ETV Bharat / state

ಅಧಿಕಾರ ಕಳೆದುಕೊಂಡಾಗಿನಿಂದ‌ ಸಿದ್ದರಾಮಯ್ಯಗೆ ಕೆಟ್ಟ ಕನಸು ಬೀಳುತ್ತಿವೆ: ಈಶ್ವರಪ್ಪ ವ್ಯಂಗ್ಯ

author img

By

Published : Aug 11, 2021, 10:35 AM IST

Updated : Aug 11, 2021, 10:55 AM IST

ಅಧಿಕಾರದಲ್ಲಿದ್ದಾಗ ಒಳ್ಳೆಯ ಆಡಳಿತ ಕೊಟ್ಟಿದ್ದರೆ ಮರಳಿ ಅವರದೇ ಸರ್ಕಾರ ಬರುತ್ತಿತ್ತು. ಆದರೆ ಸೋತ ಮೇಲೂ ನಾನೇ ಮುಂದಿನ ಸಿಎಂ ಅಂತ ಹೇಳಿಕೆ ಕೊಡುತ್ತಿದ್ದಾರೆ ಎಂದು ಕಾಂಗ್ರೆಸ್​ ಕುರಿತು ಸಚಿವ ಈಶ್ವರಪ್ಪ ವ್ಯಂಗ್ಯವಾಡಿದರು.

minster-eshwarappa
ಸಚಿವ ಈಶ್ವರಪ್ಪ

ಬೆಳಗಾವಿ: ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಾಗಿನಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಕೆಟ್ಟ ಕನಸು ಬೀಳುತ್ತಿವೆ. ಹೀಗಾಗಿ ನಮ್ಮ ಸರ್ಕಾರದ ಬಗ್ಗೆ ಅವರು ಏನೇನೋ ಮಾತನಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಬಿಜೆಪಿಯಲ್ಲಿ ಒಳಬೇಗುದಿ ಹೆಚ್ಚುತ್ತಿದ್ದು, ಬೊಮ್ಮಾಯಿ ಸರ್ಕಾರ ಹೆಚ್ಚು ದಿನ ನಡೆಯಲ್ಲ ಎಂಬ ಸಿದ್ದರಾಮಯ್ಯನವರ ಟೀಕೆಗೆ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿಕ್ರಿಯಿಸಿದರು. ಅಧಿಕಾರದಲ್ಲಿದ್ದಾಗ ಒಳ್ಳೆಯ ಆಡಳಿತ ಕೊಟ್ಟಿದ್ದರೆ ಮರಳಿ ಅವರದೇ ಸರ್ಕಾರ ಬರುತ್ತಿತ್ತು. ಆದರೆ ಸೋತ ಮೇಲೂ ನಾನೇ ಮುಂದಿನ ಸಿಎಂ ಅಂತ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್​ನವರು ಚುನಾವಣೆಯಲ್ಲಿ ಸೋತ ಮೇಲೆ ವಿಲವಿಲ ಒದ್ದಾಡುತ್ತಿದ್ದಾರೆ ಎಂದು ಹೇಳಿದರು.

ದಲಿತ ಸಿಎಂ ನೀವೇಕೆ ಮಾಡಲಿಲ್ಲ?:
ನಮ್ಮಲ್ಲಿ ನಾಯಕತ್ವ ಬದಲಾವಣೆ ಆಗಿದ್ದ ವೇಳೆ ಹೊಸ ಸಿಎಂ ಆಯ್ಕೆಯ ಪ್ರಕ್ರಿಯೆ ನಡೆಯುತ್ತಿತ್ತು. ಆಗ ಸಿದ್ದರಾಮಯ್ಯನವರು ಬಿಜೆಪಿಯವರು ದಲಿತರನ್ನು ಸಿಎಂ ಮಾಡಲಿ ಎಂದು ಹೇಳಿಕೆ ನೀಡಿದರು‌. ಆದರೆ ಈವರೇಕೆ ದಲಿತರನ್ನು ಸಿಎಂ ಮಾಡಿಲ್ಲ?. ಮುಂಚೆ ಬಿಜೆಪಿಗೆ ಬ್ರಾಹ್ಮಣರ ಪಕ್ಷ ಎಂಬ ಹಣೆಪಟ್ಟಿ ಇತ್ತು. ಆದರೀಗ ಇದೀಗ ಹಿಂದೂಗಳ ಪಕ್ಷವಾಗಿ ಪರಿವರ್ತನೆ ಆಗಿದೆ. 27 ಜನ ಹಿಂದುಳಿದವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಓಬಿಸಿ ವರ್ಗಕ್ಕೆ ಶಿಕ್ಷಣದಲ್ಲಿ ಮೀಸಲಾತಿ ಪ್ರಮಾಣವನ್ನು ನಮ್ಮ‌ ಸರ್ಕಾರ ಹೆಚ್ಚಿಸಿದೆ. ದಲಿತರಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ ಎಂದು ತಿರುಗೇಟು ನೀಡಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​ ಈಶ್ವರಪ್ಪ

