ETV Bharat / state

ನಿತಿನ್ ಗಡ್ಕರಿಗೆ ಜೀವ ಬೆದರಿಕೆ.. ಹಿಂಡಲಗಾ ಜೈಲಿನಲ್ಲಿದ್ದ ಶಂಕಿತ ಉಗ್ರನನ್ನು ವಶಕ್ಕೆ ಪಡೆದ ಎನ್ಐಎ ಅಧಿಕಾರಿಗಳು

author img

By

Published : Jul 16, 2023, 5:30 PM IST

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಭಯೋತ್ಪಾದನೆ ಸಂಘಟನೆಯ ಜೊತೆ ನಂಟು ಹೊಂದಿದ್ದ ಶಂಕಿತ ಉಗ್ರನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

NIA officers arrested the militant Afsar Pasha who was in Hindalaga Jai
ನಿತಿನ್ ಗಡ್ಕರಿಗೆ ಜೀವ ಬೆದರಿಕೆ: ಹಿಂಡಲಗಾ ಜೈಲಿನಲ್ಲಿದ್ದ ಶಂಕಿತ ಉಗ್ರನನ್ನು ವಶಕ್ಕೆ ಪಡೆದ ಎನ್ಐಎ ಅಧಿಕಾರಿಗಳು

ಬೆಳಗಾವಿ: ಇಲ್ಲಿನ ಹಿಂಡಲಗಾ ಜೈಲಿನಿಂದ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕೈದಿ ಜಯೇಶ್​ ಪೂಜಾರಿ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಬೆದರಿಕೆಗೆ ಪ್ರಚೋದನೆ ನೀಡಿದ ಆರೋಪದಡಿ ಲಷ್ಕರ್ ಇ ತೋಯ್ಬಾ ಸಂಘಟನೆ ಜೊತೆ ನಂಟು ಹೊಂದಿದ್ದ ಶಂಕಿತ ಉಗ್ರ‌ ಅಫ್ಸರ್ ಪಾಷಾನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನಿನ್ನೆ ಹಿಂಡಲಗಾ ಜೈಲಿಗೆ ಆಗಮಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಅಫ್ಸರ್ ಪಾಷಾನನ್ನು ಇಡೀ‌ ದಿನ ವಿಚಾರಣೆಗೆ ಒಳಪಡಿಸಿದ್ದರು. ನಂತರ ವಿಶೇಷ‌‌‌ ವಿಮಾನದಲ್ಲಿ ಹೆಚ್ಚಿನ ವಿಚಾರಣೆಗಾಗಿ ಮಹಾರಾಷ್ಟ್ರದ ನಾಗ್ಪುರಕ್ಕೆ ಪಾಷಾನನ್ನು ಕರೆದೊಯ್ದಿದ್ದಾರೆ.

