ETV Bharat / state

ಕೋವಿಡ್ ರೂಪಾಂತರಿ ತಳಿಯ ಬಗ್ಗೆ ಸರ್ಕಾರ ಎಚ್ಚರವಹಿಸಿದೆ: ಸಚಿವ ಸುಧಾಕರ್

author img

By

Published : Dec 27, 2022, 4:22 PM IST

ಆರೋಗ್ಯ ಸಚಿವ ಕೆ ಸುಧಾಕರ್
ಆರೋಗ್ಯ ಸಚಿವ ಕೆ ಸುಧಾಕರ್

ಕೊರೊನಾ ರೂಪಾಂತರಿ BF.7 ತಳಿ ಹೆಚ್ಚು ಹರಡುತ್ತದೆ. ಆಸ್ಪತ್ರೆಗಳಲ್ಲಿ ಸಿದ್ಧತಾ ಕಾರ್ಯಗಳ ಬಗ್ಗೆ ರಾಜ್ಯಾದ್ಯಂತ ಮಾಕ್​ ಡ್ರಿಲ್(ಅಣಕು ಪ್ರದರ್ಶನ)​ ನಡೆಯುತ್ತಿದೆ ಎಂದು ಬೆಳಗಾವಿಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಹೇಳಿದ್ದಾರೆ.

ಕೊರೊನಾ ರೂಪಾಂತರಿ BF.7 ನಿಯಂತ್ರಣ: ಆರೋಗ್ಯ ಸಚಿವ ಕೆ ಸುಧಾಕರ್ ಪ್ರತಿಕ್ರಿಯೆ

ಬೆಳಗಾವಿ: ಕೋವಿಡ್ ರೂಪಾಂತರಿ ತಳಿಯ ಬಗ್ಗೆ ನಮ್ಮ ಸರ್ಕಾರ ಎಚ್ಚರವಹಿಸಿದೆ. ಇಡೀ ರಾಜ್ಯಾದ್ಯಂತ ತಾಲೂಕು, ಆರೋಗ್ಯ ಇಲಾಖೆಗೆ ಒಳಪಡುವ ಎಲ್ಲ ಆಸ್ಪತ್ರೆಗಳಲ್ಲಿ ಪೂರ್ವ ತಯಾರಿ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದರು. ಬೆಳಗಾವಿ ನಗರದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.

ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ: ಹುಬ್ಬಳ್ಳಿಯ ಕಿಮ್ಸ್ ಹಾಗೂ ಬೆಳಗಾವಿ ಜಿಲ್ಲೆಯ ಒಂದು ಆಸ್ಪತ್ರೆಗೆ ನಾನೇ‌ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಯಾವುದೇ ಕಠಿಣ ಸಂದರ್ಭ ಎದುರಾದರೂ ಆರೋಗ್ಯ ಇಲಾಖೆ ಸಿದ್ಧವಾಗಿದೆ. ಆಯಾ ವಿಭಾಗದ ಆರೋಗ್ಯ ಅಧಿಕಾರಿಗಳು ಅಲ್ಲಿರುವ ಸಂಸ್ಥೆಗಳನ್ನು ಪರಿಶೀಲನೆ ಮಾಡುತ್ತಾರೆ ಎಂದು ಸಚಿವರು ಹೇಳಿದರು.

ರಾಜ್ಯ ವ್ಯಾಪಿ ಮಾಕ್​ ಡ್ರಿಲ್: ಎಲ್ಲ ಸಿದ್ಧತೆಗಳ ಬಗ್ಗೆ ಹಿರಿಯ ಅಧಿಕಾರಿಗಳು ನನಗೆ ವರದಿ ನಿಡುತ್ತಾರೆ. ಯಾರಾದ್ರೂ ಸೋಂಕಿತರು ಆಸ್ಪತ್ರೆಗೆ ಬಂದ್ರೆ ಅವರನ್ನು ಗುಣಪಡಿಸುವುದೇ ನಮ್ಮ ಸರ್ಕಾರದ ಉದ್ದೇಶವಾಗಿದೆ. ಜನರಿಗೆ ಸರ್ಕಾರದ ಮೇಲೆ ನಂಬಿಕೆ ಬರಬೇಕು. ಹೀಗಾಗಿ ರಾಜ್ಯ ವ್ಯಾಪಿ ಮಾಕ್​ ಡ್ರಿಲ್ ಮಾಡಲಾಗುತ್ತಿದೆ ಎಂದರು.

ಮಾಸ್ಕ್​​ ಧರಿಸುವುದು ಕಡ್ಡಾಯ: BF.7 ತಳಿ ಹರಡುವ ಪ್ರಮಾಣ ಜಾಸ್ತಿಯಿದೆ. ಆದ್ರೆ ಅದರ ಗಂಭೀರತೆ ಬಹಳ ಕಡಿಮೆ ಇದೆ. ಜನಜಂಗುಳಿ ಇರುವ ಕಡೆ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಗರ್ಭಿಣಿಯರು, ಚಿಕ್ಕ ಮಕ್ಕಳು ಎಚ್ಚರದಿಂದಿರಬೇಕು. ಆರೋಗ್ಯ ಸಮಸ್ಯೆ ಇದ್ದವರೂ ಹೆಚ್ಚು ಜನ ಇರುವ ಪ್ರದೇಶಗಳಿಂದ ದೂರ ಇದ್ರೆ ಒಳ್ಳೆಯದು ಎಂದು ಡಾ.ಸುಧಾಕರ್ ಸಲಹೆ ನೀಡಿದರು.

ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೇಲೆ ಗಮನ ಇಡುವಂತೆ ಸೂಚಿಸಿದೆ. ಆಯಾ ರಾಜ್ಯ ಸರ್ಕಾರಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ಮಹಾರಾಷ್ಟ್ರದವರು ಕಟ್ಟೆಚ್ಚರ ವಹಿಸಿದ್ದಾರೆ ಎಂದು ನಾವು ಅಂದುಕೊಂಡಿದ್ದೇವೆ. ನಾವು ಬೆಂಗಳೂರು ಮತ್ತು ಮಂಗಳೂರಿನಲ್ಲಿ ವಿಶೇಷ ಎಚ್ಚರ ವಹಿಸುವಂತೆ ಸೂಚಿಸಿದ್ದೇವೆ. ನಾನು ಕೂಡ ಅಲ್ಲಿಗೆ ಒಂದು ಬಾರಿ ಭೇಟಿ ನೀಡಿ, ಅಲ್ಲಿನ ಜಿಲ್ಲಾಡಳಿತ ಮತ್ತು ವಿಮಾನ ನಿಲ್ದಾಣ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಕೋವಿಡ್‌ ಸೋಂಕಿತರ ಪರೀಕ್ಷಾ ಮಾದರಿಗಳ ಜೀನೋಮ್‌ ಸೀಕ್ವೆನ್ಸಿಂಗ್‌ಗೆ ಕ್ರಮ: ಸಚಿವ ಸುಧಾಕರ್

ಇವತ್ತು ನಾವು ರಾಜ್ಯದಲ್ಲಿ ಮಾಕ್​ ಡ್ರಿಲ್​ ಮಾಡುತ್ತಿದ್ದೇವೆ. ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬುದು ಇದರಿಂದ ತಿಳಿಯುತ್ತದೆ. ನಾನು ಬೆಳಗಾವಿಯಿಂದ ಹುಬ್ಬಳ್ಳಿಗೆ ಹೋಗುತ್ತಿದ್ದೇನೆ. ಕೆಲವು ಆಸ್ಪತ್ರೆಗಳಿಗೆ ಭೇಟಿ ಕೊಟ್ಟು, ಯಾವ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬುದನ್ನು ನೋಡುತ್ತೇನೆ. ಹಿರಿಯ ಆರೋಗ್ಯಾಧಿಕಾರಿಗಳು ಸಹ ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ಭೇಟಿ ನೀಡಿ, ನನಗೆ ವರದಿ ನೀಡಲಿದ್ದಾರೆ ಎಂದರು.

ಸೋಮವಾರ ರಾಜ್ಯದಲ್ಲಿ ಕೊರೊನಾ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಾಗಿದೆ. ಇದರ ಪ್ರಕಾರ ರಾಜ್ಯದಲ್ಲಿ ಮಾಸ್ಕ್​ ಧರಿಸುವುದು ಕಡ್ಡಾಯ. ಅಲ್ಲದೇ ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗುತ್ತಿದೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ನ್ಯೂ ಇಯರ್ ಆಚರಣೆಗೆ ಗೈಡ್​ಲೈನ್ಸ್​​ನನ್ನು ಸಹ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಕೊಡಗಿಗೆ ಸದ್ಯಕ್ಕಿಲ್ಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸಚಿವ ಸುಧಾಕರ್

ಚೀನಾ, ಜಪಾನ್‌ ಸೇರಿದಂತೆ ಕೆಲ ದೇಶಗಳಲ್ಲಿ ಕೋವಿಡ್‌ನ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಚೀನಾದಲ್ಲಿ ಆಸ್ಪತ್ರೆ ದಾಖಲಾತಿ ಕೂಡ ಹೆಚ್ಚಾಗುತ್ತಿದೆ. ಆದ್ದರಿಂದ ಲಸಿಕೆಯ ಮೂರನೇ ಡೋಸ್‌ ಪಡೆಯಲು ಆದ್ಯತೆ ನೀಡಬೇಕಿದೆ. ಹೊಸದಾಗಿ ಸೋಂಕಿಗೊಳಗಾಗುವವರ ಮಾದರಿಗಳನ್ನು ಜೀನೋಮ್‌ ಸೀಕ್ವೆನ್ಸ್‌ ಪರೀಕ್ಷೆಗೆ ನೀಡಲು ಕೇಂದ್ರ ಸರ್ಕಾರದಿಂದ ಸೂಚನೆ ಬಂದಿದೆ. ಇದಕ್ಕೆ ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ಸಚಿವರು ಕಳೆದ ಬುಧವಾರ ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.