ಜೆಡಿಎಸ್​ನವರನ್ನು ಹೊಡೆಯಬೇಕಾ?:

ಜೆಡಿಎಸ್ ನಾಯಕರ ಬಗ್ಗೆ ಬಿಜೆಪಿ ಈಗೀಗ ಮೃದುಧೋರಣೆ ತೋರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮದು ರಾಜಕೀಯ ಪಕ್ಷ. ಅವರದ್ದೂ ರಾಜಕೀಯ ಪಕ್ಷ. ಆ ಥರ ಏನಿಲ್ಲ. ಮೃದುಧೋರಣೆ ತೋರುವುದನ್ನು ಬಿಟ್ಟು ಕರೆದುಕೊಂಡು ಬಂದು ಹೊಡೆಯೋಣವೇ? ನಮ್ಮ ಸರ್ಕಾರ ಪೂರ್ಣ ಅವಧಿ ಪೂರೈಸಲಿದೆ. ಯಾರ ಬೆಂಬಲವೂ ನಮಗೀಗ ಬೇಡ ಎಂದರು.

ಅಸಮಾಧಾನ ಸಹಜ:
ಸಚಿವ ಸ್ಥಾನಕ್ಕೆ ಆನಂದ ಸಿಂಗ್ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ರಚನೆ ಮಾಡಿದ ಸಂದರ್ಭದಲ್ಲಿ ಕೆಲವರಲ್ಲಿ ಅಸಮಾಧಾನ ಆಗುವುದು ಸಹಜ. ರಾಜ್ಯದ ಜನ ಬಿಜೆಪಿಗೆ ಪೂರ್ಣ ಬಹುಮತ ಕೊಡಲಿಲ್ಲ. ಆದರೆ ಆಡಳಿತ ನಡೆಸಿ ಅಂತ ಆದೇಶ ನೀಡಿದ್ದಾರೆ. ಬೇರೆ ಪಕ್ಷದವರು ಬರದೇ ಇದ್ದಿದ್ರೆ ನಮ್ಮ ಸರ್ಕಾರವೇ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಿರಿಯರಿದ್ದಾರೆ. ಎಲ್ಲರನ್ನೂ ಸಮಾಧಾನಪಡಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ನಿನ್ನೆ ನಾನು ಕೂಡ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇನೆ. ಆನಂದ ಸಿಂಗ್ ಹಾಗೂ ಪ್ರೀತಂಗೌಡ ಹೇಳಿಕೆ ಬಗ್ಗೆ ಸಿಎಂ ಬೊಮ್ಮಾಯಿ ಜೊತೆ ಚರ್ಚೆ ನಡೆಸಿದ್ದೇನೆ. ಎಲ್ಲ ಸಮಸ್ಯೆಗಳು ಶೀಘ್ರವೇ ಇತ್ಯರ್ಥವಾಗಲಿದೆ ಎಂದರು.