ಇನ್ನು, ಹಿಂಡಲಗಾ ಜೈಲಿಗೆ ಆಗಮಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಭೇಟಿ ನೀಡಿದ್ದ ವೇಳೆ ರಾಜ್ಯ ಪೊಲೀಸ್ ಅಧಿಕಾರಿಗಳು ಕಾರಾಗೃಹದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್​ ಮೂಲಗಳಿಂದ ತಿಳಿದುಬಂದಿದೆ. ಹೊರಗೆ ವಿವಿಧ ಅಪರಾಧ ಕೃತ್ಯದಲ್ಲಿ ತೊಡಗಿದವರನ್ನು ಹಿಡಿಯಲು ಪೊಲೀಸರು ಹರಹಾಸ ಪಡುತ್ತಾರೆ. ಕೊನೆಗೆ ವಿವಿಧ ಕಡೆಗಳಲ್ಲಿ ಕುಟುಂಬ, ಊರು ನಿದ್ರೆ, ಊಟವನ್ನೇ ಬಿಟ್ಟು ಆರೋಪಿಗಳ ಪತ್ತೆಗೆ ಅಲೆದಾಡಿ, ಕೊನೆಗೆ ಜೀವದ ಹಂಗು ತೊರೆದು ಆರೋಪಿಯನ್ನು ಹಿಡಿದು ಜೈಲಿಗೆ ಕಳುಹಿಸುತ್ತೇವೆ. ಆದರೆ ಜೈಲಿನ ಸಿಬ್ಬಂದಿ ಮತ್ತು ಅಧಿಕಾರಿಗಳ ವೈಫಲ್ಯದಿಂದಾಗಿ ಕೈದಿಗಳ ಬಳಿ ಮೊಬೈಲ್, ಚಾರ್ಜರ್‌ಗಳು ಪತ್ತೆಯಾಗುತ್ತಿವೆ. ಕಾರಾಗೃಹದ ಸಿಬ್ಬಂದಿಯ ಎಡವಟ್ಟುಗಳಿಂದ ಇಂತಹ ಘಟನೆಗಳು ನಡೆಯುವಂತಾಗುತ್ತವೆ ಎಂದು ಹಿಂಡಲಗಾ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಪೊಲೀಸ್ ಅಧಿಕಾರಿಗಳ ತೀವ್ರ ತರಾಟೆಯಿಂದಾಗಿ ಮೆತ್ತಗಾದ ಹಿಂಡಲಗಾ ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲ ಸಮಯ ಮೌನಕ್ಕೆ ಶರಣಾಗಿದ್ದರು. ಬಳಿಕ ಅಧಿಕಾರಿಗಳ ಬಳಿ ವಿಷಾಧ ವ್ಯಕ್ತಪಡಿಸಿ, ಹೆಚ್ಚಿನ ನಿಗಾವಹಿಸುವುದಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಮೂರು ದಿನಗಳ ಹಿಂದೆ ಮಹಾರಾಷ್ಟ್ರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಬೇಕಿರುವ ಹಿನ್ನೆಲೆಯಲ್ಲಿ ಜಯೇಶ್ ಪೂಜಾರಿ ಇರುವ ಹಿಂಡಲಗಾ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಅಲ್ಲಿನ ಸಿಬ್ಬಂದಿ ಹಾಗೂ ಆತನೊಂದಿಗೆ ಸಂಪರ್ಕದಲ್ಲಿರುವ ಬೇರೆ ಕೈದಿಗಳಿಂದ ಆತನ ಕುರಿತು ಅಗತ್ಯ ಮಾಹಿತಿಯನ್ನು ಪಡೆದುಕೊಂಡು ಮರಳಿದ್ದರು.

ಇದೀಗ ಉಗ್ರರೊಂದಿಗೆ ನಂಟು ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಆಗಮಿಸಿ ಶಂಕಿತ ಉಗ್ರ ಅಫ್ಸರ್ ಪಾಷಾನನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಆರೋಪಿ ಸದ್ಯ ಮಹಾರಾಷ್ಟ್ರದ ನಾಗ್ಪುರ ಎಟಿಎಸ್ ಪೊಲೀಸರ ವಶದಲ್ಲಿದ್ದಾನೆ. ಕಳೆದ ಜನವರಿಯಲ್ಲಿ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಕರ್ನಾಟಕದ ಬೆಳಗಾವಿಯ ಹಿಂಡಲಗಾ ಜೈಲಿನಿಂದಲೇ 2 ಬಾರಿ ಕರೆ ಮಾಡಿ ಜೀವ ಬೆದರಿಕೆ ಹಾಕಲಾಗಿತ್ತು.

ಇದನ್ನೂ ಓದಿ: ಅಂತಾರಾಷ್ಟ್ರೀಯ ಗಡಿ ದಾಟಿದ ಪಾಕಿಸ್ತಾನಿ ಪ್ರಜೆ: ಅಮೃತಸರದಲ್ಲಿ ಬಿಎಸ್ಎಫ್ ಸಿಬ್ಬಂದಿಯಿಂದ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.