷ ಮುಂಗಾರಿನಲ್ಲಿ ಬಿತ್ತನೆಯಾದ ಹೆಸರು, ಮೆಕ್ಕೆಜೋಳ, ಹತ್ತಿ, ಭತ್ತ, ಕಬ್ಬು‌ ಸೇರಿದಂತೆ ಇತರ ಬೆಳೆಗಳು ಆಗಸ್ಟ್‌ನಿಂದ ಈವರೆಗೆ ಸುಮಾರು 96 ಸಾವಿರ ಹೆಕ್ಟೇರ್‌ ಪ್ರದೇಶಕ್ಕಿಂತಲೂ ಹೆಚ್ಚಿನ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

Rain effect crop destruction in Belagavi district
ಮಲ್ಲಪ್ರಭಾ ನದಿ ನೀರಿನ ಒಳಹರಿವು ಹೆಚ್ಚಳ

ಬೆಳಗಾವಿ: ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಭಾರೀ ಮಳೆಗೆ ಮಲ್ಲಪ್ರಭಾ ನದಿ ನೀರಿನ ಒಳಹರಿವು ಹೆಚ್ಚಾದ ಪರಿಣಾಮ ಮಲ್ಲಪ್ರಭಾ ನದಿ ಪಾತ್ರದಲ್ಲಿ ಬೆಳೆದ ಬೆಳೆಗಳೆಲ್ಲವೂ ಜಲಾವೃತವಾಗುತ್ತಿವೆ. ಇದರಿಂದಾಗಿ ರೈತರು ಮತ್ತಷ್ಟು ‌ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೌದು, ರೈತರು ಬೆಳೆದ ಬೆಳೆಗಳು ಇನ್ನೇನು ಕಟಾವು ಮಾಡಬೇಕೆನ್ನುವಷ್ಟರಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿತ್ತು. ಆದರೀಗ‌ ಮತ್ತೆ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಅಳಿದುಳಿದ ಬೆಳೆಗಳು ಹಾನಿಯಾಗುವ ಆತಂಕ ರೈತರಲ್ಲಿ ಮೂಡಿದೆ.

ಮಲ್ಲಪ್ರಭಾ ನದಿ ನೀರಿನ ಒಳಹರಿವು ಹೆಚ್ಚಳ

ಈಗಾಗಲೇ ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಹಾರಾಷ್ಟ್ರ, ಖಾನಾಪೂರ, ಬೈಲಹೊಂಗಲ ಸೇರಿದಂತೆ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಮಲ್ಲಪ್ರಭಾ ನದಿ ನೀರಿನ ಒಳಹರಿವು ಹೆಚ್ಚಾಗಿದೆ. ಪರಿಣಾಮ ನದಿ ಪಾತ್ರದ ಜನರ ಬೆಳೆಗಳೆಲ್ಲವೂ ಮತ್ತೊಮ್ಮೆ ನೀರಿನಲ್ಲಿ ಜಲಾವೃತವಾಗಿದ್ದು, ಬೆಳೆದ ಬೆಳಗಳೀಗ ನೀರಿನಲ್ಲಿ ಕೊಳೆತು ಹೋಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ಜಿಲ್ಲೆಯಲ್ಲಿ ಸೋಯಾಬಿನ್, ಹೆಸರು, ಶೇಂಗಾದಂತಹ ಅಲ್ಪಾವಧಿ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ‌‌. ಆದರೆ ಈ ವರ್ಷ ಸೆಪ್ಟೆಂಬರ್‌ನಲ್ಲಿ ಜೋರಾಗಿ ಮಳೆ ಅಬ್ಬರಿಸಿದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ಅಲ್ಪಾವಧಿಯ ಬೆಳೆಗಳು ಹಾನಿಯಾಗಿದ್ದವು. ಇದರ ಜೊತೆಗೆ ಕಳೆದೊಂದು ತಿಂಗಳಲ್ಲಿ ಸುರಿದ ಮಳೆಯಿಂದಲೂ ಸೋಯಾಬಿನ್​​, ಹೆಸರು, ಮೆಕ್ಕೆಜೋಳ, ಹತ್ತಿ, ಕಬ್ಬು ಹಾಗೂ ಭತ್ತದ ಬೆಳೆಗಳೂ ಹಾನಿಗೆ ಒಳಗಾಗಿದ್ದವು. ಕೆಲವು ಪ್ರವಾಹದಿಂದ ನಷ್ಟವಾದರೆ, ಇನ್ನು ಕೆಲವು ಹೆಚ್ಚು ಮಳೆ ಸುರಿದು ಹೊಲಗಳೆಲ್ಲಾ ಕೆಸರುಮಯವಾಗಿದ್ದರಿಂದ ಬೆಳೆಗಳು ಮಣ್ಣುಪಾಲಾಗಿದ್ದವು.

ಒಟ್ಟಾರೆಯಾಗಿ ಈ ವರ್ಷ ಮುಂಗಾರಿನಲ್ಲಿ ಬಿತ್ತನೆಯಾದ ಹೆಸರು, ಮೆಕ್ಕೆಜೋಳ, ಹತ್ತಿ, ಭತ್ತ, ಕಬ್ಬು‌ ಸೇರಿದಂತೆ ಇತರ ಬೆಳೆಗಳು ಆಗಸ್ಟ್‌ನಿಂದ ಈವರೆಗೆ ಸುಮಾರು 96 ಸಾವಿರ ಹೆಕ್ಟೇರ್‌ ಪ್ರದೇಶಕ್ಕಿಂತಲೂ ಹೆಚ್ಚಿನ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಆದರೀಗ ಮತ್ತೆ‌ ಮಳೆ ಹೆಚ್ಚಾಗುತ್ತಿರೋದು ರೈತರು ಬೆಳೆದ ಅಳಿದುಳಿದ ಬೆಳೆಗಳಿಗೂ ಕಂಟಕವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.