ನನಗೇನು ಬಿಪಿ, ಶುಗರ್ ಇಲ್ಲ:

ಕಾಂಗ್ರೆಸ್ ನಾಯಕರ ವಿರುದ್ಧದ ಅವಾಚ್ಯ ಶಬ್ದ ಬಳಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸಂಘಟನೆ ಬೆಳೆಸುವ ದೃಷ್ಟಿಯಿಂದ ನಾನು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ‌ಮಾತನಾಡಿದ್ದೆ. ದೇಶದಲ್ಲಿ ನಮ್ಮ ಅಸ್ತಿತ್ವ ಇಲ್ಲದಾಗ ದೀನದಯಾಳ್ ಉಪಾಧ್ಯರನ್ನ‌ು ಕಗ್ಗೊಲೆ ಮಾಡಿ ಫುಟ್‌ಬಾತ್‌ನಲ್ಲಿ ಎಸೆಯಲಾಗಿತ್ತು. ನಮ್ಮ‌‌ ಸಂಘಟನೆಗೆ ಶಕ್ತಿ ಬರುವತನಕ ತಾಳ್ಮೆ ಕಳೆದುಕೊಳ್ಳಬೇಡಿ ಎಂದು ಹಿರಿಯರು ಮಾರ್ಗದರ್ಶನ ಮಾಡಿದರು. ಈಗ ನಮ್ಮ ಶಕ್ತಿ ವೃದ್ಧಿಯಾಗಿದ್ದು, ಏಟಿಗೆ ಎದುರೇಟು ನೀಡುತ್ತಿದ್ದೇವೆ.

ಸಿದ್ದರಾಮಯ್ಯನವರ ಸರ್ಕಾರದಲ್ಲಿ ಗೋ ಕಳ್ಳತನ ಮಾಡೋರನ್ನು ತಡೆದಿದ್ದಕ್ಕೆ ಕೊಲೆಗಳಾಗಿವೆ. ಈ ಕುರಿತು ಪರಿಷತ್​ನಲ್ಲಿ ಪ್ರಸ್ತಾಪಿಸಿದಾಗ ಕೋಮುವಾದಿಗಳನ್ನು ಬಗ್ಗುಬಡಿಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು. ನಮ್ಮನ್ನು ಹೊಡೆದರೆ ಮರಳಿ ಹೊಡೆಯುವಂತೆ ನಮ್ಮ ಹಿರಿಯರು ಹೇಳಿದ್ದಾರೆ. ಈ ವಿಷಯವನ್ನು ನಾನು ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ. ಇದಕ್ಕೆ ಕಾಂಗ್ರೆಸ್ ನಾಯಕರು ನನ್ನನ್ನು ಜೋಕರ್ ಅಂತ ಕರೆದರು. ಪ್ರಧಾನಿ ನರೇಂದ್ರ ಮೋದಿ ‌ಹೆಸರನ್ನು ಸುಲಭ ಶೌಚಾಲಯಕ್ಕೆ ನಾಮಕರಣ ಮಾಡಬೇಕು ಎಂದರು. ಅದಕ್ಕೆ ಸಿಟ್ಟಿನಿಂದ ಹರಿಪ್ರಸಾದ್‌ರನ್ನು​ ನಾನು ಅವಾಚ್ಯ ಶಬ್ದಗಳಿಂದ ನಿಂದಿಸಿದೆ. ತಕ್ಷಣವೇ ನಾನು ಬಳಸಿದ ಪದ ಹಿಂದಕ್ಕೆ ಪಡೆದಿದ್ದೇನೆ.

ನನಗೆ ಬಿಪಿ ಶುಗರ್ ಇಲ್ಲ. ಆದರೆ ನನ್ನ ತಂಟೆಗೆ ಬಂದವರಿಗೆ ಬಿಪಿ ಶುಗರ್ ಬರುತ್ತದೆ. ನಾನು ನಾಗಪುರದಲ್ಲಿ ‌ತರಬೇತಿ ಪಡೆದಿದ್ದೇನೆ.‌ ಸುಸಂಸ್ಕೃತ ಎಂಬ ಕಾರಣಕ್ಕೆ ‌ಶಿವಮೊಗ್ಗ ಜನ ನನ್ನ ಐದು ಸಾರಿ ಗೆಲ್ಲಿಸಿದ್ದಾರೆ. ನಾನು ಬಳಸಿದ‌ ಪದಕ್ಕೆ ಕ್ಷಮೆ ಕೇಳಿದ್ದೇನೆ. ಹರಿಪ್ರಸಾದ್ ಕೂಡ ಕ್ಷಮೆ ಕೇಳಬೇಕಲ್ಲವೇ? ಕ್ಷಮೆ ಕೇಳಿದ್ರೆ ಇಟಲಿ ಯೂನಿವರ್ಸಿಟಿಯವರು ಒಳ್ಳೆಯ ಬುದ್ದಿ ಹೇಳಿಕೊಟ್ಟಿದ್ದಾರೆ ಎನ್ನುತ್ತಿದ್ದೆ. ನನ್ನ ವಿರುದ್ಧ ತಿರುಗಿ ಬಿದ್ದ ಕಾಂಗ್ರೆಸ್ ‌ನಾಯಕರು ಹರಿಪ್ರಸಾದ್​ ಅವರಿಗೇಕೆ ಬುದ್ಧಿ ಹೇಳುತ್ತಿಲ್ಲ ಎಂದು ತಿರುಗೇಟು ನೀಡಿದರು.

ಜಲಶಕ್ತಿ ಯೋಜನೆ ಜಾರಿಯಲ್ಲಿ ರಾಜ್ಯವೇ ಫಸ್ಟ್: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಲಶಕ್ತಿ ಮಿಷನ್ ಜಾರಿಯಲ್ಲಿ ದೇಶದಲ್ಲೇ ರಾಜ್ಯಕ್ಕೆ ಮೊದಲನೇ ಸ್ಥಾನ ಲಭಿಸಿದೆ. ಜಲಶಕ್ತಿ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಈ ಯೋಜನೆಗೆ ಪ್ರಧಾನಿ ಮೋದಿ ಕ್ಯಾಚ್ ದಿ ರೇನ್ ಅಂತ ಹೆಸರು ಕೊಟ್ಟಿದ್ದಾರೆ. ಮಳೆ ನೀರು ಸಮುದ್ರಕ್ಕೆ ಸೇರದೇ ಭೂಮಿಯಲ್ಲಿ ಇಂಗಿಸಬೇಕಿದೆ. 2021ರ ಮಾರ್ಚ್ 22ರಂದು ಈ ಯೋಜನೆಗೆ ಚಾಲನೆ ಸಿಕ್ಕಿತ್ತು. ಬೆಳಗಾವಿ ಜಿಲ್ಲೆಯಲ್ಲಿ 240ಕ್ಕೂ ಹೆಚ್ಚು ಹೊಸ ಕೆರೆಗಳ ನಿರ್ಮಿಸಲಾಗುತ್ತಿದೆ.

ರಾಯಚೂರು ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಗೋಕಟ್ಟೆಗಳ ನಿರ್ಮಾಣ ಮಾಡಿದ್ದೇವೆ. ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ರಾಮನಗರ ಜಿಲ್ಲೆಯಲ್ಲಿ ಅರಣ್ಯೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ನರೇಗಾ ಯೋಜನೆಯಡಿ ಜಾಬ್ ಹೋಲ್ಡರ್ಸ್ ಸೈನಿಕರಂತೆ ಕೆಲಸ ಮಾಡಿದ್ದಾರೆ. ರಾಜ್ಯದ 40 ಲಕ್ಷ ಜನ ಈ ಯೋಜನೆಗೆ ಬಹಳ ಶ್ರಮ ಹಾಕಿದ್ದಾರೆ. ಕೋವಿಡ್‌ನಲ್ಲೂ ಈ ರೀತಿ ವಿಶೇಷ ಕಾಮಗಾರಿ ಮಾಡಿದ್ದಾರೆ. ನಮ್ಮ ಸರ್ಕಾರದ ಅವಧಿ ಇನ್ನೂ ಒಂದು ವರ್ಷ ಹತ್ತು ತಿಂಗಳಿದೆ. ಇಲಾಖೆಯಿಂದ ಇನ್ನೂ ಹೆಚ್ಚಿನ ಕೆಲಸ ಆಗಲಿದೆ ಎಂದರು.

Last Updated : Aug 11, 2021, 10:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.